Advertisement

”ಬಾಂಬೆ ಡೇಸ್”ಪುಸ್ತಕ ಬಿಡುಗಡೆ ಮಾಡದಂತೆ ಒತ್ತಡ ಬರುತ್ತಿದೆ : ಹೆಚ್.ವಿಶ್ವನಾಥ್

04:13 PM Mar 26, 2022 | Team Udayavani |

ಮೈಸೂರು: ನಾನು ಬರೆದ ”ಬಾಂಬೆ ಡೇಸ್” ಪುಸ್ತಕ ಬಿಡುಗಡೆ ಮಾಡದಂತೆ ಒತ್ತಡ ಬರುತ್ತಿದೆ. ಆದರೂ 2023ರ ಚುನಾವಣೆಯೊಳಗೆ ಯಾವಾಗ ಬೇಕಾದರೂ ಬಿಡುಗಡೆಯಾಗಬಹುದು ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಶನಿವಾರ ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಸ್ತಕದಲ್ಲಿ ಮೈತ್ರಿ ಸರ್ಕಾರ ಪತನ, ಬಿಜೆಪಿ ಸರ್ಕಾರ ರಚನೆ, ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯುವ ದಿನಗಳವರೆಗೂ ದಾಖಲಿಸಿದ್ದೇನೆ. ಬಾಂಬೆಗೆ ಬಂದಿದ್ದವರು ಬಿಡುಗಡೆ ಮಾಡಬೇಡಿ ಅಂತಿದ್ದಾರೆ, ಅಷ್ಟೇ ಏಕೆ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನ ಕೆಲವರಿಂದಲೂ ಒತ್ತಡ ಇದೆ ಎಂದರು.

ಪುಸ್ತಕ ಬಿಡುಗಡೆಯಾದರೆ ಮೂರೂ ಪಕ್ಷಗಳ ನಾಯಕರು ಬೆತ್ತಲಾಗುತ್ತಾರೆ. ಕುಮಾರಸ್ವಾಮಿ, ಸಿದ್ದರಾಮಯ್ಯ, ಯಡಿಯೂರಪ್ಪ ಮೂವರ ಬಣ್ಣ ಬಯಲಾಗಲಿದೆ ಎಂದರು.

ನಾನು ಯಾರಿಗೂ ಬ್ಲಾಕ್ ಮೇಲ್ ಮಾಡಲು ಪುಸ್ತಕ ಬರೆದಿಲ್ಲ. ನಾವು ದುಡ್ಡು ತೆಗೆದುಕೊಂಡು ಬಿಜೆಪಿಗೆ ಹೋಗಿದ್ದೇವೆ ಎಂಬ ಅಪಪ್ರಚಾರ ನಡೆದಿದೆ. ವಸ್ತುಸ್ಥಿತಿಯನ್ನ ಜನರಿಗೆ ತಿಳಿಸಲು ಪುಸ್ತಕ ಬಿಡುಗಡೆ ಮಾಡುತ್ತಿದ್ದೇನೆ ಎಂದರು.

ಯಾವ ದೃಷ್ಟಿಕೋನದಲ್ಲಿ ಹೇಳಿದ್ದಾರೋ?

Advertisement

ಸ್ವಾಮೀಜಿಗಳ ತಲೆ ಮೇಲಿನ ಬಟ್ಟೆಯನ್ನ ಬಿಜೆಪಿಯವರು ಯಾಕೆ ಪ್ರಶ್ನಿಸುತ್ತಿಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ,
ಅವರು ಯಾವ ದೃಷ್ಟಿಕೋನದಲ್ಲಿ ಹೇಳಿದ್ದಾರೋ ಏನೋ ? ಆದರೆ, ಅವರ ಹೇಳಿಕೆಯ ಅರ್ಥೈಸುವಿಕೆ ಬಹಳ ಭಿನ್ನವಾಗಿದೆ. ಈಗ ಪರಿಸ್ಥಿತಿ ಬೇರೆ ರೀತಿಯೇ ಇದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದವರು, ಈಗ ವಿಪಕ್ಷ ನಾಯಕರಾಗಿದ್ದಾರೆ. ಇಂತಹ ವಿಚಾರಗಳನ್ನು ಯೋಚನೆ ಮಾಡಿ ಆಡಬೇಕು. ಕಳೆದ ಚುನಾವಣೆ ವೇಳೆ ವೀರಶೈವ, ಲಿಂಗಾಯತ ಅಂತ ಹೋಗಿ ಕೆಳಗೆ ಬಿದ್ದಿದ್ದರು. ಎಂ.ಬಿ ಪಾಟೀಲ್ ಮಾತು ಕೇಳಿಕೊಂಡು ಯಡವಟ್ಟು ಮಾಡಿಕೊಂಡಿದ್ದರು. ಈಗ ಮತ್ತೆ ಅದನ್ನೇ ಮಾಡಲು ಹೋಗುತ್ತಿದ್ದಾರೆ ಎಂದರು.

ಧರ್ಮ, ಧರ್ಮಾಧಿಕಾರಿಗಳ ಉಡುಗೆ ವಿಚಾರವನ್ನ ಯಾರೂ ಪ್ರಶ್ನೆ ಮಾಡಬಾರದು. ತುಂಬಾ ಎಚ್ಚರಿಕೆಯಿಂದ ಮಾತಾಡಬೇಕು ಎಂದರು.

ಮುಸ್ಲಿಮರ ಹೊಟ್ಟೆಗೆ ಹೊಡೆಯಬಾರದು

ಚಾಮುಂಡಿ ಬೆಟ್ಟದಲ್ಲಿ ಮುಸ್ಲಿಂ ಅಂಗಡಿ ತೆರವಿಗೆ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯಿಸಿ, ಚಾಮುಂಡಿ, ಮೈಲಾರ ಲಿಂಗೇಶ್ವರ, ಮಾದೇಶ್ವರ ಬೆಟ್ಟ ಯಾವುದೇ ಆಗಿರಲಿ ಮುಸ್ಲಿಂ ಸಮುದಾಯದವರು ವ್ಯಾಪಾರ ಮಾಡುವುದನ್ನ ತಡೆಯೋದು ಸರಿಯಲ್ಲ. ನಮ್ಮ ಹೆಣ್ಣು ಮಕ್ಕಳಿಗೆ ಬೇಕಾದ ಬಳೆ, ಕುಂಕುಮವನ್ನ ಮುಸ್ಲಿಂರು ಮಾರುತ್ತಾರೆ. ಹೀಗಿರುವಾಗ ದೇವಾಲಯದ ಸುತ್ತಮುತಾ ಮುಸ್ಲಿಂರು ವ್ಯಾಪಾರ ಮಾಡಬಾರದು ಅಂದರೆ ಹೇಗೆ ?

ಮೈಸೂರಿನ ದೇವರಾಜ ಮಾರ್ಕೆಟ್ ಗೆ ಹೋಗಿ ನೋಡಲಿ, ಅಲ್ಲಿ ಮುಸ್ಲಿಂ ಸಮುದಾಯದವರೇ ಹೆಚ್ಚಾಗಿ ವ್ಯಾಪಾರ ಮಾಡುತ್ತಾರೆ. ಹೂ, ಹಣ್ಣು, ಅರಿಶಿನ, ಕುಂಕುಮ, ಬಳೆ ಮಾರುತ್ತಾರೆ. ಅವರ ಬಂಡವಾಳವೇ ಐನೂರೋ ಸಾವಿರ ಇರುತ್ತದೆ. ಹೀಗಿರುವಾಗ ಅಂತಹವರ ಹೊಟ್ಟೆಗೆ ಹೊಡೆಯಬಾರದು. ಹಿಂದೂ- ಮುಸ್ಲಿಂರು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷಗಳು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next