Advertisement

ತರಬೇತಿ ಕೇಂದ್ರದಲ್ಲಿ 50 ಜನರಿಗೆ ಚಿಕಿತ್ಸೆಗೆ ಸಿದ್ಧತೆ

05:22 PM Jul 05, 2020 | Suhan S |

ಶಿರಸಿ: ನಗರದಲ್ಲಿ ಒಂದೇ ದಿನ ಆರು ಜನರಿಗೆ ಕೋವಿಡ್ ಸೋಂಕು ತಗುಲಿದ್ದು ದೃಢವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಇಮ್ಮಡಿಸಿ ಶನಿವಾರ ಆತಂಕದ ದಿನವಾಗಿಸಿದೆ.

Advertisement

ಧಾರವಾಡದಿಂದ ಕರೆತರಲಾಗಿದ್ದ ಅಂತರಜಿಲ್ಲಾ ಚೋರನಿಗೆ ತಗುಲಿದ ಕೋವಿಡ್ ಸೋಂಕು ಪಂಡಿತ್‌ ಸಾರ್ವಜನಿಕ ಆಸ್ಪತ್ರೆ ಸಹಾಯಕಿ (ದಾಯಿ), ಮೂವರು ಉಪ ಬಂದೀಖಾನೆಯಲ್ಲಿದ್ದ ಕೈದಿಗಳಿಗೆ ತಗುಲುವಂತೆ ಆಗಿದೆ. ಚೋರನಿಗೆ ಎರಡನೇ ಬಾರಿ ಗಂಟಲ ದ್ರವ ತೆಗೆದಾಗ ನೆಗೆಟಿವ್‌ ಬಂದಿದ್ದು, ಧಾರವಾಡ ಜೈಲಿಗೆ ಸೇರಿದ್ದಾನೆ. ಮುಂಬೈನಿಂದ ಆಗಮಿಸಿ ಯಾರಿಗೂ ಹೇಳದೇ ವಾರಗಳ ಕಾಲ ಇದ್ದ ಹುಬ್ಬಳ್ಳಿ ರಸ್ತೆಯ ವ್ಯಕ್ತಿಯೊಬ್ಬನಿಂದ ಅಲ್ಲಿನ ಕಾಂಪ್ಲೆಕ್ಸನ ದೋಭಿಗೆ ಹಾಗೂ ಸಮೀಪದ ಖಾಸಗಿ ಆಸ್ಪತ್ರೆ ಲ್ಯಾಬ್‌ ಟೆಕ್ನಿಶಿಯನ್‌ಗೂ ಸೋಂಕು ತಗುಲು ಕಾರಣಾಗಿದೆ. ಮುಂಬೈನಿಂದ ಬಂದ ವ್ಯಕ್ತಿ ವಿರುದ್ಧ ಪೊಲೀಸ್‌ ದೂರು ದಾಖಲಿಸಿ ತಾಲೂಕು ಆಡಳಿತ ಕ್ವಾರಂಟೈನ್‌ ಮಾಡಿತ್ತು. ನಂತರ ಈತನಿಗೆ ಸೋಂಕು ತಗುಲಿತ್ತು. ಈತನಿಂದಲೇ ಈ ಇಬ್ಬರಿಗೆ ಸೋಂಕು ತಗುಲಿದೆ.

ಈ ಮಧ್ಯೆ ಬೆಂಗಳೂರಿನಲ್ಲಿ ಗಂಟಲು ದ್ರವ ಕೊಟ್ಟು ಶಿರಸಿಗೆ ಬಂದಿದ್ದ ವ್ಯಕ್ತಿಗೂ ಸೋಂಕು ಇದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದರಿಂದ ಈತನನ್ನು ಕಾರವಾರ ಆಸ್ಪತ್ರೆಗೆ ಕಳಿಸಲಾಗಿದೆ. ಪೊಲೀಸ್‌ ಅಧಿಕಾರಿಗಳಿಗೆ ಈತನ ವಿರುದ್ಧ ಕಾನೂನು ಕ್ರಮಕ್ಕೂ ಸೂಚಿಸಲಾಗಿದೆ. ಶಿರಸಿಯ ಮೂರು ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ. ಭಾನುವಾರ ಆ ಭಾಗದ ಜನರ ಗಂಟಲು ದ್ರವ ಸಂಗ್ರಹಿಸಲಾಗುತ್ತದೆ ಎಂದೂ ಎಸಿ ಡಾ| ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.

ಲಕ್ಷಣ ರಹಿತ ಸೋಂಕಿತರಿಗೆ ಶಿರಸಿಯಲ್ಲೇ ಚಿಕಿತ್ಸೆ :  ಕೋವಿಡ್ ಲಕ್ಷಣ ರಹಿತ ಸೋಂಕಿತರಿಗೆ ನಗರದ ಹುಬ್ಬಳ್ಳಿ ರಸ್ತೆಯ ಜಿಲ್ಲಾ ತರಬೇತಿ ಕೇಂದ್ರದಲ್ಲೇ ಚಿಕಿತ್ಸೆ ಕೊಡಿಸಲು ತಾಲೂಕು ಆಡಳಿತ ತೀರ್ಮಾನಿಸಿದೆ. ಈಗಾಗಲೇ 50 ಹಾಸಿಗೆಯನ್ನು ವ್ಯವಸ್ಥಿತವಾಗಿ ಸಿದ್ಧಗೊಳಿಸಲಾಗಿದ್ದು, ಸಹಾಯಕ ಆಯುಕ್ತ ಡಾ| ಈಶ್ವರ ಉಳ್ಳಾಗಡ್ಡಿ, ಡಿವೈಎಸ್‌ಪಿ ಗೋಪಾಲಕೃಷ್ಣ ನಾಯ್ಕ ಇತರರು ವ್ಯವಸ್ಥೆ ಪರಿಶೀಲಿಸಿದರು. ಶನಿವಾರ ರಾತ್ರಿ ಮೂವರು ಲಕ್ಷಣ ರಹಿತ ಸೋಂಕಿತರನ್ನು ಇಲ್ಲಿಗೆ ಸ್ಥಳಾಂತರಿಸಲಾಗಿದೆ.

 

Advertisement

ಹೊರ ರಾಜ್ಯ, ಬೆಂಗಳೂರಿನಿಂದ ಆಗಿಸುವ ಎಲ್ಲರೂ ತಾಲೂಕು ಆಡಳಿತಕ್ಕೆ ಮಾಹಿತಿ ನೀಡಬೇಕು. ಸಾರ್ವಜನಿಕರು ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಸ್ಯಾನಿಟೈಸರ್‌ ಬಳಕೆ ಕಡ್ಡಾಯವಾಗಿದೆ. ಭಾನುವಾರ ಸಂಪೂರ್ಣ ಲಾಕ್‌ಡೌನ್‌ ಇರಲಿದೆ. –ಡಾ| ಈಶ್ವರ ಉಳ್ಳಾಗಡ್ಡಿ, ಸಹಾಯಕ ಆಯುಕ್ತರು

Advertisement

Udayavani is now on Telegram. Click here to join our channel and stay updated with the latest news.

Next