ಬೆಂಗಳೂರು: ಮಹಾದಾಯಿ ನದಿ ನೀರು ಹಂಚಿಕೆ ಕುರಿತು ನ್ಯಾಯಮಂಡಳಿ ನೀಡಿರುವ ತೀರ್ಪಿನ ಗೆಜೆಟ್ ಅಧಿ ಸೂಚನೆ ಹೊರಡಿಸುವಂತೆ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಒತ್ತಾಯಿಸಲು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನಿರ್ಧರಿಸಿದ್ದಾರೆ.
ಮಹಾದಾಯಿ ವಿವಾದದ ಬೆಳವಣಿಗೆ ಮತ್ತು ರಾಜ್ಯ ಸರಕಾರದ ಮುಂದಿನ ನಡೆ ಬಗ್ಗೆ ಸೋಮವಾರ ಅಧಿಕಾರಿಗಳ ಜತೆ ಚರ್ಚೆ ನಡೆಸಿರುವ ಅವರು, ಬುಧವಾರ ಬೆಳಗ್ಗೆ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ಅಲ್ಲದೆ ಅದೇ ದಿನ ಸಂಜೆ ರಾಜ್ಯದ ಜಲ ವಿವಾದಗಳ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಾಡುತ್ತಿರುವ ರಾಜ್ಯದ ವಕೀಲರ ತಂಡದೊಂದಿಗೆ ಸಚಿವರು ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.
2018ರಲ್ಲಿ ಮಹಾದಾಯಿ ನ್ಯಾಯ ಮಂಡಳಿ ತೀರ್ಪು ನೀಡಿದ್ದರೂ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸದೆ ಇದ್ದುದರಿಂದ ಯೋಜನೆ ವಿಳಂಬವಾಗಿದೆ. ಆದರೆ ಫೆ.20 ರಂದು ಸುಪ್ರೀಂ ಕೋರ್ಟ್ ಗೆಜೆಟ್ ನೊಟಿಫಿಕೇಶನ್ ಹೊರಡಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿತ್ತು. ಸುಪ್ರೀಂ ಕೋರ್ಟ್ ಆದೇಶವನ್ನು ಮರುಪರಿಶೀಲನೆ ನಡೆಸು ವಂತೆ ಕೋರಲು ಗೋವಾ ಸರಕಾರ ಸಿದ್ಧತೆ ಮಾಡಿ ಕೊಳ್ಳುತ್ತಿರುವುದರಿಂದ ಆದಷ್ಟು ಬೇಗ ಗೆಜೆಟ್ ನೊಟಿಫಿಕೇಶನ್ ಹೊರಡಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಸಚಿವರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ನಿಯೋಗ ಬಗ್ಗೆ ಸಿಎಂ ಜತೆ ಚರ್ಚೆ
ಮಹಾದಾಯಿ ಆದೇಶವನ್ನು ಗೆಜೆಟ್ ನೊಟಿಫಿಕೇಶನ್ ಹೊರಡಿಸಲು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ಸರ್ವ ಪಕ್ಷಗಳ ನಿಯೋಗ ಕರೆದೊಯ್ಯುವ ಕುರಿತು ಸಿಎಂ ಯಡಿಯೂರಪ್ಪ ಅವ ರೊಂದಿಗೆ ಸಮಾಲೋಚನೆ ನಡೆಸಿ ಅನಂತರ ನಿರ್ಧಾರ ಕೈಗೊಳ್ಳಲು ಸಚಿವ ರಮೇಶ್ ಜಾರಕಿಹೊಳಿ ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.