ಗದಗ: ಕ್ಷಯರೋಗ ಮೈಕ್ರೋಬ್ಯಾಕ್ಟೇರಿಯಂ ಟ್ಯೂಬರ್‌ಕ್ಯೂಲೋಸಿಸ್ ಎಂಬ ಸೂಕ್ಷ್ಮ ರೋಗಾಣುವಿನಿಂದ ಹರಡುತ್ತದೆ. ಕ್ಷಯರೋಗಿ ಕೆಮ್ಮಿದಾಗ, ಸೀನುವಾಗ ಹೊರಬರುವ ತುಂತುರು ಜೊಲ್ಲಿನಿಂದ ಗಾಳಿ ಮೂಲಕ ಇತರರಿಗೂ ಹರಡುತ್ತದೆ. ಈ ಹಿನ್ನೆಲೆಯಲ್ಲಿ ರೋಗ ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಡವಿಸೋಮಾಪುರ ಉಪಕೇಂದ್ರದ ಕಿರಿಯ ಆರೋಗ್ಯ ಸಹಾಯಕ ಸಿದ್ದಪ್ಪ ಲಿಂಗದಾಳ ಹೇಳಿದರು.
ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಕ್ಷಯರೋಗ ನಿಯಂತ್ರಣ ವಿಭಾಗ, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಟಗೇರಿ ವತಿಯಿಂದ ತಾಲೂಕಿನ ಅಡವಿಸೋಮಾಪುರದ ಗೋಣಿಬಸವೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಲಾಗಿದ್ದ ಪರಿಷ್ಕೃತ ರಾಷ್ಟ್ರೀಯ ಕ್ಷಯ ರೋಗ ನಿಯಂತ್ರಣ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ಷಯರೋಗ ಒಂದು ಅಂಟುರೋಗವಾಗಿದೆ. ಒಬ್ಬರಿಂದ ಮತ್ತೂಬ್ಬರಿಗೆ ಹರಡುತ್ತದೆ. ಎರಡು ವಾರಕ್ಕಿಂತ ಹೆಚ್ಚು ಸತತವಾಗಿ ಕೆಮ್ಮು ಇರುವುದು ಮತ್ತು ಜ್ವರ, ಅದಲ್ಲಿಯೂ ಸಂಜೆ ವೇಳೆ ಜ್ವರ ಬರುವುದು. ಎದೆ ನೋವು. ತೂಕ ಕಡಿಮೆಯಾಗುವುದು. ಹಸಿವಾಗದೆ ಇರುವುದು. ಕಫದಲ್ಲಿ ರಕ್ತ ಬೀಳುವುದು. ಶ್ವಾಸಕೋಶ ಕ್ಷಯ ಮತ್ತು ಕತ್ತು ಮತ್ತು ಕಂಕುಳಲ್ಲಿ ಗಡ್ಡೆ ಆಗುವುದು ರೋಗದ ಲಕ್ಷಣಗಳಾಗಿವೆ. ಅಂತಹವರು ತಕ್ಷಣವೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ಒಂದೊಮ್ಮೆ ಕ್ಷಯರೋಗ ಧೃಢ ಪಟ್ಟರೆ, ಸರಕಾರಿ ಆಸ್ಪತ್ರೆಯಲ್ಲೇ ಉಚಿತ ಚಿಕಿತ್ಸೆ ಪಡೆದು ಗುಣಮುಖರಾಗಲು ಸಾಧ್ಯವಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಟಿಬಿ ಪತ್ತೆಗಾಗಿ ಜು.15ರಿಂದ 27ರ ವರೆಗೆ ನಡೆಯುವ (ಎಸಿಫ್) ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮಕ್ಕೆ ಕ್ಷಯ ಮುಕ್ತ ಭಾರತವನ್ನಾಗಿಸುವ ಮಹತ್ವದ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಆಶಾ ಕಾರ್ಯಕರ್ತೆಯರ ಸಂಘದ ಸದಸ್ಯ ಮಾಲಾ ಮೇವುಂಡಿ ಮಾತನಾಡಿದರು. ಜಾನಪದ ಕಲಾವಿದರಾದ ಬಸವರಾಜ ಜಗ್ಗಲ, ಬಿ.ಸಿ. ಹಿರೇಹಾಳ. ಚನ್ನಪ್ಪ ಗೊರವರ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಎಂ.ಎನ್. ದಂಡಿನ, ಆಶಾ ಕಾರ್ಯಕತೆಯರಾದ ಮಾಲಾ ಮೇವುಂಡಿ, ರೇಣುಕಾ ಪುರದ, ಮೀನಾಕ್ಷಿ ವಡ್ಡರ, ಮಂಜುಳಾ ಆರಿ, ಲಲಿತಾ ಅಂಗಡಿ, ಲಕ್ಷ್ಮಿ ಪೂಜಾರ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.