ಹುಬ್ಬಳ್ಳಿ: ಕಳೆದೆರಡು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜೈ ಎಂದಿರುವ ಹು-ಧಾ ಪೂರ್ವ ಕ್ಷೇತ್ರದಲ್ಲೀಗ ಲೋಕಸಭೆ ಚುನಾಣೋತ್ತರದ ಬಲಾಬಲದ ಚರ್ಚೆ ಜೋರಾಗಿದ್ದು, ಕೈ ಭದ್ರಕೋಟೆ ಛಿದ್ರವಾಗಲಿದೆ ಎಂಬುದು ಕೇಸರಿ ಪಡೆ ಲೆಕ್ಕಾಚಾರವಾದರೆ, ತನ್ನ ಅಭ್ಯರ್ಥಿಗೆ ಹೆಚ್ಚಿನ ಲೀಡ್ ದೊರೆಯಲಿದೆ ಎಂಬ ಉತ್ಸಾಹ ಕೈ ಪಾಳಯದ್ದಾಗಿದೆ.
ಹಿಂದಿನ ಚುನಾವಣೆ ಬಲಾಬಲ: ಪೂರ್ವ ಕ್ಷೇತ್ರದಲ್ಲಿ ಹೆಚ್ಚಾಗಿ ಅಲ್ಪಸಂಖ್ಯಾತರ ಮತಗಳು ಪ್ರಬಲವಾಗಿರುವುದರಿಂದ ಕಾಂಗ್ರೆಸ್‌ಗೆ ಲಾಭದಾಯಕ ಎಂಬುದು ಸಾಮಾನ್ಯ ಲೆಕ್ಕಾಚಾರ. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ನಡುವಿನ ಸೆಣಸಾಟದಲ್ಲಿ ಈ ಕ್ಷೇತ್ರದಲ್ಲಿ ಪ್ರಹ್ಲಾದ ಜೋಶಿ 55,903 ಮತಗಳನ್ನು ಪಡೆದರೆ ವಿನಯ ಕುಲಕರ್ಣಿ 64,038 ಮತಗಳನ್ನು ಗಿಟ್ಟಿಸಿಕೊಂಡಿದ್ದರು. ಮೋದಿಯ ಅಬ್ಬರ, ಯುಪಿಎ ಸರಕಾರದ ವೈಫಲ್ಯದ ಪ್ರಚಾರದ ನಡುವೆಯೂ ವಿನಯ ಕುಲಕರ್ಣಿ 8135 ಮತಗಳ ಲೀಡ್ ಪಡೆದುಕೊಂಡಿದ್ದರು.
ಕಾಂಗ್ರೆಸ್ ಪ್ರಚಾರ, ಸಭೆಗಳು, ಚುನಾವಣಾ ತಂತ್ರಗಾರಿಕೆ ಹಾಗೂ ಕಳೆದ ಬಾರಿಗಿಂತ ಈ ಚುನಾವಣೆಯನ್ನು ಅಭ್ಯರ್ಥಿ ವಿನಯ ಕುಲಕರ್ಣಿ ಹಾಗೂ ಸ್ಥಳೀಯ ಶಾಸಕ ಪ್ರಸಾದ ಅಬ್ಬಯ್ಯ ಗಂಭೀರವಾಗಿ ಪರಿಗಣಿಸಿ ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರ ಸುತ್ತಾಡಿದ್ದಾರೆ. ಕ್ಷೇತ್ರ ವ್ಯಾಪ್ತಿಯ ಹಳೇ ಹುಬ್ಬಳ್ಳಿ, ಮಂಟೂರ ರಸ್ತೆ, ಎಸ್.ಎಂ. ಕೃಷ್ಣ ನಗರ, ಮಸ್ತಾನ ಸೋಫಾ, ಗಣೇಶ ನಗರ, ಮುಲ್ಲಾ ಓಣಿ, ಯಲ್ಲಾಪುರ ಓಣಿ ಸೇರಿದಂತೆ ಕೆಲ ಪ್ರದೇಶಗಳ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳು ಬೇರೆಡೆ ಹೋಗದು ಎಂಬುದು ಕೈ ಕಾರ್ಯಕರ್ತರ ವಿಶ್ವಾಸ.
ಹಿಂದಿನ ಎರಡು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಡೆದ ಅಂತರವನ್ನು ಲೋಕಸಭೆಯಲ್ಲಿ ಉಳಿಸಿಕೊಳ್ಳಲು ಸಾಧ್ಯವಿಲ್ಲ. 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿ ಅಭ್ಯರ್ಥಿಗಿಂತ 12,831 ಮತಗಳ ಅಂತರದಿಂದ ಗೆದ್ದಿದ್ದರು. 2018ರಲ್ಲಿ 21,467 ಮತಗಳ ಹೆಚ್ಚು ಅಂತರ ಸಾಧಿಸಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಡೆದ ಲೀಡ್ 8135 ಮತಗಳು ಮಾತ್ರ.
Advertisement
ಕಳೆದ ಐದು ವರ್ಷಗಳ ಚುನಾವಣೆ ಫಲಿತಾಂಶ ನೋಡಿದಾಗ ಹು-ಧಾ ಪೂರ್ವ ಕ್ಷೇತ್ರದ ಮತದಾರರು ಹಸ್ತಕ್ಕೆ ಹೆಚ್ಚು ಒಲವು ತೋರಿರುವುದು ಸ್ಪಷ್ಟವಾಗುತ್ತದೆ. 2013 ಹಾಗೂ 2018 ವಿಧಾನಸಭೆ, 2014 ಲೋಕಸಭೆ ಚುನಾವಣೆಯಲ್ಲಿ ಎರಡು ಪಕ್ಷದ ಅಭ್ಯರ್ಥಿಗಳು ಪಡೆದ ಮತಗಳನ್ನು ನೋಡಿದಾಗ ಕೈ ಅಭ್ಯರ್ಥಿಗೆ ಅದೃಷ್ಟ ಖುಲಾಯಿಸಿದೆ. ಕ್ಷೇತ್ರದಲ್ಲಿ ಹೇಳುವಷ್ಟರ ಮಟ್ಟಿಗೆ ಜೆಡಿಎಸ್ ಪ್ರಾಬಲ್ಯ ಹೊಂದಿಲ್ಲ. ಆದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿರುವುದು ಮೈತ್ರಿ ಅಭ್ಯರ್ಥಿಗೆ ಹೆಚ್ಚಿನ ಲೀಡ್ ದೊರೆಯಲಿದೆ ಎನ್ನುವ ಅಭಿಪ್ರಾಯ ಕ್ಷೇತ್ರದಲ್ಲಿದೆ. 2014ರಲ್ಲಿ ಶೇ. 66.46 ಮತದಾನವಾಗಿದ್ದು, ಈ ಬಾರಿ ಶೇ.71.56 ಮತದಾನವಾದೆ. ಶೇ. 5.01 ಹೆಚ್ಚಿನ ಮತಗಳು ತಮ್ಮ ಅಭ್ಯರ್ಥಿ ಕೈ ಹಿಡಿಯಲಿದೆ ಎನ್ನುವ ಲೆಕ್ಕಾಚಾರ ಉಭಯ ಪಕ್ಷದ ನಾಯಕರಲ್ಲಿದೆ.
Related Articles
Advertisement
ಮತದಾನಕ್ಕೆ ಒಂದು ವಾರ ಇದ್ದಾಗ ದೊಡ್ಡ ಸದ್ದು ಮಾಡಿದ ಲಿಂಗಾಯತ ಧರ್ಮ ವಿಚಾರ ತಮ್ಮ ಪಕ್ಷಕ್ಕೆ ವರ್ಕೌಟ್ ಆಗಲಿದೆ ಎನ್ನುವ ಲೆಕ್ಕಾಚಾರ ಎರಡು ಪಕ್ಷದಲ್ಲಿದೆ. ಇಲ್ಲಿ ಬಹಿರಂಗಕ್ಕಿಂತ ಹೆಚ್ಚಾಗಿ ಗೌಪ್ಯವಾಗಿಯೇ ಈ ವಿಚಾರ ದೊಡ್ಡ ಕೆಲಸ ಮಾಡಿದೆ. ಈ ವಿಚಾರದಲ್ಲಿ ಎರಡು ಪಕ್ಷಗಳಿಂದ ತಂತ್ರ-ಪ್ರತಿ ತಂತ್ರಗಾರಿಕೆ ನಡೆದಿದೆಯಾದರೂ ಯಾರಿಗೆ ಅದೃಷ್ಟವಾಗಿ ಪರಿಣಮಿಸಲಿದೆ ಎಂಬುದು ಚರ್ಚೆಗೆ ಆಹಾರವಾಗಿದೆ.
ಮೋದಿ ಅಲೆ, ಕ್ಷೇತ್ರದಲ್ಲಾದ ಅಭಿವೃದ್ಧಿ ಕಾರ್ಯ, ಕಾಂಕ್ರಿಟ್ ರಸ್ತೆಗಳು, ಪಕ್ಷದ ಬಲಿಷ್ಠ ಸಂಘಟನೆ, ಕಾರ್ಯಕರ್ತರ ಪರಿಶ್ರಮ ಯಶಸ್ವಿಯಾಗಲಿದೆ. ಶೇ.5.01 ಮತದಾನ ಹೆಚ್ಚಾಗಿದ್ದು, ಇವೆಲ್ಲವೂ ಹೊಸ ಮತದಾರರು. ಮೋದಿ ಆಡಳಿತಕ್ಕೆ ಬೆಂಬಲ ನೀಡಿದವರಾಗಿದ್ದಾರೆ ಎನ್ನುವ ವಿಶ್ವಾಸ ಕಮಲ ನಾಯಕರಲ್ಲಿದೆ. ತಮ್ಮ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರಿಗೆ 2 ರಿಂದ 3 ಸಾವಿರ ಮತಗಳ ಲೀಡ್ ದೊರೆಯಲಿದೆ ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿದೆ.
ಗರಿಷ್ಠ ಮತದಾನ ಯೋಜನೆಗೆ ಕೊಂಚ ಹಿನ್ನಡೆ:
ವಿವಿಧ ಅಂಶಗಳನ್ನು ಮುಂದಿಟ್ಟುಕೊಂಡು ತಮ್ಮ ಅಭ್ಯರ್ಥಿಗೆ ಲೀಡ್ ದೊರೆಯಲಿದೆ ಎಂಬುದು ಉಭಯ ಪಕ್ಷಗಳ ರಾಜಕೀಯ ನಾಯಕರ ಅಭಿಮತ. ಶೇ. 65 ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳು ಇಲ್ಲಿರುವುದರಿಂದ ಮೈತ್ರಿ ಅಭ್ಯರ್ಥಿಗೆ ಲೀಡ್ ದೊರೆಯಲಿದೆ. ಆದರೆ ವಿಧಾಸಭೆ ಹಾಗೂ ಸ್ಥಳೀಯ ಚುನಾವಣೆಗೆ ಹೋಲಿಸಿದರೆ ಲೋಕಸಭೆ ಚುನಾವಣೆಗೆ ಅಲ್ಪಸಂಖ್ಯಾತರು ಅಷ್ಟೊಂದು ಆಸಕ್ತಿ ತೋರಿಲ್ಲ ಎನ್ನುವ ಅಭಿಪ್ರಾಯ ಕ್ಷೇತ್ರದಲ್ಲಿದೆ. ಗರಿಷ್ಠ ಪ್ರಮಾಣದಲ್ಲಿ ಇವರನ್ನು ಬೂತ್‌ಗೆ ಕರೆದುಕೊಂಡು ಹೋಗಿ ಮತ ಹಾಕಿಸಬೇಕು ಎನ್ನುವ ಯೋಜನೆಗೆ ಒಂದಿಷ್ಟು ಹಿನ್ನಡೆಯಾಗಿದೆ ಎನ್ನಲಾಗುತ್ತಿದೆ.
•ಹೇಮರಡ್ಡಿ ಸೈದಾಪುರ