Advertisement

ರಾಜ್ಯಕ್ಕೆ ಪ್ರತಿಷ್ಠಿತ ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿ: ಸುನಿಲ್ ಕುಮಾರ್ ಹರ್ಷ

04:55 PM Dec 16, 2022 | Team Udayavani |

ಬೆಂಗಳೂರು: ಕೇಂದ್ರ ಇಂಧನ ಸಚಿವಾಲಯದ ಪ್ರತಿಷ್ಠಿತ ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿ-2022ಕ್ಕೆ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ (ಕೆಆರ್ ಇಡಿಎಲ್) ಭಾಜನವಾಗಿದೆ.

Advertisement

ಇಂಧನ ಕ್ಷೇತ್ರದ ಕಾರ್ಯಕ್ಷಮತೆ ಮತ್ತು ದಕ್ಷತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈ ಪ್ರಶಸ್ತಿ ನೀಡುತ್ತಿದ್ದು, ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನದ ಅಂಗವಾಗಿ ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿ ದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಕೆಆರ್ ಇಡಿಎಲ್ ಪರವಾಗಿ ಇಂಧನ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್ ಅವರು ಪ್ರಶಸ್ತಿ ಸ್ವೀಕರಿಸಿದರು. ಕೆಆರ್ ಇಡಿಎಲ್ ವ್ಯವಸ್ಥಾಪಕ ನಿರ್ದೇಶಕ ರುದ್ರಪ್ಪಯ್ಯ ಕೆ.ಪಿ. ಜತೆಗಿದ್ದರು. ಇದೇ ಸಂದರ್ಭದಲ್ಲಿ ಇಂಧನ ಸಂರಕ್ಷಣೆ ಕ್ಷೇತ್ರದಲ್ಲಿಕೆಆರ್ ಇಡಿಎಲ್ ಸಾಧನೆ ಬಗ್ಗೆ ರಾಷ್ಟ್ರಪತಿಯವರು ಮೆಚ್ಚುಗೆ ವ್ಯಕ್ತಪಡಿಸಿದರು.

ವಿವಿಧ ರಾಜ್ಯಗಳಲ್ಲಿ ಇಂಧನ ದಕ್ಷತೆಗೆ ರಾಜ್ಯಗಳಲ್ಲಿ ಜಾರಿಗೊಳಿಸಿರುವ ಕಾರ್ಯಕ್ರಮಗಳ ಕುರಿತಂತೆ ಆಯಾ ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಕರ್ನಾಟಕದಲ್ಲಿ ಇಂಧನ ದಕ್ಷತೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಕೆಆರ್ ಇಡಿಎಎಲ್ ಅನ್ನು ಆಯ್ಕೆ ಮಾಡಲಾಗಿದೆ.

ಸಚಿವ ಸುನಿಲ್ ಕುಮಾರ್ ಹರ್ಷ
ಈ ಕುರಿತಂತೆ ಪ್ರತಿಕ್ರಿಯಿಸಿರುವ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಅವರು, ಕರ್ನಾಟಕಕ್ಕೆ ಈ ಪ್ರಶಸ್ತಿ ಗೆದ್ದು ಕೊಟ್ಟಿದ್ದಕ್ಕಾಗಿ ಕೆಆರ್‌ಇಡಿಎಲ್ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ. “ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನದ ಸವಾಲುಗಳನ್ನು ಎದುರಿಸುವಲ್ಲಿ ಇಂಧನ ಸಂರಕ್ಷಣೆ ನಿರ್ಣಾಯಕ ಪಾತ್ರ ವಹಿಸುತ್ತದೆ. ನಮ್ಮ ಇಲಾಖೆಯು ಇಂಧನ ಸಂರಕ್ಷಣೆ, ಸ್ವಚ್ಛ ಮತ್ತು ಹಸಿರು ಇಂಧನ ಉಪಕ್ರಮಗಳ ಮೇಲೆ ಕೇಂದ್ರೀಕರಿಸಿದೆ. ಇಂಧನ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವುದರ ಜತೆಗೆ ದಕ್ಷತೆಯನ್ನು ಸುಧಾರಿಸುವ ಮೂಲಕ ನಾವು ಅದರ ಸಂರಕ್ಷಣೆಯ ಗುರಿ ಹೊಂದಿದ್ದೇವೆ”, ಎಂದು ಹೇಳಿದರು.

Advertisement

ಪ್ರಶಸ್ತಿ ಸ್ವೀಕರಿಸಿದ ಬಗ್ಗೆ ಸಂತಸ ವ್ಯಕ್ತಪಡಿಸಿದ ಇಂಧನ ಇಲಾಖೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ ನಾಯಕ್, “ಕೇಂದ್ರದ ಇಂಧನ ದಕ್ಷತೆಯ ನೀತಿ ಅನುಷ್ಠಾನದಲ್ಲಿ ಕರ್ನಾಟಕವು ಪ್ರಮುಖ ಪಾತ್ರ ವಹಿಸುತ್ತಿದೆ. ಇಂಧನ ಸಂರಕ್ಷಣಾ ಕಾಯ್ದೆ- 2001ರ ಅನ್ವಯ ಇಂಧನ ಕ್ಷೇತ್ರದಲ್ಲಿ ಸುಸ್ಥಿರ ಅಭಿವೃದ್ಧಿಯ ನಿರ್ದಿಷ್ಟ ಗುರಿಯನ್ನು ಅತ್ಯಂತ ಸಮರ್ಥ ರೀತಿಯಲ್ಲಿ ತಲುಪಲು ಪಟ್ಟು ಬಿಡದೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಕೆಆರ್‌ಇಡಿಎಲ್‌ಗೆ ಪ್ರಶಸ್ತಿ ಲಭ್ಯವಾಗಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಸಂಸ್ಥೆಯ ವ್ಯವಸ್ಥಾಪಕ ಶ್ರೀ ರುದ್ರಪ್ಪಯ್ಯ ಕೆ.ಪಿ. ಅವರು, “ಉತ್ತಮ ಕೆಲಸ ಮಾಡಿದಾಗ ಅದನ್ನು ಗುರುತಿಸಿ ನೀಡುವ ಪ್ರಶಸ್ತಿಗಳು ನಿಜವಾಗಿಯೂ ಖುಷಿ ಕೊಡುತ್ತದೆ. ಕೆಆರ್ ಇಡಿಎಲ್ ಯಾವತ್ತೂ ಇಂಧನ ಸಂರಕ್ಷಣೆ ಮತ್ತು ದಕ್ಷತೆಯ (EC&EE) ಚಟುವಟಿಕೆಗಳ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿದೆ. 5 ವರ್ಷಗಳ ಅವಧಿಯಲ್ಲಿ 5 ಪ್ರಮುಖ ವಲಯಗಳಲ್ಲಿ ಸುಮಾರು 744 ಮಿಲಿಯನ್ ಯೂನಿಟ್ ಇಂಧನ ಉಳಿತಾಯ ಗುರಿ ಸಾಧಿಸಲು ಸರ್ಕಾರ ಮತ್ತು ಖಾಸಗಿ ಮಧ್ಯಸ್ಥಗಾರರೊಂದಿಗೆ ಸಹಕರಿಸಿದ್ದೇವೆ ಎಂದು ತಿಳಿಸಿದ್ದಾರೆ.

2018 ಮತ್ತು 2019ನೇ ಸಾಲಿನಲ್ಲಿ ಕರ್ನಾಟಕವು ರಾಜ್ಯ ಇಂಧನ ದಕ್ಷತೆಯ ಸೂಚ್ಯಂಕ (SEEI) ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ್ದು,”ಸಾಧಕ” ಎಂಬ ಕೀರ್ತಿಗೆ ಪಾತ್ರವಾಗಿತ್ತು.2020ರಲ್ಲಿ “ಫ್ರಂಟ್ ರನ್ನರ್” ಎಂದು ಪರಿಗಣಿಸಲಾಗಿತ್ತು. ಅಲ್ಲದೆ, ಗುಂಪು- ಎ ವಿಭಾಗದಲ್ಲಿ ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿ- 2021 ಗೌರವಕ್ಕೆ ಪಾತ್ರವಾಗಿತ್ತು.

2020-21 ಮತ್ತು 2021-22ನೇ ಆರ್ಥಿಕ ಸಾಲಿನಲ್ಲಿ ಇಂಧನ ಸಂರಕ್ಷಣಾ ಪ್ರಶಸ್ತಿ ವಿಜೇಯತರ ಆಯ್ಕೆಯಾಗಿ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಇಂಧನ ಧಕ್ಷತೆಯ ಸೂಚ್ಯಂಕದ ಕುರಿತು ಅಧ್ಯಯನ ನಡೆಸಿ ಕೆಆರ್ ಇಡಿಎಲ್ ಸಂಸ್ಥೆಯನ್ನು ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿ-2022ಕ್ಕೆ ಆಯ್ಕೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next