ಕಲಬುರಗಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ನಿರ್ಮಿಸಲು ಉದ್ದೇಶಿರುವ ಜವಳಿ ಪಾರ್ಕ್‌ನ್ನು ಕಲ್ಯಾಣ ಕರ್ನಾಟಕ ಭಾಗದ ಕೇಂದ್ರ ಸ್ಥಾನವಾದ ಕಲಬುರಗಿಯಲ್ಲೇ ಸ್ಥಾಪಿಸಬೇಕೆಂದು ಒತ್ತಾಯಿಸಿ ಶೀಘ್ರವೇ ರಾಜ್ಯ ಮತ್ತು ಕೇಂದ್ರ ಸರ್ಕಾರದ ಬಳಿಗೆ ನಿಯೋಗ ತೆರಳಲಾಗುತ್ತದೆ ಎಂದು ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಪ್ರಶಾಂತ ಮಾನಕರ್, ಗೌರವ ಕಾರ್ಯದರ್ಶಿ ಶರಣು ಪಪ್ಪಾ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜವಳಿ ಪಾರ್ಕ್ ಸ್ಥಾಪನೆ ಮಾಡುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಆದರೆ, ಕೇಂದ್ರ ಸರ್ಕಾರಕ್ಕೆ ಕಲಬುರಗಿ, ವಿಜಯಪುರ, ತುಮಕೂರು ಸೇರಿದಂತೆ ಮೂರು ಜಿಲ್ಲೆಗಳ ಹೆಸರು ಶಿಫಾರಸು ಮಾಡಲಾಗಿದೆ. ಇದರ ನಡುವೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಧಾರವಾಡಕ್ಕೆ ಯೋಜನೆ ತೆಗೆದುಕೊಂಡು ಹೋಗುವ ಪ್ರಯತ್ನದಲ್ಲಿದ್ದಾರೆ. ಆದ್ದರಿಂದ ಈ ಭಾಗದ ಸಂಸದರು, ಶಾಸಕರು ಯೋಜನೆ ಕೈತಪ್ಪದಂತೆ ಎಚ್ಚರವಹಿಸಬೇಕೆಂದು ಆಗ್ರಹಿಸಿದರು.
ಕಲ್ಯಾಣ ಕರ್ನಾಟಕ ಭಾಗಕ್ಕೆ ಕೇಂದ್ರ ಸರ್ಕಾರದಿಂದ ಈ ಹಿಂದೆ ಮಂಜೂರಾಗಿದ್ದ ಐಐಟಿ, ಏಮ್ಸ್ ಸೇರಿದಂತೆ ಹಲವು ಯೋಜನೆಗಳು ಕೈಬಿಟ್ಟು ಹೋಗಿವೆ. ಈಗ ಉದ್ದೇಶಿತ ಯೋಜನೆಯನ್ನಾದರೂ ಉಳಿಸಿಕೊಳ್ಳುವ ಅನಿವಾರ್ಯತೆಯಿದೆ. ಈ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪ್ರತಿಯೊಬ್ಬ ಜನಪ್ರತಿನಿಧಿಯೂ ಕೇಂದ್ರ, ರಾಜ್ಯ ಸರ್ಕಾರದ ಬಳಿ ಗಟ್ಟಿ ಧ್ವನಿ ಎತ್ತಬೇಕಿದೆ. ಜಿಲ್ಲೆಯ ಹೊನ್ನಕಿರಣಗಿ-ಫಿರೋಜಾಬಾದ್ ಬಳಿ ಜವಳಿ ಪಾರ್ಕ್ ಸ್ಥಾಪನೆಗೆ ಬೇಕಾದ 1,551 ಎಕರೆ ಜಮೀನು ಲಭ್ಯವಿದೆ. ಭೀಮಾ ನದಿ ಸಮೀಪವಿದ್ದು, ನೀರಿನ ಸೌಲಭ್ಯವೂ ಇದೆ. ಅಲ್ಲದೇ, 33/132 ಕೆವಿಎ ವಿದ್ಯುತ್ಛಕ್ತಿಯೂ ಲಭ್ಯವಿದೆ ಇದೆ ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಹತ್ತಿ ಬೆಳೆಯಲಾಗುತ್ತದೆ. ಆದರೆ, ಇಲ್ಲಿ ಹತ್ತಿ ಸಂಸ್ಕರಿಸಲು ಬೇಕಾಗುವ ಜವಳಿ ಉದ್ಯಮ ಇಲ್ಲದೇ ಇರುವುದರಿಂದ ಗುಜರಾತ್ ಸೇರಿದಂತೆ ಬೇರೆ ರಾಜ್ಯಗಳಿಗೆ ರಫ್ತು ಮಾಡಲಾಗುತ್ತದೆ. ನಮ್ಮಲ್ಲಿಯೇ ಈ ಜವಳಿ ಉದ್ಯಮ ಆರಂಭವಾದರೆ, ಹತ್ತಿ ಬೆಳೆಗಾರರಿಗೆ ಅನುಕೂಲವಾಗುತ್ತದೆ. ಅಲ್ಲದೇ ಅಂದಾಜು 50 ಸಾವಿರ ಜನರಿಗೆ ಉದ್ಯೋಗ ದೊರಕುವ ನಿರೀಕ್ಷೆಯಿದೆ. ಇಂತಹ ಉದ್ಯಮವನ್ನು ಹಿಂದುಳಿದ ಭಾಗದಲ್ಲಿ ಸ್ಥಾಪನೆ ಮಾಡಿದರೆ ಉದ್ಯೋಗ ಸೃಷ್ಟಿಯಾಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಎಚ್ ಕೆಸಿಸಿಐ ಪದಾಧಿಕಾರಿಗಳಾದ ರಾಮಚಂದ್ರ ಕೋಸಗಿ, ಮಹಾದೇವ ತಾವಳಗೇರಿ, ಅಮಿತ ಪರಮಾರ ಇದ್ದರು.
ಜಿಲ್ಲೆಯಲ್ಲಿ ಜವಳಿ ಪಾರ್ಕ್ ಸ್ಥಾಪನೆಗೆ ಅಗತ್ಯವಾದ ಜಮೀನು ಸೇರಿದಂತೆ ವಿವಿಧ ಸಂಪನ್ಮೂಲಗಳು ಇವೆ. ಆದ್ದರಿಂದ ಉದ್ದೇಶಿತ ಈ ಯೋಜನೆಯನ್ನು ಜಿಲ್ಲೆಗೆ ಘೋಷಿಸುವ ನಿಟ್ಟಿನಲ್ಲಿ ನಿರಂತರವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತದೆ. ವಿವಿಧ ಸಂಘ-ಸಂಸ್ಥೆಗಳು ಮತ್ತು ಸಂಘಟನೆಗಳೊಂದಿಗೆ ಸಭೆ ನಡೆಸಿ ಹೋರಾಟ ರೂಪಿಸಲಾಗುವುದು.
-ಪ್ರಶಾಂತ ಮಾನಕರ್, ಅಧ್ಯಕ್ಷ, ಎಚ್‌ಕೆಸಿಸಿಐ
ಜಿಲ್ಲೆಯಿಂದ ಈಗಾಗಲೇ ಅನೇಕ ಯೋಜನೆಗಳು ಕೈತಪ್ಪಿ ಹೋಗಿವೆ. ಇದಕ್ಕೆ ಇಲ್ಲಿನ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೇ ಕಾರಣವಾಗಿದೆ. ಇದೇ ರೀತಿಯ ನಿರ್ಲಕ್ಷ್ಯವನ್ನು ಜವಳಿ ಪಾರ್ಕ್ ವಿಷಯದಲ್ಲಿ ಯಾವ ಜನಪ್ರತಿನಿಧಿಯೂ ಮಾಡುವಂತಿಲ್ಲ. ಇಲ್ಲದಿದ್ದರೇ 371 (ಜೆ)ನೇ ಕಲಂ ಜಾರಿ ಹಾಗೂ ಹೈಕೋರ್ಟ್ ವಿಭಾಗೀಯ ಪೀಠಕ್ಕಾಗಿ ನಡೆದ ಹೋರಾಟದಂತೆ ಇದಕ್ಕೂ ಹೋರಾಟ ಮಾಡಬೇಕಾಗುತ್ತದೆ.
-ಶರಣು ಪಪ್ಪಾ, ಗೌರವ ಕಾರ್ಯದರ್ಶಿ, ಎಚ್‌ಕೆಸಿಸಿಐ