Advertisement

ಬೆಲೆ ಏರಿಕೆ: ಕೈಗೆಟಕದ ಕೆಂಪು ಕಲ್ಲು ; ನಿರ್ಮಾಣ ಕಾರ್ಯ ಸ್ಥಗಿತ

10:47 PM Aug 27, 2020 | mahesh |

ಪುತ್ತೂರು: ಕೋವಿಡ್ ಲಾಕ್‌ಡೌನ್‌ ಪರಿಣಾಮ ಕೆಂಪು ಕಲ್ಲು ಪೂರೈಕೆ ಕೊರತೆಯಿಂದ ಧಾರಣೆ ಭರ್ಜರಿ ಏರಿಕೆ ಕಂಡಿದ್ದು, ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ಭಾರೀ ಹೊಡೆತ ಬಿದ್ದಿದೆ. ಉಭಯ ಜಿಲ್ಲೆಗಳಲ್ಲಿ ಸರಕಾರಿ ವಸತಿ ಸಹಿತ ಶೇ. 60ಕ್ಕೂ ಅಧಿಕ ಕಾಮಗಾರಿಗಳು ಅಪೂರ್ಣ ಹಂತದಲ್ಲಿವೆ.

Advertisement

ಕೋವಿಡ್ ಲಾಕ್‌ಡೌನ್‌ ಪೂರ್ವದಲ್ಲಿ ಪ್ರಥಮ ದರ್ಜೆಯ ಒಂದು ಕೆಂಪು ಕಲ್ಲಿಗೆ 28ರಿಂದ 30 ರೂ. ಹಾಗೂ ದ್ವಿತೀಯ ದರ್ಜೆ ಕಲ್ಲಿಗೆ 20ರಿಂದ 22 ರೂ. ಇದ್ದರೆ ಪ್ರಸ್ತುತ ಪ್ರಥಮ ದರ್ಜೆ ಕಲ್ಲಿಗೆ 38ರಿಂದ 40 ರೂ., ದ್ವಿತೀಯ ದರ್ಜೆಯ ಕಲ್ಲಿಗೆ 26ರಿಂದ 30 ರೂ. ಇದೆ. ಅಂದರೆ 10ರಿಂದ 12 ರೂ. ತನಕ ಏರಿಕೆ ಕಂಡಿದೆ. ಇದರಿಂದ ಉದ್ದೇಶಿತ ಕಾಮಗಾರಿ ವೆಚ್ಚದಲ್ಲಿ ವ್ಯತ್ಯಾಸ ಕಂಡು ಬಂದು ಸರಕಾರಿ ಸಹಾಯಧನದಲ್ಲಿ ವಸತಿ ನಿರ್ಮಿಸುವವರಿಗೆ ಹಾಗೂ ಸಣ್ಣ ಬಜೆಟ್‌ನಲ್ಲಿ ಕಟ್ಟಡ ನಿರ್ಮಿಸುವವರಿಗೆ ಕೈ ಕಟ್ಟಿದಂತಾಗಿದೆ.

ಗಡಿ ಬಂದ್‌ ಕಾರಣ!
ಈ ಹಿಂದೆ ದ.ಕ. ಜಿಲ್ಲೆಗೆ ಕೇರಳದ ವ್ಯಾಪ್ತಿಯ ಗಡಿಭಾಗದಿಂದ ಕೆಂಪು ಕಲ್ಲು ಪೂರೈಕೆ ಆಗುತ್ತಿತ್ತು. ಸ್ಥಳೀಯವಾಗಿ ಕಲ್ಲು ಲಭ್ಯವಿದ್ದರೂ ಕೇರಳದ ಕಲ್ಲುಗಳು ಹೆಚ್ಚು ಗಟ್ಟಿ ಎಂಬ ಕಾರಣಕ್ಕೆ ಶೇ. 80ರಷ್ಟು ನಿರ್ಮಾಣ ಕಾಮಗಾರಿಗಳಿಗೆ ಕೇರಳದ ಕಲ್ಲುಗಳನ್ನೇ ಆಶ್ರಯಿಸಲಾಗುತ್ತಿತ್ತು. ಐದಾರು ತಿಂಗಳಿಂದೀಚೆಗೆ ಗಡಿ ಬಂದ್‌ ಆಗಿರುವ ಕಾರಣ ಆ ಭಾಗದಿಂದ ಕಲ್ಲು ಸಾಗಾಟ ಸಾಧ್ಯವಾಗಿಲ್ಲ. ಇದರಿಂದ ದ.ಕ. ಜಿಲ್ಲೆಯೊಳಗಿನ ಕೋರೆಗಳಿಂದ ಪೂರೈಕೆಯಾಗುವ ಕಲ್ಲಿಗೆ ವಿಪರೀತ ಬೇಡಿಕೆ ಉಂಟಾಗಿ ಧಾರಣೆ ಭಾರೀ ಪ್ರಮಾಣದಲ್ಲಿ ಏರಿದೆ. ಸರಕಾರ ಗಣಿ ಶುಲ್ಕದಲ್ಲಿ ಹೆಚ್ಚಳ ಮಾಡಿರುವುದರಿಂದ ಮಾಲಕರು ಕಲ್ಲಿನ ಧಾರಣೆ ಹೆಚ್ಚಿಸಿದ್ದಾರೆ ಎನ್ನಲಾಗುತ್ತಿದೆ.

300 ಸುಂಕ ಪಟ್ಟು ಹೆಚ್ಚಳ!
ದ.ಕ. ಜಿಲ್ಲೆಯಲ್ಲಿ ಕೆಂಪು ಕಲ್ಲು ಸಾಗಾಟದ ಮೇಲಿನ ಸುಂಕವನ್ನು ರಾಜ್ಯ ಸರಕಾರ ಏಕಾಏಕಿ 300 ಪಟ್ಟು ಹೆಚ್ಚಿಸಿರುವುದು ಕೂಡ ಧಾರಣೆ ಏರಿಕೆಗೆ ಮತ್ತೂಂದು ಕಾರಣ. ಕೋರೆಯಲ್ಲಿನ ಕಲ್ಲು ಮಿಶ್ರಿತ ಮಣ್ಣನ್ನು ಸಿಮೆಂಟ್‌ ತಯಾರಿಕೆಗೆ ಬಳಸುವ ಉದ್ದೇಶದಿಂದ ಹೊರ ಜಿಲ್ಲೆ, ರಾಜ್ಯಗಳಿಗೆ ಪೂರೈಕೆ ಮಾಡುತ್ತಿರುವ ಕಾರಣ ಸುಂಕ ಹೆಚ್ಚಿಸಲಾಗಿದೆ ಎನ್ನುತ್ತದೆ ಗಣಿಗಾರಿಕೆ ಇಲಾಖೆಯ ಮೂಲಗಳು. ಇದರಿಂದ ಸೀಮಿತ ಸಂಖ್ಯೆಯಲ್ಲಿರುವ ಅಧಿಕೃತ ಗಣಿಗಾರಿಕೆಗೆ ಮಾತ್ರ ಹೊಡೆತ ಬಿದ್ದಿದ್ದು, ಸಾವಿರಾರು ಅನಧಿಕೃತ ಗಣಿಗಾರಿಕೆ ಯಾವುದೇ ಸುಂಕ ಪಾವತಿಸದೇ ಎಗ್ಗಿಲ್ಲದೆ ನಡೆಯುತ್ತಿದೆ ಎಂಬ ಆರೋಪಗಳು ಕೂಡ ಕೇಳಿ ಬಂದಿವೆ.

ಮಂಗಳೂರಿನಲ್ಲಿ ಸಭೆ ನಡೆಸಿ ಕೃಷಿ ಉದ್ದೇಶಕೋಸ್ಕರ ಕಲ್ಲು ತೆಗೆಯುವವರಿಗೆ ಬೇಕಾದ ನಿಯಮಗಳನ್ನು ಸರಳಗೊಳಿಸಲು ಸೂಚಿಸಲಾಗಿದೆ. ಸುಂಕ ಹೆಚ್ಚಳವಾಗಿರುವ ದೂರು ಇದ್ದು, ಅದನ್ನು ಕಡಿಮೆ ಮಾಡಲು ಸಚಿವ ಸಂಪುಟದ ಮುಂದಿಡಬೇಕು. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
– ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲಾ ಸಚಿವರು

Advertisement

ಗಣಿಗಾರಿಕೆ ನಿಯಮವನ್ನು ಸರಳಗೊಳಿಸಬೇಕು. ಆಗ ಧಾರಣೆ ಕಡಿಮೆ ಆಗಿ ಜನರಿಗೆ ಅನುಕೂಲವಾಗುತ್ತದೆ. ನಿರ್ಬಂಧಗಳು ಹೆಚ್ಚಾದರೆ ಅಧಿಕೃತ ಗಣಿಗಾರಿಕೆ ಬಂದ್‌ ಆಗಿ ಅನಧಿಕೃತ ಗಣಿಗಾರಿಕೆ ಹೆಚ್ಚಳವಾಗುತ್ತದೆ. ಆಗ ಜನರಿಗೆ ಮತ್ತುಷ್ಟು ತೊಂದರೆಯಾಗುತ್ತದೆ.
– ರಾಜೇಶ್‌ ನಾೖಕ್‌ ಶಾಸಕರು, ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next