ಉಡುಪಿ: ಎಕ್ಸಾಮ್ ಪ್ಯಾಡ್ (ಇ-ಪ್ಯಾಡ್) ಬಳಸುವ ಮೂಲಕ ಕಾಗದ ರಹಿತವಾಗಿ ಪರೀಕ್ಷೆ ನಡೆಸುತ್ತಿರುವ ಮಣಿಪಾಲದ ಮಾಹೆ ವಿಶ್ವವಿದ್ಯಾನಿಲಯಕ್ಕೆ ಐಎಂಸಿಯ ರಾಮಕೃಷ್ಣ ಬಜಾಜ್ ನ್ಯಾಶನಲ್ ಕ್ವಾಲಿಟಿ ಅವಾರ್ಡ್ (ಆರ್‌ಬಿಎನ್‌ಕ್ಯೂಎ) ಟ್ರಸ್ಟ್ ನೀಡುವ ಪ್ರತಿಷ್ಠಿತ ಬೆಸ್ಟ್ ಪ್ರಾಕ್ಟಿಸ್ ಕಾಂಪಿಟೇಶನ್-2022 ಪ್ರಶಸ್ತಿ ಲಭಿಸಿದೆ.
ಮಾಹೆ ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್ ಅವರು ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ| ವಿನೋದ್ ವಿ. ಥಾಮಸ್ ಅವರಿಗೆ ಹಸ್ತಾಂತರಿಸಿ ಮಾತನಾಡಿ, ಕಾಗದ ರಹಿತವಾಗಿ ಪರೀಕ್ಷೆ ನಡೆಸುವ ಮೂಲಕ ಪರಿಸರಕ್ಕೂ ದೊಡ್ಡ ಕೊಡುಗೆಯನ್ನು ನೀಡುತ್ತಿದ್ದೇವೆ. ಮಾಹೆ ವಿ.ವಿ.ಯು ಅಭಿವೃದ್ಧಿಯ ಜತೆಗೆ ಹೊಸ ಆವಿಷ್ಕಾರಗಳೊಂದಿಗೆ ಮುನ್ನಡೆಯುತ್ತಿದೆ ಎಂದು ಹೇಳಿದರು.
ಡಾ| ವಿನೋದ್ ವಿ. ಥಾಮಸ್ ಮಾತನಾಡಿ, ಪರೀಕ್ಷಾ ಪ್ರಕ್ರಿಯೆಯಲ್ಲಿ ಸಂಪೂರ್ಣ ಡಿಜಿಟಲೈಜೇಶನ್ ಮಾಡಿರುವ ಪಟ್ಟಿಯಲ್ಲಿ ಮಾಹೆ ಪ್ರಥಮ ಸ್ಥಾನದಲ್ಲಿದೆ. ಇದೊಂದು ಎಲ್ಲ ವಿ.ವಿ.ಗಳಿಗೂ ಮಾದರಿಯಾಗಿರುವ ನಡೆ. ಪರೀಕ್ಷೆಯ ಸಂಪೂರ್ಣ ಮಾಹಿತಿಯನ್ನು ಡಿಜಿಟಲ್ ವೇದಿಕೆಯ ಮೂಲಕವೇ ಪಡೆಯಲು ಅನುಕೂಲವಾಗುತ್ತಿದೆ ಎಂದರು.
ಕಾಗದ ಬಳಸದೆ ಇರುವುದು ಪರಿಸರಕ್ಕೆ ತುಂಬ ಒಳ್ಳೆಯದು. ಮಾಹೆ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡ ಅನಂತರದಲ್ಲಿ ಸರಿಸುಮಾರು 500ಕ್ಕೂ ಅಧಿಕ ಮರಗಳನ್ನು ಉಳಿಸಿದ್ದೇವೆ ಎಂದರು.
ಕುಲಸಚಿವ ಡಾ| ಗಿರಿಧರ ಪಿ. ಕಿಣಿ, ಕ್ವಾಲಿಟಿ ವಿಭಾಗದ ನಿರ್ದೇಶಕ ಡಾ| ಕ್ರಿಸ್ಟೋಫರ್ ಸುಧಾಕರ್, ಡೆಪ್ಯೂಟಿ ರಿಜಿಸ್ಟ್ರಾರ್‌ಗಳಾದ ಡಾ| ಮಧುಕರ ಮಲ್ಯ, ಡಾ| ಶ್ರೀಜಿತ್ ಜಿ. ಉಪಸ್ಥಿತರಿದ್ದರು.