ಶೃಂಗೇರಿ : ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶ್ರೀ ಶಾರದಾ ಪೀಠಕ್ಕೆ ಅ.8 ರಂದು ಆಗಮಿಸುವ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ನಿಲುಗಡೆಗಾಗಿ ಗಾಂಧಿ ಮೈದಾನದಲ್ಲಿ ಹೆಲಿಪ್ಯಾಡ್ ನಿರ್ಮಾಣಕ್ಕೆ ಭರದ ಸಿದ್ಧತೆ ನಡೆಸಲಾಗುತ್ತಿದೆ. ಮೂರು ಹೆಲಿಕಾಪ್ಟರ್ ಇಳಿಯಲು ಅವಶ್ಯವಾಗಿರುವ ಹೆಲಿಪ್ಯಾಡ್ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ.
ಭಾನುವಾರದಿಂದ ಪ್ರವಾಸಿ ವಾಹನಗಳನ್ನು ಗಾಂಧಿ ಮೈದಾನದ ಒಂದು ಪಾರ್ಶ್ವದಲ್ಲಿ ನಿಲುಗಡೆಗೆ ಅವಕಾಶ ನೀಡಲಾಗಿದೆ. ಗಾಂ ಧಿ ಮೈದಾನದಲ್ಲಿದ್ದ ಅಂಗಡಿ ಮುಂಗಟ್ಟುಗಳು, ಹೋಟೆಲ್, ರಸ್ತೆ ಬದಿ ವ್ಯಾಪಾರದ 25 ಕ್ಕೂ ಹೆಚ್ಚು ಅಂಗಡಿಗಳ ತೆರವು ಕಾರ್ಯಚರಣೆ ನಡೆಯುತ್ತಿದೆ. ಅ.4ರ ಸಂಜೆಯೊಳಗೆ ಎಲ್ಲಾ ಅಂಗಡಿಗಳನ್ನು ತೆರವು ಮಾಡುವಂತೆ ತಾಲೂಕು ಆಡಳಿತ ಮೌಖೀಕವಾಗಿ ಸೂಚಿಸಿದೆ. ಗಾಂಧಿ ಮೈದಾನದಲ್ಲಿ ಈ ವರ್ಷ ಹಾಕಲಾಗಿದ್ದ 20 ವಿದ್ಯುತ್ ಕಂಬಗಳನ್ನು ತೆಗೆಯಲಾಗಿದೆ.
ವಿದ್ಯುದ್ದೀಪ ಅಳವಡಿಸಲು ಹಾಗೂ ಸಿಸಿ ಕ್ಯಾಮರಾ ಅಳವಡಿಸಲು ಈ ವರ್ಷ ಕಂಬಗಳನ್ನು ಹಾಕಲಾಗಿತ್ತು. ಅಂಗಡಿ, ಹೋಟೆಲ್‌ಗಳು ತಾತ್ಕಾಲಿಕ ಶೀಟ್ ಅಳವಡಿಸಿ ನಿರ್ಮಿಸಲಾಗಿದ್ದು, ಇದೀಗ ಹೆಲಿಕಾಪ್ಟರ್ ನಿಲುಗಡೆ ಸಂದರ್ಭದಲ್ಲಿ ಶೀಟುಗಳು ಹಾರಿಹೋಗುವ ಸಂದರ್ಭ ಹಾಗೂ ಭದ್ರತೆ ದೃಷ್ಟಿಯಿಂದ ಎಲ್ಲಾ ಅಂಗಡಿಗಳನ್ನು ತೆರವು ಮಾಡಿಸಲಾಗುತ್ತಿದೆ. ಅಂಗಡಿ ವರ್ತಕರು ಸ್ವಯಂಪ್ರೇರಿತರಾಗಿ ತೆರವು ಮಾಡುತ್ತಿದ್ದಾರೆ. ರಾಷ್ಟ್ರಪತಿ ಆಗಮನದ ಹಿನ್ನೆಲೆಯಲ್ಲಿ ವರ್ತಕ ವಿಜೇಶ್ ಕಾಮತ್ ಪ್ರತಿಕ್ರಿಯೆ ನೀಡಿ, ರಾಷ್ಟ್ರಪತಿ ಇಲ್ಲಿಗೆ ಆಗಮಿಸುತ್ತಿರುವುದು ಸಂತಸದ ವಿಚಾರವಾಗಿದೆ. ತಾಲೂಕು ಆಡಳಿತದ ಸೂಚನೆಯಂತೆ ನಾವು ನಮ್ಮ ಅಂಗಡಿಯನ್ನು ಸ್ವಯಂಪ್ರೇರಿತರಾಗಿ ತೆರವು ಮಾಡುತ್ತಿದ್ದೇವೆ. ಈಗಾಗಲೇ ಕಾಯಂ ಹೆಲಿಪ್ಯಾಡ್ ಇರುವ ಕೊರಡಕಲ್ಲು ಹೆಲಿಪ್ಯಾಡ್ ಅಭಿವೃದ್ಧಿಗೊಳಿಸಿದರೆ ಅಲ್ಲಿ ಮೂರು ಹೆಲಿಕ್ಯಾಪ್ಟರ್ ಇಳಿಸುವ ಅವಕಾಶವಿದೆ. ಈ ಬಗ್ಗೆ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು. ವಾಹನ ನಿಲುಗಡೆಗೆ ಬದಲಿ ವ್ಯವಸ್ಥೆ-ವಾಹನ ನಿಲುಗಡೆಗೆ ಈಗಾಗಲೇ ಬಸ್ ನಿಲ್ದಾಣದ ಸಮೀಪ ವಸತಿ ಬಡಾವಣೆ ಹಾಗೂ ಜೆಸಿಬಿಎಂ ಕಾಲೇಜು ಮೈದಾನ ಬಳಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಜೆಸಿಬಿಎಂ ಕಾಲೇಜು ಮೈದಾನದಲ್ಲಿ ವಾಹನ ನಿಲುಗಡೆಯಾದರೂ ಶ್ರೀಮಠಕ್ಕೆ 2 ಕಿಮೀ ದೂರವಿದೆ. ಇದರಿಂದ ಪ್ರವಾಸಿಗರಿಗೆ ಗೊಂದಲ ಉಂಟಾಗುವ ಸಾಧ್ಯತೆ ಇದೆ. ಮಳೆ-ಶಾಹಿನ್ ಚಂಡಮಾರುತದ ಪ್ರಭಾವದಿಂದ ತಾಲೂಕಿನಲ್ಲಿ ಮಳೆಯಾಗುತ್ತಿದ್ದು, ಗಾಂಧಿ ಮೈದಾನದಲ್ಲಿ ಹೊಂಡ,ಗುಂಡಿಯಲ್ಲಿ ನೀರು ನಿಂತಿದೆ. ಹವಾಮಾನ ಇಲಾಖೆ ಪ್ರಕಾರ ಮಳೆ ಮುಂದುವರೆಯುವ ಸಾಧ್ಯತೆ ಇದೆ.