ಚಿತ್ತಾಪುರ: ಬೆಳಗಾವಿ ಜಿಲ್ಲೆಯ ಅನಗೋಳದಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅವಮಾನ ಮಾಡಿದ ಎಂಇಎಸ್ ಸಂಘಟನೆ ನಿಷೇಧಿಸಬೇಕು ಹಾಗೂ ಆರೋಪಿಗಳಿಗೆ ಉಗ್ರ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಸಂಘ ತಾಲೂಕು ಶಾಖೆ ನೇತೃತ್ವದಲ್ಲಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕುರುಬ ಸಮಾಜದ ಮುಖಂಡ ಬಸವರಾಜ ಮದ್ರಿಕಿ ಮಾತನಾಡಿ, ರಾಯಣ್ಣ ಪ್ರತಿಮೆಗೆ ಅವಮಾನ ಮಾಡಿ ರಾಜ್ಯದ ಸ್ವಾಭಿಮಾನಿಗಳ ಕಿಚ್ಚು ಹೊತ್ತಿಸಿದಂತಾಗಿದೆ. ಇದಕ್ಕೆ ಆಳುವ ಸರ್ಕಾರಗಳು, ಜನಪ್ರತಿನಿಧಿ ಗಳು ಸಿಡಿದೇಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರದ ಮಹಾ ಪುರುಷರು, ಸಮಾಜ ಸುಧಾರಕರ ಭಾವಚಿತ್ರಗಳಿಗೆ ಅವಮಾನ ಮಾಡುವ ಹೀನ ಕೃತ್ಯಗಳು ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇದರಿಂದ ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗುತ್ತಿದೆ. ಇಂತಹ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹಿರಿಯ ಮುಖಂಡ ಮಲ್ಕಣ್ಣ ಮುದ್ದಾ ಶಹಾಬಾದ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ಇಷ್ಟೆಲ್ಲ ನಡೆಯುತ್ತಿದ್ದರೂ ಅಲ್ಲಿನ ಮುಖಂಡರು ಯಾಕೆ ಮೌನ ವಹಿಸಿದ್ದಾರೆ. ಮತ ಬ್ಯಾಂಕ್‌ಗಾಗಿ ರಾಜಕೀಯ ಒಳ್ಳೆಯದಲ್ಲ ಎಂದು ಹೇಳಿದರು.
ಮುಖಂಡರಾದ ಬಸವರಾಜ ಚಿನ್ನಮಳ್ಳಿ, ಬಸವರಾಜ ಹೊಸ್ಸಳ್ಳಿ, ಸಂತೋಷ ಪೂಜಾರಿ, ಬೋಜರಾಜ ಭಾಗೋಡಿ, ಶಿವಕುಮಾರ ಸುಣಗಾರ ಮಾತನಾಡಿದರು.
ಕುರುಬ ಸಮಾಜದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ ಮೊಗಲಾ, ಕೋಲಿ ಸಮಾಜದ ಅಧ್ಯಕ್ಷ ರಾಮಲಿಂಗ ಬಾನರ್, ಮುಖಂಡರಾದ ಗುಂಡು ಐನಾಪೂರ, ಮಲ್ಲಿಕಾರ್ಜುನ ಪೂಜಾರಿ, ಯಲ್ಲಾಲಿಂಗ ಮುಗುಟಿ, ನಾಗರಾಜ ಪೂಜಾರಿ, ಯಲ್ಲಾಲಿಂಗ್ ಇವಣಿ, ಮಲ್ಲಿಕಾರ್ಜುನ ಡಬಿಗೇರಾ, ದೇವಿಂದ್ರ ಅರಣಕಲ್, ಹಣಮಂತ ಸಂಕನೂರ, ಕಾಶಿನಾಥ ಇಂಗಳಗಿ, ಬೀರು ಪೂಜಾರಿ, ಭೀಮು ಕೊಲ್ಲೂರ, ದೇವು ನಾಲವಾರ, ಮಲ್ಲು ರಾಜೋಳಾ, ಸುನೀಲ ಅಮ್ಮಗೋಳ, ಮಹೇಶ ಸಾತನೂರ, ಸಿದ್ಧಣ್ಣ ವಚ್ಚಾ, ಮಲ್ಲಿಕಾರ್ಜುನ ತೆಂಗಳಿ ಇತರರು ಇದ್ದರು.