ಹುಬ್ಬಳ್ಳಿ: ಹುಬ್ಬಳ್ಳಿ ಹೋಟೆಲ್ ಸಂಘದ 77ನೇ ವಾರ್ಷಿಕ ಸಭೆಯಲ್ಲಿ 2017-19ನೇ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ 77ನೇ ವಾರ್ಷಿಕ ಸರ್ವ ಸಾಧಾರಣ ಸಭೆ ನಡೆಯಿತು.
ನೂತನ ಅಧ್ಯಕ್ಷರಾಗಿ ಕೃಷ್ಣಮೂರ್ತಿ ಉಚ್ಚಿಲ, ಉಪಾಧ್ಯಕ್ಷರಾಗಿ ಎಸ್.ಪ್ರಕಾಶರಾವ್, ಸುಕುಮಾರ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸರ್ವೋತ್ತಮ ಶೆಟ್ಟಿ, ಸಹ ಕಾರ್ಯದರ್ಶಿಯಾಗಿ ದೀಪಕ ಶೆಟ್ಟಿ, ಶ್ರೀನಿವಾಸ ಓಕುಡೆ, ಕೋಶಾಧ್ಯಕ್ಷರಾಗಿ ರಮೇಶ ಕುಂದರ, ಸಂಘಟನಾ ಕಾರ್ಯದರ್ಶಿಯಾಗಿ ಸುಂದರ ಪೂಜಾರಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ನಡೆದ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿರ್ಗಮಿತ ಅಧ್ಯಕ್ಷ ಸುಧಾಕರ ಶೆಟ್ಟಿ, ಕಳೆದ 2 ವರ್ಷಗಳಿಂದ ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸಿರುವುದು ಹಾಗೂ ಜನಪರ ಕಾರ್ಯಗಳನ್ನು ಮಾಡಲಾಗಿದೆ. ನೂತನ ಆಡಳಿತ ಮಂಡಳಿ ಇನ್ನಷ್ಟು ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಲಿ.
ನಾವೆಲ್ಲರೂ ಬೆನ್ನೆಲುಬಾಗಿ ನಿಲ್ಲೋಣ ಎಂದರು. ನೂತನ ಅಧ್ಯಕ್ಷ ಕೃಷ್ಣಮೂರ್ತಿ ಉಚ್ಚಿಲ ಮಾತನಾಡಿ, ಮುಂದಿನ ದಿನಗಳಲ್ಲಿ ಉದ್ಯಮದ ತರಬೇತಿ ಕೇಂದ್ರ ಆರಂಭಿಸಲಾಗುವುದು. ನಂತರ ನಮ್ಮ ಭಾರತೀಯ ಆಹಾರ ಪದ್ಧತಿಯ ಗುಣ-ವಿಶೇಷತೆಗಳನ್ನು ತಿಳಿಸುವ ಕಾರ್ಯ ಹಾಗೂ ಕಾನೂನು ಅರಿವು ಮೂಡಿಸಲಾಗುವುದು ಎಂದರು.
ಕೆಎಂಎಫ್ ಸಭೆಯ ಪ್ರಾಯೋಜಕತ್ವ ವಹಿಸಿಕೊಂಡಿತ್ತು. ಕೆಎಂಎಫ್ ಅಧ್ಯಕ್ಷ ನೀಲಕಂಠಪ್ಪ ಅಸೂಟಿ, ಸಂಘದ ಹಿರಿಯರಾದ ರವಿ ಗಾಯತೊಂಡೆ, ಹರಿದಾಸ ಶೆಟ್ಟಿ, ಸರ್ವೋತ್ತಮ ಶೆಟ್ಟಿ, ಭುಜಂಗ ಶೆಟ್ಟಿ, ಜಯರಾಮ ಶೆಟ್ಟಿ, ಶಾಂತಾರಾಮ ಶೆಟ್ಟಿ, ವಿವೇಕ ಹೆಗಡೆ ಮೊದಲಾದವರು ಇದ್ದರು.