Advertisement

ಕಡ್ಡಾಯ ಕನ್ನಡ ನಾಮಫಲಕಗಳಿಗೆಆಗ್ರಹಿಸಿ ರಕ್ಷಣಾ ವೇದಿಕೆ ರ್ಯಾಲಿ

10:19 AM Nov 21, 2017 | |

ಕಲಬುರಗಿ: ನಗರ ಹಾಗೂ ಜಿಲ್ಲೆಯ ಎಲ್ಲ ಮಳಿಗೆಗಳ ಮೇಲೆ ಕಡ್ಡಾಯವಾಗಿ ಕನ್ನಡ ನಾಮಫಲಕಗಳನ್ನು ಹಾಕಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಸೋಮವಾರ ದ್ವಿಚಕ್ರ ವಾಹನಗಳ ರ್ಯಾಲಿ ನಡೆಸಿದರು.

Advertisement

ನಗರದ ಕೇಂದ್ರ ಬಸ್‌ ನಿಲ್ದಾಣದಿಂದ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಮಹಾನಗರ ಪಾಲಿಕೆ ವರೆಗೆ ನಡೆದ ದ್ವಿಚಕ್ರವಾಹನಗಳ ರ್ಯಾಲಿ ನೇತೃತ್ವವನ್ನು ಸಂಘಟನೆ ಉತ್ತರ ಕರ್ನಾಟಕದ ಅಧ್ಯಕ್ಷ ಶರಣು ಗದ್ದುಗೆ ವಹಿಸಿದ್ದರು.

ಜಿಲ್ಲಾಧಿಕಾರಿಗಳಿಗೆ ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ನಗರದಲ್ಲಿ ಕನ್ನಡ ನಾಮಫಲಕಗಳು ಮಾಯವಾಗಿವೆ. ಇದಕ್ಕೆ ಬೇರೆ ಭಾಷಿಕರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೇ
ಕಾರಣವಾಗಿದೆ. ನಗರ, ಜಿಲ್ಲೆ, ತಾಲೂಕು, ಹೋಬಳಿ ಹಾಗೂ ಗ್ರಾಮ ಮಟ್ಟದಲ್ಲಿ ಎಲ್ಲ ಮಳಿಗೆಗಳಲ್ಲಿ ಕೂಡಲೇ ಕನ್ನಡ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸಲು ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.

30 ದಿನಗಳೊಳಗೆ ಕಡ್ಡಾಯವಾಗಿ ಕನ್ನಡ ನಾಮಫಲಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳದೇ ಹೋದಲ್ಲಿ ಸಂಘಟನೆ ಕಾರ್ಯಕರ್ತರು ಅನ್ಯ ಭಾಷೆಗಳ ನಾಮಫಲಕಗಳಿಗೆ ಕಪ್ಪು ಮಸಿ ಬಳೆಯುವಂತಹ ಪ್ರತಿಭಟನೆ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರ್ಯಾಲಿಯಲ್ಲಿ ಹೈದ್ರಾಬಾದ್‌ ಕರ್ನಾಟಕದ ಅಧ್ಯಕ್ಷ ಗುರುರಾಜ ಶಕ್ತಿ ಮತ್ತಿಮೂಡ, ಜಿಲ್ಲಾಧ್ಯಕ್ಷ ಗೋಪಾಲ ನಾಟೀಕಾರ, ಮಾರುತಿ ಕಮ್ಮಾರ, ಸಂಪತ್ತ ಹಿರೇಮಠ, ಮಂಜು ಕುಸನೂರು, ಸಂತೋಷ ಚೌದ್ರಿ, ವಿಜಯ್‌ ಅಂಕಲಗಿ, ಮನೋಹರ ಚಿಗಾನೂರು, ಅಂಬರೀಷ ಬಾಬು, ಬಾಪುಗೌಡ ಹಾಗೂ ಬಸವರಾಜ ಮುಂತಾದವರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next