ಗದಗ: ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ತಯಾರಿಕೆಗಾಗಿ ಬಳಸುವ ಪ್ಲಾಸ್ಟಿಕ್, ಸಿಗರೇಟ್ ಬಡ್ಸ್ ಹಾಗೂ ಇತರೇ ತ್ಯಾಜ್ಯಗಳು ಮಣ್ಣಿನಲ್ಲಿ ಕರಗದೆ ಹಾಗೆಯೇ ಉಳಿದು, ಮಣ್ಣನ್ನು ಕಲುಷಿತಗೊಳಿಸುತ್ತವೆ.
ತಂಬಾಕು ಬೆಳೆಯುವ ಭೂಮಿಯ ಮಣ್ಣಿನ ಫಲವತ್ತತೆ ಕೂಡ ಕ್ರಮೇಣ ಕಡಿಮೆಯಾಗುತ್ತ ಹೋಗುತ್ತದೆ. ಹೀಗಾಗಿ, ಸಾರ್ವಜನಿಕರು ಆರೋಗ್ಯ ಮತ್ತು ಪರಿಸರ ಸಂರಕ್ಷಣೆ ಹಿತದೃಷ್ಟಿಯಿಂದ ತಂಬಾಕು ಬಳಕೆ ನಿಯಂತ್ರಿಸಲು ಮುಂದಾಗಬೇಕೆಂದು ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಮ್ಸ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಮಂಗಳವಾರ ವಿಶ್ವ ತಂಬಾಕು ರಹಿತ ದಿನಾಚರಣೆ ಪ್ರಯುಕ್ತ “ತಂಬಾಕು ಪರಿಸರಕ್ಕೆ ಮಾರಕ’ ಎಂಬ ಘೋಷವಾಕ್ಯದಡಿ ಹಮ್ಮಿಕೊಂಡಿದ್ದ ಜನಜಾಗೃತಿ ಸೈಕ್ಲೋಥಾನ್ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಗುರುಪ್ರಸಾದ್ ಮಾತನಾಡಿ, ತಂಬಾಕು ಬಳಕೆಯಿಂದ ಆರೋಗ್ಯ ಮತ್ತು ಪರಿಸರದ ಮೇಲಾಗುವ ಗಂಭೀರ ಪರಿಣಾಮಗಳ ಕುರಿತು ಸಾರ್ವಜನಿಕರು ಎಚ್ಚರ ವಹಿಸಬೇಕೆಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|ಜಗದೀಶ್ ನುಚ್ಚಿನ್ ಮಾತನಾಡಿ, ಕರ್ನಾಟಕದಲ್ಲಿ ಪ್ರತಿ ವರ್ಷ ಸಿಗರೇಟ್‌ನಿಂದ 479 ಟನ್, ಬೀಡಿಗಳಿಂದ 3169 ಟನ್, ಹೊಗೆರಹಿತ ತಂಬಾಕು ಉತ್ಪನ್ನಗಳಿಂದ 638 ಟನ್ ಹಾಗೂ ಎಲ್ಲಾ ತರಹದ ತಂಬಾಕು ಉತ್ಪಾದಿಸಲು 4286 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೊರ ಹಾಕುತ್ತಿದೆ. ಪ್ರತಿ ವರ್ಷ ಸಿಗರೇಟ್‌ನಿಂದ 13305 ಟನ್, ಬೀಡಿಗಳಿಂದ 1902 ಟನ್, ಹೊಗೆರಹಿತ ತಂಬಾಕು ಉತ್ಪನ್ನಗಳಿಂದ 696 ಟನ್ ಹಾಗೂ ಎಲ್ಲಾ ತರಹದ ತಂಬಾಕು ಉತ್ಪಾದಿಸಲು 15903 ಟನ್ ಪೇಪರ್ ತ್ಯಾಜ್ಯವನ್ನು ಹೊರ ಹಾಕುತ್ತಿದ್ದು, ಇದರಿಂದ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.
ಜಿಲ್ಲಾಡಳಿತ ಭವನದಿಂದ ಆರಂಭವಾದ ಜಾಥಾ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದವರೆಗೆ ಸಾಗಿತು. ಐಎಂಐ ಅಧ್ಯಕ್ಷ ಡಾ|ಪ್ಯಾರೀಲಿ ನೂರಾನಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಎ. ಮೌಲ್ವಿ, ಜಿಲ್ಲಾ ಆಯುಷ್ ಅಧಿಕಾರಿ ಡಾ|ಮಲ್ಲಿಕಾರ್ಜುನ ಉಪ್ಪಿನ, ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ|ಆರ್.ಸಿ.ಬಸರೀಗಿಡದ, ಐಎಂಎ ಕಾರ್ಯದರ್ಶಿ ಅರವಿಂದ ಕೆ., ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ್ ಚವ್ಹಾಣ, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾ
ಧಿಕಾರಿ ಉಮೇಶ ಕರಮುಡಿ ಇತರರು ಹಾಜರಿದ್ದರು. ಜಿಲ್ಲಾ ಸಮೀಕ್ಷಣಾ ಘಟಕದ ಎಸ್.ಎಸ್. ಪೀರಾ ನಿರೂಪಿಸಿದರು.