Advertisement

45 ಸಾವಿರ ಕೋಟಿ ಸಾಲಮನ್ನಾ ವಾಸ್ತವವಲ್ಲ

09:48 AM Jan 31, 2019 | |

ಹಾವೇರಿ: ರಾಜ್ಯ ಸರ್ಕಾರ 45,000 ಕೋಟಿ ರೂ. ರೈತರ ಸಾಲಮನ್ನಾ ಮಾಡಲಾಗಿದೆ ಎಂದು ಘೋಷಣೆ ಮಾಡಿಕೊಳ್ಳುವ ಮೂಲಕ ಜನರ ದಾರಿ ತಪ್ಪಿಸುತ್ತಿದೆ ಎಂದು ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಿವಾನಂದ ಗುರುಮಠ ಆರೋಪಿಸಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯವರು ಹೋದ ಬಂದಲೆಲ್ಲ ತಾವು 45 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿರುವುದಾಗಿ ಹೇಳುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಎಷ್ಟು ಕೋಟಿ ರೂ. ಸಾಲಮನ್ನಾ ಆಗಿದೆ? ಎಷ್ಟು ರೈತರ ಸಾಲಮನ್ನಾ ಆಗಿದೆ ಎಂಬ ನಿಖರ ಮಾಹಿತಿಯೇ ಇಲ್ಲ ಎಂದರು.

ಈಗಷ್ಟೇ ಬ್ಯಾಂಕ್‌ಗಳಲ್ಲಿ ರೈತರಿಂದ ಸಾಲಮನ್ನಾಕ್ಕಾಗಿ ಅರ್ಜಿ, ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ. ರೈತರಿಂದ ಮಾಹಿತಿ ಸಂಗ್ರಹಿಸಿದ ಬಳಿಕ, ಸರ್ಕಾರ ಸಾಲಮನ್ನಾಕ್ಕೆ ವಿಧಿಸಿರುವ ಷರತ್ತುಗಳನ್ನು ಅನ್ವಯಿಸಿ ಪರಿಶೀಲನೆ ನಡೆಯಬೇಕಾಗಿದೆ. ಪರಿಶೀಲನೆ ಬಳಿಕ ರಾಜ್ಯದ ಎಷ್ಟು ರೈತರಿಗೆ, ಎಷ್ಟು ರೂ.ಗಳ ಸಾಲಮನ್ನಾ ಆಗುತ್ತದೆ ಎಂಬ ನಿಖರ ಮಾಹಿತಿ ಸಿಗುತ್ತದೆ. ಆಗ ಮಾತ್ರ ಸರ್ಕಾರ ಇಷ್ಟು ಕೋಟಿ ಸಾಲಮನ್ನಾ ಆಗಿದೆ ಎಂದು ಹೇಳಿಕೊಳ್ಳಬಹುದು. ಆದರೆ, ಈಗಲೇ ಸರ್ಕಾರ, 45 ಸಾವಿರ ಕೋಟಿ ರೂ. ರೈತರ ಸಾಲಮನ್ನಾ ಎಂದು ಹೇಳುತ್ತಿರುವುದು ಸೂಕ್ತವಲ್ಲ ಎಂದರು.

ಸಾಲಮನ್ನಾ ಹಣವನ್ನು ಬ್ಯಾಂಕ್‌ಗಳಿಗೆ ಮೂರು ವರ್ಷಗಳ ವರೆಗೆ ಕಂತುಗಳಲ್ಲಿ ಕೊಡುತ್ತೇವೆ ಎಂದು ರಾಜ್ಯ ಸರ್ಕಾರ ಹೇಳುತ್ತಿರುವುದರಿಂದ ಬ್ಯಾಂಕ್‌ಗಳು ರೈತರಿಗೆ ಮರು ಸಾಲ ಕೊಡಲು ನಿರಾಕರಿಸುತ್ತಿವೆ. ಇದೇ ರೀತಿ ಸರ್ಕಾರವು ಕೈಸಾಲ ಸಹ ಮನ್ನಾ ಮಾಡುವುದಾಗಿ ಹೇಳುತ್ತಿದ್ದು, ಕೈಸಾಲ ಕೊಡುವವರೂ ಸಾಲ ಕೊಡುವುದನ್ನು ನಿಲ್ಲಿಸಿದ್ದಾರೆ. ಇದರಿಂದ ರೈತನ ಆರ್ಥಿಕ ಚಟುವಟಿಕೆ ಸ್ಥಗಿತಗೊಳ್ಳುವ ಅಪಾಯವಿದೆ. ಆದ್ದರಿಂದ ಸರ್ಕಾರ ಈ ಕುರಿತು ಗಂಭೀರ ಚಿಂತನೆ ಮಾಡಬೇಕು ಎಂದರು.

ಇಂಗ್ಲಿಷ್‌ ಶಾಲೆ ಬೇಕು: ರಾಜ್ಯದಲ್ಲಿ ಒಂದು ಸಾವಿರ ಸರ್ಕಾರಿ ಶಾಲೆಗಳನ್ನು ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನಾಗಿ ಮಾರ್ಪಾಡು ಮಾಡುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಜಾಗತೀಕರಣದ ಇಂದಿನ ದಿನದಲ್ಲಿ ಇಂಗ್ಲಿಷ್‌ ಕಲಿಕೆ ಅತ್ಯವಶ್ಯವಾಗಿದ್ದು, ಬಡ ವರ್ಗದ ಮಕ್ಕಳೂ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಪಡೆಯುವಂತಾಗಲು ಸರ್ಕಾರಿ ಕಾನ್ವೆಂಟ್ ಶಾಲೆಗಳ ಅತ್ಯಗತ್ಯವಿದೆ ಎಂದರು.

Advertisement

ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಆರಂಭಿಸಲು ವಿರೋಧಿಸುವ ಹಿಂದೆ ಹಲವು ಷಡ್ಯಂತ್ರಗಳಿವೆ. ಬಹುತೇಕ ರಾಜಕಾರಣಿಗಳು ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಕೊಂಡಿದ್ದು, ಸರ್ಕಾರ ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭಿಸಿದರೆ ತಮ್ಮ ಸಂಸ್ಥೆಗಳು ವಿದ್ಯಾರ್ಥಿಗಳ ಕೊರತೆ ಎದುರಿಸಬೇಕಾದೀತು ಎಂಬ ಆತಂಕದಿಂದ ಸರ್ಕಾರಿ ಕಾನ್ವೆಂಟ್ ಶಾಲೆ ಸ್ಥಾಪನೆಗೆ ರಾಜಕಾರಣಿಗಳು ವಿರೋಧಿಸುತ್ತಿದ್ದಾರೆ. ಇನ್ನು ಸಾಹಿತಿಗಳು ಮೇಲ್ನೊಟಕ್ಕೆ ಇಂಗ್ಲಿಷ್‌ ಶಾಲೆ ಆರಂಭಕ್ಕೆ ವಿರೋಧಿಸುತ್ತಿದ್ದಾರೆ. ವಾಸ್ತವದಲ್ಲಿ ಅವರ ಮಕ್ಕಳು, ಮೊಮ್ಮಕ್ಕಳನ್ನು ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೇ ಕಳುಹಿಸುತ್ತಿದ್ದಾರೆ. ತಮ್ಮ ಕಥೆ, ಕಾದಂಬರಿ ಓದಲು ಜನರು ಇಲ್ಲದಂತಾಗುತ್ತದೆ ಎಂಬ ಆತಂಕ ಅವರದ್ದಾಗಿದ್ದು ಇದಕ್ಕಾಗಿ ಅವರು ಸರ್ಕಾರಿ ಇಂಗ್ಲಿಷ್‌ ಶಾಲೆ ಆರಂಭಕ್ಕೆ ವಿರೋಧಿಸುತ್ತಿದ್ದಾರೆ ಎಂದರು.

ಇಂದು ವಿದ್ಯಾರ್ಥಿ ಪಾಲಕರೆಲ್ಲರೂ ಇಂಗ್ಲಿಷ್‌ನ ಮಹತ್ವ ಅರಿತಿದ್ದು ಎಷ್ಟೇ ಕಷ್ಟವಾದರೂ ಮಕ್ಕಳನ್ನು ಕಾನ್ವೆಂಟ್‌ಗೆ ಕಳುಹಿಸುತ್ತಿದ್ದಾರೆ. ಒಂದು ವೇಳೆ ಸಾಹಿತಿಗಳು, ಕೆಲ ಪಟ್ಟಭದ್ರರು ಗೋಕಾಕ ಮಾದರಿ ಚಳವಳಿ ಮಾಡಲು ಮುಂದಾದರೆ ಅದು ಯಶಸ್ವಿ ಆಗುವುದಿಲ್ಲ. ಏಕೆಂದರೆ ಅದಕ್ಕೆ ವಿದ್ಯಾರ್ಥಿ ಪಾಲಕರೇ ಬೆಂಬಲಿಸುವುದಿಲ್ಲ. ಸರ್ಕಾರ ಇಂಗ್ಲಿಷ್‌ ಮಾಧ್ಯಮ ಆರಂಭಿಸಿದರೆ ಬಡವರಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಿಸಿದರು. ಸಂಘಟನೆಯ ಪ್ರಮುಖರಾದ ಶಿವಯೋಗಿ ಬೆನ್ನೂರು, ಸುರೇಶ ಸಜ್ಜನ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next