Advertisement

ರಾಷ್ಟ್ರಪತಿ ಚುನಾವಣೆ: ಶಾಸಕರಿಗೆ ಗುರುತಿನ ಚೀಟಿ ಕಡ್ಡಾಯ 

03:00 AM Jul 11, 2017 | Team Udayavani |

ಬೆಂಗಳೂರು: ಜುಲೈ 17 ರಂದು ನಡೆಯುವ ರಾಷ್ಟ್ರಪತಿ ಚುನಾವಣೆ ಸಾಕಷ್ಟು ಕುತೂಹಲ ಮೂಡಿಸಿದೆ. ಇದು ಬೇರೆ ಚುನಾವಣೆಗಳಿಗಿಂತ ವಿಭಿನ್ನವಾಗಿದೆ. ಶಾಸಕರು ಸಣ್ಣ ತಪ್ಪು ಮಾಡಿದರೂ ದೊಡ್ಡ ಮೊತ್ತ ಹೊಂದಿರುವ ಮೌಲ್ಯದ ಮತ
ಅಸಿಂಧುವಾಗುವ ಅಪಾಯವಿದೆ. ಅಷ್ಟೇ ಅಲ್ಲ ಚುನಾವಣಾ ಆಯೋಗ ನೀಡುವ ಪೆನ್ನು ಬಿಟ್ಟು ಮೈಮರೆತು ಅಭ್ಯಾಸ ಬಲದಿಂದ ತಾವು ನಿತ್ಯ ಬಳಸುವ ಪೆನ್ನು ಬಳಸಿದರೂ ಮತ ಮೌಲ್ಯ ಕಳೆದುಕೊಳ್ಳುತ್ತದೆ. ಅಂಕಿ ಬಿಟ್ಟು ಅಕ್ಷರ ಬರೆದರೂ
ಅಸಿಂಧುವಾಗುತ್ತದೆ.

Advertisement

ಹೀಗಾಗಿ ರಾಜಕೀಯ ಪಕ್ಷಗಳು ತಮ್ಮ ಶಾಸಕರಿಗೆ ಮತ ಹಾಕುವ ಪಾಠ ಹೇಳಿಕೊಡದಿದ್ದರೆ, ಮತ ಕೈ ತಪ್ಪಿ ಹೋಗಲಿವೆ. ಶಾಸಕರಿಗೆ ವಿಪ್‌ ಜಾರಿ ಮಾಡಿದರೂ, ಗೌಪ್ಯ ಮತದಾನ ವಾಗಿರುವುದರಿಂದ ಪತ್ತೆ ಹಚ್ಚುವುದು ಕಷ್ಟವಾಗುತ್ತದೆ. ಹೀಗಾಗಿ ರಾಜಕೀಯ ಪಕ್ಷಗಳಿಗೆ ತಮ್ಮ ಶಾಸಕರನ್ನು ಜತನದಿಂದ ಕಾಪಾಡಿಕೊಳ್ಳುವುದು ಕೂಡ ಅಷ್ಟೆ ಮಹತ್ವದ್ದಾಗಿದೆ. ರಾಷ್ಟ್ರಪತಿ ಚುನಾವಣೆಗೆ ಮತ ಹಾಕಲು ರಾಜ್ಯ ವಿಧಾನಸಭೆಯಿಂದ ಶಾಸಕರಿಗೆ ನೀಡಿರುವ ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕು. ಶಾಸಕರ ಒಂದು ಮತ 131 ಅಂಶಗಳ ಮೌಲ್ಯ ಹೊಂದಿರುವುದರಿಂದ ಶಾಸಕರು ಸ್ವಲ್ಪ ನಿರ್ಲಕ್ಷ ಮಾಡಿದರೂ, ಅವರ ಮತ ಕಸದ ಡಬ್ಬಿ ಸೇರುವ ಸಾಧ್ಯತೆ ಇದೆ.  ಶಾಸಕರು ತಮ್ಮ ಆಯ್ಕೆಯ ಮತವನ್ನು ನಮೂದಿಸಲು ಚುನಾವಣಾ ಆಯೋಗ ನೀಡುವ ಅಧಿಕೃತ ಪೆನ್ನಿನಿಂದ ಮಾತ್ರ ಬರೆಯಬೇಕು. ಬೇರೆ
ಯಾವುದೇ ಪೆನ್ನು ಬಳಕೆ ಮಾಡಿದರೂ ಅಂತವರ ಮತ ಅಸಿಂಧುವಾಗುತ್ತದೆ.

ಅಂಕಿಯಲ್ಲೇ ಬರೆಯಬೇಕು: ರಾಷ್ಟ್ರಪತಿ ಚುನಾವಣೆಗೆ ಆದ್ಯತೆಯ ಮತ ಹಾಕಲು ಶಾಸಕರಿಗೆ ಅವಕಾಶ ಇದೆ. ಮೊದಲ ಆದ್ಯತೆಯ ಮತವನ್ನು ‘1’ ಅಂಕಿಯಲ್ಲಿಯೇ ಬರೆಯಬೇಕು. ಇಂಗ್ಲಿಷ್‌, ರೋಮನ್‌ ಅಥವಾ ಮಾನ್ಯತೆ ಪಡೆದ ಭಾರತೀಯ ಯಾವುದೇ ಭಾಷೆಯ ಅಂಕಿಯನ್ನು ನಮೂದಿಸಲು ಅವಕಾಸವಿದೆ. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಅವಕಾಶವಿದೆ. ಆದರೆ, ಕಡ್ಡಾಯವಲ್ಲ. ಮತ ಚಲಾಯಿಸುವಾಗ ಅಂಕಿ ಬದಲು ಅಕ್ಷರ ಅಥವಾ
ಚಿನ್ಹೆ (ರೈಟ್‌ ಮಾರ್ಕ್‌) ಬಳಸಿದರೂ ಮತ ಮೌಲ್ಯ ಕಳೆದುಕೊಳ್ಳುತ್ತದೆ.

ಬೇರೆ ರಾಜ್ಯದವರಿಗೂ ಅವಕಾಶ: ರಾಷ್ಟ್ರಪತಿ ಚುನಾವಣೆಗೆ ದೇಶದ ಯಾವುದೇ ಭಾಗದ ಶಾಸಕ ಅಥವಾ ಸಂಸದರು ಯಾವುದೇ ರಾಜ್ಯದಲ್ಲಿ ಮತ ಚಲಾಯಿಸಲು ಅವಕಾಶವಿದೆ. ಶಾಸಕರು ಅಥವಾ ಸಂಸದರು ತಾವು ಯಾವ ರಾಜ್ಯದಲ್ಲಿ
ಮತ ಚಲಾಯಿಸಲು ಇಷ್ಟ ಪಡುತ್ತಾರೋ, ಆ ಬಗ್ಗೆ ಚುನಾವಣಾ ಆಯೋಗದಿಂದ ಅನುಮತಿ ಪಡೆದು ತಾವು ಮತ ಚಲಾಯಿಸಲು ಬಯಸುವ ರಾಜ್ಯ ವಿಧಾನಸಭಾ ಕಾರ್ಯದರ್ಶಿ ಅಥವಾ ಚುನಾವಣಾಧಿಕಾರಿಗೆ ನೀಡಿದರೆ, ಅಲ್ಲಿ
ಮತದಾನಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ.

ಯಾವಾಗ ಅಸಿಂಧುವಾಗುತ್ತದೆ ?: ಶಾಸಕರು 1 ಅಂಕಿಯನ್ನು ಸರಿಯಾಗಿ ಬರೆಯದೇ ಇದ್ದರೆ, ಒಬ್ಬರು ಅಭ್ಯರ್ಥಿಗಿಂತ ಹೆಚ್ಚು ಅಭ್ಯರ್ಥಿಗಳ ಹೆಸರಿನ ಮುಂದೆ ‘1’ ಅಂಕಿಯನ್ನು ಬರೆದರೆ, ಒಬ್ಬರೇ ಅಭ್ಯರ್ಥಿ ಮುಂದೆ ಹೆಚ್ಚು ಅಂಕಿಯನ್ನು
ಬರೆದರೆ, ಯಾರಿಗೆ ಗುರುತು ಮಾಡಿದ್ದೀರಾ ಎನ್ನುವುದು ಸಂಶಯ ಬರುವಂತಿದ್ದರೆ, ಮತದಾರರ ಆದ್ಯತೆಗಳನ್ನು ಸಂಖ್ಯೆಗಳ ಬದಲಿಗೆ ಅಕ್ಷರಗಳಲ್ಲಿ ಬರೆದರೆ ಮತ್ತು ಮತದಾನ ಮಾಡಿರುವ ಅಭ್ಯರ್ಥಿಯ ಗೌಪ್ಯತೆಯನ್ನು ಬಹಿರಂಗ ಪಡಿಸಿದರೆ, ಅಂತಹ ಬ್ಯಾಲೆಟ್‌ ಅಸಿಂಧುವಾಗುತ್ತದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next