Advertisement

ಹೊಸ ರಾಷ್ಟ್ರಪತಿಯ ಹೊಸ ಜೀವನ

11:14 AM Jul 22, 2022 | Team Udayavani |

ದೇಶದ ನೂತನ ರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಆಯ್ಕೆಯಾಗಿದ್ದಾರೆ. ಇವರು ಐತಿಹಾಸಿಕ, ವೈಭವೋಪೇತವಾದ ರಾಷ್ಟ್ರಪತಿ ಭವನವನ್ನು ಪ್ರವೇಶಿಸಲಿದ್ದಾರೆ. ರಾಷ್ಟ್ರಪತಿಯವರ ಜೀವನ ಹೇಗಿರುತ್ತದೆ? ಅವರ ಭದ್ರತೆ ಹೇಗಿರುತ್ತದೆ? ಅವರಿಗೆ ಇರುವ ಸೌಲಭ್ಯಗಳು ಯಾವುವು? ಸೇವೆಯಿಂದ ನಿವೃತ್ತಿಯಾದ ಅನಂತರ ಅವರ ಜೀವನ ನಿರ್ವಹಣೆಗೆ ಸರಕಾರ ನೀಡುವ ಸವಲತ್ತುಗಳೇನು ಎಂಬಿತ್ಯಾದಿ ಸಂಕ್ಷಿಪ್ತ ಮಾಹಿತಿಗಳು ಇಲ್ಲಿವೆ.

Advertisement

ಸಂಬಳ ಎಷ್ಟು?
ಭಾರತದ ಸರ್ಕಾರಿ ಅಧಿಕಾರಿಗಳಲ್ಲೇ ಅತಿ ಹೆಚ್ಚು ವೇತನ ಪಡೆಯುವ ಹೆಗ್ಗಳಿಕೆ ರಾಷ್ಟ್ರಪತಿಯವರದ್ದು. ಅವರ ವೇತನವನ್ನು 1951ರ ರಾಷ್ಟ್ರಪತಿಗಳ ಸಾಧನೆ ಮತ್ತು ವೇತನ ಕಾಯ್ದೆಯ ಅನುಸಾರವಾಗಿ ನಿಗದಿ ಗೊಳಿಸಲಾಗುತ್ತದೆ. ಕಾಲಾನುಕ್ರಮಕ್ಕೆ ಅದನ್ನು ಇದೇ ಕಾಯ್ದೆಯಡಿ ಪರಿಷ್ಕೃತಗೊಳಿಸಲಾಗುತ್ತದೆ. ಸದ್ಯದ ಮಟ್ಟಿಗೆ ರಾಷ್ಟ್ರಪತಿಗಳ ಮಾಸಿಕ ವೇತನ ಐದು ಲಕ್ಷ ರೂ.ಗಳಷ್ಟಿದೆ. ಸಂವಿಧಾನದ ಎರಡನೇ ಶೆಡ್ನೂಲಿನ ಪ್ರಕಾರ, ಅವರ ಮಾಸಿಕ ವೇತನವನ್ನು ಮೊದಲು 10 ಸಾವಿರ ರೂ.ಗಳಿಗೆ ನಿಗದಿಗೊಳಿಸಲಾಗಿತ್ತು. 1998ರಲ್ಲಿ ಇದನ್ನು 50 ಸಾವಿರ ರೂ.ಗಳಿಗೆ ಏರಿಸಲಾಗಿತ್ತು. 2020ರಲ್ಲಿ 1.50 ಲಕ್ಷ ರೂ.ಗಳಿಗೆ ಏರಿಸಲಾಯಿತು. ಈಗ ಐದು ಲಕ್ಷ ರೂ. ವೇತನ ಸಿಗು ತ್ತಿದೆ. ಮೂಲ ವೇತನದ ಜೊತೆಗೆ, ಅವರಿಗೆ ಕೆಲವಾರು ಭತ್ಯೆಗಳು ಸೇರಿಕೊಳ್ಳುತ್ತವೆ.

ಎಲ್ಲಿ ವಾಸ?
ವಿಶ್ವದಲ್ಲೇ ಅತಿ ದೊಡ್ಡ ನಿವಾಸ ಎಂದು ಕರೆಯಲ್ಪಡುವ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಯವರು ವಾಸ ಮಾಡುತ್ತಾರೆ. ಇದು ಆಂಗ್ಲ ವಾಸ್ತುಶಿಲ್ಪಿಯಾದ ಸರ್‌ ಎಡ್ವರ್ಡ್‌ ಲ್ಯೂಟೆನ್ಸ್‌ ಹಾಗೂ ಹರ್ಬರ್ಟ್‌ ಬೆಕರ್‌ ಎಂಬುವರ ಕಲ್ಪನೆಯ ಕೂಸು. ಅಸಲಿಗೆ, ಇದನ್ನು ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಭಾರತದಲ್ಲಿದ್ದ ವೈಸ್‌ರಾಯ್‌ ಅವರ ಅಧಿಕೃತ ನಿವಾಸಕ್ಕಾಗಿ, 110 ವರ್ಷಗಳ ಹಿಂದೆ, ಅಂದರೆ, 1912ರಲ್ಲಿ ನಿರ್ಮಿಸಲು ಆರಂಭಿಸಲಾಗಿತ್ತು. 1929ರಲ್ಲಿ ಇದರ ನಿರ್ಮಾಣ ಪೂರ್ತಿಯಾಯಿತು. 1931ರಲ್ಲಿ ಇದರ ಉದ್ಘಾಟನೆಯಾಯಿತು.

ಈ ನಿವಾಸದಲ್ಲಿ ಮೊದಲು ವಾಸ್ತವ್ಯ ಹೂಡಿದ್ದು ವೈಸ್‌ರಾಯ್‌ ಆಗಿದ್ದ ಲಾರ್ಡ್‌ ಇರ್ವಿನ್‌. ಆನಂತರ ಕೆಲವು ವೈಸ್‌ರಾಯ್‌ಗಳು ಸೇರಿದಂತೆ ಬ್ರಿಟನ್‌ನ ಕಟ್ಟಕಡೆಯ ವೈಸ್‌ರಾಯ್‌ ಹಾಗೂ ಮೊದಲ ಗವರ್ನರ್‌- ಜನರಲ್‌ ಆಗಿದ್ದ ಲಾರ್ಡ್‌ ಮೌಂಟ್‌ ಬ್ಯಾಟನ್‌ ಅವರೂ ಇಲ್ಲಿ ವಾಸ್ತವ್ಯ ಹೂಡಿದ್ದರು.

ರಾಷ್ಟ್ರಪತಿ ಭವನ ಹಾಗೂ ಅದಕ್ಕಾಗಿ ಮೀಸಲಿರುವ ಒಟ್ಟಾರೆ ಜಾಗದ ವಿಸ್ತೀರ್ಣ ಬರೋಬ್ಬರಿ 330 ಎಕರೆ. ಅದರಲ್ಲಿ ಐದು ಎಕರೆಯಷ್ಟು ಜಾಗದಲ್ಲಿ ರಾಷ್ಟ್ರಪತಿ ಭವನದ ಕಟ್ಟಡವಿದೆ. 2.5 ಕಿ.ಮೀಟರ್‌ನಷ್ಟು ಜಾಗ ಕಾರಿಡಾರ್‌ಗಳಿಗೆ ಮೀಸಲಾಗಿದ್ದರೆ, ರಾಷ್ಟ್ರಪತಿ ಭವನದ ಹೂದೋಟಕ್ಕಾಗಿ 190 ಎಕರೆ ಜಾಗವನ್ನು ಬಿಡಲಾಗಿದೆ.

Advertisement

ಭಾರತಕ್ಕೆ ಸ್ವಾತಂತ್ರ್ಯ ಬಂದ‌ ಘಳಿಗೆಯಲ್ಲಿ ಹಲವಾರು ಚಾರಿತ್ರಿಕ ವಿದ್ಯಮಾನಗಳಿಗೆ ಈ ಭವನ ಸಾಕ್ಷಿಯಾಗಿದೆ. ಲಾರ್ಡ್‌ ಮೌಂಟ್‌ ಬ್ಯಾಟನ್‌ ಅವರು ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂರವರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಬೋಧಿಸಿದ್ದು ಇದೇ ಭವನದ ಸಭಾಂಗಣ ದಲ್ಲಿ. 1948ರ ಜೂ. 21ರಂದು ಭಾರತದ ಮೊಟ್ಟಮೊದಲ ಗವರ್ನರ್‌ ಜನರಲ್‌ ಆಗಿದ್ದ ಸಿ. ರಾಜಗೋಪಾಲಾಚಾರಿ ಯವರಿಗೂ ಪ್ರಮಾಣ ವಚನ ಬೋಧಿಸಿದ್ದು ಇಲ್ಲೇ.

ಬರೋಬ್ಬರಿ 340 ಕೊಠಡಿಗಳಿರುವ ರಾಷ್ಟ್ರಪತಿ ಭವನ ವನ್ನು ಸರ್ಕ್ನೂಟ್‌ 1, ಸರ್ಕ್ನೂಟ್‌ 2 ಹಾಗೂ ಸರ್ಕ್ನೂಟ್‌ 3 ಎಂದು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಸರ್ಕ್ನೂಟ್‌ 1ರಲ್ಲಿ ಅಶೋಕ ಹಾಲ್‌, ದರ್ಬಾರ್‌ ಹಾಲ್‌, ಬ್ಯಾಂಕ್ವೆಟ್‌ ಹಾಲ್‌, ಡ್ರಾಯಿಂಗ್‌ ರೂಂ ಸೇರಿದಂತೆ ಹಲವಾರು ಕೊಠಡಿಗಳಿವೆ. ಸರ್ಕ್ನೂಟ್‌ 2ರಲ್ಲಿ ರಾಷ್ಟ್ರಪತಿ ಭವನದ ಮ್ಯೂಸಿಯಂ ಕಾಂಪ್ಲೆಕ್ಸ್‌ ಇದೆ. ಸರ್ಕ್ನೂಟ್‌ 3ರಲ್ಲಿ ಮೊಘಲ್‌ ಗಾರ್ಡನ್‌, ಹರ್ಬಲ್‌ ಗಾರ್ಡನ್‌, ಮ್ಯೂಸಿಕಲ್‌ ಗಾರ್ಡನ್‌ ಹಾಗೂ ಸ್ಪಿರಿಚ್ಯುಯಲ್‌ ಗಾರ್ಡನ್‌ಗಳಿವೆ.

ಪ್ರಯಾಣಕ್ಕಿರುವ ವಾಹನಗಳು
ಅಸಲಿಗೆ, ರಾಷ್ಟ್ರಪತಿಯವರ ಪ್ರಯಾಣಕ್ಕಾಗಿ ಉತ್ಕೃಷ್ಟ ವಿನ್ಯಾಸ, ಗರಿಷ್ಠ ಮಟ್ಟದ ಸುರಕ್ಷತೆಯಿರುವ ಕಾರನ್ನು ನೀಡಲಾಗಿರುತ್ತದೆ. ಆದರೆ, ಅದರ ವಿನ್ಯಾಸದ ವಿವರಗಳನ್ನು ಸಾರ್ವಜನಿಕವಾಗಿ ಸರಕಾರ ಪ್ರಕಟಿಸುವುದಿಲ್ಲ. ಹಾಗೆ ಪ್ರಕಟಿಸುವುದು ದೇಶದ ಪ್ರಥಮ ಪ್ರಜೆಯ ಸುರಕ್ಷತಾ ನಿಯಮಗಳ ಉಲ್ಲಂಘನೆಯೆಂದೇ ಪರಿಗಣಿಸಲಾಗುತ್ತದೆ.
ಆದರೆ, ರಾಷ್ಟ್ರಪತಿಯವರ ಅಧಿಕೃತ ವಾಹನಕ್ಕೆ ಸಂಬಂಧಿಸಿದಂತೆ ಬಾಹ್ಯರೂಪದಲ್ಲಿ ಕಾಣುವ ಕೆಲವು ವಿಶೇಷಗಳನ್ನು ಹಂಚಿಕೊಳ್ಳಲು ಅವಕಾಶವಿದೆ. ಮೊದಲ ವಿಶೇಷವೇನೆಂದರೆ, ಈ ವಾಹನಕ್ಕೆ ನಂಬರ್‌ಪ್ಲೇಟ್‌ ಇರುವುದಿಲ್ಲ. ಅದರ ಬದಲಿಗೆ ರಾಷ್ಟ್ರ ಲಾಂಛನದ ಪ್ರತಿಕೃತಿಯನ್ನು ಅಳವಡಿಸ ಲಾಗಿರುತ್ತದೆ. ಅಂದಹಾಗೆ, ರಾಷ್ಟ್ರಪತಿಯವರು ಬಳಸುತ್ತಿರುವ ಕಾರು, ಮರ್ಸಿಡಿಸ್‌ ಮೆಬ್ಯಾಕ್‌ ಎಸ್‌600 ಪುಲ್‌ವುನ್‌ ಗಾರ್ಡ್‌. ಇದನ್ನು ಕಳೆದ ವರ್ಷ ಖರೀದಿಸಲಾಗಿದ್ದು, ಸ್ವಾತಂತ್ರ್ಯ ದಿನಕ್ಕೆ ಒಂದು ದಿನ ಮುಂಚೆ ರಾಷ್ಟ್ರಪತಿಯವರ ಸೇವೆಗೆ ನೀಡಲಾಗಿತ್ತು.
ಇನ್ನು, “ಕಾರ್‌ಬ್ಲಾಗ್‌ ಇಂಡಿಯಾ’ದ ಪ್ರಕಾರ, ಸುರಕ್ಷತೆಯ ವಿಚಾರದಲ್ಲಿ ಈ ಕಾರು ಹಲವಾರು ರೀತಿಯ ಸುರಕ್ಷತಾ ಸೌಕರ್ಯಗಳನ್ನು ಹೊಂದಿದ್ದು ಅವು ಈ ಕೆಳಗಿನ ದಾಳಿಗಳನ್ನು ತಡೆಯಬಲ್ಲದಾಗಿದೆ.

ಹಲವಾರು ವಾಹನಗಳು
ಮರ್ಸಿಡಿಸ್‌ ಮೆಬ್ಯಾಕ್‌ ಕಾರು ಮಾತ್ರವಲ್ಲದೆ ರಾಷ್ಟ್ರಪತಿ ಭವನದ ಗ್ಯಾರೇಜಿನಲ್ಲಿ ಹಲವಾರು ಐಶಾರಾಮಿ ಕಾರುಗಳಿವೆ. ಈ ಹಿಂದಿನ ರಾಷ್ಟ್ರಪತಿ ಬಳಸಿದ್ದ ಕಪ್ಪು ಬಣ್ಣದ ಮರ್ಸಿಡಿಸ್‌-ಬೆಂಝ್ ಕಂಪನಿಯ ಆರ್ಮರ್ಡ್‌ ಲಿಮ್ಯೂಸೈನ್‌ ಕಾರು ಕೂಡ ಈ ಕಾರುಗಳ ಪಟ್ಟಿಯಲ್ಲಿ ಸೇರಿದೆ. ಅಂದಹಾಗೆ, ಹಿಂದಿನ ರಾಷ್ಟ್ರಪತಿಗಳು ಕ್ಯಾಡಿಲ್ಯಾಕ್‌, ರೋಲ್ಸ್‌ ರಾಯ್ಸ ಕಾರುಗಳನ್ನು ಬಳಸಿದ್ದರು.

ರಜಾಕಾಲದ 2 ಸ್ಥಳಗಳು
ರಾಷ್ಟ್ರಪತಿಯಾದವರಿಗೆ ರಾಷ್ಟ್ರಪತಿ ಭವನ ಮಾತ್ರವಲ್ಲದೆ ದೇಶದ ಇನ್ನೂ ಎರಡು ಕಡೆ ಇರುವ ಬೃಹತ್‌ ಅಧಿಕೃತ ಬಂಗಲೆಗಳಲ್ಲಿ ರಜೆಯ ಅವಧಿಯಲ್ಲಿ ವಾಸ್ತವ್ಯ ಹೂಡಲು ಅವಕಾಶವಿರುತ್ತದೆ. ವರ್ಷಕ್ಕೆರಡು ಬಾರಿ ಇಲ್ಲಿಗೆ ರಾಷ್ಟ್ರಪತಿಗಳು ತಮ್ಮ ಕುಟುಂಬ ಸಮೇತ ಬರಬಹುದು. ಅವರ ಜೊತೆಗೆ, ರಾಷ್ಟ್ರಪತಿ ಭವನದ ಸಿಬ್ಬಂದಿ, ಕಚೇರಿಯ ಸಿಬ್ಬಂದಿ ಹಾಗೂ ಕಚೇರಿಯ ಪ್ರಮುಖ ಯಂತ್ರೋಪಕರಣಗಳು ಇಲ್ಲಿಗೆ ಬರುತ್ತವೆ.

ಶಿಮ್ಲಾದ ಮಶೋಬ್ರದಲ್ಲಿ “ದ ರಿಟ್ರೀಟ್‌ ಬಿಲ್ಡಿಂಗ್‌’ ಎಂಬ ನಿವಾಸವಿದೆ. ಇದೊಂದು ಗಿರಿಧಾಮವಾಗಿದ್ದು ಸುಂದರವಾದ ಕಾನನ, ಬೆಟ್ಟ ಗುಡ್ಡಗಳು, ಮನ ಸೆಳೆಯುವ ಪ್ರಾಕೃತಿಕ ಸೌಂದರ್ಯವಿದೆ. 1850ರಲ್ಲಿ ಈ ನಿವಾಸವನ್ನು ಮರಮುಟ್ಟುಗಳಿಂದ ನಿರ್ಮಿಸಲಾಗಿದ್ದು, 10,628 ಚದುರಡಿ ವಿಸ್ತೀರ್ಣದಲ್ಲಿದೆ.

ಹೈದರಾಬಾದ್‌ನಲ್ಲಿರುವ ರಾಷ್ಟ್ರಪತಿ ನಿವಾಸಂ, ಅಲ್ಲಿನ ಬೋಲಾರಾಮ್‌ ಎಂಬ ಪ್ರಾಂತ್ಯದಲ್ಲಿದೆ. ಇದು ಮೊದಲಿಗೆ ಹೈದರಾಬಾದ್‌ ನಿಜಾಮರ ನಿವಾಸವಾಗಿತ್ತು. ಸ್ವಾತಂತ್ರ್ಯ ನಂತರ ಇದನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ. 1860ರಲ್ಲಿ ನಿರ್ಮಿಸಲಾದ ಕಟ್ಟಡವಿದಾಗಿದ್ದು 90 ಎಕರೆ ವಿಸ್ತೀರ್ಣದಲ್ಲಿದೆ. ಒಂದು ಅಂತಸ್ತಿನ ಕಟ್ಟಡದಲ್ಲಿ ಡೈನಿಂಗ್‌ ಹಾಲ್‌, ಸಿನಿಮಾ ಹಾಲ್‌, ದರ್ಬಾರ್‌ ಹಾಲ್‌ ಸೇರಿ 11 ಕೊಠಡಿಗಳಿವೆ. ಈ ನಿವಾಸಕ್ಕೆ ರಾಷ್ಟ್ರಪತಿಗಳು ಸಾಮಾನ್ಯವಾಗಿ ವರ್ಷಕ್ಕೊಂದು ಬಾರಿ ಆಗಮಿಸುತ್ತಾರೆ.

ಶಿಕ್ಷಕಿಯಿಂದ ಮೇಡಂ ಪ್ರಸಿಡೆಂಟ್‌ ವರೆಗೆ…
ಒಡಿಶಾದ ಮಯೂರ್‌ಗಂಜ್‌ ಜಿಲ್ಲೆಯ ಉಪಾರ್‌ಬೆಡ ಎಂಬ ಹಳ್ಳಿಯಲ್ಲಿ 1958ರ ಜೂ. 20ರಂದು, ದಕ್ಷಿಣ ಏಷ್ಯಾದಲ್ಲಿ ಕಂಡುಬರುವ ಸಂತಾಲಿ ಎಂಬ ಆದಿವಾಸಿಗಳ ಸಮುದಾಯದಲ್ಲಿ ಇವರು ಜನಿಸಿದರು. ಅವರ ತಂದೆ, ತಾತನವರು ಹಳ್ಳಿ ಪಂಚಾಯಿತಿಯ ಅಧ್ಯಕ್ಷರಾಗಿದ್ದವರು. ಬಾಲ್ಯದಲ್ಲಿ ಓದಿನಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು ಪ್ರಾಧ್ಯಾಪಕಿಯಾಗಿ ತಮ್ಮ ವೃತ್ತಿಜೀವನ ಆರಂಭಿಸಿದ್ದರು.ಅವರ ಮನೆಯವರು, ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದ ಶ್ಯಾಮ್‌ ಚರಣ್‌ ಮುರ್ಮು ಎಂಬುವರೊಂದಿಗೆ ಮದುವೆ ಮಾಡಿಕೊಟ್ಟಿದ್ದರು. ಆದರೆ, 2014ರಲ್ಲಿ ಶ್ಯಾಮ್‌ ಅವರು ನಿಧನ ಹೊಂದಿದರು. ದಂಪತಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬ ಹೆಣ್ಣು ಮಗಳಿದ್ದು, ಗಂಡು ಮಕ್ಕಳಿಬ್ಬರೂ ಮೃತಪಟ್ಟಿದ್ದಾರೆ.

ಪ್ರಾಧ್ಯಾಪಕಿಯಾಗಿದ್ದ ಅವರು, ಒಡಿಶಾದ ರಾಯ್‌ರಂಗಾಪುರದಲ್ಲಿರುವ ಶ್ರೀ ಅರಬಿಂದೋ ಇಂಟಿಗ್ರಲ್‌ ಎಜುಕೇಶನ್‌ ಆ್ಯಂಡ್‌ ರಿಸರ್ಚ್‌ ಇನ್ಸಿಟಿಟ್ಯೂಟ್‌ನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಆನಂತರ, ಒಡಿಶಾ ಸರಕಾರದ ನೀರಾವರಿ ಇಲಾಖೆಯಲ್ಲಿ ಜೂನಿಯರ್‌ ಅಸಿಸ್ಟಂಟ್‌ ಆಗಿಯೂ ಸೇವೆ ಸಲ್ಲಿಸಿದ್ದರು.

ರಾಜಕೀಯ ಜೀವನ
1997ರಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದ ಮುರ್ಮು, ರಾಯ್‌ರಂಗಾನಗರ ಪಂಚಾಯಿತಿಗೆ ಕೌನ್ಸಿಲರ್‌ ಆಗಿ ಅದೇ ವರ್ಷ ಆಯ್ಕೆಯಾಗಿದ್ದರು. 2000ನೇ ಇಸವಿಯಲ್ಲಿ ಅವರು ಅದೇ ಪಂಚಾಯಿತಿಯ ಅಧ್ಯಕ್ಷರಾಗಿದ್ದರು. ಅದೇ ವರ್ಷ, ಬಿಜೆಪಿಯ ರಾಷ್ಟ್ರೀಯ ಎಸ್‌ಟಿ ಮೋರ್ಚಾಕ್ಕೆ ಉಪಾಧ್ಯಕ್ಷ ರಾಗಿ ನೇಮಕಗೊಂಡರಲ್ಲದೆ, ಆ ವರ್ಷ ನಡೆದ ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ರಾಯ್‌ರಂಗಾಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾದರು. ಆಗ, ರಚನೆಯಾದ ಬಿಜೆಪಿ- ಬಿಜು ಜನತಾದಳ ಸಮ್ಮಿಶ್ರ ಸರಕಾರದಲ್ಲಿ ವಾಣಿಜ್ಯ ಇಲಾಖೆಯ ಸ್ವತಂತ್ರ ಸಚಿವೆಯಾಗಿ (2000-02), ಮೀನುಗಾರಿಕೆ ಮತ್ತು ಪ್ರಾಣಿ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಸಚಿವರಾಗಿ (2002- 04)ಲ್ಲಿ ಸೇವೆ ಸಲ್ಲಿಸಿದ್ದರು. ಸಚಿವರಾಗಿ ಅವರು ಸಲ್ಲಿಸಿದ ಸೇವೆಯನ್ನು ಗುರುತಿಸಿ ಒಡಿಶಾ ಸರಕಾರ, ಶ್ರೇಷ್ಠ ಶಾಸಕರಿಗಾಗಿ ನೀಡಲಾಗುವ ನೀಲಕಂಠ ಪ್ರಶಸ್ತಿಯನ್ನು ಅವರಿಗೆ 2007ರಲ್ಲಿ ನೀಡಿ ಗೌರವಿಸಿತ್ತು.

ರಾಜ್ಯಪಾಲರಾಗಿ ಸೇವೆ
2015ರಲ್ಲಿ ಕೇಂದ್ರ ಸರಕಾರ ಅವರನ್ನು ಜಾರ್ಖಂಡ್‌ನ‌ ರಾಜ್ಯಪಾಲರಾಗಿ ನೇಮಿಸಿತ್ತು. ಈ ಮೂಲಕ, ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ಮೊದಲ ಬಾರಿಗೆ ರಾಜ್ಯಪಾಲರ ಸ್ಥಾನ ಅಲಂಕರಿಸಿದ ಹೆಗ್ಗಳಿಕೆಗೆ ಮುರ್ಮು ಅವರು ಪಾತ್ರರಾಗಿದ್ದರು.

ರಾಷ್ಟ್ರಪತಿಯವರ ಭದ್ರತಾ ಸಿಬ್ಬಂದಿ
ಭೂಸೇನೆಯಲ್ಲಿ ಅತಿ ಹಿರಿಯ ಯೋಧರನ್ನೇ ರಾಷ್ಟ್ರಪತಿಗಳ ಭದ್ರತಾ ಪಡೆಯಲ್ಲಿ ನಿಯೋಜಿಸ ಲಾಗುತ್ತದೆ. ಇವರ ಪಡೆಗೆ ದ ಪ್ರಸಿಡೆಂಟ್ಸ್‌ ಬಾಡಿಗಾರ್ಡ್‌ (ಪಿಬಿಜಿ) ಪಡೆ ಎಂದು ಹೇಳಲಾಗುತ್ತದೆ. ಈ ಪಡೆಯ ಒಂದು ಭಾಗವಾಗಿ ಅಶ್ವದಳವಿರುತ್ತದೆ. ಹಾಗಾಗಿ, ಇಡೀ ವಿಶ್ವದಲ್ಲಿ ರಾಷ್ಟ್ರಪತಿಯವರಿಗೆ ಅಶ್ವದಳದ ಕಾವಲು ಇರುವುದು ಭಾರತದಲ್ಲಿ ಮಾತ್ರ ಎಂಬ ಹೆಗ್ಗಳಿಕೆ ಇದೆ. ಇನ್ನು ಶಾಂತಿಯ ವಾತಾವರಣವಿದ್ದಾಗ ರಾಷ್ಟ್ರಪತಿಗಳ ಸುರಕ್ಷತಾ ಪಡೆಯಾಗಿ ಕಾರ್ಯನಿರ್ವಹಿಸುವ ಪಿಬಿಜಿಯು ಯುದ್ಧಕಾಲದಲ್ಲಿ ಸೇನೆಯಲ್ಲಿ ಸೇರಿಕೊಂಡು ಯುದ್ಧದಲ್ಲೂ ಭಾಗವಹಿಸಬಲ್ಲುದು. ಈ ಪಡೆಗೆ ಪ್ಯಾರಾಟ್ರೂಪರ್‌ ತರಬೇತಿ ನೀಡಲಾಗಿರುತ್ತದಾದ್ದರಿಂದ ಇವರಿಗೆ ಯುದ್ಧದಲ್ಲಿ ಭಾಗವಹಿಸಲು ಅವಕಾಶವಿದೆ.

ನಿವೃತ್ತಿಯ ನಂತರ …
– ಸದ್ಯದ ಪ್ರಕಾರ, ತಿಂಗಳಿಗೆ 1.5 ಲಕ್ಷ ರೂ. ಪಿಂಚಣಿ
– ಮಾಜಿ ರಾಷ್ಟ್ರಪತಿಯವರ ಪತ್ನಿಗೆ ಮಾಸಿಕ 30 ಸಾವಿರ ಪಿಂಚಣಿ.
– ಪೀಠೊಪಕರಣಯುಕ್ತವಾದ, ಬಾಡಿಗೆ ರಹಿತ ಬಂಗಲೆ (8ನೇ ಮಾದರಿಯ ನಿವಾಸ).
– ಎರಡು ಲ್ಯಾಂಡ್‌ಲೈನ್‌ ಫೋನ್‌ ಕನೆಕ್ಷನ್‌ ಹಾಗೂ ಒಂದು ಮೊಬೈಲ್‌ ಕನೆಕ್ಷನ್‌.
– ಐವರು ಖಾಸಗಿ ಸಿಬ್ಬಂದಿ. ಇವರ ವಾರ್ಷಿಕ ವೆಚ್ಚ 60 ಸಾವಿರ ರೂ. ಸರಕಾರದಿಂದ ಪಾವತಿ.
– ಆಜೀವ ಪರ್ಯಂತ ರೈಲು ಮತ್ತು ವಿಮಾನ ಸೇವೆ.

ಗಟ್ಟಿಗಿತ್ತಿ ದ್ರೌಪದಿ ಮುರ್ಮು
ಒಡಿಶಾದ ಬುಡಕಟ್ಟು ಸಮುದಾಯಕ್ಕೆ ಸೇರಿರುವ ದ್ರೌಪದಿ ಮುರ್ಮು ಅವರು, ರಾಜಕೀಯವಾಗಿ ಒಂದೊಂದೇ ಮೆಟ್ಟಿಲು ಹತ್ತಿದರೂ, ವೈಯಕ್ತಿಕವಾಗಿ ಮಾತ್ರ ಭಾರೀ ನೋವನ್ನೇ ಅನುಭವಿಸಿದ್ದಾರೆ. 2009ರಿಂದ 2014ರ ವರೆಗೆ ಮುರ್ಮು ಅವರು ತಮ್ಮದೇ ಕುಟುಂಬದ ಒಟ್ಟು ಮೂವರನ್ನು ಕಳೆದುಕೊಂಡರು. ಇದು ಅವರನ್ನು ಅತ್ಯಂತ ನೋವಿಗೆ ದೂಡಿತ್ತು. 2009ರ ಮೇನಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡ ಅವರು, ಇದಾದ 5 ತಿಂಗಳಲ್ಲಿ ಪುತ್ರ ಲಕ್ಷ್ಮಣ್‌ ಅವರನ್ನು ಅನಿರೀಕ್ಷಿತವಾಗಿ ಕಳೆದುಕೊಂಡರು. ಆಗ ತೀರಾ ನೋವುಂಡವರಂತೆ ಕಂಡ ಅವರು, ಬ್ರಹ್ಮಕುಮಾರಿಯರ ಆಶ್ರಮಕ್ಕೆ ಸೇರಿದ್ದರು. 2013ರಲ್ಲಿ ಅವರ ಎರಡನೇ ಪುತ್ರ ಕೂಡ ಅಪಘಾತಕ್ಕೀಡಾಗಿ ಸಾವಿಗೀಡಾದರು. ಆಗಲೂ ಬ್ರಹ್ಮಕುಮಾರಿಯರ ಆಶ್ರಮದಲ್ಲೇ ಇದ್ದ ಅವರು, ಈ ವೇಳೆ ಧೈರ್ಯವಾಗಿಯೇ ನೋವನ್ನು ಎದುರಿಸಿದರು. ಇದಾದ ಒಂದು ವರ್ಷದಲ್ಲೇ ತಮ್ಮ ಪತಿ, ಬ್ಯಾಂಕ್‌ ಉದ್ಯೋಗಿಯಾಗಿದ್ದ ಶ್ಯಾಮ್‌ ಅವರನ್ನೂ ಕಳೆದುಕೊಂಡರು. ಸದ್ಯ ಇವರಿಗೆ ಇತಿಶ್ರೀ ಎಂಬ ಪುತ್ರಿ ಇದ್ದು, ಇವರು ಬ್ಯಾಂಕ್‌ ಉದ್ಯೋಗಿಯಾಗಿದ್ದಾರೆ.

ಬಿಜೆಪಿಯ ಮಸೂದೆ ಮರಳಿಸಿದ್ದರು!
ಆರಂಭದಿಂದಲೂ ತಮ್ಮ ಬುಡಕಟ್ಟು ಜನಾಂಗದವರ ಏಳಿಗೆಗಾಗಿ ಶ್ರಮಿಸುತ್ತಿದ್ದ ಮುರ್ಮು ಅವರು, ತಮ್ಮ ಇಬ್ಬರು ಪುತ್ರರು ಮತ್ತು ಪತಿ ಸಾವನ್ನಪ್ಪಿದ ಮೇಲೆ ಇವರ ಹೆಸರಿನಲ್ಲಿಯೇ ಶ್ಯಾಮ್‌ ಅವರ ಗ್ರಾಮ ಪಹದ್‌ಪುರದಲ್ಲಿ ಶಾಲೆಯೊಂದನ್ನು ತೆರೆದಿದ್ದಾರೆ. ಸದ್ಯ ಇದರಲ್ಲಿ 60 ಮಕ್ಕಳು ಕಲಿಯುತ್ತಿದ್ದಾರೆ. ಹಾಗೆಯೇ 2015 ರಲ್ಲಿ ಕೇಂದ್ರ ಸರಕಾರ ಮುರ್ಮು ಅವರನ್ನು ಜಾರ್ಖಂಡ್‌ನ‌ ರಾಜ್ಯಪಾಲರನ್ನಾಗಿ ಮಾಡಿತು. ಇದನ್ನು ಬುಡಕಟ್ಟು ಸಮುದಾಯಗಳು ಸ್ವಾಗತಿಸಿದವು. ಅಷ್ಟೇ ಅಲ್ಲ, ಇವರ ಅವಧಿಯಲ್ಲಿ ಜಾರ್ಖಂಡ್‌ ರಾಜ ಭವನ ಜನಸಾಮಾನ್ಯರಿಗೆ ಎಂದಿಗೂ ತೆರೆದಿತ್ತು. ಅಲ್ಲದೆ, ಅಲ್ಲಿನ ಬಿಜೆಪಿ ಸರಕಾರವೇ ತಂದಿದ್ದ ಆದಿವಾಸಿ ಗಳಿಗೆ ಎರವಾಗಬಹುದಾಗಿದ್ದ ಮಸೂದೆಯನ್ನು ಒಪ್ಪದೇ ವಾಪಸ್‌ ಕಳಿಸಿದ್ದರು. ಅಂದರೆ, ದಶಕಗಳ ಹಿಂದಿನ ಚೋಟಾ ನಾಗ್ಪುರ ಟೆನೆನ್ಸಿ(ಸಿಎನ್‌ಟಿ)ಕಾಯ್ದೆಗೆ ತಿದ್ದುಪಡಿ ತರಲು ಸರಕಾರ ಮುಂದಾಗಿತ್ತು. ಅಂದರೆ, ಈ ಕಾಯ್ದೆ ಪ್ರಕಾರ, ಆದಿವಾಸಿಗಳು, ಸರಕಾರದ ಒಪ್ಪಿಗೆ ಪಡೆಯದೇ ತಮ್ಮ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯ ನಡೆಸಬಹುದಾಗಿತ್ತು. ಇದರ ಬದಲಾವಣೆಗೆ ಮುಂದಾದಾಗ, ಆಗಿನ ಸಿಎಂ ರಘುವರ್‌ ದಾಸ್‌ ಅವರನ್ನು ಕರೆಸಿ, ತಿದ್ದುಪಡಿಯ ಬಗ್ಗೆ ವಿವರಣೆ ಕೇಳಿ, ಅದನ್ನು ವಾಪಸ್‌ ಕಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next