Advertisement

ಕೋವಿಂದ್‌ ಹಾದಿ ಸಲೀಸು : ಪ್ರತಿಪಕ್ಷಗಳಲ್ಲಿ ಇನ್ನೂ ಗೊಂದಲ

07:54 AM Jun 21, 2017 | Karthik A |

ಹೊಸದಿಲ್ಲಿ: ರಾಮನಾಥ್‌ ಕೋವಿಂದ್‌ ಅವರನ್ನು ಎನ್‌ಡಿಎ ತನ್ನ ಅಭ್ಯರ್ಥಿ ಎಂದು ಘೋಷಿಸುತ್ತಲೇ ವಿಪಕ್ಷ ಪಾಳೆಯದಲ್ಲಿ ಚುರುಕಿನ ಚಟುವಟಿಕೆ ನಡೆದಿವೆ. ವಿಪಕ್ಷಗಳ ಕಡೆಯಿಂದ ಅಭ್ಯರ್ಥಿ ಕಣಕ್ಕಿಳಿಸುವುದೋ ಅಥವಾ ಕೋವಿಂದ್‌ ಅವರಿಗೇ ಬೆಂಬಲ ನೀಡು ವುದೋ ಎಂಬ ಬಗ್ಗೆ ಇನ್ನೂ ನಿರ್ಧಾರವಾಗದಿದ್ದರೂ ಎಡಪಕ್ಷಗಳು ಮಾತ್ರ ಚುನಾವಣೆ ಬಗ್ಗೆ ಮಾತನಾಡಿವೆ. ಸೋಮವಾರವಷ್ಟೇ ಎನ್‌ಡಿಎಯಲ್ಲೇ ಒಡಕಿನ ಮಾತು ಆಡಿದ್ದ ಶಿವಸೇನೆ, ರಾಗ ಬದಲಿಸಿ ‘ಅತ್ಯಂತ ಸರಳ, ಉತ್ತಮ’ ವ್ಯಕ್ತಿಯಾದ ರಾಮನಾಥ್‌ ಕೋವಿಂದ್‌ ಅವರಿಗೆ ಬೆಂಬಲ ನೀಡುವುದಾಗಿ ಘೋಷಿಸಿದೆ. ಪಕ್ಷದ ಅಧ್ಯಕ್ಷ ಉದ್ಧವ್‌ ಠಾಕ್ರೆ ಈ ಬಗ್ಗೆ ಅಧಿಕೃತವಾಗಿ ಹೇಳಿದ್ದಾರೆ. ಹೀಗಾಗಿ ಎನ್‌ಡಿಎಯಲ್ಲಿನ ಎಲ್ಲ ಪಕ್ಷಗಳು ಒಗ್ಗೂಡಿದಂತಾಗಿದೆ.

Advertisement

ಈ ಮಧ್ಯೆ, ಕೋವಿಂದ್‌ ಅವರ ಅಚ್ಚರಿಯ ಹೆಸರು ಕಾಂಗ್ರೆಸ್‌ನಲ್ಲಿನ ಗೊಂದಲ ಹೆಚ್ಚಿಸಿದಂತೆ ಕಾಣಿಸುತ್ತಿದೆ. ಸದ್ಯಕ್ಕೆ ಪಕ್ಷದ ಯಾರೊಬ್ಬರೂ ಅಭ್ಯರ್ಥಿ ಕಣಕ್ಕಿಳಿಸುವ ಅಥವಾ ಕೋವಿಂದ್‌  ಅವರನ್ನು ವಿರೋಧಿಸುವ ಬಗ್ಗೆ ಮಾತುಗಳನ್ನಾಡಿಲ್ಲ. ಎಲ್ಲವೂ ಗುರುವಾರದ ವಿಪಕ್ಷಗಳ ಸಭೆಯಲ್ಲಿ ನಿರ್ಧಾರವಾಗಲಿದೆ ಎಂದೇ ಹೇಳಲಾಗುತ್ತಿದೆ. ಇದರ ನಡುವೆಯೇ ಎಡಪಕ್ಷಗಳು ಮಾತ್ರ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಸುಳಿವು ನೀಡಿವೆ. ಇದು ಸೋಲು – ಗೆಲುವಿನ ಚುನಾವಣೆ ಎನ್ನುವುದಕ್ಕಿಂತ ಸೈದ್ಧಾಂತಿಕ ಸಂಘರ್ಷದ ವಿಚಾರವಾಗಿದ್ದು, ಅಭ್ಯರ್ಥಿ ಕಣಕ್ಕಿಳಿಸಲೇಬೇಕು ಎಂದಿದೆ. 

ಜತೆಗೆ, ಕಾಂಗ್ರೆಸ್‌ನ ದಲಿತ ನಾಯಕರಾದ ಮೀರಾ ಕುಮಾರ್‌ ಮತ್ತು ಸುಶೀಲ್‌ಕುಮಾರ್‌ ಶಿಂಧೆ ಅವರ ಹೆಸರನ್ನೂ ಪ್ರಸ್ತಾವಿಸಿದೆ. ಆದರೆ, ನಾವು ಪ್ರಸ್ತಾಪ ಮಾಡಿದ್ದೇವಷ್ಟೇ, ಇವರ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗಿರುವುದು ಕಾಂಗ್ರೆಸ್ಸೇ ಎಂದು ಹೇಳಿದೆ. ಮೂಲಗಳ ಪ್ರಕಾರ, ಶಿಂಧೆ ಅವರು ಈ ಬಗ್ಗೆ ಆಸಕ್ತಿ ತೋರಿಲ್ಲ. ಆದರೆ ಮೀರಾ ಕುಮಾರ್‌ ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ಒಂದು ವೇಳೆ, ಈ ಪ್ರಸ್ತಾವ‌ ಎಲ್ಲರಿಗೂ ಇಷ್ಟವಾದರೆ ಅಭ್ಯರ್ಥಿ ಹಾಕುವ ಬಗ್ಗೆ ಚಿಂತನೆ ಮಾಡಬಹುದು ಎಂಬುದು ಕಾಂಗ್ರೆಸ್‌ ಲೆಕ್ಕಾಚಾರ. 

ಹೀಗಾಗಿಯೇ, ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ಅವರು, ಪಾಟ್ನಾಗೆ ತೆರಳಿದ್ದು, ಮಂಗಳವಾರ ಸಂಜೆ ನಡೆದ ಇಫ್ತಾರ್‌ ಕೂಟದಲ್ಲಿ ಪಾಲ್ಗೊಂಡಿದ್ದಾರೆ. ಜತೆಗೆ ಆಜಾದ್‌ ಅವರು ಜೆಡಿಯು ನಾಯಕ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್‌ ಮತ್ತು ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌ ಅವರ ಜತೆ ಈ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಆದರೆ, ಚುನಾವಣೆ ನಡೆಸುವ ಬಗ್ಗೆ ನಿತೀಶ್‌ಕುಮಾರ್‌ ಅವರಿಗೆ ಒಲವಿಲ್ಲ ಎಂದು ಹೇಳಲಾಗಿದೆ. ಇದಕ್ಕೆ ಕಾರಣ, ಕೋವಿಂದ ಅವರು ಬಿಹಾರದ ರಾಜ್ಯಪಾಲರಾಗಿದ್ದ ಅಷ್ಟೂ ದಿನ ನಿತೀಶ್‌ ಕುಮಾರ್‌ ಜತೆ ಉತ್ತಮ ಸಂಬಂಧವನ್ನೇ ಹೊಂದಿದ್ದರು. ಹೀಗಾಗಿ, ಅವರು ಬಿಜೆಪಿಯ ಮೂಲದವರು ಎಂದು ನೋಡುವುದಕ್ಕಿಂತ ದಲಿತ ವ್ಯಕ್ತಿಯೊಬ್ಬರು ರಾಷ್ಟ್ರಪತಿ ಹುದ್ದೆಗೆ ಏರುತ್ತಿದ್ದಾರೆ ಎಂದು ಭಾವಿಸಿ ಬೆಂಬಲ ಕೊಡಬಹುದು ಎಂಬ ಚಿಂತನೆಯಲ್ಲಿ ನಿತೀಶ್‌ ಇದ್ದಾರೆ. ಆದರೆ ನಿತೀಶ್‌ ಅವರ ಈ ಆಶಯಕ್ಕೆ ಲಾಲು ಅವರ ಆರ್‌ಜೆಡಿ ವ್ಯತಿರಿಕ್ತವಾಗಿ ನಿಂತಿದೆ. ಸದ್ಯ ಆದಾಯ ತೆರಿಗೆ ಇಲಾಖೆ, ಲಾಲು ಪುತ್ರಿ ಮತ್ತು ಅಳಿಯನ ಆಸ್ತಿಯನ್ನು ಜಪ್ತಿ ಮಾಡಿಕೊಂಡಿದ್ದು, ಇದು ಲಾಲುಗೆ ತೀರಾ ಆಕ್ರೋಶ ತರಿಸಿದೆ. ಹೀಗಾಗಿ ಚುನಾವಣೆ ನಡೆಯಲಿ, ನಾವೇ ಅಭ್ಯರ್ಥಿ ಹಾಕೋಣ, ಬಿಜೆಪಿ ಅಭ್ಯರ್ಥಿ ಬೆಂಬಲಿಸುವುದು ಬೇಡ ಎಂದು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ. ಒಂದು ಮೂಲಗಳ ಪ್ರಕಾರ, ಇದೇ ವಿಚಾರ ಲಾಲು ಮತ್ತು ನಿತೀಶ್‌ ಮಧ್ಯೆ ಭಿನ್ನಾಭಿಪ್ರಾಯಕ್ಕೂ ಕಾರಣವಾಗಿದೆ.

ಪಟ್ನಾಯಕ್‌ ವಿರುದ್ಧ ಕೈ ಕಿಡಿ
ಎನ್‌ಡಿಎ ಅಭ್ಯರ್ಥಿಗೆ ಬೆಂಬಲ ಸೂಚಿಸಿರುವ ಬಿಜೆಡಿ ನಾಯಕ, ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌ ವಿರುದ್ಧ ಕಾಂಗ್ರೆಸ್‌ ಕಿಡಿಕಾರಿದೆ. ‘ಪ್ರಧಾನಿ ಮೋದಿ ಕರೆ ಮಾಡಿದ ತತ್‌ಕ್ಷಣ ಬೆಂಬಲ ಘೋಷಿಸಿದ್ದೀರಲ್ಲ, ಪ್ರಧಾನಿಯ ನಿರ್ಧಾರವನ್ನು ನಿರಾಕರಿಸುವಷ್ಟು ಧೈರ್ಯ ನಿಮ್ಮಲ್ಲಿಲ್ಲವೇ, ಇದೇನಾ ನಿಮ್ಮ ಸಮಾನ ಅಂತರ ನೀತಿ’ ಎಂದು ಕಾಂಗ್ರೆಸ್‌ ನಾಯಕ ನರಸಿಂಗ ಮಿಶ್ರಾ ಪ್ರಶ್ನಿಸಿದ್ದಾರೆ. ವಿಪಕ್ಷಗಳು ಮತ್ತೂಬ್ಬ ದಲಿತ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದರೆ ಆಗ ಪಟ್ನಾಯಕ್‌ ಅವರೇನು ಮಾಡುತ್ತಾರೆ ಎಂದೂ ಕೇಳಿದ್ದಾರೆ.

Advertisement

ರಾಜ್ಯಪಾಲರ ಹುದ್ದೆಗೆ ಕೋವಿಂದ್‌ ರಾಜೀನಾಮೆ
ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ರಾಮ್‌ನಾಥ್‌ ಕೋವಿಂದ್‌ ಅವರು ಬಿಹಾರ ರಾಜ್ಯಪಾಲರ ಹುದ್ದೆಗೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು ಅಂಗೀಕರಿಸಿದ್ದಾರೆ. ತದನಂತರ, ಕೇಂದ್ರ ಸರಕಾರವು ಪಶ್ಚಿಮ ಬಂಗಾಳ ರಾಜ್ಯಪಾಲ ಕೇಸರಿ ನಾಥ್‌ ತ್ರಿಪಾಠಿ ಅವರಿಗೆ ಬಿಹಾರ ರಾಜ್ಯಪಾಲರ ಹೆಚ್ಚುವರಿ ಹೊಣೆ ನೀಡಲಾಗಿದೆ. ಇದೇ ವೇಳೆ, ಮಂಗಳವಾರ ಕೋವಿಂದ್‌ ಅವರು ಹೊಸದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್‌ರನ್ನು ಭೇಟಿಯಾಗಿದ್ದಾರೆ. ಈ ವೇಳೆ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾದ ಕೋವಿಂದ್‌ ಅವರನ್ನು ರಾಜನಾಥ್‌ ಅಭಿನಂದಿಸಿದ್ದಾರೆ.

ಅಂಕಿ ಸಂಖ್ಯೆ ಆಟದಲ್ಲಿ ಕೋವಿಂದ್‌ಗೇ ಜಯ
ಕೋವಿಂದ್‌ರನ್ನು ರೈಸಿನಾ ಹಿಲ್ಸ್‌ಗೆ ಕಳುಹಿಸಿ ಕೊಡುವ ಎನ್‌ಡಿಎ ಸರಕಾರದ ಆಸೆ ಈಡೇರುವುದು ಬಹುತೇಕ ನಿಚ್ಚಳ. ಬಿಜೆಡಿ, ಎಐಎಡಿಎಂಕೆ, ವೈಎಸ್ಸಾರ್‌ ಕಾಂಗ್ರೆಸ್‌, ಟಿಆರ್‌ಎಸ್‌ ಕೂಡ ಅಭ್ಯರ್ಥಿಗೆ ಬೆಂಬಲ ಸೂಚಿಸಿರುವುದು ಇದಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ. ಪ್ರತಿ ಸಂಸದನ ಮತದ ಮೌಲ್ಯ 708. ಹಾಗಾಗಿ ಸಂಸದರ ಒಟ್ಟು ಮತ 10,98,903 ಆಗಲಿದೆ. ಇನ್ನು ಶಾಸಕರ ಮತಗಳ ಮೌಲ್ಯವು ಅವರು ಪ್ರತಿನಿಧಿಸುವ ರಾಜ್ಯದ ಜನಸಂಖ್ಯೆಯನ್ನು ಆಧರಿಸಿರುತ್ತದೆ. ಅಭ್ಯರ್ಥಿಯು ಗೆಲ್ಲಲು ಶೇ.50+ ಅಂದರೆ 5,49,452 ಮತಗಳು ಬೇಕು. ಈಗಿರುವ ಲೆಕ್ಕಾಚಾರದಂತೆ ಎನ್‌ಡಿಎ ಒಟ್ಟು 5,37,693 ಮತಗಳನ್ನು (ಶಿವಸೇನೆ ಸಹಿತ) ಹೊಂದಿದೆ. ಬಿಜೆಡಿ, ಎಐಎಡಿಎಂಕೆ, ಟಿಆರ್‌ಎಸ್‌, ವೈಎಸ್ಸಾರ್‌ ಕಾಂಗ್ರೆಸ್‌ನ ಮತಗಳು ಇದಕ್ಕೆ ಸೇರಿದಾಗ ಶೇ.50ರ ಗಡಿ ಸುಲಭವಾಗಿ ದಾಟಲಿದೆ. ಹೀಗಾಗಿ ಕೋವಿಂದ್‌ಅವರು ರಾಷ್ಟ್ರಪತಿ ಹುದ್ದೆಗೇರುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next