ನವದೆಹಲಿ: ಹದಿನೈದನೇ ರಾಷ್ಟ್ರಪತಿ ಆಯ್ಕೆಗೆ ಸೋಮವಾರ ನಡೆದ ಚುನಾವಣೆ ಹೆಚ್ಚಾ ಕಡಿಮೆ ಸುಸೂತ್ರವಾಗಿ ಮುಕ್ತಾಯವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರೇ ಮೊದಲನೆಯವರಾಗಿ ಮತ ಹಾಕಿದ್ದಾರೆ. ಇತ್ತ ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರು ವ್ಹೀಲ್ ಚೇರ್‌ನಲ್ಲಿ ಬಂದು ಮತ ಚಲಾಯಿಸಿದ್ದಾರೆ. ಅನಾರೋಗ್ಯ ನಿಮಿತ್ತ ಶ್ರೀನಿವಾಸ ಪ್ರಸಾದ್ ಅವರೂ ಬೆಂಗಳೂರಲ್ಲೇ ಮತ ಹಾಕಿದ್ದಾರೆ.
ನವದೆಹಲಿಯ ಸಂಸತ್ ಭವನದಲ್ಲಿ ನಡೆದ ಚುನಾವಣೆಯಲ್ಲಿ ಶೇ.98.90 ಮತದಾನವಾಗಿದೆ. ಇದರ ಹೊರತಾಗಿ ಕೆಲವು ರಾಜ್ಯಗಳಲ್ಲಿ ಅಡ್ಡಮತದಾನವಾಗಿದ್ದು, ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಮತಹಾಕಿದ್ದಾರೆ. ಜು.21ರಂದು ಫಲಿತಾಂಶ ಹೊರಬೀಳಲಿದೆ.
ಜಾರ್ಖಂಡ್, ಗುಜರಾತ್, ಹರ್ಯಾಣ, ಒಡಿಶಾಗಳಲ್ಲಿನ ಕೆಲವು ಶಾಸಕರು “ಆತ್ಮಸಾಕ್ಷಿಗೆ’ ಅನುಗುಣವಾಗಿ ಮತ ಹಾಕಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಅಸ್ಸಾಂನಲ್ಲಿ ಕಾಂಗ್ರೆಸ್‌ನ 20 ಶಾಸಕರು ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಜು ಅವರಿಗೆ ಮತ ಹಾಕಿದ್ದಾರೆ ಎಂದು ಐಯುಡಿಎಫ್ ಶಾಸಕ ಕರಿಮುದ್ದೀನ್ ಬಾಭುìಯಾನ್ ಹೇಳಿಕೊಂಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಪ್ರತಿಪಕ್ಷಗಳ ಒಕ್ಕೂಟದ ಅಭ್ಯರ್ಥಿ ಯಶವಂತ ಸಿನ್ಹಾ ಪರವಾಗಿ ಮತ ಹಾಕುವುದಿಲ್ಲ ಎಂದು ಮಾಜಿ ಸಚಿವ ಶಿವಪಾಲ್ ಸಿಂಗ್ ಯಾದವ್ ಪ್ರಕಟಿಸಿದ್ದರು. ಸಿನ್ಹಾ ಅವರು ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ಅವರನ್ನು ಐಎಸ್‌ಐ ಏಜೆಂಟ್ ಎಂದು ಟೀಕಿಸಿದ್ದರು. ಹೀಗಾಗಿ, ಅವರಿಗೆ ಮತ ಹಾಕುವುದಿಲ್ಲ ಎಂದು ಪ್ರಕಟಿಸಿದ್ದರು.
ಗುಜರಾತ್‌ನಲ್ಲಿ ಎನ್‌ಸಿಪಿ ಶಾಸಕ ಕಂಧಲ್ ಜಡೇಜಾ ಅವರು ದ್ರೌಪದಿ ಮುರ್ಮು ಅವರಿಗೆ ಮತ ಹಾಕಿದ್ದಾಗಿ ಹೇಳಿಕೊಂಡಿದ್ದಾರೆ.
ಜಾರ್ಖಂಡ್‌ನಲ್ಲಿ ಎನ್‌ಸಿಸಿ ಶಾಸಕ ಕಮೇಶ್ ಸಿಂಗ್ ಎನ್‌ಡಿಎ ಅಭ್ಯರ್ಥಿಗೆ ಮತ ಹಾಕಿದ್ದಾರೆ ಮತ್ತು 65 ಶಾಸಕರು ಮುರ್ಮು ಪರವಾಗಿಯೇ ಮತ ಹಾಕಿದ್ದಾರೆ ಎಂದು ಬಿಜೆಪಿ ಶಾಸಕ ಬಿರಾಂಚಿ ನಾರಾಯಣ ಹೇಳಿಕೊಂಡಿದ್ದಾರೆ. ಪಂಜಾಬ್‌ನ ಎಸ್‌ಎಡಿ ಶಾಸಕರೊಬ್ಬರು ಮತದಾನಕ್ಕೆ ಬಹಿಷ್ಕಾರ ಹಾಕಿದ್ದಾರೆ.
ಸಂಸದರ ಗೈರು:
ನವದೆಹಲಿಯಲ್ಲಿ ಬಿಜೆಪಿ ಸಂಸದರಾದ ಸನ್ನಿ ಡಿಯೋಲ್ ಮತ್ತು ಸಂಜಯ ಧೋತ್ರೆ ಆರೋಗ್ಯ ಕಾರಣಗಳಿಂದ ಮತ ಚಲಾಯಿಸಿಲ್ಲ. ಸಂಜಯ ಧೋತ್ರೆ ಅನಾರೋಗ್ಯ ಕಾರಣದಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಸನ್ನಿ ಡಿಯೋಲ್ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಸೇನೆಯಿಂದ ಇಬ್ಬರು, ಬಿಎಸ್‌ಪಿ, ಕಾಂಗ್ರೆಸ್, ಎಸ್‌ಪಿ ಮತ್ತು ಎಐಎಂಐಎಂ ಪಕ್ಷಗಳ ತಲಾ ಒಬ್ಬ ಸಂಸದರು ವಿವಿಧ ಕಾರಣಗಳಿಗಾಗಿ ಮತ ಹಾಕಿಲ್ಲ.