Advertisement

ಭತ್ತಕ್ಕೆ ಬೆಂಬಲ ಬೆಲೆ ಮರೀಚಿಕೆ? ಇದೀಗ ನೀತಿಸಂಹಿತೆ ಗುಮ್ಮ

11:09 PM Nov 11, 2021 | Team Udayavani |

ಕೋಟ: ಸರಕಾರದ ವಿಳಂಬ ನೀತಿಯ ಜತೆಗೆ ಪ್ರಸ್ತುತ ವಿಧಾನ ಪರಿಷತ್‌ ಚುನಾವಣೆಗೆ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಕರಾವಳಿಯ ಭತ್ತಕ್ಕೆ ಬೆಂಬಲ ಬೆಲೆ ಈ ಬಾರಿ ಕೂಡ ಮರೀಚಿಕೆಯಾಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.

Advertisement

ಚುನಾವಣೆ ನೀತಿಸಂಹಿತೆಯ ಕಾರಣಕ್ಕೆ ಹೊಸ ಘೋಷಣೆಗಳಿಗೆ ಅವಕಾಶವಿಲ್ಲವಾದ್ದರಿಂದ ಡಿ. 14ಕ್ಕೆ ಚುನಾವಣೆ ಪ್ರಕ್ರಿಯೆ ಪೂರ್ಣ ಗೊಳ್ಳುವ ತನಕ ಬೆಂಬಲ ಬೆಲೆ ಕೇಂದ್ರ ತೆರೆಯುವುದು ಅನುಮಾನ ಎನ್ನಲಾ ಗಿದೆ ಹಾಗೂ ಡಿಸೆಂಬರ್‌ ಆರಂಭದಲ್ಲೇ ಜಿಲ್ಲೆಯ ಭತ್ತದ ಬೆಳೆ ಸಂಪೂರ್ಣ ಕಟಾವುಗೊಂಡು ಖಾಸಗಿ ಮಿಲ್‌ ಸೇರುವುದರಿಂದ ಅನಂತರ ಕೇಂದ್ರ ಆರಂಭಿಸಿದರೂ ಪ್ರಯೋಜನವಿಲ್ಲ.

ಆಡಳಿತ ವ್ಯವಸ್ಥೆಯ
ನಿರ್ಲಕ್ಷ್ಯಕ್ಕೆ ರೈತ ಹೈರಾಣು
ವಿಧಾನ ಪರಿಷತ್‌ ಚುನಾವಣೆ ಘೋಷಣೆ  ಯಾಗುವ ವಿಚಾರ ಸರಕಾರಕ್ಕೆ ಮೊದಲೇ ತಿಳಿದಿದ್ದರೂ ಬೆಂಬಲ ಬೆಲೆ ಘೋಷಣೆ ಬಗ್ಗೆ ನಿರ್ಲಕ್ಷ್ಯ ತೋರಿತ್ತು. ಈ ಬಗ್ಗೆ ಉದಯವಾಣಿ ಕಳೆದ ಒಂದು ತಿಂಗಳಿಂದ ಹಲವು ಬಾರಿ ಗಮನ ಸೆಳೆದರೂ ಜಿಲ್ಲೆಯ ಜನಪ್ರತಿನಿಧಿಗಳು, ಸರಕಾರ ಎಚ್ಚೆತ್ತುಕೊಂಡಿರಲಿಲ್ಲ.

ವಿಶೇಷ ಅನುಮತಿ ಸಾಧ್ಯ
ಕೇಂದ್ರ ಸರಕಾರದಿಂದ ಈ ಹಿಂದೆ ಬೆಂಬಲ ಬೆಲೆ ಘೋಷಣೆಯಾಗಿರು ವುದರಿಂದ ಬೆಂಬಲ ಬೆಲೆ ಕೇಂದ್ರ ತೆರೆಯಲು ನೀತಿ ಸಂಹಿತೆ ಅಡ್ಡಿಯಾಗು
ವುದಿಲ್ಲ ಎನ್ನುವುದು ಹಿರಿಯ ಅಧಿಕಾರಿ ಯೋರ್ವರ ಅಭಿಪ್ರಾಯವಾಗಿದೆ. ಆದರೆ ಇದಕ್ಕೆ ಚುನಾವಣಾ ಆಯೋಗದ ವಿಶೇಷ ಅನುಮತಿ ಅಗತ್ಯ ಮತ್ತು ಕೇಂದ್ರದ ಬೆಂಬಲ ಬೆಲೆಗೆ ಹೆಚ್ಚುವರಿಯಾಗಿ ರಾಜ್ಯದ ಪಾಲಿನ ಮೊತ್ತವನ್ನು ಘೋಷಿಸು ವಂತಿಲ್ಲ ಎನ್ನಲಾಗಿದೆ.

ಇದನ್ನೂ ಓದಿ:ನ.18ರಂದು ಈ ಶತಮಾನದ ಅತಿದೀರ್ಘಾವಧಿಯ ಭಾಗಶಃ ಚಂದ್ರಗ್ರಹಣ

Advertisement

ಹೇಳಿದರೂ ಕೇಳುವವರಿಲ್ಲ
ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಭೌಗೋಳಿಕವಾಗಿ ಮತ್ತು ಕೃಷಿ ಋತುವಿನಲ್ಲಿ ವ್ಯತ್ಯಾಸವಿರುತ್ತದೆ. ಇಲ್ಲಿ ನಾಟಿ, ಕಟಾವು ಬೇಗ ನಡೆಯುತ್ತದೆ. ಆದ್ದರಿಂದ ಈ ಮೂರ್‍ನಾಲ್ಕು ಜಿಲ್ಲೆಗಳಿಗೆ ಪ್ರಾದೇಶಿಕತೆಗೆ ಅನುಗುಣವಾಗಿ ಪ್ರತ್ಯೇಕ ನೀತಿ ಅಗತ್ಯವಿದೆ ಎನ್ನುವುದನ್ನು ಪ್ರಥಮ ಬಾರಿ ಶಾಸಕನಾದಾಗಿನಿಂದ ಪ್ರತಿಪಾದಿಸುತ್ತಿದ್ದೇನೆ. ಮಂತ್ರಿಗಳಿಗೂ ತಿಳಿಸಿದ್ದೇನೆ. ಆದರೆ ಯಾರೂ ಕೂಡ ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ.
ಹಾಲಾಡಿ ಶ್ರೀನಿವಾಸ ಶೆಟ್ಟಿ,
ಕುಂದಾಪುರ ಶಾಸಕ

ಸ್ವತಃ ಸಮಸ್ಯೆ ಎದುರಿಸಿದ್ದೇನೆ
ನಾನು ಇಂದಿಗೂ ಸ್ವತಃ 40-45 ಎಕ್ರೆ ಭತ್ತದ ಕೃಷಿ ಮಾಡುತ್ತೇನೆ. ಈ ಬಾರಿ ಮಳೆ ಇರುವುದರಿಂದ ಕಟಾವು ತಡವಾಯಿತು. ಇಲ್ಲವಾದರೆ ಇಷ್ಟರೊಳಗೆ ನಮ್ಮಲ್ಲಿ ಕಟಾವು ನಡೆದು ಭತ್ತ ಮಿಲ್‌ ಸೇರುತ್ತಿತ್ತು. ಬೆಂಬಲ ಬೆಲೆ ಘೋಷಣೆ, ಖರೀದಿ ಕೇಂದ್ರ ಸ್ಥಾಪನೆ ತಡವಾಗುತ್ತಿರುವುದರಿಂದ ಕರಾವಳಿಯ ರೈತರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಕೃಷಿ ಮಂತ್ರಿಗಳನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸುತ್ತೇನೆ. ಅಗತ್ಯವಿದ್ದರೆ ಸದನದಲ್ಲಿ ಕೂಡ ಚರ್ಚೆ ನಡೆಸುತ್ತೇನೆ. ಮುಂದಿನ ದಿನಗಳಲ್ಲಿ ಕರಾವಳಿಗೆ ಪ್ರತ್ಯೇಕ ಕೃಷಿ ನೀತಿ ಅಗತ್ಯವಾಗಿ ಬೇಕಿದೆ.
– ಬಿ.ಎಂ. ಸುಕುಮಾರ ಶೆಟ್ಟಿ, ಬೈಂದೂರು ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next