ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸರಳ ರಾಷ್ಟ್ರಪತಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿರುವ ಉತ್ತರಾಖಂಡದ ಶಿಕ್ಷಕ ಪ್ರದೀಪ್ ನೇಗಿ ಅವರಿಗೆ ವೇದಿಕೆಯಿಂದ ಕೆಳಗೆ ಇಳಿದು ಬಂದು ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಾಕಿಂಗ್ ಸ್ಟಿಕ್ ನೆರವಿನಿಂದ ವೇದಿಕೆಗೆ ನೇಗಿ ಅವರು ಬರುತ್ತಿದ್ದಂತೆಯೇ ರಾಷ್ಟ್ರಪತಿ ಸಂಕೋಚ ತಾಳದೆ, ವೇದಿಕೆಯಿಂದ ಕೆಳಗೆ ಇಳಿದು ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ಅವರ ಈ ಕ್ರಮಕ್ಕೆ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ನೇಗಿ ಅವರಿಗೆ ಯುಟ್ಯೂಬ್ ಚಾನೆಲ್ ಸೇರಿದಂತೆ ತಾಂತ್ರಿಕ ಕ್ರಮಗಳಿಂದ ವಿದ್ಯಾರ್ಥಿಗಳಿಗೆ ಕಲಿಸುವ ಪ್ರಯತ್ನ ಮಾಡಿದ್ದರಿಂದ ಪ್ರಶಸ್ತಿ ಲಭಿಸಿದೆ.
46 ಮಂದಿಗೆ ಗೌರವ:
ಶಿಕ್ಷಕರ ದಿನ ಪ್ರಯುಕ್ತ ಕರ್ನಾಟಕದ ಇಬ್ಬರು ಸೇರಿದಂತೆ ದೇಶದ 46 ಶಿಕ್ಷಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು “ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ 2022′ ಅನ್ನು ಪ್ರದಾನಿಸಿದ್ದಾರೆ.
Related Articles
ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ಸರ್ಕಾರಿ ಕಿರಿಯ ಪ್ರಾರ್ಥಮಿಕ ಶಾಲೆಯ ಶಿಕ್ಷಕ ಉಮೇಶ್ ಹಾಗೂ ತುಮಕೂರಿನ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ವಿ.ಪೊನಶಂಕರಿ ಅವರು ರಾಷ್ಟ್ರಪತಿ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿರುವ ಮುರ್ಮು ಅವರು “ರಾಷ್ಟ್ರಪತಿಯಾಗುವಲ್ಲಿ ಕಲಿಸಿದ ಶಿಕ್ಷಕರ ಪಾತ್ರ ಅತ್ಯಂತ ದೊಡ್ಡದಿದೆ. ನನ್ನ ಗ್ರಾಮದಲ್ಲಿ ಶಾಲೆ ಶುರುವಾದ ಬಳಿಕ ಮೊದಲಿಗಳಾಗಿ ಹೋದದ್ದು ನಾನೇ’ ಎಂದರು.