Advertisement

ಗದ್ದಲದಲ್ಲೇ 6 ಮಸೂದೆಗಳ ಮಂಡನೆ

12:13 AM Jul 27, 2023 | Team Udayavani |

ಹೊಸದಿಲ್ಲಿ: ವಿಪಕ್ಷಗಳ ತೀವ್ರ ಪ್ರತಿಭಟನೆ ನಡುವೆಯೇ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು, ಲೋಕಸಭೆಯಲ್ಲಿ 6 ಮಸೂದೆಗಳನ್ನು ಮಂಡಿಸಿದೆ. ಇದರಲ್ಲಿ ಜಮ್ಮುಕಾಶ್ಮೀರಕ್ಕೆ ಸೇರಿದ ನಾಲ್ಕು ಮಸೂದೆಗಳಿದ್ದವು! ಜಮ್ಮುಕಾಶ್ಮೀರ ಮರುವಿಂಗಡಣೆ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆ ಇದರಲ್ಲಿ ಮಹತ್ವದ್ದು. ಈ ನಡುವೆ ಲೋಕಸಭೆ-ರಾಜ್ಯಸಭೆಯ ಕಲಾಪಗಳನ್ನು ದಿನದ ಮಟ್ಟಿಗೆ ರದ್ದುಪಡಿಸಲಾಗಿದೆ.

Advertisement

ಮಣಿಪುರ ಹಿಂಸಾ ಚಾರದ ಬಗ್ಗೆ ಚರ್ಚೆ ನಡೆಸಲು ವಿಪಕ್ಷ‌ಗಳು ಪಟ್ಟು ಹಿಡಿದಿದ್ದೇ ಇದಕ್ಕೆ ಕಾರಣ.

ಕೇಂದ್ರ ಗೃಹಖಾತೆ ಸಹಾಯಕ ಸಚಿವರಾದ ನಿತ್ಯಾನಂದ ರಾಯ್‌ ಅವರು, ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಮಸೂದೆ ಹಾಗೂ ಜಮ್ಮುಕಾಶ್ಮೀರ ಮರು ವಿಂಗಡಣೆ ಕಾಯ್ದೆ (ತಿದ್ದುಪಡಿ) ಮಸೂದೆ ಮತ್ತು ಜಮ್ಮುಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ ಅನ್ನು ಧ್ವನಿಮತದ ಮೂಲಕ ಮಂಡಿಸಿದ್ದಾರೆ.

ಬಳಿಕ ಕೇಂದ್ರ ಸಚಿವರಾದ ವೀರೇಂದ್ರ ಕುಮಾರ್‌ ಹಾಗೂ ಅರ್ಜುನ್‌ ಮುಂಡಾ ಅವರು ಅನುಕ್ರಮವಾಗಿ ಸಂವಿಧಾನ (ಜಮ್ಮು-ಕಾಶ್ಮೀರ) ಪರಿಶಿಷ್ಟ ಜಾತಿಗಳ ಆದೇಶ (ತಿದ್ದುಪಡಿ) ಮಸೂದೆ 2023 ಮತ್ತು ಸಂವಿಧಾನ (ಜಮ್ಮು-ಕಾಶ್ಮೀರ) ಪರಿಶಿಷ್ಟ ಪಂಗಡಗಳ ಆದೇಶ (ತಿದ್ದುಪಡಿ ) ಮಸೂದೆ 2023 ಅನ್ನು ಮಂಡಿಸಿದ್ದಾರೆ. ಅನಂತರ ಕೇಂದ್ರ ಸಚಿವ ಪಹ್ಲಾದ್‌ ಜೋಷಿ ಅವರು ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಹಾಗೂ ತಿದ್ದುಪಡಿ) ಮಸೂದೆ 2023 ಅನ್ನು ಮಂಡಿಸಿದ್ದಾರೆ. ಇವಿಷ್ಟು ಸಂದರ್ಭದಲ್ಲಿ ವಿಪಕ್ಷ‌ಗಳು ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಯಲ್ಲಿ ನಿರತವಾಗಿದ್ದವು. ಹಾಗಾಗಿ ಎಲ್ಲವೂ ಗದ್ದಲದಲ್ಲೇ ನಡೆದುಹೋಯಿತು.

ಅರಣ್ಯ ಸಂರಕ್ಷಣೆ ತಿದ್ದುಪಡಿ ಮಸೂದೆ ಪಾಸ್‌: 6 ಮಸೂದೆಗಳ ಮಂಡನೆ ಬೆನ್ನಲ್ಲೇ ಅರಣ್ಯ (ಸಂರಕ್ಷಣೆ) ತಿದ್ದುಪಡಿ ಮಸೂದೆ-2023ಕ್ಕೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದೆ. ಅರಣ್ಯ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿಯಿಂದ, ಭಾರತದ ಗಡಿಯಿಂದ 100 ಕಿ.ಮೀ. ವ್ಯಾಪ್ತಿಯಲ್ಲಿರುವ ಅರಣ್ಯವನ್ನು ಹೊರಗಿಡುವುದೇ ಇದರಲ್ಲಿ ಮುಖ್ಯಾಂಶವಾಗಿದೆ.

Advertisement

ಕಣಿವೆಯಲ್ಲಿ 30 ಸಾವಿರ ಉದ್ಯೋಗ ಭರ್ತಿ: ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿ­ಸಿದ ಬಳಿಕ ಆದಂಥ ಆಡಳಿತ ಸುಧಾರಣೆ ಬಗ್ಗೆಯೂ ಕೇಂದ್ರ ಸರಕಾರ ಮಾಹಿತಿ ನೀಡಿದೆ. ಆಡಳಿತವು ಈವರೆಗೆ 29,295 ಖಾಲಿ ಇದ್ದ ಉದ್ಯೋಗಗಳನ್ನು ಭರ್ತಿಗೊಳಿಸಿದ್ದು, ಇನ್ನು 7,924 ಉದ್ಯೋಗ ಖಾಲಿ ಇರುವುದಾಗಿ ಘೋಷಿ­ಸಿದೆ, ಈ ಪೈಕಿ ಈಗಾಗಲೇ 2,504 ಹುದ್ದೆಗಳಿಗೆ ಪರೀಕ್ಷೆಯನ್ನೂ ನಡೆಸಲಾಗಿದೆ ಎಂದು ಮಾಹಿತಿ ನೀಡಿದೆ.

ವೈರಲ್‌ ಆದ 2019ರ ಮೋದಿ ಅವಿಶ್ವಾಸ ಹೇಳಿಕೆ
2019ರಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ಸಂಸತ್‌ನಲ್ಲಿ ಮಾತನಾಡಿದ್ದ ಮೋದಿ, 2023ರಲ್ಲಿ ನಿಮಗೆ ಅವಿಶ್ವಾಸ ಮಂಡಿಸಲು ಇನ್ನೊಂದು ಅವಕಾಶ ಸಿಗಲಿದೆ ಎಂದು ವಿಪಕ್ಷ‌ಗಳನ್ನು ಅಣಕಿಸಿದ್ದರು! ಅದು ಆ ಬಾರಿ ಸಂಸತ್‌ನಲ್ಲಿ ಅವರು ಮಾಡಿದ ಕೊನೆಯ ಭಾಷಣ. ಪ್ರಸ್ತುತ ಕಾಂಗ್ರೆಸ್‌ ನೇತೃತ್ವದ ಐಎನ್‌ಡಿಐಎ ಅವಿಶ್ವಾಸ ಗೊತ್ತುವಳಿಗೆ ಸಜ್ಜಾಗಿರುವಂತೆಯೇ ಮೋದಿಯ ಹಳೆಯ ಹೇಳಿಕೆ ವೈರಲ್‌ ಆಗಿದೆ. 2018ರಲ್ಲಿ ತೆಲುಗುದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರ ನೇತೃತ್ವದಲ್ಲಿ ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವನ್ನು ಮೋದಿ ಸರಕಾರ ತಲೆಕೆಳ­ಗಾಗಿಸಿತ್ತು.

ಎಕ್ಸ್‌ಪ್ರೆಸ್‌ ವೇನಲ್ಲಿ ಬಾಹುಬಲಿ ಬೇಲಿ

ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ ವೇಗಳಲ್ಲಿ ಸುಗಮ ಸಂಚಾರ ಖಾತರಿ ಪಡಿಸಿಕೊಳ್ಳುವುದರ ಜತೆಗೆ ಜಾನುವಾರು­ಗಳು ಮತ್ತು ಇತರೆ ಪ್ರಾಣಿಗಳ ರಕ್ಷಣೆ ಹಿತದೃಷ್ಟಿಯಿಂದ ಬಿದಿರಿನಲ್ಲಿ ಬೇಲಿಗಳನ್ನು ನಿರ್ಮಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಈ ಯೋಜನೆಗೆ ಬಾಹುಬಲಿ ಬೇಲಿ ಎಂದು ಹೆಸರನ್ನಿಡಲಾಗಿದ್ದು, ಪ್ರಾಯೋಗಿಕವಾಗಿ ಛತ್ತೀಸ್‌ಗಢದಲ್ಲಿ ಪರೀಕ್ಷೆ ನಡೆಸಿ, ಅಲ್ಲಿ ಯಶಸ್ವಿಯಾದರೆ ಎಲ್ಲ ಕಡೆ ವಿಸ್ತೀರ್ಣ­ಗೊಳಿಸುವುದಾಗಿ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

ಅಹ್ಮದಿಯಾರನ್ನು ಹೊರಗಿಡಲು ವಕ್ಫ್ಗೆ ಅಧಿಕಾರವಿಲ್ಲ

ಅಹ್ಮದಿಯಾ ಸಮುದಾಯವನ್ನು ಕಾಫಿರರು ಎಂದು ಘೋಷಿಸಿ, ಇಸ್ಲಾಂನಿಂದ ಹೊರಗಿಡಲು ಆಂಧ್ರಪ್ರದೇಶ ವಕ್ಫ್ ಮಂಡಳಿ ಹೊರಡಿಸಿರುವ ನಿರ್ಣಯವನ್ನು ಕೇಂದ್ರ ಅಲ್ಪಸಂಖ್ಯಾಕ ವ್ಯವಹಾರಗಳ ಸಚಿವೆ ಸ್ಮತಿ ಇರಾನಿ ವಿರೋಧಿಸಿದ್ದಾರೆ. ಅಲ್ಲದೇ ದೇಶದ ಯಾವುದೇ ವ್ಯಕ್ತಿಯನ್ನು ಅಥವಾ ಸಮುದಾಯವನ್ನು ಧರ್ಮದಿಂದ ಬಹಿಷ್ಕರಿಸುವ ಹಕ್ಕು ವಕ್ಫ್ ಮಂಡಳಿಗೆ ಇಲ್ಲವೆಂದು ತಿಳಿಸಿದ್ದಾರೆ.

ಆಂಧ್ರಪ್ರದೇಶ ವಕ್ಫ್ ಮಂಡಳಿಯ ನಿರ್ಣಯಕ್ಕೆ ಮುಸ್ಲಿಂ ಸಂಘಟನೆ ಜಮಿಯತ್‌ ಉಲೇಮಾ-ಎ-ಹಿಂದ್‌ ಬೆಂಬಲ ಸೂಚಿಸಿದ್ದರ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಸಚಿವೆ ಉತ್ತರಿಸಿದ್ದಾರೆ. ಸಂಸತ್‌ ಕಾಯ್ದೆಯನ್ನು ಯಾರೂ ಮೀರುವಂತಿಲ್ಲ, ನಿಯಮಗಳು ಯಾವ ಸಂಘಟನೆಗಳಿಗೂ ಹೊರತಲ್ಲ. ಅಹ್ಮದಿಯಾರನ್ನು ಹೊರಗಿಟ್ಟಿರುವ ನಿರ್ಣಯದ ಬಗ್ಗೆ ಆಂಧ್ರಪ್ರದೇಶ ಕಾರ್ಯದರ್ಶಿಗೆ ಉತ್ತರ ಕೇಳಿದ್ದೇವೆ. ಪ್ರತಿಕ್ರಿಯೆ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಫ‌ತ್ವಾಗಳೆಲ್ಲ ಸರಕಾರಿ ಆದೇಶವಲ್ಲ, ಕಾನೂನು ಎಲ್ಲರಿಗೂ ಒಂದೇ ಎಂದಿದ್ದಾರೆ.

ಮೈಕ್‌ ಆಫ್ ಆಗಿದ್ದು ಸ್ವಾಭಿಮಾನಕ್ಕೆ ಹಾಕಿದ ಸವಾಲು
ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡುತ್ತಿರು­ವಂತೆಯೇ ಮೈಕ್‌ ಆಫ್ ಆಗಿದೆ. ಆಡಳಿತಾರೂಢ ಪಕ್ಷದ ವಿರುದ್ಧ ಮಾತನಾಡಲು ಅವಕಾಶವೇ ನೀಡದಂತೆ ಸದನದಲ್ಲಿ ಮೈಕ್‌ ಆಫ್ ಮಾಡಲಾಗುತ್ತಿದೆ ಎಂದು ವಿಪಕ್ಷಗಳು ಆರೋಪ ಹೊರಿಸಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ.

ಇದರ ವಿರುದ್ಧ ಕೆಂಡವಾಗಿರುವ ಖರ್ಗೆ ” ಸರಕಾರದ ಸೂಚನೆಗೆ ತಕ್ಕಂತೆ ಸದನವನ್ನು ನಡೆಸಿದರೆ ಅದು ಪ್ರಜಾಪ್ರಭುತ್ವ ಹೇಗಾಗುತ್ತದೆ? ನನ್ನ ಮೈಕ್‌ ಆಫ್ ಮಾಡುವ ಮೂಲಕ ಸದನದಲ್ಲಿ ನನ್ನ ಅಭಿಪ್ರಾಯ ಮಂಡಿಸಲು ಸಂವಿಧಾನ ನೀಡಿರುವ ಹಕ್ಕನ್ನು ಉಲ್ಲಂ ಸಿದಂತಾಗಿದೆ. ಅಷ್ಟೇ ಅಲ್ಲದೇ ಇದು ನನ್ನ ಸ್ವಾಭಿಮಾನಕ್ಕೆ ಸವಾಲು ಹಾಕಿದೆ’ ಎಂದು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಖರ್ಗೆ ಅವರ ಮಾತನ್ನು ಮೊಟಕುಗೊಳಿಸಲು ಮೈಕ್‌ ಆಫ್ ಮಾಡಿದ್ದಲ್ಲ, ಉಪಸಭಾಪತಿ ಮಧ್ಯಪ್ರವೇಶಿಸಿ­ದರ ಕಾರಣ ಆಫ್ ಮಾಡಲಾಗಿದೆ ಎಂದು ಸ್ಪೀಕರ್‌ ಧನ್ಕರ್‌ ಅವರು ಸ್ಪಷ್ಟನೆ ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next