Advertisement

ಅಲ್ಪಾವಧಿ ಅಧಿಕಾರಕ್ಕೆ ಪ್ರತಿಷ್ಠೆಯ ಕದನ 

06:00 AM Oct 31, 2018 | |

ಮಂಡ್ಯ: ಮಂಡ್ಯ ಲೋಕಸಭಾ ಚುನಾವಣೆಯ 68 ವರ್ಷಗಳ ಇತಿಹಾಸದಲ್ಲಿ ನಡೆಯುತ್ತಿರುವ ನಾಲ್ಕನೇ ಉಪ ಚುನಾವಣೆ ಇದಾಗಿದ್ದು, ಕಾಂಗ್ರೆಸ್‌ ಬೆಂಬಲಿತ ಜೆಡಿಎಸ್‌ ಅಭ್ಯರ್ಥಿ ಮತ್ತು ಬಿಜೆಪಿ ನಡುವೆ ಪ್ರತಿಷ್ಠೆಯ ಕದನವಾಗಿ ಇದು ಏರ್ಪಟ್ಟಿದೆ. ಮಂಡ್ಯ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಸಾಂಪ್ರದಾಯಿಕ ಎದುರಾಳಿಗಳೆಂದೇ ಬಿಂಬಿತವಾಗಿರುವ ಕಾಂಗ್ರೆಸ್‌-ಜೆಡಿಎಸ್‌ ಪ್ರಸ್ತುತ
ಲೋಕಸಭಾ ಉಪ ಚುನಾವಣೆಯಲ್ಲಿ ಒಗ್ಗೂಡಿ ದುರ್ಬಲ ಬಿಜೆಪಿ ವಿರುದಟಛಿ ಸಮರ ಸಾರಿವೆ.

Advertisement

ಆಡಳಿತಾರೂಢ ಮೈತ್ರಿ ಸರ್ಕಾರದ ವಿರುದ್ಧ ಸೆಟೆದು ನಿಂತಿರುವ ಬಿಜೆಪಿ, ಅಸ್ತಿತ್ವದ ಕಾದಾಟ ಮುಂದುವರಿಸಿದೆ. ಕಳೆದ 20 ವರ್ಷಗಳಿಂದ ರಾಜಕೀಯವಾಗಿ ಅಜ್ಞಾತವಾಸ ಅನುಭವಿಸುತ್ತಿದ್ದ ಜೆಡಿಎಸ್‌ ಅಭ್ಯರ್ಥಿ ಎಲ್‌.ಆರ್‌.ಶಿವರಾಮೇಗೌಡ ಅಧಿಕಾರ ರಾಜಕಾರಣದ ಭರವಸೆಯಲ್ಲಿ ಮುನ್ನಡೆದಿದ್ದಾರೆ. 1952ರಿಂದ ಇದುವರೆಗೆ ಹತ್ತು ಮಂದಿ ಸಂಸದರು ಮಂಡ್ಯ ಜಿಲ್ಲೆಯನ್ನು ಪ್ರತಿನಿಧಿಸಿದ್ದಾರೆ. ಅವರಲ್ಲಿ ಎಂ.ಕೆ. ಶಿವನಂಜಪ್ಪ ನಾಲ್ಕು ಬಾರಿ ಆಯ್ಕೆಯಾಗುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್‌. ಎಂ.ಕೃಷ್ಣ ಮತ್ತು ಚಿತ್ರನಟ ಅಂಬರೀಶ್‌ ಹ್ಯಾಟ್ರಿಕ್‌ ಗೆಲುವಿನ ಪತಾಕೆ ಹಾರಿಸಿದರೆ, ಕಾವೇರಿ ಹೋರಾಟಗಾರ ಜಿ.ಮಾದೇಗೌಡ ಹಾಗೂ ಹಿರಿಯ ಕಾಂಗ್ರೆಸ್ಸಿಗ ಕೆ.ಚಿಕ್ಕಲಿಂಗಯ್ಯ ಡಬಲ್‌ ಗೆಲುವು ದಾಖಲಿಸಿದ್ದಾರೆ. ಉಳಿದಂತೆ ಕೆ.ವಿ.ಶಂಕರೇಗೌಡ,
ಕೆ.ಆರ್‌.ಪೇಟೆ ಕೃಷ್ಣ, ಎನ್‌.ಚೆಲುವರಾಯಸ್ವಾಮಿ, ರಮ್ಯಾ, ಸಿ.ಎಸ್‌.ಪುಟ್ಟರಾಜು ಒಂದೊಂದು ಅವಧಿಗೆ ಲೋಕಸಭೆ ಪ್ರತಿನಿಧಿಸಿದ್ದಾರೆ.

ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಅತಿರಥ-ಮಹಾರಥರು ಸೋಲನುಭವಿಸಿದ್ದು ಒಂದೆಡೆಯಾದರೆ, ಅಂಬರೀಶ್‌ ಮತ್ತು ರಮ್ಯಾ ಅವರ ಪಾರ್ಲಿಮೆಂಟ್‌ ಪ್ರವೇಶದಿಂದ ಈ ಕ್ಷೇತ್ರದಲ್ಲಿ ಸ್ಟಾರ್‌ ವರ್ಚಸ್ಸು ವಿಜೃಂಭಿಸಿದೆ. ಹಲವು ನಾಯಕರು ಈ ಕ್ಷೇತ್ರದ ಮೂಲಕ ತಮ್ಮ ರಾಜಕೀಯ ಅಸ್ತಿತ್ವ ಕಂಡುಕೊಂಡಿದ್ದಾರೆ.  

ನಾಲ್ಕನೇ ಬಾರಿಗೆ ಉಪ ಚುನಾವಣೆ: ಹಿರಿಯ ಕಾಂಗ್ರೆಸ್ಸಿಗ ಎಂ.ಕೆ.ಶಿವನಂಜಪ್ಪನವರ ನಿಧನದಿಂದಾಗಿ 1968ರಲ್ಲಿ ಮೊದಲ ಉಪ ಚುನಾವಣೆ ನಡೆದಿತ್ತು. ನಂತರ ಎಸ್‌.ಎಂ.ಕೃಷ್ಣ, ಎನ್‌.ಚೆಲುವರಾಯಸ್ವಾಮಿ ರಾಜೀನಾಮೆಯಿಂದ ಉಪ ಚುನಾವಣೆ ನಡೆದಿತ್ತು.
ಈಗ ಸಿ.ಎಸ್‌.ಪುಟ್ಟರಾಜು ರಾಜೀನಾಮೆಯಿಂದಾಗಿ ಉಪ ಚುನಾವಣೆ ಬಂದಿದೆ. 

ಕಾಂಗ್ರೆಸ್ಸಿಗರ ತೀವ್ರ ಪ್ರತಿರೋಧ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಳಕ್ಕೆ ಏಳು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಹೀನಾಯವಾಗಿ ಪರಾಭವಗೊಳಿಸಿ ದಿಗ್ವಿಜಯ ಸಾಧಿಸಿದ ಜೆಡಿಎಸ್‌ನ ಅಧಿಕಾರದ ದರ್ಬಾರ್‌ನ ವಿರುದ್ಧ ಕಾಂಗ್ರೆಸ್‌ನಲ್ಲಿ ಆಕ್ರೋಶ ಹೊಗೆಯಾಡುತ್ತಿರುವಾಗಲೇ ಪಕ್ಷದ ಹೈಕಮಾಂಡ್‌ ಜೆಡಿಎಸ್‌ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮೇಲ್ಮಟ್ಟದಿಂದ ಠರಾವು ಹೊರಡಿಸಿರುವುದು ನಿಷ್ಠಾವಂತ ಕಾಂಗ್ರೆಸ್ಸಿಗರ ಪ್ರತಿರೋಧಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ನಾಯಕರನ್ನು ಒಗ್ಗೂಡಿಸುವ ಮೊದಲ ಹಂತದ ಪ್ರಯತ್ನ ಯಶಸ್ವಿಯಾ ಗಿದ್ದರೂ, ವಿಧಾನಸಭಾವಾರು ನಡೆಯುತ್ತಿರುವ ಮುಖಂಡರ ಸಭೆಗಳಲ್ಲಿ ಜೆಡಿಎಸ್‌ ಬೆಂಬಲಕ್ಕೆ ನಿಲ್ಲಲು ಬಹಿರಂಗವಾಗಿಯೇ ವಿರೋಧಗಳು ವ್ಯಕ್ತವಾಗುತ್ತಿದೆ. ಒಂದು ಮೂಲದ ಪ್ರಕಾರ ಕಾಂಗ್ರೆಸ್‌ನ ಒಂದು ಗುಂಪು ಚುನಾವಣೆಯಿಂದಲೇ ದೂರ ಉಳಿಯಲು ನಿರ್ಧರಿಸಿದರೆ, ಮತ್ತೂಂದು ಗುಂಪು ಜೆಡಿಎಸ್‌ನತ್ತ, ಮಗದೊಂದು ಗುಂಪು ಬಿಜೆಪಿಯತ್ತ ಮುಖಮಾಡುವ ಸಾಧ್ಯತೆಗಳಿದ್ದು, ಇದರಿಂದ ಸಹಜವಾಗಿಯೇ ಕಾಂಗ್ರೆಸ್‌ ಮತಗಳು ಚದುರಿ ಹೋಗುವ ಸಾಧ್ಯತೆಗಳಿವೆ. ಈಗಾಗಲೇ ಜಿಲ್ಲೆಯಲ್ಲಿ ಸಂಪೂರ್ಣ ಅಧಿಪತ್ಯ ಸ್ಥಾಪಿಸಿರುವ ಜೆಡಿಎಸ್‌, ಬಿಜೆಪಿಯನ್ನು ಸೋಲಿಸುವ ಆತ್ಮವಿಶ್ವಾಸದೊಂದಿಗೆ ಮುನ್ನಡೆದಿದೆ. ಅಧಿಕೃತವಾಗಿ ಕಾಂಗ್ರೆಸ್‌ ಅಭ್ಯರ್ಥಿ ಇಲ್ಲದಿರುವುದರಿಂದ ಕಾಂಗ್ರೆಸ್‌ನ ಅಖಂಡ ಬೆಂಬಲ ಇಲ್ಲದಿದ್ದರೂ ಜೆಡಿಎಸ್‌ನ ಸಂಪೂರ್ಣ ಮತಗಳು ಎಲ್‌.ಆರ್‌.ಶಿವರಾಮೇಗೌಡರ ಪರ ಚಲಾವಣೆಯಾಗು ವುದರಿಂದ ಜೆಡಿಎಸ್‌ ಅಭ್ಯರ್ಥಿಯ ಗೆಲುವು ಸುಲಭವೆಂದು ಲೆಕ್ಕಾಚಾರ ಹಾಕಲಾಗುತ್ತಿದೆ.

Advertisement

ನೀರಸ ಪ್ರತಿಕ್ರಿಯೆ: ಕೇವಲ ನಾಲ್ಕರಿಂದ ಐದು ತಿಂಗಳ ಅಧಿಕಾರಾವಧಿಗಾಗಿ ನಡೆಯುತ್ತಿರುವ ಉಪ ಚುನಾವಣೆಗೆ ಮತದಾರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪಕ್ಷದ ಮುಖಂಡರೂ ಕೂಡ ಸಾಂಕೇತಿಕ ಚುನಾವಣೆ ನಡೆಸುತ್ತಿದ್ದಾರೆಯೇ ವಿನಃ ಅತ್ಯಂತ
ಗಂಭೀರವಾಗಿ ಪರಿಗಣಿಸಿದಂತೇನೂ ಕಂಡು ಬಂದಿಲ್ಲ. ಈ ಹಿಂದಿನ ಚುನಾವಣೆಗೆ ಹೋಲಿಸಿದರೆ 2018ರ ಲೋಕಸಭಾ ಉಪ ಚುನಾವಣೆಯಲ್ಲಿ ಮತದಾನದ ಪ್ರಮಾಣ ಇಳಿಮುಖವಾಗುವ ಸಾಧ್ಯತೆ ಇದೆ. ಇವೆಲ್ಲದರ ನಡುವೆ, ಕಳೆದ 20 ವರ್ಷಗಳಿಂದ ಅಧಿಕಾರದ ಅಜ್ಞಾತವಾಸದಲ್ಲಿದ್ದ ಶಿವರಾಮೇಗೌಡರು ಪ್ರಸ್ತುತ ಚುನಾವಣೆ ಮೂಲಕ ಹೊಸ ರಾಜಕೀಯ ಭವಿಷ್ಯ ಕಂಡುಕೊಳ್ಳುವ
ಚಡಪಡಿಕೆಯಲ್ಲಿದ್ದರೆ, ಬಿಜೆಪಿ ಅಭ್ಯರ್ಥಿ ಡಾ. ಸಿದ್ದರಾಮಯ್ಯನವರು ಈ ಚುನಾವಣೆ ಮೂಲಕ ಮಹತ್ವದ ಹೆಜ್ಜೆ ಗುರುತು ಮೂಡಿಸಲು ಹೊರಟಿದ್ದಾರೆ.

ನೆಲೆಗಾಗಿ ಬಿಜೆಪಿ ಹೋರಾಟ  
ಕಾಂಗ್ರೆಸ್‌-ಜೆಡಿಎಸ್‌ನ ಬಲವಂತದ ಮೈತ್ರಿಯ ನಡುವೆ ಜಿಲ್ಲೆಯಲ್ಲಿ ಬಿಜೆಪಿ ನೆಲೆನಿಲ್ಲುವ ಹೋರಾಟವನ್ನು ಆರಂಭಿಸಿದೆ. ಮೂಲ ಬಿಜೆಪಿ ಮುಖಂಡರ ಪ್ರತಿರೋಧದ ನಡುವೆ ನಿವೃತ್ತ ಕೆಎಎಸ್‌ ಅಧಿಕಾರಿ ಡಾ. ಸಿದ್ದರಾಮಯ್ಯ ಎಂಬ ಹೊಸ ಮುಖವನ್ನು ಚುನಾವಣಾ ಅಖಾಡಕ್ಕೆ ಇಳಿಸಿರುವ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ನಡುವಿನ ಒಡಕನ್ನು ಮತಗಳನ್ನಾಗಿ ಪರಿವರ್ತಿಸಿಕೊಳ್ಳುವ ಪ್ರಯತ್ನಕ್ಕೆ
ಮುಂದಾಗಿದೆ. ಒಕ್ಕಲಿಗರ ಪ್ರಾಬಲ್ಯವಿರುವ ಜಿಲ್ಲೆಯಲ್ಲಿ ಮಾಜಿ ಸಚಿವ ಆರ್‌. ಅಶೋಕ್‌ ನೇತೃತ್ವದಲ್ಲಿ ಚುನಾವಣಾ ಹೋರಾಟವನ್ನು ನಡೆಸುತ್ತಿದ್ದು, ಎಲ್‌. ಆರ್‌.ಶಿವರಾಮೇಗೌಡರ ಪಕ್ಷಾಂತರ ಧೋರಣೆಯನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ. ಜೊತೆಗೆ ರೈತರ ಸಾಲಮನ್ನಾ ಹಾಗೂ ಮೈಷುಗರ್‌ ಪುನಶ್ಚೇತನಕ್ಕೆ ನಿರ್ದಿಷ್ಟ ಕಾರ್ಯಕ್ರ ಮಗಳನ್ನು ಘೋಷಿಸದ ಮೈತ್ರಿ ಸರ್ಕಾರದ
ವಿರುದ್ಧ ಮತದಾರರನ್ನು ಜಾಗೃತಗೊಳಿಸುವ ಪ್ರಯತ್ನವನ್ನು ಮಾಡಿದೆ. 

ಮಂಡ್ಯ ಮಂಜುನಾಥ್

Advertisement

Udayavani is now on Telegram. Click here to join our channel and stay updated with the latest news.

Next