Advertisement

ಅಕ್ಷರಗಳಲ್ಲಿ ಬದುಕಿನ ಬೆಲೆ

06:00 AM Sep 16, 2018 | |

ಇದು ಲೇಖಕ ಚಂದ್ರಶೇಖರ ಪಾತೂರು ಅವರ ಚೊಚ್ಚಲ ಕೃತಿ. ಸುಮಾರು ಅರುವತ್ತರಷ್ಟು ಲೇಖನಗಳ ಗುತ್ಛ . ಇಲ್ಲಿನ ಬಹುಪಾಲು ಬರಹಗಳು ಇನ್ನೂರು-ಮೂನ್ನೂರು ಶಬ್ದ ಮೀರಿಲ್ಲ. ಓದುವ ವ್ಯವಧಾನ ಕಳೆದುಕೊಂಡ ಕಾಲಕ್ಕೆ ಸೂಕ್ತವಾದ ಚುಟುಕು ಬರಹಗಳಾದರೂ ಲೇಖಕರನ್ನು ಕಾಡಿದ ವಸ್ತುವಿನ ಕಾರಣಕ್ಕಾಗಿ ಓದಲೇಬೇಕಾದ ಕೃತಿ. ಕಾದಂಬರಿಯಂತೆ ದೀರ್ಘ‌ವಾಗಿ ಬರೆಯಬಹುದಾದ ಅತ್ಯಮೂಲ್ಯ ಅಂಶಗಳನ್ನು ಆಯ್ದು ಸಂಕ್ಷೇಪಿಸಿದ ಕಲೆಗಾರಿಕೆ ಇಲ್ಲಿನ ಬರಹಗಳಲ್ಲಿದೆ.

Advertisement

ಕಳೆದೆರಡು ದಶಕಗಳಿಂದ ನಮ್ಮ ಜೀವನಶೈಲಿ-ಸಂಬಂಧ ಗಳಲ್ಲಿ ವಿಪರೀತ ಪಲ್ಲಟಗಳು ಸಂಭವಿಸಿವೆ. ಮನೆ-ಮನಗಳಿಗೆ ಬದಲಾವಣೆಯ ಗಾಳಿ ಬೀಸಿವೆ. ಸಾಕಷ್ಟು ಪಡೆದುಕೊಂಡಿವೆ. ಅವೆಲ್ಲ ಮೂರ್ತರೂಪದಲ್ಲಿ ನಮ್ಮ ಮುಂದಿವೆ. ಆದರೆ, ಅಭಿವೃದ್ಧಿಯ ವೇಗ, ತಂತ್ರಜ್ಞಾನಗಳ ಮಹಾಪೂರ, ಮಾರುಕಟ್ಟೆಯ ಕಬಂಧಬಾಹುಗಳಿಗೆ ಸಿಲುಕಿ ಜೀವನ ಸ್ಪರ್ಧೆಯಾಗುತ್ತಿದೆ. ಗ್ರಾಮೀಣ ಬದುಕಿನಲ್ಲಿದ್ದ ಬಾಯಿತುಂಬಾ ಮಾತುಕತೆ, ಬಾಲ್ಯದ ನಿರಾಳತೆ, ರೇಡಿಯೋ ಉಂಟು ಮಾಡುತ್ತಿದ್ದ ಬೆರಗು, ಊರ ಸಂತೆ, ಜಾತ್ರೆಯ ಸುತ್ತಾಟ- ಇವೆಲ್ಲ ಉಂಟು ಮಾಡುತ್ತಿದ್ದ ಆನಂದ ಲೇಖಕರನ್ನು ಕಾಡುತ್ತದೆ. ಸವಿಸವಿ ನೆನಪುಗಳೇ ಇಲ್ಲಿನ ಬರಹಗಳ ಜೀವಾಳ.

ಉಳಿದಂತೆ ಮನುಷ್ಯಲೋಕದ ಸಂಕುಚಿತತೆ, ಕೆಟ್ಟ ಕುತೂಹಲ, ಸಾಕಷ್ಟು ಇದ್ದೂ ಅತೃಪ್ತಿಗೊಳ್ಳುವ ಮನಸ್ಸು, ನೀರು, ಪ್ಲಾಸ್ಟಿಕ್‌, ಆರೋಗ್ಯ ಮೊದಲಾದ ಜೀವನ್ಮುಖೀ ವಿಷಯಗಳ ಕುರಿತ ಬೆಲೆಕಟ್ಟಲಾಗದ ಬರಹಗಳು ಈ ಕೃತಿಯಲ್ಲಿದೆ. ನಮ್ಮೆಲ್ಲರ ಬದುಕಿನ ಕಥನವಾಗಿರುವುದರಿಂದ ಇಲ್ಲಿನ ಬರಹಗಳು ನಮಗೆ ಆಪ್ತವಾಗುತ್ತವೆ. 

ಬದುಕಿನ ಬೆಲೆಯನೇನಾದರೂ ಬಲ್ಲಿರಾ…(ಅಂಕಣ ಬರಹಗಳ ಸಂಕಲನ)
ಲೇ.: ಚಂದ್ರಶೇಖರ ಪಾತೂರು (ಮೊ : 9964105598)
ಪ್ರ.: ಆಕೃತಿ-ಆಶಯ ಪಬ್ಲಿಕೇಶನ್ಸ್‌, ಲೈಟ್‌ಹೌಸ್‌ ಹಿಲ್‌ ರೋಡ್‌, ಮಂಗಳೂರು-1 (ಮೊ : 0824-2443002)
ಮೊದಲ ಮುದ್ರಣ: 2018  ಬೆಲೆ : 120 ರೂ.

– ಯೋಗೀಶ ಕೈರೋಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next