Advertisement
ಈ ಕುರಿತು ಮಂಗಳವಾರ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿದ ಅವರು, ಅಪಾಯಕಾರಿ ಮತ್ತು ಕಾನೂನು ಬಾಹಿರವಾದ ಇಂತಹ ಸಾರಿಗೆ ವ್ಯವಸ್ಥೆಯನ್ನು ಕೂಡಲೇ ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ನೀಡಿದರು.
Related Articles
Advertisement
ಈ ವಿಚಾರಕ್ಕೆ ಸಂಬಂಧಿಸಿದ ಇತರ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಯ ಸಂಯೋಜನೆ ಮತ್ತು ಸಹಕಾರದೊಂದಿಗೆ ನಿಯಮಬಾಹಿರ ಸಾರಿಗೆಯನ್ನು ಸಂಪೂರ್ಣವಾಗಿ ತಡೆಯಲು ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳು ನಿಯಮಿತವಾಗಿ ಮತ್ತು ಕ್ರಮಬದ್ಧವಾಗಿ ಕಾರ್ಯ ನಿರ್ವಹಿಸುವ ಕುರಿತು ಜಿಲ್ಲಾಧಿಕಾರಿಗಳು, ರಸ್ತೆ ಸುರಕ್ಷತೆ ಸಮಿತಿ ಹಾಗೂ ಅಧ್ಯಕ್ಷರು, ಪ್ರಾದೇಶಿಕ ರಸ್ತೆ ಪ್ರಾಧಿಕಾರದಿಂದ ಈವರೆಗೆ ತೆಗೆದುಕೊಂಡ ಕ್ರಮಗಳನ್ನು ಸರ್ಕಾರದ ಗಮನಕ್ಕೆ ತರುವಂತೆ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲೆಯ ಯಾವ ಪ್ರದೇಶದಲ್ಲಿ ಸಿದ್ಧ ಉಡುಪು ಕಾರ್ಮಿಕರು ಹೆಚ್ಚಾಗಿರುತ್ತಾರೋ ಅಂತಹ ಪ್ರದೇಶಗಳಲ್ಲಿ ಅವರ ಸುರಕ್ಷಿತ ಮತ್ತು ಕೈಗೆಟುಕುವಂತಹ ಸಾಗಾಣಿಕೆಗಾಗಿ ಕಾರ್ಮಿಕ ಇಲಾಖೆಯ ಸಂಯೋಜನೆಯೊಂದಿಗೆ ವಿಶೇಷ ಯೋಜನೆಗಳನ್ನು ರೂಪಿಸುವತ್ತ ಕ್ರಮ ವಹಿಸುವಂತೆ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳಿಗೆ ಸೂಚಿಸಬೇಕು. ಸುರಕ್ಷತೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಪಾಲುದಾರಿಕ ಇಲಾಖೆಗಳಾದ ಸಾರಿಗೆ, ಕಾರ್ಮಿಕ, ಶಿಕ್ಷಣ ಒಳಾಡಳಿತ ಇಲಾಖೆಗಳು, ಆಯಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿಗಳ ಸಹಭಾಗಿತ್ವದೊಂದಿಗೆ ಯೋಜನೆಯನ್ನು ರೂಪಿಸುವಂತೆ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಸೇರಿದ ಎಲ್ಲಾ ಸಾರಿಗೆ ವಾಹನಗಳ ಹಿಂಬದಿಯಲ್ಲಿ, ಸರಕು ಸಾಗಣಾ ವಾಹನಗಳಲ್ಲಿ ಪ್ರಯಾಣಿಸುವುದು ಕಾನೂನು ಬಾಹಿರ ಎಂಬ ಸಂದೇಶ ಹೊತ್ತ ಫಲಕಗಳನ್ನು ಅಳವಡಿಸುವಂತೆ ಸೂಚಿಸಿದರು.
ರಾಜ್ಯದ ಎಲ್ಲಾ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಿಗಳ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳು ಹದಿನೈದು ದಿನಗಳಿಗೊಮ್ಮೆ ಉಸ್ತುವಾರಿ ಸಭೆಗಳನ್ನು ನಡೆಸಬೇಕು ಹಾಗೂ ಅದರ ವರದಿಗಳನ್ನು ಪ್ರತಿ ತಿಂಗಳು ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರು ಹಾಗೂ ಸಂಬಂಧಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಗೆ ಸಲ್ಲಿಸುವಂತೆ ಕ್ರಮ ವಹಿಸಲು ತಿಳಿಸಿದರು.
ಸರಕು ಸಾಗಣೆ ವಾಹನಗಳಲ್ಲಿ ಅಪಾಯಕಾರಿ ರೀತಿಯಲ್ಲಿ ಶಾಲಾ ಮಕ್ಕಳು ಸೇರಿ ಸಾರ್ವಜನಿಕರನ್ನು ಕರೆದೊಯ್ಯುವುದು ಕಂಡು ಬಂದಲ್ಲಿ, ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ಕಾನೂನು ರೀತಿ ದಂಡ ವಿಧಿಸುವುದರ ಜೊತೆಗೆ ವಾಹನದ ನೋಂದಣಿ ಪ್ರಮಾಣ ಪತ್ರ ಹಾಗೂ ಪರವಾನಗಿಯನ್ನು ರದ್ದುಪಡಿಸಲು ಕ್ರಮ ವಹಿಸುವಂತೆ ಸಾರಿಗೆ ಇಲಾಖೆಗೆ ಸೂಚಿಸಿದರು. ಅಲ್ಲದೆ, ಅಂತಹ ವಾಹನಗಳ ಮಾಲಿಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿಕೊಳ್ಳುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದರು.
ಸಾರಿಗೆ ಸಂಸ್ಥೆಗೆ ಸೂಚನೆ: ಜಿಲ್ಲೆಯ ಯಾವ ಭಾಗದ ಶಾಲೆಗಳಲ್ಲಿ ಶಾಲಾ ಮಕ್ಕಳು ಹೋಗಿ ಬರಲು ಸಾರಿಗೆ ವ್ಯವಸ್ಥೆ ಇಲ್ಲ ಎಂಬುದನ್ನು ಗುರುತಿಸಲು ಆಯಾ ಜಿಲ್ಲಾ ಶಿಕ್ಷಣ ಇಲಾಖಾ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅಂತಹ ಶಾಲಾ ಮಕ್ಕಳಿಗೆ ಸೂಕ್ತ ಮತ್ತು ಸುರಕ್ಷಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವತ್ತ ಕ್ರಮ ಕೈಗೊಳ್ಳಬೇಕು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕಾರ್ಮಿಕ ಇಲಾಖೆಯ ಸಹಯೋಗದೊಂದಿಗೆ ಪ್ರಸ್ತುತ ಕಾರ್ಮಿಕರಿಗೆ ವಿತರಿಸಲಾಗುತ್ತಿರುವ ಬಸ್ ಪಾಸುಗಳನ್ನು ರಾಜ್ಯಾದ್ಯಂತ ಎಲ್ಲಾ ಕಾರ್ಮಿಕರಿಗೆ ವಿತರಿಸಲು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ನಿರ್ದೇಶನ ನೀಡಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ವಾಹನಗಳಲ್ಲಿ ಪಾಲಿಕೆ ಸಿಬ್ಬಂದಿ, ವಿಶೇಷವಾಗಿ, ಪೌರ ಕಾರ್ಮಿಕರು ಪ್ರಯಾಣಿಸುವುದನ್ನು ಸಂಪೂರ್ಣವಾಗಿ ತಡೆಗಟ್ಟಲು ಬಿಬಿಎಂಪಿಯಿಂದ ಪ್ರತ್ಯೇಕವಾದ ಕ್ರಿಯಾ ಯೋಜನೆಯನ್ನು ರೂಪಿಸಿ, ಹೈಕೋರ್ಟ್‌ಗೆ ಸಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಸವರಾಜು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಸಾರಿಗೆ ಆಯುಕ್ತ ವಿ.ಪಿ.ಇಕ್ಕೇರಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ ಸುನೀಲ… ಕುಮಾರ್, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.