Advertisement

ವಾಹನಕ್ಕೆ ಆಪತ್ತು ಎದುರಾದರೆ ಈ ಬಟನ್‌ ಒತ್ತಿ

10:35 AM Jan 19, 2019 | Team Udayavani |

ಬೆಳಗಾವಿ: ನೀವು ಪ್ರಯಾಣಿಸುವ ವಾಹನಕ್ಕೆ ಆಪತ್ತು ಎದುರಾದರೆ, ಪ್ರಯಾಣಿಕರು ಸಂಕಷ್ಟದಲ್ಲಿದ್ದರೆ ಈ ಬಟನ್‌ ಒತ್ತಿದರೆ ಸಾಕು ನೀವು ಇರುವ ಜಾಗಕ್ಕೆ ಪೊಲೀಸರು ಬಂದು ನಿಮ್ಮನ್ನು ರಕ್ಷಣೆಗೆ ನಿಲ್ಲುವ ಮಹತ್ವದ ತಂತ್ರಜ್ಞಾನವನ್ನು ಕೇಂದ್ರ ಸರಕಾರ ಸಿದ್ಧಪಡಿಸಿದ್ದು, ಇನ್ನು ಮುಂದೆ ಇದನ್ನು ಸಾರ್ವಜನಿಕ ಸೇವಾ ವಾಹನಗಳು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ.

Advertisement

ನಿಮ್ಮ ವಾಹನ ಇರುವ ಜಾಗ ಗುರುತಿಸುವ ಜಿಪಿಎಸ್‌ ತಂತ್ರಜ್ಞಾನ ಕೂಡ ಸಿದ್ಧಪಡಿಸಲಾಗಿದೆ. ಲೋಕೇಶನ್‌ ಟ್ರ್ಯಾಕಿಂಗ್‌ ಡಿವೈಸ್‌ ಹಾಗೂ ಎಮರ್ಜೆನ್ಸಿ ಪ್ಯಾನಿಕ್‌ ಬಟನ್‌ ಅಳವಡಿಸಲು ಕೇಂದ್ರ ಸರಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಸೂಚನೆ ನೀಡಿದೆ. ಜ. 1ರಿಂದ ದೇಶಾದ್ಯಂತ ಎಲ್ಲ ಸಾರ್ವಜನಿಕ ಸೇವಾ ವಾಹನಗಳಿಗೆ ಈ ತಂತ್ರಜ್ಞಾನ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ.ಬಟನ್‌ ಒತ್ತಿ ರಕ್ಷಣೆ ಪಡೆಯಿರಿ: ವಾಹನದಲ್ಲಿ ಪ್ರಯಾಣಿಸುವಾಗ ಯಾವುದಾದರೂ ಆಪತ್ತು ಎದುರಾದಾಗ, ಗನ್‌ ತೋರಿಸಿ ದರೋಡೆ ಮಾಡಲು ಬಂದಾಗ, ವಾಹನ ನಿಲ್ಲಿಸಿ ವಂಚಿಸಲು ಬಂದಾಗ ವಾಹನದಲ್ಲಿ ಇರುವವರಿಗೆ ಏನೂ ತೋಚುವುದಿಲ್ಲ. ಪೊಲೀಸರಿಗೆ ಕರೆ ಮಾಡಿ ಮಾಹಿತಿ ಹೇಳಲೂ ಆಗುವುದಿಲ್ಲ. ಭಯಭೀತಗೊಂಡಾಗ ವಾಹನದಲ್ಲಿ ಅಳವಡಿಸಿದ ಪ್ಯಾನಿಕ್‌ ಬಟನ್‌ ಒತ್ತಿದರೆ ಸಾಕು ಅದು ನೇರವಾಗಿ ಪೊಲೀಸರಿಗೆ ಹಾಗೂ ಆ ಸ್ಥಳದಲ್ಲಿ ಪೆಟ್ರೋಲಿಂಗ್‌ನಲ್ಲಿರುವ ಪೊಲೀಸರಿಗೆ ಮಾಹಿತಿ ರವಾನೆ ಆಗುತ್ತದೆ.

ಬರ್ತಾರೆ ಪೊಲೀಸ್ರು: ಅಪಾಯ ಬಂದೆರಗಿದಾಗ ಪ್ಯಾನಿಕ್‌ ಬಟನ್‌ ಒತ್ತಿದ ಕೂಡಲೇ ವಾಹನದ ನೋಂದಣಿ ಸಂಖ್ಯೆ, ವಾಹನ ಇರುವ ಲೋಕೇಶನ್‌ ಬಗ್ಗೆ ಸಮೀಪದ ಬಿಎಸ್‌ಎನ್‌ಎಲ್‌ ಕಚೇರಿಗೆ ಸಂದೇಶ ತಲುಪಿ ಅಲ್ಲಿಂದ ನೇರವಾಗಿ ಕಂಟ್ರೋಲ್‌ ರೂಮ್‌ಗೆ ಮಾಹಿತಿ ರವಾನೆ ಆಗುತ್ತದೆ. ಆ ವಾಹನ ಇರುವ ಸುತ್ತಲೂ ಗಸ್ತಿನಲ್ಲಿರುವ ಪೊಲೀಸರಿಗೂ ಇದರ ಮಾಹಿತಿ ತಲುಪುತ್ತದೆ. ಆಗ ಕೂಡಲೇ ಕ್ಷಣಾರ್ಧದಲ್ಲಿಯೇ ಸ್ಥಳಕ್ಕೆ ಪೊಲೀಸರು ಹಾಜರಾಗುತ್ತಾರೆ. ಸಾರ್ವಜನಿಕ ಸೇವಾ ವಾಹನಗಳಲ್ಲಿ ಜಿಪಿಎಸ್‌ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ವಾಹನ ಎಲ್ಲಿ ಹೋಗುತ್ತಿದೆ, ಯಾವ ಸ್ಥಳದಲ್ಲಿ ನಿಂತಿದೆ, ಎಷ್ಟು ಸಮಯದವರೆಗೆ ವಾಹನ ನಿಂತುಕೊಂಡಿದೆ ಎಂಬುದರ ನಿಖರ ಹಾಗೂ ಸಂಪೂರ್ಣ ಮಾಹಿತಿ ಜಿಪಿಎಸ್‌ ಮೂಲಕ ಗೊತ್ತಾಗುತ್ತದೆ. ಒಂದು ವೇಳೆ ವಾಹನ ಕಳುವಾದರೂ ಅದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದು ಬರುತ್ತದೆ.

ಮೊಬೈಲ್‌ಗ‌ೂ ಸಿಗುತ್ತೆ ಮಾಹಿತಿ: ವೆಹಿಕಲ್‌ ಟ್ರ್ಯಾಕಿಂಗ್‌ ಹಾಗೂ ಮಾನಿಟರಿಂಗ್‌ ವ್ಯವಸ್ಥೆಯ ಯಂತ್ರವನ್ನು ತಮ್ಮ ವಾಹನಗಳಿಗೆ ಅಳವಡಿಸಿಕೊಂಡಾಗ ಈ ಮೂಲಕವೇ ಎಲ್ಲ ಮಾಹಿತಿ ತಮ್ಮ ಮೊಬೈಲ್‌ಗ‌ೂ ರವಾನೆ ಆಗುತ್ತದೆ. ಯಂತ್ರದಲ್ಲಿ ಸಿಮ್‌ ಅಥವಾ ಚಿಪ್‌ ಅಳವಡಿಸಲಾಗುತ್ತಿದ್ದು, ಈ ಮೂಲಕವೇ ಸಂಪೂರ್ಣ ಮಾಹಿತಿ ಹೋಗುತ್ತದೆ. ವಾಹನದ ಮಾಲೀಕರು ಕುಳಿತಲ್ಲಿಯೇ ತಮ್ಮ ವಾಹನದ ಅಪ್‌ಡೆಟ್ಸ್‌ಗಳನ್ನು ಮೊಬೈಲ್‌ ಆ್ಯಪ್‌ ಅಥವಾ ಕಂಪ್ಯೂಟರ್‌ನಲ್ಲಿ ಪಡೆಯಬಹುದಾಗಿದೆ.

ಪ್ರಾದೇಶಿಕ ಸಾರಿಗೆ ಕಚೇರಿಗೆ ಹೊಸ ವಾಹನಗಳು ನೋಂದಣಿ ಮಾಡಿಸಿಕೊಳ್ಳಲು ಬಂದಾಗ ಜಿಪಿಎಸ್‌ ಹಾಗೂ ಪ್ಯಾನಿಕ್‌ ಬಟನ್‌ಗಳನ್ನು ಅಳವಡಿಸಬೇಕು ಎಂದು ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಸೂಚಿಸಿದೆ. ಸದ್ಯ ನೋಂದಣಿ ಮಾಡಿಸಿಕೊಳ್ಳುವ ವಾಹನಗಳು ಮಾತ್ರ ಇದರ ವ್ಯಾಪ್ತಿಯಲ್ಲಿ ಬರುತ್ತವೆ. ಹಳೆಯ ವಾಹನಗಳಿಗೆ ಏ. 2019ರಿಂದ ರಾಜ್ಯ ಸರ್ಕಾರ ಈ ತಂತ್ರಜ್ಞಾನ ಕಡ್ಡಾಯಗೊಳಿಸುವ ಸಾಧ್ಯತೆ ಇದೆ.

Advertisement

ಯಾವ ವಾಹನಕ್ಕೆ ಕಡ್ಡಾಯ?
ವಾಹನಗಳ ಲೋಕೇಶನ್‌ ಗೊತ್ತು ಮಾಡುವ ಜಿಪಿಎಸ್‌ ತಂತ್ರಜ್ಞಾನ ಹಾಗೂ ಪ್ಯಾನಿಕ್‌ ಬಟನ್‌ ಸಾರ್ವಜನಿಕ ಸೇವಾ ವಾಹನಗಳಿಗೆ ಕಡ್ಡಾಯಗೊಳಿಸಲಾಗಿದೆ. ಮೋಟರ್‌ ಕ್ಯಾಬ್‌, ಮ್ಯಾಕ್ಸಿ ಕ್ಯಾಬ್‌, ಕಾಂಟ್ರ್ಯಾಕ್ಟ್ ಕ್ಯಾರೇಜ್‌ ಹಾಗೂ ಸ್ಟೇಜ್‌ ಕ್ಯಾರೇಜ್‌ಗಳಲ್ಲಿ ಇದನ್ನು ಅಳವಡಿಸಲೇಬೇಕು. ಈ ನಿಯಮ ಬೈೆಕ್‌, ಆಟೋ ರಿಕ್ಷಾ, ತ್ರಿಚಕ್ರ ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದು ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ನಿರ್ದೇಶನ ನೀಡಿದೆ.

ಎಲ್ಲ ಸಾರ್ವಜನಿಕ ಸೇವಾ ವಾಹನಗಳಲ್ಲಿ ಲೋಕೇಶನ್‌ ಟ್ರ್ಯಾಕಿಂಗ್‌ ಡಿವೈಸ್‌(ಜಿಪಿಎಸ್‌) ಹಾಗೂ ಎಮರ್ಜೆನ್ಸಿ ಪ್ಯಾನಿಕ್‌ ಬಟನ್‌ ಅಳವಡಿಕೆ ಕಡ್ಡಾಯಗೊಳಿಸಿ ಕೇಂದ್ರ ಸರಕಾರ ನಿರ್ದೇಶನ ನೀಡಿದೆ. ಹೀಗಾಗಿ ಸಾರ್ವಜನಿಕರ ಹಾಗೂ ಪ್ರಯಾಣಿಕರ ಹಿತ ದೃಷ್ಟಿಯಿಂದ ಈ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ವಾಹನ ಮಾಲೀಕರು ಹಾಗೂ ಚಾಲಕರು ಜಿಪಿಎಸ್‌ ಹಾಗೂ ಪ್ಯಾನಿಕ್‌ ಬಟನ್‌ ಅಳವಡಿಸಿಕೊಂಡು ಪ್ರಯಾಣಿಕರಿಗೆ ರಕ್ಷಣಾತ್ಮಕ ಸೇವೆ ನೀಡಬೇಕು.
•ಶಿವಾನಂದ ಮಗದುಮ್‌,
 ಉಪ ಸಾರಿಗೆ ಆಯುಕ್ತರು

ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next