ಬೆಂಗಳೂರು: “ರಾಷ್ಟ್ರಪತಿಯೇ ಆಗಬೇಕೇ? ಪ್ರಧಾನ ಮಂತ್ರಿ ಯಾಕೆ ಬೇಡ?’ ಚಂದ್ರಯಾನ-2 ಉಪಗ್ರಹ ವೀಕ್ಷಣೆಗೆ ದೇಶಾದ್ಯಂತ ಬಂದಿದ್ದ 70 ಮಕ್ಕಳ ಪೈಕಿ ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಾಕಿದ ಮರುಪ್ರಶ್ನೆ ಇದು. ಇಸ್ರೋ ಟೆಲಿಮೆಟ್ರಿಕ್, ಟ್ರ್ಯಾಕಿಂಗ್ ಆಂಡ್ ಕಮಾಂಡ್ ನೆಟ್‌ವರ್ಕ್ (ಇಸ್ಟ್ರಾಕ್)ನಲ್ಲಿ ಉಪಗ್ರಹ ವೀಕ್ಷಣೆ ನಂತರ ನೇರವಾಗಿ ಪ್ರಧಾನಿ ಮಕ್ಕಳಿದ್ದಲ್ಲಿಗೆ ಬಂದರು.
ಅಲ್ಲಿ ಮಕ್ಕಳೊಂದಿಗೆ ಮಾತಿಗಿಳಿದರು. ಈ ವೇಳೆ ವಿದ್ಯಾರ್ಥಿಯೊಬ್ಬ, “ರಾಷ್ಟ್ರಪತಿ ಆಗಬೇಕು ಎನ್ನುವುದು ನನ್ನ ಗುರಿ. ಇದಕ್ಕಾಗಿ ನಾನು ಏನು ಮಾಡಬೇಕು’ ಎಂದು ಟಿಪ್ಸ್ ಕೇಳಿದ. ಇದಕ್ಕೆ ಬೆನ್ನು ಚಪ್ಪರಿಸಿ ಶಹಬ್ಟಾಸ್ ಹೇಳಿದ ಪ್ರಧಾನಿ, “ರಾಷ್ಟ್ರಪತಿಯೇ ಆಗಬೇಕಾ? ಪ್ರಧಾನ ಮಂತ್ರಿ ಯಾಕೆ ಬೇಡ?’ ಎಂದು ಕೇಳಿದರು. ಆಗ, ಕೆಲ ವಿಜ್ಞಾನಿಗಳು ಮತ್ತು ಮಕ್ಕಳು “ಹೋ…’ ಎಂದು ಕೂಗಿದರು.
“ಇಲ್ಲಿಂದ ಹಿಂತಿರುಗಿದ ಮೇಲೆ ಜನರು ಕೇಳಿದರೆ, ಏನೆಂದು ಹೇಳುತ್ತೀಯಾ?’ ಎಂದು ಮೋದಿ ಅಲ್ಲಿದ್ದ ಬಾಲಕಿಗೆ ಪ್ರಶ್ನೆ ಹಾಕಿದರು. “ಚಂದ್ರಯಾನದ ಲ್ಯಾಂಡರ್ “ವಿಕ್ರಂ’ ಭೂಮಿಯೊಂದಿಗಿನ ಸಂವಹನ ಕಳೆದುಕೊಂಡಿದೆ’ ಎಂದು ಹೇಳುವುದಾಗಿ ಉತ್ತರಿಸಿದಳು. ಇದೇ ವೇಳೆ “ಜೀವನದಲ್ಲಿ ದೊಡ್ಡ ಗುರಿ ಹೊಂದಿರಬೇಕು. ಆ ಗುರಿ ಸಾಧನೆಗೆ ಆತ್ಮವಿಶ್ವಾಸ ತುಂಬಾ ಮುಖ್ಯ. ಸಣ್ಣ, ಪುಟ್ಟ ಅವಕಾಶಗಳನ್ನು ಕಳೆದುಕೊಂಡಾಗ ಮರುಗುತ್ತ ಕುಳಿತುಕೊಳ್ಳದೆ, ಗುರಿಯತ್ತ ಮುನ್ನುಗ್ಗಬೇಕು. ಇದಕ್ಕಾಗಿ ಚೆನ್ನಾಗಿ ಓದಬೇಕು’ ಎಂದು ಮಕ್ಕಳಿಗೆ ಪ್ರಧಾನಿ ಪಾಠ ಮಾಡಿದರು.
70 ಮಕ್ಕಳು ಆಯ್ಕೆ: ಪ್ರಧಾನಿಯೊಂದಿಗೆ ಚಂದ್ರಯಾನ-2 ವೀಕ್ಷಣೆಗೆ ಇಸ್ರೋ ದೇಶಾದ್ಯಂತ ವಿವಿಧ ಶಾಲೆಗಳಿಂದ 70 ಮಕ್ಕಳನ್ನು ಆಯ್ಕೆ ಮಾಡಿ, ಅವಕಾಶ ಕಲ್ಪಿಸಿತ್ತು. ಇದರಲ್ಲಿ ರಾಯಚೂರಿನ 9ನೇ ತರಗತಿಯ ಜಿ.ವೈಷ್ಣವಿ ಕೂಡ ಒಬ್ಬರು. ಮೂರ್‍ನಾಲ್ಕು ತಾಸು ಮುಂಚಿತವಾಗಿ ಬಂದ ವಿದ್ಯಾರ್ಥಿಗಳ ಮುಖದಲ್ಲಿ ತಡರಾತ್ರಿ 2 ಗಂಟೆಯಾಗಿದ್ದರೂ ಆಯಾಸ ಅಥವಾ ನಿದ್ರೆಯ ಮಂಪರು ಇರಲಿಲ್ಲ.
ಕುತೂಹಲದಿಂದ ನಿಯಂತ್ರಣ ಕೊಠಡಿಯಲ್ಲಿರುವ ಪರದೆಗಳನ್ನು ನೋಡುತ್ತಿದ್ದರು. ಲ್ಯಾಂಡರ್ ಸಂಪರ್ಕ ಕಳೆದುಕೊಂಡಿದೆ ಎಂದು ಪ್ರಕಟವಾಗುತ್ತಿದ್ದಂತೆ ಅವರ ಮುಖಗಳು ಬಾಡಿದವು. ಕೆಲಹೊತ್ತಿನ ನಂತರ ಪ್ರಧಾನಿ ತಮ್ಮ ಬಳಿಗೆ ಆಗಮಿಸುತ್ತಿದ್ದಂತೆ, ಮತ್ತೆ ಅವರ ಮುಖಗಳು ಅರಳಿದವು.