Advertisement

ಗ್ರಾಮಾಂತರ ಪ್ರದೇಶದಲ್ಲಿ ರಂಗೇರಿದ ಗ್ರಾಪಂ ಅಖಾಡ

02:55 PM Sep 02, 2020 | Suhan S |

ಮೈಸೂರು: ಗ್ರಾಮ ಪಂಚಾಯ್ತಿ ಚುನಾವಣೆ ದಿನಾಂಕ ಘೋಷಣೆಯಾಗುವ ಮೊದಲೆ ಗ್ರಾಮಾಂತರ ಪ್ರದೇಶಗಳಲ್ಲಿ ಚುನಾವಣೆ ಅಖಾಡ ರಂಗೇರಿದೆ. ಗ್ರಾಪಂ ಸದಸ್ಯರ ಅಧಿಕಾರವಧಿ ಕಳೆದ ಜೂನ್‌ ತಿಂಗಳಲ್ಲಿ ಮುಕ್ತಾಯವಾಗಿದ್ದು, ಕೊರೊನಾ ಹಿನ್ನೆಲೆ ಚುನಾವಣೆ ಮುಂದೂಡಲಾಗಿದೆ. ಜೊತೆಗೆ ಈಗಾಗಲೆ ಸರ್ಕಾರ ಗ್ರಾಪಂ ಸದಸ್ಯರ ಆಯ್ಕೆಗೆ ಮೀಸಲಾತಿ ಪಟ್ಟಿ ಪ್ರಕಟ ಮಾಡಿರುವುದರಿಂದ ಜಿಲ್ಲೆಯಲ್ಲಿ ಅಕಾಂಕ್ಷಿಗಳು ತೆರೆಮರೆಯಲ್ಲಿ ಸದ್ದಿಲ್ಲದೇ ಪ್ರಚಾರ ಆರಂಭಿಸಿದ್ದಾರೆ.

Advertisement

ಲಾಕ್‌ಡೌನ್‌ ಅವಧಿಯಲ್ಲಿ ನಗರದಿಂದ ಹಳ್ಳಿಗಳಿಗೆ ವಾಪಾಸ್ಸಾದ ಯುವಕರು ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆ ತೋರಿದ್ದು, ತಮ್ಮ ತಮ್ಮ ಊರುಗಳಲ್ಲಿ ಕೂಟ ಕಟ್ಟಿಕೊಂಡು ಮತಗಳನ್ನು ಸೆಳೆಯುವ ಕಾರ್ಯ ಆರಂಭವಾಗಿದೆ. ಜೊತೆಗೆ ತೋಟದ ಮನೆ, ಜಮೀನುಗಳಲ್ಲಿ ಗುಂಡು-ತುಂಡು ಪಾರ್ಟಿಗಳು ಹೆಚ್ಚುತ್ತಿವೆ.

ಮತಗಳ ಲೆಕ್ಕಾಚಾರ: ಮೈಸೂರು ಜಿಲ್ಲೆಯಲ್ಲಿ 266 ಗ್ರಾಮ ಪಂಚಾಯ್ತಿಗಳಿದ್ದು, ಆಯಾಯ ತಾಲೂಕುಗಳಲ್ಲಿ ಪಕ್ಷಾಧಾರಿತವಾದ ಚಟುವಟಿಕೆಗಳು ಗರಿಗೆದರಿವೆ. ಈಗಾಗಲೇ ಸದಸ್ಯರ ಆಯ್ಕೆಗೆ ಮೀಸಲಾತಿ ಪಟ್ಟಿ ಪ್ರಕಟವಾಗಿರುವುದರಿಂದ ಪ್ರತಿಹಳ್ಳಿಗಳಲ್ಲಿ ಜಾತಿವಾರು ಕುಟುಂಬಗಳ ಸಂಖ್ಯೆ ಮತ್ತು ಮತಗಳ ಸಂಖ್ಯೆಯ ಲೆಕ್ಕಾಚಾರ ನಡೆಯುತ್ತಿದೆ. ಆಕಾಂಕ್ಷಿಗಳು ಗ್ರಾಮಗಳಲ್ಲಿರುವ ಸಂಘ ಮತ್ತು ಸಂಸ್ಥೆಗಳಿಗೆ ವಿವಿಧ ಕೊಡುಗೆ, ಉಡುಗೊರೆ ನೀಡುವ ಮೂಲಕ ಓಲೈಕೆಯಲ್ಲಿ ತಲ್ಲೀನರಾಗಿದ್ದಾರೆ.

ಕುತೂಹಲ ಮೂಡಿಸಿದ ಚುನಾವಣೆ: ಸ್ವಾಭಾವಿಕವಾಗಿ ಗ್ರಾಮ ಪಂಚಾಯ್ತಿ ಚುನಾವಣೆಗಳು ಪಕ್ಷದ ಚಿಹ್ನೆಯಡಿ ನಡೆಯದಿದ್ದರೂ, ಅಭ್ಯರ್ಥಿಗಳ ಆಯ್ಕೆಯಂತೂ ಪಕ್ಷಗಳಿಂದಲೇ ಆಗುವುದರಿಂದ ಗ್ರಾಪಂ ಮಟ್ಟದಲ್ಲಿ ಹುರಿಯಾಳುಗಳ ಆಯ್ಕೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ತೊಡಗಿವೆ. ಜಿಲ್ಲೆಯಲ್ಲಿ ಸ್ಥಳೀಯ ಮಟ್ಟದ ಚುನಾವಣೆಗಳಲ್ಲಿ ಬಿಜೆಪಿ ಅಷ್ಟೇನು ಪ್ರಾಬಲ್ಯ ಸಾಧಿಸದೇ ಇರುವುದರಿಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಸ್ಪರ್ಧೆ ಏರ್ಪಡಲಿದೆ. ಹುಣಸೂರು, ಮೈಸೂರು ತಾಲೂಕು, ಎಚ್‌.ಡಿ. ಕೋಟೆ ತಾಲೂಕುಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದರೆ, ಪಿರಿಯಾಪಟ್ಟಣ, ಕೆ.ಆರ್‌.ನಗರ, ತಿ.ನರಸೀಪುರ ತಾಲೂಕಿನಲ್ಲಿ ಜೆಡಿಎಸ್‌ ಶಾಸಕರು ಅಧಿಕಾರದಲ್ಲಿದ್ದಾರೆ. ನಂಜನಗೂಡು ತಾಲೂಕಿನಲ್ಲಿ ಬಿಜೆಪಿ ಶಾಸಕರಿದ್ದರೂ, ಗ್ರಾಪಂ ಮಟ್ಟದಲ್ಲಿ ಬಿಜೆಪಿ ಬಲಿಷ್ಟವಾಗಿಲ್ಲ. ಒಟ್ಟಾರೆ ಜಿಲ್ಲೆಯಲ್ಲಿ ಗ್ರಾಮ ಪಂಚಾಯ್ತಿ ಚುನಾವಣ ಕಣ ಸಾಕಷ್ಟು ಕುತೂಹಲ ಮೂಡಿಸಿದೆ.

ಆಡಳಿತಾಧಿಕಾರಿಯೂ ಇದ್ದಾರೆ: ಜಿಲ್ಲೆಯಲ್ಲಿ 266 ಗ್ರಾಮ ಪಂಚಾಯಿತಿಗಳಿದ್ದು, ಇವುಗಳ ಅಧಿಕಾರವಧಿ ಬಹುತೇಕ ಜೂನ್‌ನಲ್ಲಿಯೇ ಅಂತ್ಯ ಕಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಲ್ಲ ಗ್ರಾಪಂಗಳಿಗೂ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದ್ದು, ಚುನಾವಣೆ ನಡೆದು ಹೊಸ ಚುನಾಯಿತ ಮಂಡಳಿ ಅಧಿಕಾರಕ್ಕೆ ಬರುವವರೆಗೂ ಇವರೇ ಮುಂದುವರಿಯಲಿದ್ದಾರೆ.

Advertisement

ಪಕ್ಷಗಳ ಪಾಲಿಗೆ ಸವಾಲು :  ಗ್ರಾಪಂ ಚುನಾವಣೆ ಪ್ರತಿ ರಾಜಕೀಯ ಪಕ್ಷಗಳ ಪಾಲಿಗೆ ಪ್ರತಿಷ್ಠೆಯಾಗಿದ್ದು, ಭವಿಷ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಗ್ರಾಪಂ ಮಟ್ಟದಲ್ಲಿ ಅಧಿಕಾರ ಹಿಡಿಯಬೇಕಾದ ಅನಿವಾರ್ಯವಿದೆ. ಜೊತೆಗೆ ಸರ್ಕಾರದ ಯೋಜನೆಯನ್ನು ತಳಮಟ್ಟಕ್ಕೆ ತಲುಪಿಸುವ ಜವಾಬ್ದಾರಿ ಇರುವುದರಿಂದ, ಈ ಮೂಲಕ ವರ್ಚಸ್ಸು ಹೆಚ್ಚಸಿಕೊಳ್ಳಲು ಶಾಸಕರಿಗೆ ಬೆಂಬಲಿಗರು ಅಧಿಕಾರದಲ್ಲಿ ಇರಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಮೂರು ಪಕ್ಷಗಳು ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಜಿಲ್ಲೆಯಲ್ಲಿ ಬಿಜೆಪಿ ಅಬ್ಬರ ಕಡಿಮೆ :  ಮೈಸೂರು ಜಿಲ್ಲೆಯಲ್ಲಿ ಗ್ರಾಪಂ, ತಾಪಂ ಹಾಗೂ ಜಿಪಂ ಚುನಾವಣೆಗಳಲ್ಲಿ ಬಿಜೆಪಿಗೆ ಅಸ್ತಿತ್ವ ಇಲ್ಲ. ಇದರ ಹೊರತಾಗಿಯೂ ಕಾಂಗ್ರೆಸ್‌-ಜೆಡಿಎಸ್‌ ನಡುವೆ ಹೋರಾಟ ಮಾಡಿ ಪಕ್ಷಕ್ಕೆ ಅಸ್ತಿತ್ವ ಕೊಡಿಸುವ ನಿಟ್ಟಿನಲ್ಲಿ ಬಿಜೆಪಿ ಮುಂದಾಗಿದೆ. ಇದಕ್ಕಾಗಿ ಅಗತ್ಯ ಸಿದ್ಧತೆಯೂ ನಡೆದಿದೆ. ಒಳರಾಜಕೀಯದ ಹೊರತಾಗಿಯೂ ಮುಂಬರುವ ಚುನಾವಣೆಯಲ್ಲಿ ತಳಮಟ್ಟದಲ್ಲಿ ಬೇರು ಬಿಡಬೇಕು ಎಂದು ಬಿಜೆಪಿ ಹಠಕ್ಕೆ ಬಿದ್ದಿದೆ. ಇದರ ಜೊತೆಗೆ ಕಾಂಗ್ರೆಸ್‌-ಜೆಡಿಎಸ್‌ ಗೂ ಪ್ರತಿಷ್ಠೆಯಾಗಿದ್ದು, ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಚುನಾವಣೆ ಎದುರಿಸಲು ಸಿದ್ಧವಾಗಿವೆ.

 ಟಿಕೆಟ್‌ಗೆ ದುಂಬಾಲು :  ಜಿಲ್ಲೆಯಲ್ಲಿ ಮೀಸಲಾತಿ ಪಟ್ಟ ಪ್ರಕಟಗೊಂಡ ಹಿನ್ನೆಲೆ ಸ್ಥಳೀಯ ನಾಯಕರು ಸೋಲು-ಗೆಲುವಿನ ಲೆಕ್ಕಾಚಾರ ಹಾಕಲಾಗುತ್ತಿದೆ. ಅಲ್ಲದೇ, ತಮಗೆ ಟಿಕೆಟ್‌ ನೀಡುವಂತೆ ಪಕ್ಷದ ತಾಲೂಕು ಅಧ್ಯಕ್ಷರು, ಶಾಸಕರು, ಸಚಿವರ ಹಿಂದೆ ಟಿಕೆಟ್‌ ಆಕಾಂಕ್ಷಿಗಳುದುಂಬಾಲು ಬಿದ್ದಿದ್ದಾರೆ. ಇದರ ನಡುವೆಯೇ ಬಿಜೆಪಿಯ ಕಾರ್ಯಕರ್ತರು, ಮುಖಂಡರು ಸ್ಥಳೀಯ ಮಟ್ಟದಲ್ಲಿ ಅಧಿಕಾರ ಹಿಡಿಯುವಸಲುವಾಗಿ ಗೆಲ್ಲುವ ಕುದುರೆಗಳನ್ನು ಗುರುತಿಸಿ, ಕಣಕ್ಕಿಳಿಸಲು ಸಜ್ಜಾಗಿದ್ದಾರೆ.

 

ಸತೀಸ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next