ಕಲ್ಯಾಣ ರಾಜ್ಯವೆಂದರೆ ಸರಕಾರದ ಮೇಲಿನ ಹೊರೆಯನ್ನು ಜನಸಾಮಾನ್ಯರ ಮೇಲೆ ಹೊರಿಸಿ ತಣ್ಣಗೆ ಕುಳಿತುಕೊಳ್ಳುವುದಲ್ಲ. ಎಲ್ಲವನ್ನೂ ಜನರ ಮೇಲೆ ಹಾಕುವುದಾದರೆ, ಸರ್ಕಾರಗಳಾದರೂ ಏಕೆ ಬೇಕು? ಮೊದಲಿಗೆ ಕೊರೊನಾ, ಉದ್ಯೋಗ ನಷ್ಟ, ನಿರುದ್ಯೋಗ ಸಮಸ್ಯೆ, ಆರ್ಥಿಕ ಸಂಕಷ್ಟಗಳ ಸರಮಾಲೆಯನ್ನೇ ಜನತೆ ಅನುಭವಿಸುತ್ತಿದ್ದಾರೆ. ಈಗಂತೂ ರಷ್ಯಾ-ಉಕ್ರೇನ್ ಮೇಲಿನ ದಾಳಿಯೂ ಸೇರಿದಂತೆ ನಾನಾ ನೆಪಗಳನ್ನು ಇರಿಸಿಕೊಂಡು ದಿನದಿಂದ ದಿನಕ್ಕೆ ಪ್ರತಿಯೊಂದು ವಸ್ತುಗಳ ದರ ಏರಿಕೆ ಮಾಡುತ್ತಾ ಹೋದರೆ, ಜನ ಜೀವನ ಸಂಕಷ್ಟಕ್ಕೆ ತುತ್ತಾಗುವುದರಲ್ಲಿ ಯಾವುದೇ ಸಂಶಯ ಇಲ್ಲವೇ ಇಲ್ಲ.
ಕಳೆದ ವರ್ಷದ ನವೆಂಬರ್‌ನಿಂದ ಈ ವರ್ಷದ ಮಾ.15ರ ವರೆಗೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿರಲಿಲ್ಲ. ಆದರೆ, ಅನಂತರದ ದಿನಗಳಲ್ಲಿ ತೈಲ ದರ ಏರಿಕೆಯಾಗಿ, ಈಗ ಸರಾಸರಿ ಪ್ರತಿ ಲೀ.ಗೆ 8 ರೂ.ನಷ್ಟು ಹೆಚ್ಚಾಗಿದೆ. ದೇಶದ ಆರ್ಥಿಕತೆಯ ಬಹುತೇಕ ಎಲ್ಲ ವಲಯವೂ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅವಲಂಬಿತವಾಗಿರುವ ಕಾರಣದಿಂದಾಗಿ ಜನರ ಜೇಬಿಗೆ ಕತ್ತರಿ ಬೀಳುವುದು ಖಚಿತ. ಇದನ್ನೇ ತಡೆದುಕೊಳ್ಳುವುದು ದುಸ್ತರವಾಗಿರುವ ನಡುವೆಯೇ ಈಗ ಕರ್ನಾಟಕದಲ್ಲಿ ವಿದ್ಯುತ್ ದರ ಏರಿಕೆ ಮಾಡಿ ಮತ್ತಷ್ಟು ಸಂಕಷ್ಟ ನೀಡಿರುವುದು ಸರ್ವಥಾ ಒಪ್ಪಿಗೆಯಂಥ ಕೆಲಸ ಅಲ್ಲವೇ ಅಲ್ಲ.
ಕೊರೊನಾ ಆರಂಭವಾದ ಮೇಲೆ ದೇಶದ ಜನಸಾಮಾನ್ಯನ ಬದುಕು ಮೂರಾಬಟ್ಟೆಯಾಗಿದೆ. ಮೊದಲೇ ಹೇಳಿದಂತೆ ಸಾವಿರಾರು ಸಣ್ಣಪುಟ್ಟ ಕೈಗಾರಿಕೆಗಳು ಮುಚ್ಚಿವೆ. ಇದನ್ನೇ ಆಶ್ರಯ ಮಾಡಿಕೊಂಡಿದ್ದ ಉದ್ಯೋಗಿಗಳ ಬಾಳು ಬೀದಿಗೆ ಬಿದ್ದಿದೆ. ಇನ್ನೇನು ಕೊರೊನಾ ಕಾಟ ತಪ್ಪುತ್ತಿದೆ ಎಂದುಕೊಳ್ಳುತ್ತಿರುವ ಹೊತ್ತಿಗೆ ರಷ್ಯಾ-ಉಕ್ರೇನ್ ನಡುವೆ ಕಾಳಗ ಶುರುವಾಗಿ ಮತ್ತೆ ಸಂಕಷ್ಟಮಯ ವಾತಾವರಣ ಸೃಷ್ಟಿಯಾಗಿದೆ. ಉಕ್ರೇನ್‌ನಿಂದ ಬರುತ್ತಿದ್ದ ಸೂರ್ಯಕಾಂತಿ ಎಣ್ಣೆ ನಿಂತಿದ್ದರಿಂದ, ಈಗ ಪ್ರತಿ ಲೀ.ಗೆ 200 ರೂ. ದಾಟಿದೆ. ಜನಸಾಮಾನ್ಯರು ಬಳಕೆ ಮಾಡುವ ಬಹುತೇಕ ವಸ್ತುಗಳ ಬೆಲೆ ಗಗನಮುಖೀಯಾಗಿದೆ. ತೆಗೆದುಕೊಳ್ಳುತ್ತಿರುವ ವೇತನಕ್ಕೂ, ಮಾಡುತ್ತಿರುವ ವೆಚ್ಚಕ್ಕೂ ತಾಳೆಯೇ ಆಗುತ್ತಿಲ್ಲ. ಮಧ್ಯಮ ವರ್ಗದವರಂತೂ, ಬಳಲಿ ಬೆಂಡಾಗಿ ಹೋಗಿದ್ದಾರೆ.
ಈಗ ರಾಜ್ಯದಲ್ಲಿ ಪ್ರತಿ ಯೂನಿಟ್ ವಿದ್ಯುತ್ ಮೇಲೆ ಸರಾಸರಿ 35 ಪೈಸೆ ದರ ಏರಿಕೆಯಾಗಿದೆ. ಇದರಿಂದಾಗಿ ಕಡಿಮೆ ಯೂನಿಟ್ ಬಳಕೆದಾರರಿಂದ ಹಿಡಿದು, ಹೆಚ್ಚಿನ ಪ್ರಮಾಣದ ಯೂನಿಟ್ ಬಳಕೆದಾರರ ಮೇಲೆ ಭಾರೀ ಪ್ರಮಾಣದ ಪೆಟ್ಟು ಬೀಳಲಿದೆ. ಪೆಟ್ರೋಲ್ ಮತ್ತು ಡೀಸೆಲ್‌ನಂತೆಯೇ ಎಲ್ಲರೂ ವಿದ್ಯುತ್ ಮೇಲೆಯೇ ಅವಲಂಬಿತರಾಗಿರುವುದರಿಂದ ಇದಕ್ಕೆ ಪೂರಕವಾದ ವಸ್ತುಗಳ ದರವೂ ಏರುವ ಎಲ್ಲ ಸಾಧ್ಯತೆಗಳೂ ಇವೆ. ಹಾಗೆಯೇ ಮಧ್ಯಮ ವರ್ಗದ ಮಂದಿ ಮತ್ತೆ ತಮ್ಮ ಖರ್ಚು ವೆಚ್ಚಗಳನ್ನು ಸರಿದೂಗಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದಾನೆ. ಇದರ ನಡುವೆಯೇ ಬೆಂಗಳೂರಿನಲ್ಲಿ ಹೊಟೆಧೀಲ್‌ಗಳಲ್ಲಿನ ಆಹಾರ ದರ ಶೇ.10ರಷ್ಟು ಏರಿಕೆ ಯಾಗಿದೆ. ಎಲ್ಲ ಏರಿಕೆಗಳ ನಡುವೆ ಜನಸಾಮಾನ್ಯ ಬಾಳುವುದು ಹೇಗೆ ಎಂಬ ಬಗ್ಗೆ ಸರಕಾರಗಳು ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವಿದೆ. ಇಂಥ ಕಷ್ಟದ ಹೊತ್ತಲ್ಲಿಯೂ ವಿದ್ಯುತ್ ದರ ಏರಿಕೆ ಮಾಡುವುದು ಬೇಕಿತ್ತೇ ಎಂದು ಪರಿಶೀಲನೆ ನಡೆಸುವುದು ಮುಖ್ಯ.