Advertisement

ಕಾಡ್ಗಿಚ್ಚು ತಡೆಗೆ ಪ್ರತಿಬಂಧಕ ಕಾರ್ಯಾಚರಣೆ

10:16 AM May 02, 2017 | |

ಬಂಡೀಪುರದಲ್ಲಿ ಸಂಭವಿಸಿದ ವಿನಾಶಕಾರಿ ಕಾಡ್ಗಿಚ್ಚನ್ನು  ಖಂಡಿತ ತಪ್ಪಿಸಬಹುದಾಗಿತ್ತು. ಪ್ರತಿಬಂಧ, ಸನ್ನದ್ಧತೆ ಮತ್ತು ನಿರಂತರ ಕಣ್ಗಾವಲು ಎಂಬ ಮೂರು ಪ್ರಮುಖ ಅಂಶಗಳನ್ನು ಅನುಸರಿಸುವ ಮೂಲಕ ಅರಣ್ಯ ಸಿಬ್ಬಂದಿ ಮತ್ತು ಕಾಡುಗಳು ಎದುರಿಸುವ ಗಂಡಾಂತರವನ್ನು ಗಣನೀಯವಾಗಿ ಕಡಿಮೆ ಮಾಡಬಹುದು.

Advertisement

ಬಂಡೀಪುರದಲ್ಲಿ ಕಾಣಿಸಿಕೊಂಡ ವಿನಾಶಕಾರಿ ಕಾಡ್ಗಿಚ್ಚಿನ ಪರಿಣಾಮವಾಗಿ ಅರಣ್ಯ ರಕ್ಷಕರೊಬ್ಬರು ದುರಂತ ಸಾವಿಗೀಡಾದುದಲ್ಲದೆ ಒಬ್ಬ ರೇಂಜರ್‌ ಒಬ್ಬ ಮತ್ತು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡರು. ವನ್ಯಜೀವಿಗಳ ನಿಬಿಡ ವಾಸ್ತವ್ಯಕ್ಕೆ ಆಶ್ರಯರೂಪವಾಗಿರುವ, ವ್ಯಾಘ್ರ ಸಂತತಿ ವಾಸಿಸುವ ವಿಶಾಲ ಅರಣ್ಯ ಪ್ರದೇಶಗಳನ್ನೆಲ್ಲ ಬೆಂಕಿಯ ಕೆನ್ನಾಲಗೆ ಸುಟ್ಟು ಕರಕಲಾಗಿಸಿತು. ಎಳೆಯ ಸಸ್ತನಿಮರಿಗಳೂ ಸೇರಿದಂತೆ ಅನೇಕ ಪ್ರಾಣಿ ಪೀಳಿಗೆಗಳು ಧಗಧಗಿಸುವ ಜ್ವಾಲೆಯಿಂದ ತಪ್ಪಿಸಿಕೊಂಡಿರಲಾರವು. 

ಈ ಅನಾಹುತಕಾರಿ ಘಟನೆಯನ್ನು ತಪ್ಪಿಸಬಹುದಾಗಿತ್ತೆ? ಖಂಡಿತವಾಗಿಯೂ ಹೌದು. “”ಶಾಂತಿಯ ಕಾಲದಲ್ಲಿ ಹೆಚ್ಚೆಚ್ಚು 
ಬೆವರಿಳಿಸಿದರೆ ಯುದ್ಧದಲ್ಲಿ ರಕ್ತ ಚೆಲ್ಲುವುದು ಕಡಿಮೆಯಾಗುತ್ತದೆ” ಎಂಬ ಮಿಲಿಟರಿ ಗಾದೆಯಂತೆ ಪ್ರತಿಬಂಧ, ಸನ್ನದ್ಧತೆ ಮತ್ತು 
ನಿರಂತರ ಕಣ್ಗಾವಲು ಎಂಬ ಮೂರು ಪ್ರಮುಖ ಧೋರಣೆಗಳು ಅರಣ್ಯ ಸಿಬ್ಬಂದಿ ಮತ್ತು ಕಾಡುಗಳು ಎದುರಿಸುವ ಗಂಡಾಂತರ ವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಹಾಗೆಂದ ಮಾತ್ರಕ್ಕೆ ಹೆಲಿಕಾಪ್ಟರುಗಳ ಬಳಕೆಯೇ ಮುಂತಾದ “ಹೈ-ಟೆಕ್‌’ ಮಾರ್ಗೋಪಾಯಗಳ ಅಗತ್ಯವಿದೆ ಎಂದರ್ಥವಲ್ಲ. ಆದರೆ ವರುಷಗಳಿಂದೀಚೆಗೆ ಅನುಭವಿ ಅರಣ್ಯಾಧಿಕಾರಿಗಳು ಅಭಿವೃದ್ಧಿಪ ಡಿಸಿದ, ಕಾಲಪರೀಕ್ಷೆಯಲ್ಲಿ ಗೆದ್ದು ಬಂದ ಕಾರ್ಯಾಚರಣೆ ಪ್ರಕ್ರಿಯೆಗಳನ್ನು ಅತ್ಯಂತ ಪ್ರಾಮಾಣಿಕವಾಗಿ ಜಾರಿಗೊಳಿಸುವುದು ಇಂದಿನ ಜರೂರಾಗಿದೆ.

ಬೆಂಕಿಯನ್ನು ಪ್ರತಿಬಂಧಿಸುವುದು ತೀರಾ ಪ್ರಮುಖವಾಗಿ ಆಗಬೇಕಾದ ಕೆಲಸ. ಬೆಂಕಿ ಕಾವಲುಗಾರರನ್ನಾಗಿ ಸ್ಥಳೀಯರನ್ನು ನೇಮಿಸುವುದರ ಮೂಲಕ ವಿಸ್ತೃತವಾದ ಅಗ್ನಿ ಪ್ರತಿಬಂಧಕ ಕಾರ್ಯ ಪ್ರಾರಂಭವಾಗುತ್ತದೆ. ಈ ಮೊದಲು ಬೆಂಕಿಯನ್ನು ಯಶಸ್ವಿಯಾಗಿ ಪ್ರತಿಬಂಧಿಸಿ ಅನುಭವವಿರುವ ಅರಣ್ಯ ಕ್ಷೇತ್ರಾಧಿಕಾರಿಗಳು ಈ ವಿಚಾರಕ್ಕೆ ಆದ್ಯತೆ ನೀಡುತ್ತಾರೆ. ಕಾಡುಗಳ ದೊಡ್ಡ ದೊಡ್ಡ ಬ್ಲಾಕ್‌ಗಳ ಮೂಲಕ ಗುರುತಿಸಲಾಗುವ, ಬೆಂಕಿಯ ನಿಯಂತ್ರಣಕ್ಕಾಗಿ ಓಡಾಡಲು ಬಳಸುವ, ಸಾಲಿನಂತಹ ಪಥಗಳನ್ನು ಚೊಕ್ಕಗೊಳಿಸಿ ನಿರ್ವಹಿಸುವ ಕಾರ್ಯವನ್ನು ಮುಂದಿನ ಹೆಜ್ಜೆಯಾಗಿ ಪ್ರಾರಂಭಿಸಬೇಕು. ತರಬೇತಿ ಹೊಂದಿದ ಯಾವನೇ ಅರಣ್ಯಾಧಿಕಾರಿ ಮೊತ್ತ ಮೊದಲು, ಹಗಲಿನಲ್ಲಿ ಎಲ್ಲ ಕುರುಚಲು ಪೊದೆಗಳ ಸಾಲನ್ನು ಕಡಿದು ಪೊದೆಗಳ ಅವಶೇಷಗಳನ್ನು ಹಾಗೂ ತರಗೆಲೆ ಕಸಕಡ್ಡಿಗಳನ್ನು ಸಾಲುಪಥಗಳ ಮಧ್ಯಭಾಗಕ್ಕೆ ಸ್ಥಳಾಂತರಿಸುತ್ತಾನೆ. ಸಂಜೆಯೊಳಗೆ ವಾತಾವರಣದ ಉಷ್ಣತೆ ಕಡಿಮೆ ಮತ್ತು ಗಾಳಿ ಕಡಿಮೆಯಾದಾಗ ಬೆಂಕಿ ವ್ಯಾಪಿಸದಂತೆ ನೋಡಿಕೊಳ್ಳಲು ಸಾಕಷ್ಟು ಸಿಬ್ಬಂದಿಯನ್ನಿಟ್ಟುಕೊಂಡು ಈ ಅವಶೇಷಗಳನ್ನು ಸುಡುತ್ತಾನೆ. ಅಲ್ಲಿಂದ ತೆರಳುವುದಕ್ಕೆ ಮುನ್ನ ಬೆಂಕಿ ಸಂಪೂರ್ಣವಾಗಿ ನಂದಿ ಹೋಗಿದೆ ಎಂಬುದನ್ನು ಖಾತ್ರಿಪಡಿಸಬೇಕಾಗಿದೆ. ಒಣ ಹುಲ್ಲು ಕೂಡ ಸುಟ್ಟು ಬೂದಿಯಾಗಿರುವ ಸಾಲುಪಥಗಳನ್ನು ಹೀಗೆ ಸಮರ್ಪಕವಾಗಿ ಗುರುತಿಸಿಕೊಂಡಾಗಲಷ್ಟೇ ಅವು ಕಾಡ್ಗಿಚ್ಚಿಗೆ ಪರಿಣಾಮ ಕಾರಿಯಾದ ಪ್ರತಿಬಂಧಕವಾಗಿ ಕಾರ್ಯ ನಿರ್ವಹಿಸಬಲ್ಲವು.

ಸಂಭವಿಸಬಹುದಾದ ಯಾವುದೇ ಘಟನೆಯನ್ನು ನಿಭಾಯಿಸಲು ಬೇಕಾಗುವ ಸನ್ನದ್ಧತೆ ಮುಂದಿನ ಹೆಜ್ಜೆ. ಎಲ್ಲ ವಾಹನಗಳು, 
ನಿಸ್ತಂತು ಉಪಕರಣಗಳು ಮತ್ತಿತರ ಸಲಕರಣೆಗಳನ್ನು ಸುಸ್ಥಿತಿ ಯಲ್ಲಿರುವಂತೆ ನೋಡಿಕೊಂಡು ಅಣಿ ಮಾಡಬೇಕು. ಚುರುಕಿನ ಓಡಾಟ ಸಾಧ್ಯವಾಗುವಂತೆ ನೋಡಿಕೊಳ್ಳಲು ಕಾಡಿನೊಳಗಿನ ಪಹರೆ ಮಾರ್ಗ/ಹಾದಿಗಳನ್ನು ಚೊಕ್ಕಗೊಳಿಸಬೇಕು. ದುಷ್ಕರ್ಮಿಗಳನ್ನು ಎದುರಿಸಲು ಗುಪ್ತಚರ ಮಾಹಿತಿಯನ್ನಾಧರಿಸಿದ ಪ್ರಮುಖ “ಅಪಾಯದ ಜಾಗ’ಗಳನ್ನು ಗುರುತಿಸಿಕೊಳ್ಳಬೇಕು. ವಿವಿಧ ವ್ಯೂಹಾತ್ಮಕ ಪ್ರದೇಶಗಳಲ್ಲಿ ಅನುಭವಿ ಅರಣ್ಯ ಸಿಬ್ಬಂದಿಯ ಮೇಲುಸ್ತುವಾರಿಯಲ್ಲಿ ತ್ವರಿತವಾಗಿ ಪ್ರತಿಕ್ರಿಯಿಸಬಲ್ಲ ಬೆಂಕಿ ಕಾವಲುಗಾರರ ತಂಡಗಳನ್ನು ನೇಮಿಸಬೇಕು. ಸೂಕ್ತವಾದ ಸ್ಥಳ ಗಳಲ್ಲಿ ಬೆಂಕಿ ನಂದಿಸುವವರನ್ನೂ ಕೂಡ ನೆಲೆಗೊಳಿಸಬಹುದು.

Advertisement

ಕ್ಷಣಾರ್ಧದಲ್ಲಿ ನಿರ್ದಿಷ್ಟ ಜಾಗಕ್ಕೆ ತಲುಪಬಲ್ಲ, ತ್ವರಿತವಾಗಿ ಪ್ರತಿಕ್ರಿಯಿಸಬಲ್ಲ ಬೆಂಕಿ ಕಾವಲುಗಾರರ ತಂಡಗಳ ಜತೆ ಸಂವಹನ ನಡೆಸಲು ಅವಶ್ಯವಿರುವ ನಿಸ್ತಂತು ಉಪಕರಣಗಳನ್ನು ಹೊಂದಿದ ಬೆಂಕಿಯನ್ನು ಗುರುತಿಸುವ ತಜ್ಞರನ್ನು ಮುಂದಿಟ್ಟುಕೊಂಡು 
ನಿರಂತರ 24 ಗಂಟೆಗಳ ನಿಗಾವಣೆಯನ್ನು ಖಾತರಿಪಡಿಸಿಕೊಳ್ಳ ಬೇಕು. ಈ ಎಲ್ಲವನ್ನೂ ಸುಸೂತ್ರವಾಗಿ ಕಾರ್ಯರೂಪಕ್ಕೆ ತರಲು ಅರ್ಪಣಾ ಮನೋಭಾವದ ನಾಯಕತ್ವ ಮತ್ತು ಅನುಭವಿ ಸಿಬ್ಬಂದಿಯ ಆವಶ್ಯಕತೆಯಿದೆ. ಈ ಮೇಲಿನ ಉಪಕ್ರಮಗಳನ್ನು 1999ರಲ್ಲಿ “ಭದ್ರಾ ಹುಲಿ ರಕ್ಷಿತಾರಣ್ಯ’ದ ಅಂದಿನ ನಿರ್ದೇಶಕರು ಪರಿಣಾಮಕಾರಿಯಾಗಿ ನಿರೂಪಿಸಿ ತೋರಿಸಿದ್ದಾರೆ. ಬಂಡೀಪುರದಲ್ಲಿ ಪ್ರಸಕ್ತ ಲಭ್ಯ ವಿರುವುದಕ್ಕಿಂತ ಬಹಳ ಕಡಿಮೆ ಸಂಪನ್ಮೂಲಗಳೊಂದಿಗೆ ಅವರು ತಮ್ಮ ಸಿಬ್ಬಂದಿಗೆ ಉತ್ತಮ ನಿರ್ವಹಣೆ ತೋರಲು ಅಗತ್ಯವಾದ ಪ್ರೇರಣೆಯನ್ನು ನೀಡಿದರು. ಹಾಗೆಯೇ ಸ್ಥಳೀಯರನ್ನು ಸಮೀಪಿಸಿ ಅವರೊಂದಿಗೆ ಯಶಸ್ವಿಯಾಗಿ ವ್ಯವಹರಿಸಿದರು.  ತತ್ಪರಿಣಾಮವಾಗಿ, ಭಾರೀ ಪ್ರಮಾಣದ ಒಣ ಬಿದಿರು ಇದ್ದರೂ ಕೂಡ ಭದ್ರಾದಲ್ಲಿ ಒಂದೇ ಒಂದು ಬೆಂಕಿ ಅನಾಹುತ ನಡೆದ ಘಟನೆ ವರದಿಯಾಗಿಲ್ಲ. 2013ರಿಂದ 2016ರ ನಡುವೆ ನಾಗರಹೊಳೆ ರಕ್ಷಿತಾರಣ್ಯದಲ್ಲಿ ಬೆಂಕಿ ಅನಾಹುತಕ್ಕೆ ಅತ್ಯಂತ ಪೂರಕವಾದ ಪರಿಸ್ಥಿತಿಯನ್ನು ಹೊಂದಿದ ವಲಯಗಳಲ್ಲೊಂದನ್ನು ಇಬ್ಬರು ರೇಂಜರುಗಳು ಮುಂಚೂಣಿಯಲ್ಲಿದ್ದುಕೊಂಡು ಅತ್ಯಂತ ಪರಿಣಾಮಕಾರಿಯಾಗಿ ನಿಯಂತ್ರಿಸಿದರು. ಈ ಅಮೂಲ್ಯ ಪಾಠಗಳನ್ನು ತುಂಬ ಅರ್ಹವಾಗಿಯೇ ಬೆಂಕಿ ಪ್ರತಿಬಂಧಕ್ಕೆ ಒಂದು “ಎಸ್‌ಒಪಿ’-ಪ್ರಮಾಣಿತ ಕಾರ್ಯಾಚರಣೆ ಪ್ರಕ್ರಿಯೆಯಾಗಿ ಅಭಿವೃದ್ಧಿಪಡಿಸಬಹುದು.

ಕಾಡ್ಗಿಚ್ಚಿನ ಕಾರಣಗಳು:  ಸಾಮಾನ್ಯ ಗ್ರಹಿಕೆಗೆ ತದ್ವಿರುದ್ಧವಾಗಿ, ಒಣ ಬಿದಿರಿನ ಕಾಂಡಗಳು ಒಂದಕ್ಕೊಂದು ಘರ್ಷಿಸಿ ಕಾಡ್ಗಿಚ್ಚನ್ನು ಉಂಟು ಮಾಡುವುದಿಲ್ಲ. ಹಾಗೆ ಹೇಳುವುದಾದರೆ, ಉಷ್ಣವಲಯದ ಕಾಡುಗಳಲ್ಲಿ ಸಂಭವಿಸುವ ಎಲ್ಲ ಕಾಡ್ಗಿಚ್ಚಿನ ಪ್ರಕರಣಗಳು ಮಾನವ ನಿರ್ಮಿತವಾದವು. ಹೆಚ್ಚಾಗಿ ಅತಿಕ್ರಮಣಕಾರರು, ದನಗಾಹಿಗಳು, ಕಾಡುತ್ಪನ್ನಗಳನ್ನು ಸಂಗ್ರಹಿಸುವವರು ಅಥವಾ ಅರಣ್ಯ ಇಲಾಖೆಯ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುವ ಅಸಂತುಷ್ಟ ಶಕ್ತಿಗಳಿಂದ ಇವು ನಡೆಯುತ್ತವೆ. ಕೆಲವೊಮ್ಮೆ ಬೆಂಕಿ ನಂದಿಸಲು ಓಡಾಡುವ ಸಾಲುಪಥವನ್ನು ಚೊಕ್ಕಗೊಳಿಸಲು ಸಿಬ್ಬಂದಿ ಗಾಳಿ ಬೀಸುತ್ತಿರುವಾಗ ಬೆಂಕಿ ಹಾಕಿದರೆ ಅಥವಾ ಸಾಕಷ್ಟು ಸಿಬ್ಬಂದಿ ಮತ್ತು ಸೂಕ್ತ ನಿರ್ವಹಣೆ ಇಲ್ಲದಿದ್ದಾಗ ಅಥವಾ ಸಿಬ್ಬಂದಿ ಮತ್ತು ಕ್ಷೇತ್ರಾಧಿಕಾರಿಗಳ ನಡುವೆ ಆಂತರಿಕ ಭಿನ್ನಮತವಿದ್ದಾಗ ಕಾಡಿಗೆ ಬೆಂಕಿ ಬೀಳುವುದುಂಟು. ಈ ವರ್ಷ ಬಂಡೀಪುರದಲ್ಲಿ ವಿನಾಶಕಾರಿ ಬೆಂಕಿ ಅವಘಡ ಸಂಭವಿಸಲು ಕಾರಣವಾದರೂ ಏನು? ಗುಂಡ್ರೆ ಮತ್ತು ಮೊಲಿಯೂರು ಅರಣ್ಯ ಪ್ರದೇಶಗಳಲ್ಲಿ ತಾಗಿಕೊಂಡ ಬೆಂಕಿ ದುಷ್ಟಶಕ್ತಿಗಳು ನಡೆಸಿರುವ ಕೃತ್ಯದಂತೆ ತೋರುತ್ತದೆ. ಅದೇ ಸಂದರ್ಭದಲ್ಲಿ ಎ.ಎಂ. ಗುಡಿ ವಲಯದಲ್ಲಿ ಸಂಭವಿಸಿದ ಭಾರೀ ಬೆಂಕಿ ಅನಾಹುತದ ಬಗ್ಗೆ ಆತಂಕಕಾರಿ ವರದಿಗಳಿವೆ. ಅಂತೂ ಸತ್ಯವೇನೆಂಬುದನ್ನು ಪತ್ತೆ ಹಚ್ಚುವುದು ಬಹಳ ಅವಶ್ಯವಾಗಿದ್ದು ಅದು ಅರಣ್ಯರಕ್ಷಕನೊಬ್ಬನ ತ್ಯಾಗವನ್ನು ಗೌರವಿಸುವುದಕ್ಕೆ ಮಾಡಬಹುದಾದ ಅತ್ಯಂತ ಕನಿಷ್ಠ ಕೆಲಸವಾಗಿದೆ.

ಈ ಹಿಂದೆ ನಡೆದ ವಿಚಾರಣೆಗಳೆಲ್ಲ ಯಾರನ್ನೂ ಹೊಣೆಗಾರರನ್ನಾಗಿ ಮಾಡದಿದ್ದರೂ ಸದ್ಯ ಮುಖ್ಯಮಂತ್ರಿಯವರು ಆದೇಶಿಸಿದ ಸ್ವತಂತ್ರ ಸಿಐಡಿ ತನಿಖೆಯು ಸತ್ಯವನ್ನು ಬಯಲಿಗೆಳೆದು ಸಡಿಲತೆ, ನಿರ್ಲಕ್ಷ್ಯ ಅಥವಾ ಅಡಿಮೇಲು ಕೃತ್ಯಗಳಿಗೆ ಕಾರಣರಾದವರು ಸೂಕ್ತಕ್ರಮವನ್ನು ಎದುರಿಸುವಂತೆ ಮಾಡಬಹುದು ಎಂದು ಭಾವಿಸಲಾಗಿದೆ. ಬೆಂಕಿ ನಂದಿಸಲು ಓಡಾಡುವ ಸಾಲುಪಥಗಳನ್ನು ನಿಜವಾಗಿಯೂ ಚೊಕ್ಕಗೊಳಿಸಿ ಸಮರ್ಪಕವಾಗಿ ನಿರ್ವಹಿಸಲಾಗಿತ್ತೇ ಇಲ್ಲವೇ ಎನ್ನುವುದು ಸಿಐಡಿ ತನಿಖೆ ಬೆಳಕು ಚೆಲ್ಲಬೇಕಾದ ಪ್ರಮುಖ ವಿಚಾರಗಳಲ್ಲೊಂದು. ರಾಜ್ಯದಲ್ಲಿ ಹಲವಾರು ಕಡೆಗಳಲ್ಲಿ ಕಾಡ್ಗಿಚ್ಚಿನ ಪ್ರಕರಣಗಳು ದುರ್ಬಲ ಮುಂಗಾರಿನಿಂದ ಸೃಷ್ಟಿಯಾದ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದ ಸಂಭವಿಸಿವೆ ಎಂಬ ಚರ್ಚೆಗೆ ಸಂಬಂಧಿಸಿ ಹೇಳುವುದಾದರೆ; ಆಶ್ಚರ್ಯದಾಯಕ ಸಂಗತಿಯೆಂದರೆ ಕೆಲವು ತೀರಾ ಒಣಗಿಹೋದ ಕಾಡು ಪ್ರದೇಶಗಳಿಗೆ ಕಿಚ್ಚು ಹತ್ತಿಕೊಳ್ಳಲಿಲ್ಲ. ಆದರೆ, ಕೊಂಬೆರೆಂಬೆಗಳಾದಿ ಅವಶೇಷಗಳ ದಟ್ಟ ರಾಶಿಯೊಂದಿಗೆ ತೇವಾಂಶಭರಿತವಾದ ಕಾಡುಗಳು ಬೆಂಕಿಯ ರುದ್ರ ತಾಂಡವಕ್ಕೆ ಅಹುತಿಯಾಗಿವೆ. ಆದುದರಿಂದ ಅಂತಹ ಕ್ಷುಲ್ಲಕ ವಿವರಣೆಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸಿಐಡಿ ತನಿಖೆಯು ಇದರ ಹಿನ್ನೆಲೆಯಲ್ಲಿರಬಹುದಾದ ಇತರ ಪ್ರಮುಖ ಕಾರಣಗಳನ್ನು ಆಮೂಲಾಗ್ರವಾಗಿ ಪರಿಶೀಲಿಸುವುದು ಅತ್ಯಂತ ಮುಖ್ಯವಾಗಿದೆ. ಕಾಡ್ಗಿಚ್ಚುಗಳ ವಿರುದ್ಧ ಸಮರ ಸಾರುವುದು ಅತ್ಯಂತ ಕಷ್ಟದ ಕೆಲಸ. ಅದಕ್ಕೆ ವರ್ಷಾನುಗಟ್ಟಳೆ ಸಂಪಾದಿಸಿದ ಜ್ಞಾನ ಮತ್ತು ಸಂಬಂಧಿತ ಕ್ಷೇತ್ರದ ಬಹಿರಂಗ ತೆರೆದುಕೊಳ್ಳುವಿಕೆಯ ಆವಶ್ಯಕತೆಯಿದೆ. ಅಮೆರಿಕದಲ್ಲಿ ಕಾಡ್ಗಿಚ್ಚು ಮತ್ತು ಇತರ ಬೆಂಕಿ ಅನಾಹುತಗಳ ಸಂದರ್ಭದಲ್ಲಿ ನಿರ್ದಿಷ್ಟ ಪರಿಣತಿಯ ಆವಶ್ಯಕತೆಯಿರುವ ಕುತೂಹಲಕಾರಿ ವ್ಯವಸ್ಥೆಯೊಂದನ್ನು ಅನುಸರಿಸಲಾಗುತ್ತಿದೆ. ಹಿರಿತನ ಅಥವಾ ಶ್ರೇಣಿಯನ್ನು ಗಣನೆಗೆ ತೆಗೆದುಕೊಳ್ಳದೆ ಅರಣ್ಯ ಇಲಾಖೆಯ ಅಧಿಕಾರ ಶ್ರೇಣಿಯಲ್ಲಿ ಕ್ಷೇತ್ರ ತಜ್ಞರೆಂದು ಗುರುತಿಸಲ್ಪಟ್ಟ ಅಧಿಕಾರಿಯೊಬ್ಬರು ನೇತೃತ್ವ ವಹಿಸಿಕೊಂಡು ಎಲ್ಲ ಕಾರ್ಯಾಚರಣೆಗಳನ್ನು ನಿರ್ದೇಶಿಸುತ್ತಾರೆ.

ಕಾಡ್ಗಿಚ್ಚಿನ ಪ್ರಕರಣದ ಅನಂತರ ಸಾಮಾನ್ಯ ಕ್ರಮದ ಅಧಿಕಾರ ಶ್ರೇಣಿ ಅಡಿಮೇಲಾಗುತ್ತದೆ. ಬೆಂಕಿಯ ನಿರ್ವಹಣೆಯಲ್ಲಿ ವಿಶೇಷ ಕೌಶಲವನ್ನು ಹೊಂದಿರುವ ಅಧಿಕಾರಿ ಅಥವಾ ಸಿಬ್ಬಂದಿಯನ್ನು ಗುರುತಿಸುವುದರ ಮೂಲಕ ಈ ವ್ಯವಸ್ಥೆಯನ್ನು ಮೌಲ್ಯ ಮಾಪನಕ್ಕೊಳಪಡಿಸುವುದು ಅತ್ಯಂತ ಯೋಗ್ಯ. ಅಷ್ಟು ಮಾತ್ರವಲ್ಲದೆ, ಅರಣ್ಯರಕ್ಷಕ ಶಾಲೆಗಳಲ್ಲಿ ಮತ್ತು ತರಬೇತಿ ಸಂಸ್ಥೆಗಳಲ್ಲಿ ಬೆಂಕಿ ರಕ್ಷಣೆಯನ್ನು ಒಂದು ಕಲಿಕಾ ವಿಷಯವನ್ನಾಗಿ ಪಠ್ಯಕ್ರಮದಲ್ಲಿ ಸೇರಿಸಿಕೊಳ್ಳುವುದು ಅವಶ್ಯ. ಪ್ರಸ್ತುತ ಅಸ್ತಿತ್ವದಲ್ಲಿರುವ ವರ್ಗಾವಣೆ ವ್ಯವಸ್ಥೆಯು ಅರಣ್ಯ ಸಂರಕ್ಷಕ ಅಧಿಕಾರಿಗಳ ಕೌಶಲ ಮತ್ತು ವನ್ಯಜೀವಿಗಳ ನಿರ್ವಹಣೆಗೆ ಸಂಬಂಧಿಸಿದಂತೆ ಅವರಿಗಿರುವ ಕ್ಷೇತ್ರಾನುಭವದ ಸರಿಯಾದ ವಿಶ್ಲೇಷಣೆಯನ್ನು ಆಧರಿಸಿಲ್ಲ. ಆದುದರಿಂದ ಸಾಕಷ್ಟು ತರಬೇತಿ ಮತ್ತು ಕೌಶಲ ಹೊಂದಿದ ವಿವಿಧ ಶ್ರೇಣಿಗಳ ಅಧಿಕಾರಿಗಳು-ಸಿಬ್ಬಂದಿಗಳನ್ನು ಗುರುತಿಸಿ ಅವರನ್ನು ವಿಶೇಷ ಆದ್ಯತೆಯ ರಕ್ಷಿತಾರಣ್ಯಗಳಿಗೆ ನೇಮಿಸಿಕೊಳ್ಳುವುದನ್ನು ಖಾತ್ರಿಪಡಿಸಲು ಸರಕಾರವು ಈ ವಿಚಾರದ ಕಡೆಗೆ ಹೆಚ್ಚಿನ ಗಮನ ನೀಡುವುದು ಅವಶ್ಯ. ಕೊನೆಯದಾಗಿ, ಬೆಂಕಿ ಅವಘಡ ಸಂಭವಿಸುವ ಋತುಮಾನದಲ್ಲಿ ಅಧಿಕಾರಿಗಳ ಗಮನವನ್ನು ಬೇರೆಡೆಗೆ ಸೆಳೆದು ಅವರ ಅಮೂಲ್ಯ ಸಮಯವನ್ನು ನುಂಗಿ ಹಾಕುವ ಆರ್ಥಿಕ ವರ್ಷಾಂತ್ಯದ ನಾಗರಿಕ ಸೇವಾ ಕಾರ್ಯಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದು ಅತ್ಯಂತ ಅಗತ್ಯ.

ರತ್ನಾಕರ ಶೆಟ್ಟಿ,  ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next