ರಬಕವಿ-ಬನಹಟ್ಟಿ: ಬನಹಟ್ಟಿಯ ಸೋಮವಾರ ಪೇಟೆ ಸಮಸ್ತ ದೈವ ಮಂಡಳಿಯ ಕಾರ್ಯಾಲಯದಲ್ಲಿ ಅ.9ರ ಭಾನುವಾರ ಕಸಾಪ ತಾಲೂಕು ಅಧ್ಯಕ್ಷ ಮ. ಕೃ. ಮೇಗಾಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ರಾಮಪುರದ ಶ್ರೀ ದಾನೇಶ್ವರಿ ಸಮುದಾಯ ಭವನದಲ್ಲಿ ನ. 6 ರಂದು ನಡೆಯಲಿರುವ ರಬಕವಿ-ಬನಹಟ್ಟಿ 2ನೇ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಕ್ಕಳ ಸಾಹಿತಿ ಜಯವಂತ ಕಾಡದೇವರ ಅವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಜಯವಂತ ಕಾಡದೇವರ ಅವರ ಮನೆಗೆ ಜಿಲ್ಲಾ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿಯವರ ನೇತೃತ್ವದಲ್ಲಿ ತೆರಳಿದ ಪದಾಧಿಕಾರಿಗಳು, ಹಿರಿಯ ಸಾಹಿತಿಗಳು ಅವರನ್ನು ಸನ್ಮಾನಿಸಿ ಸಮ್ಮೇಳನಕ್ಕೆ ಆಹ್ವಾನ ನೀಡಿದರು.
ಈ ವೇಳೆ ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಉತ್ತಮರಿಗೆ ಉತ್ತಮ ಅವಕಾಶ ನೀಡುವತ್ತ ಗಮನ ನೀಡುತ್ತಿದೆ. ಆ ನಿಟ್ಟಿನಲ್ಲಿ ರಬಕವಿ-ಬನಹಟ್ಟಿ ತಾಲೂಕು ೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಕ್ಕಳ ಸಾಹಿತಿ ಜಯವಂತ ಕಾಡದೇವರ ಅವರು ಆಯ್ಕೆಯಾಗಿರುವುದು ಸಂತಸದ ವಿಷಯ. ಸಾಹಿತಿಗಳು, ಸಾಹಿತ್ಯಾಭಿಮಾನಿಗಳು, ಸಂಘಟಕರು, ಕಲಾವಿದರನ್ನು ಪೋಷಿಸುವುದು ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ ಉದ್ದೇಶ. ಸಾಹಿತ್ಯಕ್ಕೆ ರಬಕವಿ-ಬನಹಟ್ಟಿ ತಾಲೂಕಿನ ಕೊಡುಗೆ ಅಪಾರವಾದುದು. ಇಂತಹ ನಾಡಿನಲ್ಲಿ ಅಕ್ಷರ ಜಾತ್ರೆಯನ್ನು ಹಮ್ಮಿಕೊಂಡಿದ್ದು ಅದನ್ನು ಯಶಸ್ವಿ ಮಾಡಲು ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಯವಂತ ಕಾಡದೇವರ, ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಕನ್ನಡದ ಕೆಲಸ ಮಾಡಲು ಇದು ಮತ್ತಷು ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು. ಹಿರಿಯ ಸಾಹಿತಿ ಸಿದ್ಧರಾಜ ಪೂಜಾರಿ, ತಾಲೂಕು ಅಧ್ಯಕ್ಷ ಮ. ಕೃ. ಮೇಗಾಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷ ಬಿ. ಜಿ. ಹಟ್ಟಿ, ತಾಲೂಕು ಕೋಶಾಧ್ಯಕ್ಷರಾದ ಡಿ. ಬಿ. ಜಾಯಗೊಂಡ, ಮಲ್ಲಪ್ಪಣ್ಣ ಗಣಿ, ಬಸವರಾಜ ಮೇಟಿ, ಶಾಂತಾ ಮಂಡಿ, ಸರ್ವಮಂಗಲಾ ಹಿರೇಮಠ, ಮಲ್ಲಿಕಾರ್ಜುನ ತುಂಗಳ, ಮಹಾಶಾಂತ ಶೆಟ್ಟಿ, ಕಿರಣ ಆಳಗಿ, ಗುರುನಾಥ ಸುತಾರ, ಮಧುಕೇಶ್ವರ ಬೆಳಗಲಿ, ಸುನೀಲ ವಜ್ರಮಟ್ಟಿ, ಗೋಪಾಲ ಭಟ್ಟಡ, ಶಂಕರಯ್ಯ ಕಾಡದೇವರ, ಪಿ. ಬಿ. ಪಾಲಬಾವಿ ಸೇರಿದಂತೆ ಅನೇಕರು ಇದ್ದರು.