Advertisement

ನೀರು ಬಿಡುಗಡೆಗೆ ಒತ್ತಡ ಹೇರಿ

02:51 PM Aug 29, 2017 | Team Udayavani |

ಮಸ್ಕಿ: ಆ.29ರಂದು ನಡೆಯಲಿರುವ ನೀರಾವರಿ ಸಲಹಾ ಸಮಿತಿ ಸಭೆ ಹಿನ್ನೆಲೆಯಲ್ಲಿ ಸೋಮವಾರ ಇಲ್ಲಿನ ಭ್ರಮರಾಂಬದೇವಿ ದೇವಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಬಹುತೇಕ ರೈತ ಮುಖಂಡರು, ರೈತರು 29ರಂದು ನಡೆಯುವ ಐಸಿಸಿ ಸಭೆಯಲ್ಲಿ ಎಡದಂಡೆ ನಾಲೆಗೆ ನೀರು ಹರಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಶಾಸಕ ಪ್ರತಾಪಗೌಡ ಪಾಟೀಲರಿಗೆ ಆಗ್ರಹಿಸಿದರು. ಐಸಿಸಿ ಸಭೆ ಹಿನ್ನೆಲೆಯಲ್ಲಿ ಶಾಸಕ ಪ್ರತಾಪಗೌಡ ಪಾಟೀಲರ ನೇತೃತ್ವದಲ್ಲಿ ಸೋಮವಾರ ಭ್ರಮರಾಂಬದೇವಿ ದೇವಸ್ಥಾನದಲ್ಲಿ ರೈತರ ಅಭಿಪ್ರಾಯ ಸಂಗ್ರಹಕ್ಕೆ ಪೂರ್ವಭಾವಿ ಸಭೆ ಕರೆಯಲಾಗಿತ್ತು. ರೈತ ಮುಖಂಡರೊಬ್ಬರು ಮಾತನಾಡಿ, ಈಗ ಭತ್ತ ಬೆಳೆಯಲು ಸಸಿಗಳನ್ನು ನಾಟಿ ಮಾಡಲಾಗಿದೆ. ನಾಲೆಗೆ ನೀರು ಬಿಡುವುದಿದ್ದಲ್ಲಿ ಐಸಿಸಿ ಸಭೆ ಮುಗಿದ ತಕ್ಷಣ ನೀರು ಬಿಡುವಂತೆ ಶಾಸಕರು
ಒತ್ತಾಯಿಸಬೇಕು. ಒಂದು ವೇಳೆ ನಾಲೆಗೆ ನೀರು ಹರಿಸದಿದ್ದಲ್ಲಿ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ರೈತರೊಂದಿಗೆ ಹೋರಾಟದಲ್ಲಿ ಭಾಗಿಯಾಗಬೇಕೆಂದು ಒತ್ತಾಯಿಸಿದರು. ರೈತ ಮುಖಂಡ ಬಸವರಾಜಸ್ವಾಮಿ ಹಸಮಕಲ್‌ ಮಾತನಾಡಿ, ಮಸ್ಕಿ ಹಾಗೂ ಸಿಂಧನೂರು ಶಾಸಕರು ಐಸಿಸಿ ಸಭೆಯಲ್ಲಿ ನೀರು ಹರಿಸುವ ಬಗ್ಗೆ ಗಟ್ಟಿ ಧ್ವನಿಯಲ್ಲಿ ಮಾತನಾಡುವದಿಲ್ಲ ಎನ್ನುವ ಅಭಿಪ್ರಾಯವಿದೆ. ಆದ ಕಾರಣ ಶಾಸಕರು ನಾಳೆ ನಡೆಯುವ ಐಸಿಸಿ ಸಭೆಯಲ್ಲಿ ರೈತರ ಅಭಿಪ್ರಾಯವನ್ನು ಸಭೆ ಗಮನಕ್ಕೆ ತಂದು ನೀರು ಹರಿಸಲು ಒತ್ತಾಯಿಸಬೇಕೆಂದು ವಿನಂತಿಸಿದರು. ರೈತ ಮುಖಂಡ ಅಮರೇಶ ಮಾತನಾಡಿ, ನಮ್ಮ ಜಮೀನುಗಳು ಭತ್ತ ಬೆಳೆಯುವುದಕ್ಕೆ ಮಾತ್ರ ಶಕ್ತವಾಗಿವೆ. ಬಿಳಿಜೋಳ ಹಾಗೂ ಸೂರ್ಯಪಾನದಂತಹ ಬೆಳೆಗಳನ್ನು ಬೆಳೆಯಲು ಸಾದ್ಯವಿಲ್ಲ. ಆದ್ದರಿಂದ ಸಭೆಯಲ್ಲಿ ಎಡದಂಡೆ ನಾಲೆಗೆ ನೀರು ಹರಿಸಲು ಶಾಸಕರು ಆಗ್ರಹಿಸಬೇಕೆಂದರು. ರೈತ ಮುಖಂಡರು ಮಾತನಾಡಿ, ನೀರು ಬಿಡುವುದಿದ್ದರೆ ನಾಳೆ
ನಡೆಯುವ ಐಸಿಸಿ ಸಭೆ ಮುಕ್ತಾಯವಾದ ಕೂಡಲೇ ನೀರು ಹರಿಸಬೇಕು. ಇಲ್ಲದಿದ್ದರೆ ನಮಗೆ ನೀರೇ ಬೇಡ. ಸರ್ಕಾರ ಮೊದಲು ನೀರು ಹರಿಸಲು ಕ್ರಮ ಕೈಗೊಳ್ಳಲಿ. ಯಾವ ಬೆಳೆ ಬೆಳೆಯಬೇಕೆಂಬ ನಿರ್ಧಾರ ರೈತರಿಗೆ ಬಿಟ್ಟ ವಿಷಯ. ಇದರ ಬಗ್ಗೆ ಸರಕಾರ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದರು. ಸಭೆಯಲ್ಲಿ ಮುಖಂಡರೂ ಸೇರಿದಂತೆ ಕ್ಷೇತ್ರದ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ರೈತರು ಭಾಗವಹಿಸಿದ್ದರು. ನೀರು ಹರಿಸಲು ಪ್ರಯತ್ನ: ರೈತರು, ರೈತ ಮುಖಂಡರ ಅಭಿಪ್ರಾಯ ಆಲಿಸಿದ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿ, ಪ್ರಕೃತಿ ವಿಕೋಪದ ಮುಂದೆ ಯಾವ ಸರಕಾರಗಳು ಏನೂ ಮಾಡಲು ಆಗುವುದಿಲ್ಲ. ಕಳೆದ ಮೂರು ವರ್ಷ ಸತತ ಬರದಿಂದ ರೈತರು ಸಂಕಷ್ಟದಲ್ಲಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ರೈತರ ಬಗ್ಗೆ ಸರಕಾರಕ್ಕೆ ಕಳಕಳಿ ಇದೆ. ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಧಾರಕ್ಕೆ ಬರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ. ಭತ್ತ ಬೆಳೆಯಲು ಎಕರೆಗೆ 25ರಿಂದ ಮೂವತ್ತೂ ಸಾವಿರ ವೆಚ್ಚ ಮಾಡಬೇಕಾದ ಪರಿಸ್ಥಿತಿ ಇದ್ದು, ನೀರಿನ ಸಂಕಷ್ಟ ಎದುರಾದಲ್ಲಿ ರೈತರು ಸಂಕಷ್ಟಕೊಳಗಾಗಬಾರದು ಎಂಬುದೇ ನಮ್ಮ ಉದ್ದೇಶವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕ್ಷೇತ್ರದ ವ್ಯಾಪ್ತಿಯಲ್ಲಿನ ಎಲ್ಲಾ ಎಡನಾಲೆಯ ರೈತರು ನಮಗೆ ಒಂದೇ. ಇದರಲ್ಲಿ ಕೆಳ ಭಾಗ, ಮೇಲಾºಗ ಎಂಬುದರ ತಾರತಮ್ಯ ಮಾಡಲು ಬರುವುದಿಲ್ಲ ಎಂದರು. ಬಹುಸಂಖ್ಯಾತ ರೈತರು ಐಸಿಸಿ ಸಭೆಯ ನಂತರ ಕೂಡಲೇ ಎಡದಂಡೆ ನಾಲೆಗೆ ನೀರು ಹರಿಸಲು ಆಗ್ರಹಿಸಿದ್ದು, ಈ ಬಗ್ಗೆ ಐಸಿಸಿ ಸಭೆಯಲ್ಲಿ ಪ್ರಸ್ತಾಪಿಸಿ ನೀರು ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next