Advertisement

ಒಕ್ಕಲಿಗರ ಸಂಘದ ಅಧ್ಯಕ್ಷ ಪದಚ್ಯುತಿ

03:45 AM Jan 07, 2017 | Team Udayavani |

ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದಲ್ಲಿ ಮತ್ತೆ ಒಡಕು ಉಂಟಾಗಿದ್ದು, ದಿಢೀರ್‌ ಬೆಳವಣಿಗೆಯಲ್ಲಿ ಅಧ್ಯಕ್ಷ ಸ್ಥಾನದಿಂದ ಡಾ| ಅಪ್ಪಾಜಿ ಗೌಡ ಅವರನ್ನು ವಿರೋಧಿ ಬಣ ಅವಿಶ್ವಾಸ ನಿರ್ಣಯ ಮಂಡಿಸುವ ಮೂಲಕ ಪದಚ್ಯುತಿಗೊಳಿಸಿದೆ.

Advertisement

ಆದರೆ, ಭಿನ್ನಮತೀಯರ ಗುಂಪು ಮಂಡಿಸಿರುವ ಅವಿಶ್ವಾಸ ನಿರ್ಣಯ ಅಸಂವಿಧಾನಿಕವಾಗಿದೆ ಎಂದು ಹೇಳಿರುವ ಅಪ್ಪಾಜಿಗೌಡ, ಭಿನ್ನರ ನಿರ್ಣಯ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

ಒಕ್ಕಲಿಗರ ಸಂಘದ ಭಿನ್ನರು ಸಭೆ ನಡೆಸಲು ಮುಂದಾದಾಗ ಅಪ್ಪಾಜಿಗೌಡರ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶುಕ್ರವಾರ ಎರಡು ಗುಂಪುಗಳ ನಡುವೆ ತಳ್ಳಾಟ-ನೂಕಾಟ ನಡೆದಿದ್ದು, ಕೆಲಕಾಲ ಪರಿಸ್ಥಿತಿ ಉದ್ವಿಗ್ನಗೊಂಡಿತು. ಶುಕ್ರವಾರದ ನಡೆದ ಘಟನೆಯಿಂದಾಗಿ ರಾಜ್ಯ ಒಕ್ಕಲಿಗರ ಸಂಘದ ಜಟಾಪಟಿ ಮತ್ತಷ್ಟು ರಾದಾಟಛಿಂತಕ್ಕೆ ನಾಂದಿ ಹಾಡಿದಂತಾಗಿದೆ.

ಎರಡು ಗುಂಪುಗಳ ನಡುವಿನ ಭಿನ್ನಮತ ತಾತ್ಕಾಲಿಕ ಶಮನಗೊಂಡು ಒಕ್ಕಲಿಗ ಸಂಘಕ್ಕೆ ಕಳೆದ ಐದು ತಿಂಗಳ ಹಿಂದೆಯಷ್ಟೇ ಚುನಾವಣೆ ನಡೆದಿತ್ತು. ಈ ವೇಳೆ ಅಪ್ಪಾಜಿಗೌಡ ಅವರನ್ನು ಅಧ್ಯಕ್ಷರನ್ನಾಗಿ ಮತ್ತೂಮ್ಮೆ ಆಯ್ಕೆ ಮಾಡಲಾಗಿತ್ತು. ಆದರೆ, ಇದೀಗ ಸಂಘದಲ್ಲಿ ಮತ್ತೆ ಬಿರುಕು ಉಂಟಾಗಿದ್ದರಿಂದ ಅಪ್ಪಾಜಿಗೌಡ ಅವರ ವಿರೋಧಿ ಬಣ ಪದಚ್ಯುತಿಗೊಳಿಸಿದ್ದು, ಒಕ್ಕಲಿಗರ ಸಂಘಕ್ಕೆ ಜನವರಿ 18ರಂದು ಮತ್ತೂಮ್ಮೆ ಚುನಾವಣೆ ನಡೆಸಲು ಸಮಯ ನಿಗದಿ ಮಾಡಲಾಗಿದೆ. ಈ ಮೂಲಕ ಸಂಘದ ಆಂತರಿಕ ಕಲಹ ಬೀದಿಗೆ ಬಿದ್ದಂತಾಗಿದೆ.

ಒಕ್ಕಲಿಗರ ಸಂಘದ ಅಧ್ಯಕ್ಷ ಸ್ಥಾನದಿಂದ ಅಪ್ಪಾಜಿಗೌಡ ಅವರನ್ನು ಪದಚ್ಯುತಗೊಳಿಸುವ ಅವಿಶ್ವಾಸ ನಿರ್ಣಯದ ಪರವಾಗಿ 18 ಮಂದಿ ಕಾರ್ಯಕಾರಿಣಿ ಸಮಿತಿ ನಿರ್ದೇಶಕರು ಸಹಿ ಹಾಕಿದ್ದಾರೆ. ರಿಜಿಸ್ಟ್ರಾರ್‌ ಬಸವಯ್ಯ ನೇತೃತ್ವದಲ್ಲಿ ಪದಚ್ಯುತಿ ನಿರ್ಧಾರ ಕೈಗೊಂಡಿರುವುದಾಗಿ ಅಪ್ಪಾಜಿಗೌಡ ವಿರೋಧಿ ಬಣ ಹೇಳಿದೆ.

Advertisement

ಕಿಮ್ಸ್‌ ಆಸ್ಪತ್ರೆಯ ಆವರಣದಲ್ಲಿನ ಒಕ್ಕಲಿಗರ ಸಂಘದಲ್ಲಿ ಸಭೆ ಸೇರಲು ಅಪ್ಪಾಜಿಗೌಡ ವಿರೋಧಿ ಬಣ ನಿರ್ಧರಿಸಿತ್ತು. ಆದರೆ, ಇದಕ್ಕೆ ಅಪ್ಪಾಜಿಗೌಡ ಪರ ಇರುವವರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ, ನೂಕಾಟ, ತಳ್ಳಾಟ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ತೆರಳುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಪೊಲೀಸರ ಬಿಗಿ ಬಂದೋಬಸ್ತ್ ಮತ್ತು ಅಪ್ಪಾಜಿ ಗೌಡ ಬಣದ ತೀವ್ರ ವಿರೋಧದ ನಡುವೆ ಸಭೆ ನಡೆಸಲಾಯಿತು. ರಿಜಿಸ್ಟ್ರಾರ್‌ ಸಮ್ಮುಖದಲ್ಲಿ 18 ನಿರ್ದೇಶಕರು ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕಿದರು.

10 ದಿನಗಳ ಹಿಂದೆಯೇ ಅವಿಶ್ವಾಸ ನಿರ್ಣಯದ ನೊಟೀಸ್‌ ನೀಡಲಾಗಿದೆ. ಆದರೂ ಸಭೆ ಅಪ್ಪಾಜಿ ಗೌಡ ಸಭೆ ಕರೆಯದೆ ತಮ್ಮ ಕುರ್ಚಿ ಉಳಿಸಿಕೊಳ್ಳಲು ಪತ್ರಿತಂತ್ರ ಅನುಸರಿಸುತ್ತಿದ್ದಾರೆ. ಎಲ್ಲಾವೂ ಬೈಲಾ ನಿಯಮಾವಳಿ ಪ್ರಕಾರವೇ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದು ಅಪ್ಪಾಜಿ ಗೌಡ ವಿರೋಧ ಬಣದ ಅಭಿಪ್ರಾಯವಾಗಿದೆ. 

ಅಪ್ಪಾಜಿ ಗೌಡ ಸೇರಿದಂತೆ ಸಂಘದ ಕಾರ್ಯದರ್ಶಿ ಮಂಜುನಾಥ್‌,ಖಜಾಂಚಿ ಕಾಳೇಗೌಡ ಮತ್ತು ಉಪಾಧ್ಯಕ್ಷರಾದ ಪ್ರಸನ್ನ ಮತ್ತು ಶಶಿಕಿರಣ ಎಂಬುವವರನ್ನು ಅವರ ಹುದ್ದೆಯಿಂದ ವಜಾಗೊಳಿಸಲಾಗಿದೆ. ಯಾರು ಸಹ ಅವರ ಹುದ್ದೆಯಿಂದ ಮುಂದುವರಿಯುವಂತಿಲ್ಲ ಎಂದು ಹೇಳಲಾಗಿದೆ.

ಆದರೆ, ಇದನ್ನು ಸಾರಾಸಗಟಾಗಿ ಅಪ್ಪಾಜಿಗೌಡ ಮತ್ತವರ ಬಣದವರು ತಳ್ಳಿ ಹಾಕಿದ್ದಾರೆ. ನಿರ್ದೇಶಕರ ಸಭೆ ಅನೂರ್ಜಿತ,
ಅಸಿಂಧುವಾಗಿದೆ. ಅವಿಶ್ವಾಸ ನಿರ್ಣಯ ಮಂಡನೆ ಮತ್ತು ವೀಕ್ಷಕರ ನೇಮಕವೂ ಅಸಿಂಧುವಾಗಿದ್ದು, ಈ ನಿರ್ಣಯದ ವಿರುದಟಛಿ ನ್ಯಾಯಾಲಯದ ಮೆಟ್ಟಿಲೇರಲಾಗುವುದು ಎಂದು ಪದಚ್ಯುತ ಅಧ್ಯಕ್ಷ ಡಾ. ಅಪ್ಪಾಜಿ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.

ತಾವೇ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿದ್ದು, ಈಗಲೂ ಬಹುಸಂಖ್ಯೆಯ ನಿರ್ದೇಶಕರ ಬೆಂಬಲ ತನಗೇ ಇದೆ. ಕೆಲ ಕಾಲದಿಂದ ಕೆಲವು ನಿರ್ದೇಶಕರು ನನ್ನನ್ನು ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಲು ಪಿತೂರಿ ಮಾಡುತ್ತಿದ್ದಾರೆ. ಅವರು ಅದಕ್ಕಾಗಿ ಎಲ್ಲ ಬಗೆಯ ಕಾನೂನು ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಶುಕ್ರವಾರ ಒಂದು ಹೆಜ್ಜೆ ಮುಂದೆ ಇರಿಸಿ ಪ್ರತ್ಯೇಕ ಸಭೆಯನ್ನು ಕರೆದಿದ್ದಾರೆ. ಬೈಲಾ ನಿಯಮಾವಳಿ ಪ್ರಕಾರ ಸಭೆ ನಡೆಸಿಲ್ಲ ಎಂದು ಹೇಳಿದ್ದಾರೆ.ಅಧ್ಯಕ್ಷರನ್ನು ಅವಿಶ್ವಾಸ ಮಂಡನೆಯಿಂದ ತೆಗೆದುಹಾಕಲು ಅಥವಾ ಅಧ್ಯಕ್ಷರಾಗಿ ಆಯ್ಕೆಯಾದ ಆರು ತಿಂಗಳೊಳಗೆ ತೆಗೆದು ಹಾಕಲು ಸಾಧ್ಯವಿಲ್ಲ. ಮೊದಲಿಗೆ ನಾನು ಅಧ್ಯಕ್ಷನಾಗಿ ಆಯ್ಕೆಯಾಗಿ ಕೇವಲ ಐದು ತಿಂಗಳಾಗಿವೆ.

ಎರಡನೆಯದಾಗಿ ಸಭೆಯನ್ನು ಕರೆದರೂ ಎಲ್ಲ ಸದಸ್ಯರಿಗೂ ಸಭೆಯ ಸೂಚನೆಯನ್ನು ಏಳು ದಿನದೊಳಗೆ ಕಳುಹಿಸಬೇಕು.
ಆದರೆ, ಭಿನ್ನಮತೀಯರು ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಆಕ್ರಮಣದಿಂದ ಅಧಿಕಾರ ಕಿತ್ತುಕೊಳ್ಳಲು ನೋಡುತ್ತಿದ್ದಾರೆ. ರಾಜ್ಯ ಒಕ್ಕಲಿಗರ ಸಂಘದ ಪ್ರತಿಷ್ಠೆಗೆ ಮಸಿ ಬಳಿಯುತ್ತಿರುವುದಲ್ಲದೆ ಕೀಳಾದ ಚಟುವಟಿಕೆಗಳನ್ನು ನಡೆಸಿ ನಾವು ತಲೆ ತಗ್ಗಿಸುವಂತೆ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next