Advertisement

ಪುರಾತನ ನಾಣ್ಯಗಳಿಗೆ ಲಕ್ಷಾಂತರ ರೂ.,ಬೆಲೆ

05:23 PM Jan 07, 2018 | |

ಮೈಸೂರು: ಪುರಾತನ ನಾಣ್ಯಗಳು ಲಕ್ಷಾಂತರ ರೂ. ಬೆಲೆ ಬಾಳಲಿದ್ದು ಹಣದಾಸೆಗಾಗಿ ಹಳೆಯ ನಾಣ್ಯಗಳನ್ನು ಕರಗಿಸಲು ಮುಂದಾಗಬಾರದು ಎಂದು ದಕ್ಷಿಣ ಭಾರತ ನಾಣ್ಯಶಾಸ್ತ್ರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ.ಎ.ವಿ. ನರಸಿಂಹಮೂರ್ತಿ ಮನವಿ ಮಾಡಿದರು.

Advertisement

ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ದಸರಾ ವಸ್ತುಪ್ರದರ್ಶನ ಆವರಣದಲ್ಲಿರುವ ಇಲಾಖೆ ಸಭಾಂಗಣದಲ್ಲಿ ಆಯೋಜಿಸಿದ್ದ ದಕ್ಷಿಣ ಭಾರತ ನಾಣ್ಯಶಾಸ್ತ್ರ ಸಂಸ್ಥೆಯ 28ನೇ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಭಾರತದ ಪುರಾತನ ಕಾಲದ ನಾಣ್ಯಗಳಿಗೆ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಹೆಚ್ಚಿನ ಬೇಡಿಕೆಯಿದೆ. ಕೆಲವು ನಾಣ್ಯಗಳು ಅಂತಾರಾಷ್ಟ್ರೀಯ ಮನ್ನಣೆ ಪಡೆದಿವೆ. ಆದರೆ, ಪುರಾತನ ಕಾಲದ ನಾಣ್ಯಗಳ ಮೌಲ್ಯ ಅರಿಯದ ಕೆಲವರು
ಸಮುದ್ರಗುಪ್ತ, ಕೃಷ್ಣದೇವರಾಯ ಸೇರಿದಂತೆ ವಿವಿಧ ಅರಸರ ಕಾಲದ ನಾಣ್ಯಗಳನ್ನು ಕರಗಿಸಿ ಹಣಕ್ಕಾಗಿ ಮಾರಿಕೊಳ್ಳುತ್ತಿದ್ದಾರೆಂದರು.

ಉದಾಹರಣೆಗೆ ಟಿಪ್ಪು ಸುಲ್ತಾನ್‌ ಆಡಳಿತ ಕಾಲದಲ್ಲಿದ್ದ 2 ರೂ. ನಾಣ್ಯದ ಬೆಲೆ ಇಂದು 5 ಲಕ್ಷ ರೂ. ಮೌಲ್ಯ ಹೊಂದಿದೆ. ಈ ಕಾಲದ ನಾಣ್ಯಗಳು ಸಣ್ಣದಾಗಿದ್ದರೂ ಅದರ ಮೌಲ್ಯ ಅತ್ಯಂತ ದೊಡ್ಡದಾಗಿದೆ. ಹೀಗಾಗಿ ಹಣದಾಸೆಗಾಗಿ ಲಕ್ಷಾಂತರ ರೂ. ಬೆಲೆ ಬಾಳುವ ಹಳೆಯ ನಾಣ್ಯಗಳನ್ನು ಕರಗಿಸಲು ಮುಂದಾಗಬಾರದು ಎಂದು ಒತ್ತಾಯಿಸಿದರು.

ದಕ್ಷಿಣ ಭಾರತ ನಾಣ್ಯಶಾಸ್ತ್ರ ಸಂಸ್ಥೆ ಕಳೆದ 28 ವರ್ಷಗಳಿಂದ ನಿಯತಕಾಲಿಕೆಯನ್ನು ವಿಳಂಬವಿಲ್ಲದೆ ಹೊರ ತರುತ್ತಿದೆ. ದೇಶದ ಯಾವುದೇ ನಾಣ್ಯಶಾಸ್ತ್ರ ಸಂಸ್ಥೆಗಳು ಹೀಗೆ ನಿಗದಿತ ಸಮಯಕ್ಕೆ ಸರಿಯಾಗಿ ನಿಯತಕಾಲಿಕೆಗಳನ್ನು ಹೊರ ತರುತ್ತಿಲ್ಲ. ನಮ್ಮ ಸಂಸ್ಥೆಯ ನಿಯತಕಾಲಿಕೆಗೆ ದೇಶದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಬೇಡಿಕೆ ಇದೆ.
ಅಮೆರಿಕ, ಬ್ರಿಟಿಷ್‌ ವಿಶ್ವ ವಿದ್ಯಾಲಯಗಳಲ್ಲಿ ನಮ್ಮ ಸಂಸ್ಥೆಯ ನಿಯತಕಾಲಿಕೆಗಳಿಗೆ ಬೇಡಿಕೆಯಿದೆ.

Advertisement

ನಾವು ನಿರಂತರವಾಗಿ ನಿಯತ ಕಾಲಿಕೆಗಳನ್ನು ಪೂರೈಕೆ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ದಕ್ಷಿಣ ಭಾರತ ನಾಣ್ಯಶಾಸ್ತ್ರ ಸಂಸ್ಥೆ ಕಾರ್ಯ ಶ್ಲಾಘನೀಯವಾಗಿದ್ದು, ದೇಶದ ಬೇರಾವುದೇ ಸಂಸ್ಥೆ ಈ ಕೆಲಸ ಮಾಡುತ್ತಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮ್ಮೇಳನದ ಅಂಗವಾಗಿ ಹಳೆಯ ಹಾಗೂ ಹೊಸ ನಾಣ್ಯಗಳು ಹಾಗೂ ನೋಟುಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರಮುಖ ಜನಪ್ರತಿನಿಧಿಗಳ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಉಪ ಮೇಯರ್‌ ರತ್ನಾ, ಪುರಾತತ್ವ,
ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ಟಿ.ವೆಂಕಟೇಶ್‌, ನಿರ್ದೇಶಕ ಡಾ.ಆರ್‌. ಗೋಪಾಲ್‌, ಸಮ್ಮೇಳನ ಅಧ್ಯಕ್ಷ ಆರ್‌ವಿಎ ಸಾಯಿ ಶರಣವನ್‌, ಅಪೋಲೋ ಆಸ್ಪತ್ರೆ ವೈದ್ಯ ರಾಜರೆಡ್ಡಿ ಇದ್ದರು.

ತಿರುಪತಿ ಹುಂಡಿಯಲ್ಲಿ 40 ಟನ್‌ ನಾಣ್ಯ ಸಂಗ್ರಹ ಕೆಲವು ವರ್ಷಗಳ ಹಿಂದೆ ತಿರುಪತಿ ದೇವಸ್ಥಾನದಲ್ಲಿ 40 ಟನ್‌ ನಾಣ್ಯಗಳು ಸಂಗ್ರಹವಾಗಿತ್ತು. ಇದನ್ನು ಪರಿಶೀಲಿಸಿದಾಗ ಸಾಕಷ್ಟು ಪ್ರಮಾಣದಲ್ಲಿ ಹಳೆಯ ಕಾಲದ ನಾಣ್ಯಗಳು ದೊರೆತಿವೆ. ಹಳೆ ಕಾಲದ ಚಿನ್ನ, ಬೆಳ್ಳಿ, ಕಂಚಿನ ನಾಣ್ಯಗಳನ್ನು ಜನರು ಬಂಡಾರ ಪಟ್ಟಿಗೆಗೆ ಹಾಕಿದ್ದರು. ಒಟ್ಟು 40 ಟನ್‌ ನಾಣ್ಯಗಳನ್ನು ಬೇರ್ಪಡಿಸಿ ಹಳೆಯ ನಾಣ್ಯಗಳನ್ನು ಪತ್ತೆ ಹಚ್ಚುವ ಸಲುವಾಗಿ ಒಟ್ಟು 50 ನಾಣ್ಯ ಶಾಸ್ತ್ರಜ್ಞರನ್ನು ನೇಮಿಸಲಾಗಿತ್ತು.

ಅಲ್ಲಿ ದೊರೆತ ಅಮೂಲ್ಯ ನಾಣ್ಯಗಳ ಮಾಹಿತಿಯನ್ನೊಳಗೊಂಡ ಕೃತಿಯನ್ನು ಹೊರ ತರಲಾಗಿದೆ ಎಂದು ದಕ್ಷಿಣ ಭಾರತ ನಾಣ್ಯಶಾಸ್ತ್ರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ.ಎ.ವಿ. ನರಸಿಂಹಮೂರ್ತಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next