ಶಹಾಪುರ: ರಾಷ್ಟ್ರಪಿತ ಗಾಂಧೀಜಿ ಎಲ್ಲರಿಗೂ ಅಚ್ಚು ಮೆಚ್ಚು. ಈ ದೇಶ ಕಂಡ ಅಪರೂಪದ ವ್ಯಕ್ತಿಯಲ್ಲಿ ಅವರು ಒಬ್ಬರು. ಅವರ ಕೊಡುಗೆ ದೇಶಕ್ಕೆ ಅಪಾರವಿದೆ. ಪ್ರಸ್ತುತ ಹಲವಡೆ ಅವರಿಗೆ ಅಗೌರವ ತೋರುವ ಸಂಗತಿಗಳು ಸಾಮಾಜಿಕ ಜಾಲತಾಣದಲ್ಲಿ ಕಂಡಿದ್ದೇನೆ. ಇದು ಸರಿಯಲ್ಲ ಎಂದು ಸಾಹಿತಿ ಸಿದ್ಧರಾಮ ಹೊನ್ಕಲ್ ಬೇಸರ ವ್ಯಕ್ತಪಡಿಸಿದರು.
ನಗರದ ಖಾಸ್ಗತೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಇಲಾಖೆ, ಚರಬಸವೇಶ್ವರ ಸಂಗೀತ ಸೇವಾ ಸಂಸ್ಥೆ, ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಪಾಪು ಗಾಂಧಿ ಬಾಪು ಆದ ಕಥೆ ಕುರಿತು ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಗಾಂಧೀಜಿ ದೇಶದ ಆಸ್ತಿಯಾಗಿದ್ದಾರೆ. ಅವರ ಸಾಧನೆ, ನಿಸ್ವಾರ್ಥ ಸೇವೆ ಇತಿಹಾಸ ಕುರಿತು ಹೊಸ ಪೀಳಿಗೆಗೆ ತಿಳಿಸಿಕೊಡಬೇಕಿದೆ. ಆ ನಿಟ್ಟಿನಲ್ಲಿ ನಾಟಕದ ಮೂಲಕ ಮಕ್ಕಳ ಗಮನಕ್ಕೆ ತರಲು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಅಲ್ಲದೆ ನನಗೆ ವಿಶೇಷವಾಗಿ ಗಾಂಧೀತನ ನಂಟು ಬೆಳೆದಿರುವುದು ನಾನು ರಚಿಸಿರುವ ಗಾಂಧೀಜಿ ನಾಡಿನಲ್ಲಿ ಪ್ರವಾಸ ಕಥನ ಕೃತಿ. ಕೃತಿ ಈಗಾಗಲೇ 6 ಬಾರಿ ಮುದ್ರಣಗೊಂಡಿದೆ. ಅಲ್ಲದೆ 10 ಸಾವಿರ ಪ್ರತಿಗಳು ಮಾರಾಟವಾಗಿವೆ. ಮಹಾರಾಷ್ಟ್ರದ ಸೊಲ್ಲಾಪುರ ವಿಶ್ವವಿದ್ಯಾಲಯದಲ್ಲಿ ಪದವಿ ಪಠ್ಯ ಪುಸ್ತಕವಾಗಿ ಹೊರಹೊಮ್ಮಿದೆ. ಈ ಕಾರಣಕ್ಕೆ ನನಗೆ ಗಾಂಧೀತನ ನಂಟಿಗೆ ಕೃತಿ ಹೆಚ್ಚಿನ ಬಾಂಧವ್ಯ ಬೆಸೆದಿದೆ ಎಂದು ಹೇಳಿದರು.
ಮಕ್ಕಳು ಗಾಂಧೀಜಿ ಬಗ್ಗೆ ತಿಳಿದುಕೊಳ್ಳಬೇಕು. ಅವರೊಬ್ಬರು ಅಹಿಂಸಾವಾದಿ. ಆದರ್ಶ ದಾರ್ಶನಿಕರು. ಅವರ ಪ್ರತಿ ಹೆಜ್ಜೆಯಲ್ಲೂ ದೇಶದ ಬಗ್ಗೆ ಪ್ರೇಮವಿದೆ. ದೇಶಕ್ಕಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟ ಮಹಾತ್ಮ ಆತ ಎಂದು ಹೇಳಿದರು.
ಕರವೇ ಉಕ ಅಧ್ಯಕ್ಷ ಶರಣು ಗದ್ದುಗೆ, ಸಂಸ್ಥೆ ಭೀಮಣ್ಣಗೌಡ ಬಿರಾದಾರ, ಬಸವರಾಜ ಕೋರಿ, ವೆಂಕಟೇಶ ಬೋನೇರ ಇದ್ದರು.