ಬೀದರ: ಯಾವುದೇ ಶಸ್ತ್ರ ಇಲ್ಲದೆ ತಮ್ಮನ್ನು ರಕ್ಷಣೆ ಮಾಡಿಕೊಳ್ಳುವ ತಂತ್ರ ಕರಾಟೆ ಕಲಿಸುತ್ತದೆ. ಇಂದು ಹೆಚ್ಚಾಗುತ್ತಿರುವ ಹೆಣ್ಣು ಮಕ್ಕಳ ಶೋಷಣೆ ಇದರಿಂದ ತಡೆಯಲು ಸಾಧ್ಯವಾಗುತ್ತದೆ ಎಂದು ಎಂಎಲ್‌ಸಿ ಅರವಿಂದಕುಮಾರ ಅರಳಿ ಹೇಳಿದರು.
ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಆಶ್ರಯದಲ್ಲಿ ತಾಲೂಕಿನ ಬಗದಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ಓಬವ್ವ ಆತ್ಮ ರಕ್ಷಣಾ ಕಲೆಯ ಕೌಶಲಗಳ ತರಬೇತಿಗೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಸ್ವರಕ್ಷಣೆ ಕಲೆಯ ತರಬೇತಿ ಮೂಲಕ ಕರ್ನಾಟಕದ ಇತಿಹಾಸದಲ್ಲಿ ಕನಸಿನ ಅಧ್ಯಾಯ ಆರಂಭವಾಗಿದೆ ಎಂದರು.
ಐಎಎಸ್ ಪ್ರೋಬೆಷನರಿ ಅಧಿಕಾರಿ ಕೀರ್ತನಾ ಮಾತನಾಡಿ, ಮಕ್ಕಳು ಸಶಕ್ತರಾದರೆ ಮಾತ್ರ ಸ್ವರಕ್ಷಣೆ ಸಾಧ್ಯ. ತಮ್ಮನ್ನು ತಾವು ರಕ್ಷಿಸುವ ಕಲೆ ಕಲಿತಾಗ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಇಂತಹ ಸ್ವ ರಕ್ಷಣಾ ಕಲೆ ಹೆಣ್ಣು ಮಕ್ಕಳಲ್ಲಿದೆ ಎಂದು ಅರಿವಾದರೆ ಯಾವ ದುರುಳನ್ನು ಹೆಣ್ಣು ಮಕ್ಕಳನ್ನು ಚುಡಾಯಿಸಲು ಕನಸಿನಲ್ಲೂ ಯೋಚಿಸಲಾರರು. ಈ ಕಲೆ ಹೆಣ್ಣು ಮಕ್ಕಳ ಆತ್ಮವಿಶ್ವಾಸ ವೃದ್ಧಿಗೆ ಪೂರಕವಾಗಿ ನಮ್ಮತನ ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನುಡಿದರು.
ಬಿಸಿಎಂ ಇಲಾಖೆ ಜಿಲ್ಲಾ ಅಧಿಕಾರಿ ಬಸವರಾಜ ಬಡಿಗೇರ್ ಮಾತನಾಡಿ, ಮಕ್ಕಳಿಗೆ ಕಲಿಕೆಯ ಉತ್ತಮ ವಾತಾವರಣ ನಿರ್ಮಿಸಿ, ಎಲ್ಲ ಅವಕಾಶ ಒದಗಿಸಿ ನಾಡಿಗೆ ಸತ್ಪ್ರಜೆ ನಿರ್ಮಿಸಿಕೊಡುವ ಸದುದ್ದೇಶದಿಂದ ಈ ವಸತಿ ಶಾಲೆಗಳು ಆರಂಭವಾಗಿವೆ. ಈ ಶಾಲೆಗಳಿಂದ ನಾಯಕತ್ವ ಗುಣ ಬೆಳೆಸಿಕೊಂಡು, ಶ್ರದ್ಧೆ ಮತ್ತು ಸಮರ್ಪಣಾ ಭಾವದಿಂದ ಅಭ್ಯಾಸಿಸಿ ಸಮಾಜಕ್ಕೆ ಕೊಡುಗೆಯಾಗಿ ನಿಲ್ಲಬೇಕೆಂದು ಮಕ್ಕಳಿಗೆ ಕರೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಎಸ್.ಬಿ ಯೋಗೀಶ್, ಬಿಸಿಎಂ ಇಲಾಖೆಯ ವ್ಯವಸ್ಥಾಪಕ ಅಶೋಕ ಸೇರಿಕಾರ, ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಮನ್ವಯಾಧಿಕಾರಿ ಶರಣಪ್ಪ ಬಿರಾದಾರ ಇದ್ದರು. ಶಾಲೆಯ ಪ್ರಾಚಾರ್ಯ ಚೆನ್ನಬಸವ ಹೇಡೆ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕರಾಟೆ ಕಲೆ ಪ್ರದರ್ಶಿಸಿದರು. ಶಿಕ್ಷಕರಾದ ಶ್ರೀಕಾಂತ ರಾಜಗೀರಾ, ಮಾರುತಿ ಸುಂಕಾ, ಸಿದ್ಧಲಿಂಗಯ್ಯ ಮಠಪತಿ, ಸವಿತಾ ಕಲ್ಲೂರ, ತ್ರಿವೇಣಿ ಮಠಪತಿ, ಪ್ರಶಾಂತ ಹೊನ್ನಾ, ಸಂತೋಷ ಚೆನ್ನವೀರೆ, ಕೃಷ್ಣಾಚಾರಿ, ತುಕಾರಾಮ, ತಿಪ್ಪಣ್ಣಾ ಚಿಂತಾಲೆ, ಮಾಣಿಕ ಸಾಗರ, ಶ್ರೀಕಾಂತ ಭೋಸ್ಲೆ, ಹಾರಿಕಾ ಬಿರಾದಾರ, ಸುವರ್ಣಾ ಬಸವರಾಜ, ಸುಮೀತ ಗಾಯಕವಾಡ, ವಸಂತ ರಾಠೊಡ ಇನ್ನಿತರರಿದ್ದರು.