ಗಂಗಾವತಿ: ರೈಸ್‌ಮಿಲ್‌ಗಳ ಮೇಲೆ ರಾಜ್ಯ ಆಹಾರ ಮತ್ತು ನಾಗರಿಕ ಇಲಾಖೆ ಗಧಾ ಪ್ರಹಾರಕ್ಕೆ ಮುಂದಾಗಿದ್ದು, ರೈಸ್‌ಮಿಲ್‌ಗಳ ಮಾಲೀಕರಿಗೆ ಕಿರಿಕಿರಿಯಾಗಿದೆ.
ಭತ್ತದ ದರ ಸರಕಾರದ ಬೆಂಬಲ ಬೆಲೆಗಿಂತ ಕಡಿಮೆಯಾಗಿದೆ. ಸರಕಾರ ಮಧ್ಯೆ ಪ್ರವೇಶಿಸಿ ಬೆಂಬಲ ಬೆಲೆಯಡಿ ಭತ್ತ ಖರೀದಿಸಿದೆ. ಖರೀದಿಸಿದ ಭತ್ತವನ್ನು ಗಂಗಾವತಿ, ಕಂಪ್ಲಿ, ಸಿರಗುಪ್ಪಾ, ದಾವಣಗೆರೆ ಮತ್ತು ತುಮಕೂರು ಸೇರಿ ರಾಜ್ಯದ ರೈಸ್‌ಮಿಲ್‌ಗಳಲ್ಲಿ ಕ್ರಷಿಂಗ್ ಮಾಡಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ನಿರ್ಧರಿಸಿದೆ. ಇಲಾಖೆಯ ನಿಯಮದಂತೆ ಭತ್ತವನ್ನು ಕ್ರಷಿಂಗ್ ಮಾಡಲು ಸರಕಾರ ಮಿಲ್ ಮಾಲೀಕರಿಗೆ ಹಣ ಪಾವತಿಸುತ್ತದೆ.
ಕೋವಿಡ್ ಕಷ್ಟ ಕಾಲದಲ್ಲಿ ರೈಸ್ ಮಿಲ್ ಮಾಲೀಕರು ಕೂಲಿಕಾರರ ಮನವೊಲಿಸಿ ಕೆಲಸ ಆರಂಭಿಸಿದ್ದಾರೆ. ಈ ಮಧ್ಯೆ ಬೆಂಬಲ ಬೆಲೆಯಲ್ಲಿ ಖರೀದಿಸಿದ ಭತ್ತವನ್ನು ರೈಸ್ ಮಿಲ್‌ಗಳಲ್ಲಿ ಸಂಗ್ರಹಿಸಿ ಕ್ರಷಿಂಗ್ ಮಾಡಲು ಭತ್ತದ ಮೌಲ್ಯವನ್ನು ಬ್ಯಾಂಕ್ ಗ್ಯಾರಂಟಿ ನೀಡಬೇಕು. ಇಲ್ಲದಿದ್ದರೆ ರೈತರಿಂದ ಕಡಿಮೆ ದರಕ್ಕೆ ಭತ್ತ ಖರೀದಿಸಿ ಅಕ್ರಮವಾಗಿ ರೈಸ್ ಮಿಲ್‌ಗಳಲ್ಲಿ ಭತ್ತ ಸಂಗ್ರಹ ಮಾಡಿದ ಆರೋಪದಡಿ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಲಾಗುತ್ತಿದೆ. ಇದರಿಂದ ರೈಸ್ ಮಿಲ್ ಮಾಲೀಕರು ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಈಗಾಗಲೇ ರೈಸ್‌ಮಿಲ್‌ಗಳ ಮೇಲೆ ವಿವಿಧ ಬ್ಯಾಂಕ್‌ಗಳಿಂದ ಸಾಲ ಪಡೆದು ಕಂತು ಪಾವತಿಸಲಾಗದೆ ತೊಂದರೆಯಲ್ಲಿರುವ ಮಾಲೀಕರನ್ನು ಈ ಅಲಿಖೀತ ನಿಯಮ ಸಂಕಷ್ಟಕ್ಕೀಡು ಮಾಡಿದೆ. ಆಹಾರ ಇಲಾಖೆ ಭತ್ತವನ್ನು ಮಿಲ್‌ಗಳಲ್ಲಿ ಕ್ರಷಿಂಗ್ ಮಾಡಲು ರೈಸ್‌ಮಿಲ್ ಮಾಲೀಕರು ಸಿದ್ಧರಿದ್ದು, ಬ್ಯಾಂಕ್ ಗ್ಯಾರಂಟಿ ಬದಲು ವೈಯಕ್ತಿಕ ಬಾಂಡ್ ಪಡೆಯುವಂತೆ ಮಾಡಿದ ಮನವಿಗೆ ಅಧಿಕಾರಿಗಳು ಸ್ಪಂದಿಸದೆ ಬ್ಯಾಂಕ್ ಗ್ಯಾರಂಟಿ ಕೊಡದ ಹೊರತು ಅನ್ಯ ಮಾರ್ಗವಿಲ್ಲ ಎಂದು ಹಠ ಮಾಡುತ್ತಿದ್ದಾರೆನ್ನಲಾಗಿದೆ.
ರೈಸ್‌ಮಿಲ್‌ಗಳಿಂದ ಸಾವಿರಾರು ಹಮಾಲಿ ಕೂಲಿಕಾರರಿಗೆ ಮತ್ತು ರೈತರಿಗೆ ಅನುಕೂಲವಾಗುತ್ತಿದೆ. ಆಹಾರ ಇಲಾಖೆ ರೈತರಿಂದ ಖರೀದಿಸಿದ ಭತ್ತ ಕ್ರಷಿಂಗ್ ಮಾಡಲು ರೈಸ್‌ಮಿಲ್ ಮಾಲೀಕರಿಂದ ವೈಯಕ್ತಿಕ ಬಾಂಡ್ ಪಡೆಯಬೇಕು. ಇದನ್ನು ಹೊರತುಪಡಿಸಿ ಬೆದರಿಕೆಯಂತಹ ಕ್ರಮ ಜರುಗಿಸಿದರೆ ಮಾಲೀಕರ ಜತೆ ಸೇರಿ ಹಮಾಲಿ-ಕಾರ್ಮಿಕರು ಹೋರಾಟ ಮಾಡಬೇಕಾಗುತ್ತದೆ.
-ಜೆ. ಭಾರದ್ವಾಜ್, ಮುಖಂಡರು ರಾಜ್ಯ ಪ್ರಗತಿಪರ ರೈಸ್‌ಮಿಲ್ ಕಾರ್ಮಿಕರ ಸಂಘ
ಆಹಾರ ಇಲಾಖೆ ಖರೀದಿಸಿದ ಭತ್ತವನ್ನು ಕ್ರಷಿಂಗ್ ಮಾಡಲು ಬ್ಯಾಂಕ್ ಗ್ಯಾರಂಟಿ ಕೊಡುವುದು ಅಸಾಧ್ಯ. ಈಗಾಗಲೇ ರೈಸ್‌ಮಿಲ್ ಮಾಲೀಕರ ಕಷ್ಟಗಳನ್ನು ಆಹಾರ ಇಲಾಖೆ ಸಚಿವರ ಗಮನಕ್ಕೆ ತರಲಾಗಿದೆ. ಬ್ಯಾಂಕ್ ಗ್ಯಾರಂಟಿ ಬದಲು ವೈಯಕ್ತಿಕ ಬಾಂಡ್ ಮೇಲೆ ಕ್ರಷಿಂಗ್ ಮಾಡಲು ಅವಕಾಶ ಕಲ್ಪಿಸಬೇಕು. ಅಲಿಖೀತವಾಗಿ ರೈಸ್‌ಮಿಲ್ ಮಾಲೀಕರ ಮೇಲೆ ಕೇಸ್ ದಾಖಲಿಸುವಂತಹ ಸಾಹಸವನ್ನು ಅಧಿಕಾರಿಗಳು ಮಾಡಬಾರದು.
-ಪರಣ್ಣ ಮುನವಳ್ಳಿ, ಶಾಸಕರು-ರಾಜ್ಯಾಧ್ಯಕ್ಷರು ರೈಸ್‌ಮಿಲ್ ಮಾಲೀಕರ ಸಂಘ
– ಕೆ.ನಿಂಗಜ್ಜ