Advertisement

ರಾಷ್ಟ್ರಪತಿ ಚುನಾವಣೆಗೆ ಶಾಸಕರ ಹಕ್ಕು ಚಲಾವಣೆ

04:50 AM Jul 18, 2017 | Karthik A |

ಬೆಂಗಳೂರು: ರಾಷ್ಟ್ರಪತಿ ಚುನಾವಣೆಯಲ್ಲಿ ರಾಜ್ಯ ವಿಧಾನಸಭೆಯ 222 ಶಾಸಕರು ಹಾಗೂ ಓರ್ವ ಸಂಸದ ಮತದಾನ ಮಾಡಿದ್ದಾರೆ. 224 ಶಾಸಕರ ಪೈಕಿ ಜೆಡಿಎಸ್‌ನ ವೈಎಸ್‌ವಿ ದತ್ತ ಹಾಗೂ ಬಂಡಾಯ ಶಾಸಕ ಚಲುವರಾಯಸ್ವಾಮಿ ಮತದಾನದಿಂದ ದೂರ ಉಳಿದಿದ್ದರು. ಸಂಸದ ಪ್ರಕಾಶ್‌ ಹುಕ್ಕೇರಿ ಮಾತ್ರ ಬೆಂಗಳೂರಿನಲ್ಲಿ ಮತ ಚಲಾಯಿಸಿದರು. ಬೆಳಿಗ್ಗೆ 10 ಆರಂಭವಾಗಿ ಸಂಜೆ 5 ರವರೆಗೂ ಮತದಾನ ನಡೆಯಿತು. ರಾಜ್ಯದ ಶಾಸಕರ ಪರವಾಗಿ ಬಿಜೆಪಿಯ ಸಿ.ಟಿ. ರವಿ ಮೊದಲ ಮತದಾನ ಮಾಡಿದರೆ, ಕಾಂಗ್ರೆಸ್‌ನ ಸತೀಶ್‌ ಜಾರಕಿಹೊಳಿ ಕೊನೆಯವರಾಗಿ ಮತ ಚಲಾಯಿಸಿದರು. ಜೆಡಿಎಸ್‌ ಬಂಡಾಯ ಶಾಸಕರು ಮತದಾನಕ್ಕೆ ಮುನ್ನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಗೆ ಹೋಗಿ ಅವರ ಜತೆ ಮಾತುಕತೆ ನಡೆಸಿ ಅನಂತರ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಈ ಸಂದರ್ಭದಲ್ಲಿ ಚೆಲುವರಾಯಸ್ವಾಮಿ ಗೈರು ಕುರಿತು ಮುಖ್ಯಮಂತ್ರಿಯವರು ಅಸಮಾಧಾನ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.

Advertisement


ಬಿಜೆಪಿ ನೇತೃತ್ವದ ಎನ್‌.ಡಿ.ಎ ಅಭ್ಯರ್ಥಿ ರಾಮನಾಥ ಕೋವಿಂದ್‌ ಅವರ ಚುನಾವಣಾ ಏಜೆಂಟ್‌ ಆಗಿ ಬಿಜೆಪಿ ಮುಖ್ಯ ಸಚೇತಕ ಸುನಿಲ್‌ ಕುಮಾರ್‌, ಕಾಂಗ್ರೆಸ್‌ ನೇತೃತ್ವದ ಯುಪಿಎ ಬೆಂಬಲಿತ ಅಭ್ಯರ್ಥಿ ಮೀರಾ ಕುಮಾರ್‌ಗೆ ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌. ಬೊಸರಾಜ್‌ ಏಜೆಂಟ್‌ ಆಗಿ ಕೆಲಸ ನಿರ್ವಹಿಸಿದರು. ಚುನಾವಣೆ ನಡೆದ ಹಿನ್ನೆಲೆಯಲ್ಲಿ ಮೂರು ರಾಜಕೀಯ ಪಕ್ಷಗಳು ಅನೌಪಚಾರಿಕ ಶಾಸಕಾಂಗ ಸಭೆ ನಡೆಸಿದವು. ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಬಿಜೆಪಿಯ 44 ಜನ ಸದಸ್ಯರು ಮತ ಚಲಾಯಿಸಿದ್ದರು.


ಸಂಜೆ ಮತದಾನ ಮುಕ್ತಾಯವಾದ ಅನಂತರ ಸಹಾಯಕ ಚುನಾವಣಾಧಿಕಾರಿ ಎಸ್‌. ಮೂರ್ತಿ ಮಾತನಾಡಿ, ಪಾರದರ್ಶಕ ಮತ್ತು ಶಾಂತಿಯುತ ಮತದಾನ ನಡೆದಿದೆ. 222 ಶಾಸಕರು ಮತ್ತು ಓರ್ವ ಸಂಸದರು ಮತ ಚಲಾಯಿಸಿದ್ದಾರೆ. ಇಬ್ಬರು ಶಾಸಕರು ಮತದಾನ ಮಾಡಿಲ್ಲ. ಮತ ಪೆಟ್ಟಿಗೆಗಳನ್ನು ಇಂದೇ ವಿಮಾನದ ಮೂಲಕ ಕೇಂದ್ರ ಚುನಾವಣಾ ಆಯೋಗಕ್ಕೆ ಬಿಗಿ ಭದ್ರತೆಯಲ್ಲಿ ತೆಗೆದುಕೊಂಡು ಹೋಗಲಾಗುವುದು. ಮತಪೆಟ್ಟಿಗೆಯೊಂದಿಗೆ ವಿಧಾನಸಭೆ ಸಚಿವಾಲಯದ ಮೂವರು ಹಿರಿಯ ಅಧಿಕಾರಿಗಳು ತೆರಳುತ್ತಿರುವುದಾಗಿ ಅವರು ಹೇಳಿದರು.


ರಾಷ್ಟ್ರಪತಿ ಚುನಾವಣೆಯಲ್ಲಿ ಆತ್ಮಸಾಕ್ಷಿಯ ಮತ ಹಾಕುವಂತೆ ಮನವಿ ಮಾಡಿದ್ದೇವೆ. ಮೀರಾ ಕುಮಾರ್‌ ಕೂಡ ಅದೇ ಮನವಿ ಮಾಡಿದ್ದಾರೆ. ಹಿಂದೆ ಇಂತಹದೇ ಸನ್ನಿವೇಶದಲ್ಲಿ ವಿವಿ ಗಿರಿಯವರು ಆಯ್ಕೆಯಾಗಿದ್ದರು.
– ಡಾ| ಜಿ.ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ

ಎನ್‌ಡಿಎ ಅಭ್ಯರ್ಥಿ ರಾಮನಾಥ ಕೋವಿಂದ ಪರವಾಗಿ ನಾವೆಲ್ಲ ಮತದಾನ ಮಾಡಿದ್ದೇವೆ. ಮುಂದೆ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್‌ ಆಯ್ಕೆಯಾಗುವುದು ಬಹುತೇಕ ಖಚಿತ. ರಾಮನಾಥ ಕೋವಿಂದ್‌ ಸಜ್ಜನ ಮತ್ತು ಸರಳ ವ್ಯಕ್ತಿಯಾಗಿಯಾಗಿದ್ದಾರೆ. ಅವರನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ.
– ಜಗದೀಶ್‌ ಶೆಟ್ಟರ್‌, ವಿಪಕ್ಷ ನಾಯಕ


Advertisement
Advertisement

Udayavani is now on Telegram. Click here to join our channel and stay updated with the latest news.

Next