Advertisement

ತಾಲಿಬಾನಿ ಬಂಡುಕೋರರ ಬಿಡುಗಡೆಗೆ ಒಲ್ಲೆ ಎಂದ ಅಫ್ಘಾನ್ ಅಧ್ಯಕ್ಷ

10:08 AM Mar 02, 2020 | sudhir |

ಕಾಬೂಲ್‌: ಅಮೆರಿಕ-ತಾಲಿಬಾನಿ ನಾಯಕರ ನಡುವೆ ಶನಿವಾರ ಏರ್ಪಟ್ಟ ಐತಿಹಾಸಿಕ ಕದನ ವಿರಾಮ ಒಪ್ಪಂದದಿಂದ ಅಫ್ಘಾನಿಸ್ತಾನದಲ್ಲಿ ನೆಮ್ಮದಿಯ ಶಕೆ ಆರಂಭಗೊಳ್ಳಲಿದೆ ಎಂಬ ನಿರೀಕ್ಷೆಗಳು ಹುಸಿಯಾಗುವ ಸಾಧ್ಯತೆಗಳು ದಟ್ಟವಾಗಿವೆ.

Advertisement

ಒಪ್ಪಂದದಲ್ಲಿ ಅಡಕವಾಗಿರುವ ಪ್ರಮುಖ ಅಂಶದಂತೆ, ಅಫ್ಘಾನ್‌ ಸರ್ಕಾರದ ಬಂಧನದಲ್ಲಿರುವ 5,000 ತಾಲಿಬಾನ್‌ ಬಂಡುಕೋರರ ಬಿಡುಗಡೆ ಸಾಧ್ಯವಿಲ್ಲ ಎಂಬರ್ಥದಲ್ಲಿ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಮಾತನಾಡಿದ್ದಾರೆ. “”ಬಂಡುಕೋರರ ಬಿಡುಗಡೆಗೆ ಬದ್ಧವಾಗಿಲ್ಲ. ಶಾಂತಿ ಶಾಶ್ವತವಾಗಿ ಬೇರೂರುವ ತನಕ ಯಾವುದೇ ಬಂಡುಕೋರರ ಬಿಡುಗಡೆಯಿಲ್ಲ” ಎಂದಿರುವುದು ತಾಲಿಬಾನಿಗಳನ್ನು ಕೆರಳಿಸಬಹುದಾದ ಸಾಧ್ಯತೆಗಳಿವೆ. ಇದು ಮತ್ತೂಂದು ಸುತ್ತಿನ ತಿಕ್ಕಾಟಕ್ಕೆ, ರಕ್ತಪಾತಕ್ಕೆ ನಾಂದಿ ಹಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಮಹಿಳೆಯರಿಗೆ ಆತಂಕ
ಹೊಸದಾಗಿ ಏರ್ಪಟ್ಟಿರುವ ಶಾಂತಿ ಒಪ್ಪಂದ ಆಫ್ಘಾನಿಸ್ತಾನದ ಜನತೆಯಲ್ಲಿ ನೆಮ್ಮದಿಯ ಆಶಾಕಿರಣ ಮೂಡಿಸಿದೆ. ಆದರೆ, ಅಲ್ಲಿನ ಮಹಿಳೆಯರಲ್ಲಿ ತಮ್ಮ ಸ್ವಾತಂತ್ರ್ಯದ ದಿನಗಳು ಮುಗಿಯುವ ಭೀತಿ ಆವರಿಸಿದೆ. 1995ರಲ್ಲಿ ತಾಲಿಬಾನಿಗಳು ಆಫ್ಘಾನಿಸ್ತಾನದ ಆಡಳಿತ ಚುಕ್ಕಾಣಿ ಹಿಡಿದಾಗ ಅಲ್ಲಿ ಮಹಿಳೆಯರು ಉದ್ಯೋಗದಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಅವರು ಶಿಕ್ಷಣ ಪಡೆಯುವುದಕ್ಕೆ ನಿಷೇಧ ಹೇರಲಾಗಿತ್ತು. ಹಾಗಾಗಿ, ಸಾವಿರಾರು ವಿದ್ಯಾರ್ಥಿನಿಯರು ಶಿಕ್ಷಣ ತೊರೆಯಬೇಕಾಯಿತು. 2001ರಲ್ಲಿ ತಾಲಿಬಾನಿ ಸರ್ಕಾರ ಉರುಳಿದಾಗಲೇ ಅಲ್ಲಿ ಮತ್ತೆ ಅವರಿಗೆ ಶಿಕ್ಷಣ, ಉದ್ಯೋಗದ ಹಕ್ಕುಗಳು ದೊರೆತವು. ಇವನ್ನು ಮತ್ತೆ ಕಳೆದುಕೊಳ್ಳುವ ಭೀತಿಯಲ್ಲಿ ಅವರಿದ್ದಾರೆ.

ತಾಲಿಬಾನಿಗಳ ಭೇಟಿ ಮಾಡುವೆ: ಟ್ರಂಪ್‌
ತಾಲಿಬಾನ್‌ ನಾಯಕರನ್ನು ಸದ್ಯದಲ್ಲೇ ಭೇಟಿ ಮಾಡುವ ಇಂಗಿತವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವ್ಯಕ್ತಪಡಿಸಿದ್ದಾರೆ. “”ಒಪ್ಪಂದದ ಆಶಯದಂತೆ, ತಾಲಿಬಾನ್‌ ನಾಯಕರು ಉಗ್ರರನ್ನು ಧ್ವಂಸಗೊಳಿಸುವ ಭರವಸೆಯಿದೆ” ಎಂದು ಅವರು ತಿಳಿಸಿದ್ದಾರೆ.

ಪಾಯಿಂಟ್ಸ್‌…
– ತಾಲಿಬಾನಿ ಉಗ್ರರನ್ನು ಬಿಡುಗಡೆ ಮಾಡುವುದು ಒಪ್ಪಂದದ ಪ್ರಮುಖ ಅಂಶಗಳಲ್ಲೊಂದು.
– ಒಪ್ಪಂದದ ಅಂಶವನ್ನೇ ತಳ್ಳಿಹಾಕುವಂತೆ ಮಾತನಾಡಿರುವ ಅಶ್ರಫ್ ಘನಿ
– ಅಫ್ಘಾನಿಸ್ತಾನದ ಸೆರೆಯಲ್ಲಿರುವ ಸುಮಾರು 5,000 ತಾಲಿಬಾನಿ ಬಂಡುಕೋರರು.
– ಘನಿಯವರ ಹೇಳಿಕೆಯಿಂದ ಆಫ್ಘಾನ್‌ ನೆಲದಲ್ಲಿ ಆಂತರಿಕ ತಿಕ್ಕಾಟ, ಉಗ್ರವಾದ ಹೆಡೆಯೆತ್ತುವ ಸಾಧ್ಯತೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next