ಬೆಂಗಳೂರು: ಹೆಚ್ಚಿನ ಪ್ರಯಾಣ ದರ ಪಾವತಿಸುವಂತೆ ಕ್ಯಾಬ್ ಚಾಲಕನೊಬ್ಬ ಒತ್ತಾಯಿಸಿ ದಲ್ಲದೆ, ಪ್ರಯಾಣಿಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಮುಂದಾಗಿರುವ ಘಟನೆ ಬೆಳಕಿಗೆ ಬಂದಿದೆ.
ಪದ್ಮನಾಭನಗರದ ಆರ್.ಕೆ.ಲೇಔಟ್‌ನಲ್ಲಿ ಶನಿ ವಾರ ಬೆಳಗ್ಗೆ 11.30 ರ ವೇಳೆ ಈ ಘಟನೆ ನಡೆದಿದ್ದು, ಓಲಾ ಕ್ಯಾಬ್ ಚಾಲಕ ಕಾಂತರಾಜು ಎಂಬಾತನ ವಿರುದ್ಧ ಪ್ರಯಾಣಿಕ ಶುಭಂ ಎಂಬಾತನ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಚಾಲಕನ ವಿರುದ್ಧ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಪೊಲೀಸರು, ಸಮೀಪದ ಪೊಲೀಸ್ ಠಾಣೆಗೆ ದೂರು ನೀಡುವಂತೆ ಸಲಹೆ ನೀಡಿದ್ದಾರೆ.
ಶನಿವಾರ ಬೆಳಗ್ಗೆ ಶುಭಂ ಅವರು ತಮ್ಮ ಚಿಕ್ಕಮ್ಮನಿಗಾಗಿ ಆರ್.ಕೆ.ಲೇಔಟ್‌ನಿಂದ ಬೇರೆ ಕಡೆ ಹೋಗಲು ಓಲಾ ಕ್ಯಾಬ್ ಬುಕ್ ಮಾಡಿದ್ದರು. ಡ್ರಾಪ್ ಮುಗಿದ ಬಳಿಕ ನಿಗದಿತ ಅಂತರಕ್ಕಿಂತಲೂ 3 ಕಿ.ಮೀ. ಹೆಚ್ಚುವರಿಯಾಗಿದೆ. ಆದ್ದರಿಂದ ಹೆಚ್ಚು ಹಣ ಕೊಡಿ ಎಂದು ಚಾಲಕ ಕೇಳಿದ್ದಾನೆ. ಆಗ ಮಹಿಳಾ ಪ್ರಯಾಣಿಕಿ ಶುಭಂಗೆ ತಿಳಿಸಿದ್ದಾರೆ. ಆಗ ಶುಭಂ ಸ್ಥಳಕ್ಕೆ ಬಂದು, ಆ್ಯಪ್‌ನ ಪ್ರಕಾರ ನಾನು ಹಣ ಪಾವತಿಸುತ್ತೇನೆ. ಅಧಿಕ ಹಣ ಪಾವತಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಇದೇ ವಿಚಾರಕ್ಕೆ ಕೆಲಕಾಲ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಎಷ್ಟು ದೂರವಿದೆ ತೋರಿಸಿ ಎಂದ ಶುಭಂ ಚಾಲಕನ ಮೊಬೈಲ… ಮುಟ್ಟಲು ಯತ್ನಿಸಿದ್ದಾರೆ. ಆ ಸಂದರ್ಭದಲ್ಲಿ ಕೋಪಗೊಂಡ ಚಾಲಕ ಕಾಂತರಾಜು, ಕ್ಯಾಬ್‌ನಿಂದ ಇಳಿದು ಶುಭಂಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಹಲ್ಲೆಗೆ ಯತ್ನಿಸಿದ್ದಾನೆ. ಕೊನೆಗೆ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಇಬ್ಬರನ್ನೂ ಸಮಾಧಾನಪಡಿಸಿ ಸ್ಥಳದಿಂದ ಕಳಿಸಿದ್ದಾರೆ. ಘಟನೆಯ ವಿಡಿಯೋ ಚಿತ್ರೀಕರಿಸಿಕೊಂಡಿದ್ದ ಶುಭಂ ಎಕ್ಸ್ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ.
ವಿಡಿಯೋ ಡಿಲೀಟ್ ಮಾಡಿಸಿದ ಚಾಲಕ: ಆರೋಪ:
ಕ್ಯಾಬ್ ಚಾಲಕ ಹೆಚ್ಚಿನ ಹಣಕ್ಕೆ ಡಿಮ್ಯಾಂಡ್ ಮಾಡಿದ್ದು, ನಾವು ನಿರಾಕರಿಸಿದಾಗ ನಮ್ಮ ಸಂಬಂಧಿ ಮಹಿಳೆಯನ್ನು ತಳ್ಳಿ ನಿಂದಿಸಿದ್ದಾರೆ. ಅದಕ್ಕೆ ನಾನು ಟ್ರಿಪ್ ಕ್ಯಾನ್ಸಲ… ಮಾಡಿ ಎಂದಾಗ ನನಗೂ ಸಹ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಕುರಿತು ನಾನು ಚಿತ್ರೀಕರಿಸಿಕೊಂಡಿದ್ದ ಕೆಲ ವಿಡಿಯೋಗಳನ್ನು ಡಿಲಿಟ್ ಮಾಡಿಸಲಾಗಿದೆ. ಈ ಘಟನೆಯಿಂದ ನಮಗೆ ಭಯವಾಗಿದೆ ಎಂದು ಶುಭಂ ಆತಂಕ ವ್ಯಕ್ತಪಡಿಸಿದ್ದಾರೆ.