Advertisement

ವಾಯು ಮಾಲಿನ್ಯ ತಡೆಯುವುದು ಅತೀ ಮುಖ್ಯ

06:00 AM Dec 03, 2018 | |

ವಾಹನಗಳು ಹೆಚ್ಚಾಗಿ ಸಂಚರಿಸುವ ವೇಳೆಯಲ್ಲಿ ಮಾಲಿನ್ಯದ ಗಾಳಿ ಸುಲಭವಾಗಿ ಮನೆಯೊಳಗೆ ನುಗ್ಗಿ ಬಿಡುತ್ತಿದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು, ಸ್ವಲ್ಪ ಎತ್ತರದ ಪಾಯದೊಂದಿಗೆ ಮನೆ ನಿರ್ಮಿಸುವುದು ಒಳ್ಳೆಯದು. ಹೀಗೆ ಮಾಡಿದರೆ, ವಾಯುಮಾಲಿನ್ಯದಿಂದ ಸ್ವಲ್ಪ ಮಟ್ಟಿಗಾದರೂ ಪಾರಾಗಬಹುದು. 

Advertisement

ಇತ್ತೀಚಿನ ದಿನಗಳಲ್ಲಿ ವಾಯುಮಾಲಿನ್ಯ ನಗರ ಪ್ರದೇಶಗಳಲ್ಲಿ ವಿಪರೀತವಾಗಿದೆ. ಸೌದೆ ಒಲೆ ಉರಿಸುವ ಗ್ರಾಮೀಣ ಮನೆಗಳಲ್ಲೂ ಅದೇನೂ ಕಡಿಮೆ ಇರುವುದಿಲ್ಲ! ಉಸಿರಾಟದ ತೊಂದರೆ, ಕಣ್ಣಿಗೆ ಕಿರಿಕಿರಿ, ಚರ್ಮರೋಗಗಳಿಗೂ ಕಾರಣವಾಗಿದೆ. ಒಟ್ಟಾರೆ, ದೇಹಕ್ಕೆ ಅಗತ್ಯವಾಗಿರುವ ಆಮ್ಲಜನಕದ ಪೂರೈಕೆ ಕಡಿಮೆಯಾಗಿ ಇಂಗಾಲ, ಗಂಧಕ ಇತ್ಯಾದಿಗಳ ಹಾವಳಿ ಹೆಚ್ಚಾಗುತ್ತಿದೆ. ಇಡೀ ಪರಿಸರದ ಸಂರಕ್ಷಣೆ ಎಲ್ಲರ ಹೊಣೆ ಆದರೂ, ತಕ್ಷಣಕ್ಕೆ ನಾವೇನೂ ಮಾಡಲಾಗದ ಸ್ಥಿತಿಯಲ್ಲಿ ಇದ್ದೇವೆ. ದಿನೇದಿನೇ ಹೆಚ್ಚುತ್ತಿರುವ ವಾಹನಗಳು, ಅಡಿಗೆಗೆ ಇಂಧನಗಳ ಬಳಕೆ ಇತ್ಯಾದಿಯಿಂದ ವಾಯುಮಾಲಿನ್ಯ ಹೆಚ್ಚುತ್ತಲಿದ್ದು, ಸುಲಭ ಉಪಾಯಗಳು ಇಷ್ಟರಲ್ಲೇ ಸಿಗುವುದು ಕಷ್ಟ. ಹಾಗಾಗಿ ನಾವು ನಮ್ಮ ಮನೆಗಳನ್ನು ವಿನ್ಯಾಸ ಮಾಡುವಾಗಲೇ ಸಾಕಷ್ಟು ಮುಂಜಾಗರೂಕತೆ ವಹಿಸಿ, ಒಂದಷ್ಟು ನಿಯಂತ್ರಕಗಳನ್ನು ಅಳವಡಿಸಿಕೊಂಡರೆ,  ಹೊರಗಿನ ಪರಿಸರಕ್ಕೆ ಹೋಲಿಸಿದರೆ, ಮನೆಯ ಒಳಾಂಗಣದಲ್ಲಾದರೂ ಸಾಕಷ್ಟು ಆರೋಗ್ಯಕರ ವಾತಾವರಣ ನಿಮಾರ್ಣವಾಗಲು ಸಹಾಯಕಾರಿ.

ವಾಯು ಮಾಲಿನ್ಯದ ಲೆಕ್ಕಾಚಾರ
ದಿನದ ಇಪ್ಪತ್ತು ನಾಲ್ಕು ಗಂಟೆಯೂ ವಾತಾವರಣದಲ್ಲಿ ಮಾಲಿನ್ಯ ಒಂದೇ ರೀತಿಯಲ್ಲಿ ಇರುವುದಿಲ್ಲ! ಜನ ಹೆಚ್ಚು ಹೆಚ್ಚು ವಾಹನಗಳನ್ನು ಬಳಸಿದ ಹೊತ್ತಿನಲ್ಲಿ – ಪೀಕ್‌ ಅವರ್‌ ಎನ್ನಲಾಗುವ ಅತಿ ದಟ್ಟಣೆಯ ಅವಧಿಯಲ್ಲಿ ಅತಿ ಹೆಚ್ಚು ಮಾಲಿನ್ಯ ಕಂಡುಬಂದು, ನಂತರ ಅದು ಕಡಿಮೆ ಆಗುತ್ತದೆ. ಹಾಗೆಯೇ, ಸಂಜೆಯ ಹೊತ್ತು, ಮನೆಗಳಿಗೆ ಮರಳಿಬರುವಾಗಲೂ ಟ್ರಾಫಿಕ್‌ ಹೆಚ್ಚಿರುವುದರಿಂದ ಅದರಲ್ಲೂ ಜಾಮ್‌ ಆಗಿ ವಾಹನಗಳು ನಿಧಾನವಾಗಿ ಚಲಿಸಿದಷ್ಟೂ ಹೆಚ್ಚುಹೆಚ್ಚು ಮಾಲಿನ್ಯ ಉಂಟಾಗುತ್ತದೆ. ವಾಹನಗಳ ಎಂಜಿನ್‌ಗಳಿಗೆ ಒಂದು ಮಾದರಿ ವೇಗ ಇರುತ್ತದೆ. ಅದು ಸುಮಾರು ಮೂವತ್ತು ನಲವತ್ತು ಕಿಲೋ ಮೀಟರ್‌ ಆಸುಪಾಸಿನಲ್ಲಿ ಇರುತ್ತದೆ. ಕಡಿಮೆ ವೇಗದಲ್ಲಿ ಅಂದರೆ, ಕೆಲವೇ ಕಿಲೊಮೀಟರ್‌ ಆಮೆಗತಿಯಲ್ಲಿ ವಾಹನಗಳು ಚಲಿಸುತ್ತಿದ್ದರೆ, ಅತಿ ಹೆಚ್ಚು ಹೊಗೆ ಉತ್ಪತ್ತಿಯಾಗುತ್ತದೆ. 

ಮಾಲಿನ್ಯ ಹಾಗೂ ತಾಪಮಾನ
ಬೆಳಗ್ಗೆ ಹಾಗೂ ಸಂಜೆ  ತಂಪಾಗಿರುವುದರಿಂದ, ವಾಹನಗಳು ಉಗುಳಿದ ವಿಷ ಅನಿಲ ತುಂಬಿದ ಗಾಳಿ ಸುಲಭದಲ್ಲಿ ಮೇಲಕ್ಕೆ ಏರದೆ, ಮಾಲಿನ್ಯ ಕೆಳ ಮಟ್ಟದಲ್ಲೇ ಹರಡುತ್ತಿರುತ್ತದೆ. ಈ ಹೊತ್ತಿನಲ್ಲೇ ಮನೆಗಳ ಒಳಗೆ ಮಲಿನಯುಕ್ತ ಗಾಳಿ ಪ್ರವೇಶವಾಗುತ್ತದೆ. ಮಧ್ಯಾಹ್ನದ ಹೊತ್ತು ವಾತಾವರಣ ಸೂರ್ಯಕಿರಣಗಳಿಂದ ಬಿಸಿಯೇರಿ, ಗಾಳಿ ಸ್ವಾಭಾವಿಕವಾಗೇ ಮೇಲಕ್ಕೆ ಏರುತ್ತದೆ. ಜೊತೆಗೆ ಮಾಲಿನ್ಯವನ್ನೂ ಹೊತ್ತೂಯ್ದು ಮನೆಗಳ ಮಟ್ಟದಲ್ಲಿ ತಾಜಾಗಾಳಿ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ರಾತ್ರಿಯ ಹೊತ್ತು ಹೇಗೂ ವಾಹನಗಳ ದಟ್ಟಣೆ ಕಡಿಮೆ ಇರುವುದರಿಂದ ವಾಯು ಮಾಲಿನ್ಯವೂ ಕಡಿಮೆ ಇರುತ್ತದೆ, ಈ ಹೊತ್ತಿನಲ್ಲಿ ಗಾಳಿ ಮೇಲೆ ಏರದೆ, ಮನೆಗಳ ಮಟ್ಟದಲ್ಲೇ ಹರಿದಾಡುತ್ತಿದ್ದರೂ ತೊಂದರೆ ಏನೂ ಆಗುವುದಿಲ್ಲ.  ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಮನೆಯ ವಿನ್ಯಾಸವನ್ನು ಮಾಡಿದರೆ, ಅನಿವಾರ್ಯವಾಗಿ ವಾಯು ಮಾಲಿನ್ಯ ಇರುವ ಪ್ರದೇಶದಲ್ಲಿ ಇದ್ದರೂ ಸಾಕಷ್ಟು ತಾಜಾಗಾಳಿ ಮನೆಯೊಳಗೆ ಇರುವಂತೆ ಮಾಡಬಹುದು.
 
ರಾತ್ರಿಯ ಹೊತ್ತು ಮನೆಯಲ್ಲಿ ಕ್ರಾಸ್‌ ವೆಂಟಿಲೇಷನ್‌ – ಗಾಳಿ ಅಡ್ಡಹಾಯುವ ಮೂಲಕ ತಾಜಾ ಗಾಳಿ ಪ್ರವೇಶಿಸುವಂತೆ ಮಾಡಿ, ಅತಿ ಹೆಚ್ಚು ಮಾಲಿನ್ಯ ಇರುವ ಕೆಲ ಗಂಟೆಗಳ ಕಾಲ ರಸ್ತೆ ಬದಿಯ ಕಿಟಕಿಗಳನ್ನು ಮುಚ್ಚಿದರೆ ಮನೆಯೊಳಗೆ ಒಂದು ಮಟ್ಟದವರೆಗೆ ನಿಯಂತ್ರಣ ಸಿಕ್ಕಂತೆ ಆಗುತ್ತದೆ. 

ಮಾಲಿನ್ಯಕ್ಕೆ ತಡೆಗೋಡೆ
ವಾಹನಗಳು ಸಾಮಾನ್ಯವಾಗಿ ಕೆಳಮಟ್ಟದಲ್ಲಿ ಅಂದರೆ ಅವುಗಳ ಚಕ್ರಗಳ ಮಟ್ಟದಲ್ಲಿ ಹೊಗೆಯನ್ನು ಉಗುಳುತ್ತವೆ. ಲಾರಿ, ಬಸ್‌ ಮುಂತಾದ ದೊಡ್ಡ ವಾಹನಗಳ ಚಕ್ರಗಳೂ ಮೂರು ನಾಲ್ಕು ಅಡಿಗಿಂತ ದೊಡ್ಡದಾಗಿರುವುದಿಲ್ಲ. ಹಾಗಾಗಿ,  ಮುಖ್ಯ ರಸ್ತೆಗಳ ಪಕ್ಕ ಇರುವ ಇಲ್ಲವೇ ಹೆಚ್ಚು ವಾಹನಗಳ ದಟ್ಟಣೆಯ ಪ್ರದೇಶಗಳಲ್ಲಿ ಮನೆಯನ್ನು ಕಡೇ ಪಕ್ಷ ಮೂರು ನಾಲ್ಕು ಅಡಿ ಎತ್ತರದಲ್ಲಿ ಕಟ್ಟಿಕೊಳ್ಳುವುದು ಉತ್ತಮ. ಇತ್ತೀಚಿನ ದಿನಗಳಲ್ಲಿ “ಸ್ಟಿಲ್ಟ್’ ಮಾದರಿಯ ಮನೆಗಳು, ಅಂದರೆ ಕೆಳಗಿನ ಮಟ್ಟದಲ್ಲಿ ಕಾರು ನಿಲ್ಲಿಸಲು ಸುಮಾರು ಏಳುಅಡಿ ಸೂರು ಕಲ್ಪಿಸಿ, ಅದರ ಮೇಲೆ ಮನೆ ಬರುತ್ತದೆ. ಹೀಗೆ ಮನೆ ರಸ್ತೆ ಮಟ್ಟದಿಂದ ಹೆಚ್ಚು ಎತ್ತರ ಇದ್ದಷ್ಟೂ ವಾಯುಮಾಲಿನ್ಯ ಕಡಿಮೆ ಆಗುತ್ತದೆ. ತೀರಾ ಕೆಳ ಮಟ್ಟ ಅಂದರೆ ಕೇವಲ ಒಂದು ಅಡಿ ಪ್ಲಿಂತ್‌ ಮಟ್ಟ ಇರುವ ಮನೆಗೆ  ಹೋಲಿಸಿದರೆ, ಎರಡು ಮೂರು ಅಡಿಗಳ ಪ್ಲಿಂತ್‌ ಮಟ್ಟದ ಮನೆಗಳಲ್ಲಿ ಮಾಲಿನ್ಯ ಗಮನೀಯವಾಗಿ ಕಡಿಮೆ ಇರುತ್ತದೆ.  ಹೀಗಾಗಲು ಮುಖ್ಯ ಕಾರಣ, ವಾಹನಗಳ ಹೊಗೆ ಕೊಳವೆ ನೇರವಾಗಿ ಪಕ್ಕಕ್ಕೆ ರಭಸದಿಂದ ಉಗುಳುವುದರಿಂದ ಏರು ಒತ್ತಡದ ಜೊತೆಗೆ ಮಾಲಿನ್ಯ ನಮ್ಮ ಮನೆಯನ್ನು ಪ್ರವೇಶಿಸಬಹುದು. 

Advertisement

ಮನೆಯನ್ನು ಕಡೇಪಕ್ಷ ಮೂರು ಅಡಿಯಷ್ಟಾದರೂ ರಸ್ತೆಯಿಂದ ಹಿಂದಕ್ಕೆ ಕಟ್ಟಿದ್ದರೆ, ಕಾಂಪೌಂಡ್‌ ಗೋಡೆ ಹಾಕಲು ಅನುಕೂಲ ಆಗುವುದರ ಜೊತೆಗೆ, ಹಸಿರು ಗೋಡೆಯನ್ನೂ ಕೋಟೆಯಂತೆ ಕಟ್ಟಿಕೊಂಡು ವಾಯುಮಾಲಿನ್ಯ ನಿಯಂತ್ರಣ ಮಾಡಲು ಸಾಧ್ಯ. ಕೇವಲ ಎರಡು ಅಡಿ ತೆರೆದ ಸ್ಥಳ ಬಿಟ್ಟರೆ, ಅದರಲ್ಲಿ ಕಾಂಪೌಂಡ್‌ ಗೋಡೆಯೇ ಸುಮಾರು ಆರು ಇಂಚು ದಪ್ಪ ಇದ್ದು,  ಮಿಗುವ ಒಂದೂವರೆ ಅಡಿಯಲ್ಲಿ ಗಿಡಗಳನ್ನು ಹಾಕಿ ಓಡಾಡಲು ಆಗುವುದಿಲ್ಲ. ಅದೇ ರೀತಿಯಲ್ಲಿ ಮನೆಯನ್ನು ರಸ್ತೆಗೆ ನೇರವಾಗಿ ಕಟ್ಟದೆ, ಒಂದು ಕೋನದಲ್ಲಿ ಕಟ್ಟಿದರೆ, ಮಾಲಿನ್ಯ ಪ್ರಹಾರವೂ ಕಡಿಮೆ ಆಗಲು ಅನುಕೂಲ ಆಗುತ್ತದೆ. ಜೊತೆಗೆ ನಮಗೆ ಕಿಟಕಿಗಳನ್ನು ಇಡಲು ರಸ್ತೆಯಿಂದ ಆದಷ್ಟೂ ದೂರದ ಸ್ಥಳ ದೊರೆಯುತ್ತದೆ.

ಸ್ಕೈಲೈಟ್‌ ಗಳ ಬಳಕೆ
ಒಂದು ಕಾಲದಲ್ಲಿ ಫ್ಯಾನ್‌ಗಳು ಇಲ್ಲದ ಕಾಲದಲ್ಲಿ ಮನೆಗಳಲ್ಲಿ ಕಡ್ಡಾಯವಾಗಿ ಇರುತ್ತಿದ್ದ ವೆಂಟಿಲೇಟರ್‌ ಹಾಗೂ ಗವಾಕ್ಷಿ$ಗಳು ಇತ್ತೀಚಿನ ದಿನಗಳಲ್ಲಿ ಕಡಿಮೆ ಆಗುತ್ತಿದೆ. ಕೆಲ ಮನೆಗಳಲ್ಲಿ ಇಡೀ ವರ್ಷ ವಿದ್ಯುತ್‌ ಪಂಖ ತಿರುಗುತ್ತಲೇ ಇರುತ್ತದೆ. ಆದರೂ ಆ ಒಂದು ತಾಜಾ ಅನುಭವ ಆಗುವುದಿಲ್ಲ. ಏಕೆಂದರೆ ಫ್ಯಾನ್‌ ಮನೆಯೊಳಗಿನ ಹಳಸಲು ಗಾಳಿಯನ್ನೇ ಮತ್ತೆ ಮತ್ತೆ ತಿರುಗಿಸಿ ಕೊಡುತ್ತಿರುತ್ತದೆ. ಮನೆಗೆ ವೆಂಟಿಲೇಟರ್‌ ಗಳನ್ನು ಅಳವಡಿಸಿದರೆ, ಈಗಾಗಲೇ ಎರಡು-ಮೂರು ಅಡಿ ಎತ್ತರವಿರುವ ಮನೆಗೆ ಎರಡೂವರೆ ಅಡಿ ಮಟ್ಟದಲ್ಲಿರುವ ಕಿಟಕಿಯನ್ನು ಮಾಲಿನ್ಯದಿಂದ ರಕ್ಷಣೆ ಪಡೆಯಲು ಕೆಲ ಗಂಟೆಗಳ ಕಾಲ ಮುಚ್ಚಿದ್ದರೂ, ರಸ್ತೆಯಿಂದ ಎಂಟು ಹತ್ತು ಅಡಿ ಎತ್ತರದ ವೆಂಟಿಲೇಟರ್‌ ಗಳ ಮೂಲಕ ಕಡಿಮೆ ಮಲಿನ ಆಗಿರುವ ಗಾಳಿ ಪ್ರವೇಶಿಸಲು ಅನುಕೂಲ ಆಗುತ್ತದೆ. ಮನೆಗೆ ಸ್ಕೈಲೈಟ್‌ ಅಳವಡಿಸಿದರೆ, ಸೂರಿನ ಮಟ್ಟದಲ್ಲಿ ಗಾಳಿ ಹರಿದಾಡುವುದರಿಂದ, ವಾಯು ಮಾಲಿನ್ಯ ಕಡಿಮೆ ಮಾಡುವುದರಲ್ಲಿ ಇದೂ ಸಹಕಾರಿಯಾಗುತ್ತದೆ.  

ಹೆಚ್ಚಿನ ಮಾತಿಗೆ ಫೋನ್‌ 98441 32826  
– ಆರ್ಕಿಟೆಕ್ಟ್ ಕೆ. ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next