Advertisement

ಅನಾಥ ಸ್ತ್ರೀಯರಿಗೆ ಆಶ್ರಮ ಆರಂಭಿಸಲು ಸಿದ್ಧತೆ

10:04 AM Jun 02, 2022 | Team Udayavani |

ಬಂಟ್ವಾಳ: ಅನಾಥ ಹೆಣ್ಣು ಮಕ್ಕಳು-ಮಹಿಳೆಯರಿಗೆ ಆಶ್ರಯ ಕಲ್ಪಿಸುವ ದೃಷ್ಟಿಯಿಂದ ಪಾಣೆ ಮಂಗಳೂರಿನ ಮಹಿಳೆಯೊಬ್ಬರು ಉಚಿತವಾಗಿ ಆಶ್ರಮ ನಿರ್ಮಾಣಕ್ಕೆ ಮುಂದಾಗಿದ್ದು, ನರಿಕೊಂಬು ರಸ್ತೆಯ ಮೊಗರ್ನಾಡಿನಲ್ಲಿ ತಮ್ಮ ಸ್ವಂತ ಜಮೀನಿನಲ್ಲಿ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ.

Advertisement

ಪಾಣೆಮಂಗಳೂರಿನ ಕುಮುದಾ ಜೆ.ಕುಡ್ವ ಆಶ್ರಮ ನಿರ್ಮಾಣಕ್ಕೆ ಮುಂದಾಗಿರುವ ಮಹಿಳೆ. ಸುಮಾರು 10 ವರ್ಷಗಳ ಹಿಂದೆಯೇ ಆಶ್ರಮ ನಿರ್ಮಾಣ ಮಾಡಬೇಕು ಎಂಬ ಇಚ್ಛೆ ಯೊಂದಿಗೆ 2011ರಲ್ಲಿ ಜೆ.ಕೆ.ಸೇವಾ ಟ್ರಸ್ಟ್‌ ಸ್ಥಾಪಿಸಿದ್ದರು. ಆದರೆ ಹಲವು ಕಾರಣಕ್ಕೆ ಆಶ್ರಮ ನಿರ್ಮಾಣ ಸಾಧ್ಯ ವಾಗಿರಲಿಲ್ಲ. ಪ್ರಸ್ತುತ ಆರಂಭಿಸುವ ಆಶ್ರಮದಲ್ಲಿ ಗರಿಷ್ಠ ಅಂದರೆ 100 ಮಂದಿಗೆ ಅವಕಾಶ ನೀಡುವ ಗುರಿಯನ್ನು ಇಟ್ಟುಕೊಂಡಿದ್ದಾರೆ.

ಮೊಗರ್ನಾಡಿನಲ್ಲಿ ತಮ್ಮ 53 ಸೆಂಟ್ಸ್‌ ಜಮೀನಿನಲ್ಲಿ ಆಶ್ರಮಕ್ಕಾಗಿ ಸುಸಜ್ಜಿತ ವಸತಿ ವ್ಯವಸ್ಥೆ, ಶೌಚಾಲಯ, ನೀರು, ವಿದ್ಯುತ್‌ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ. ಇದೇ ತಿಂಗಳಲ್ಲಿ ಆಶ್ರಮ ಆರಂಭಿಸುವ ಕುರಿತು ಸಿದ್ಧತೆ ನಡೆಸಿದ್ದಾರೆ. ಆ ಜಮೀನಿನಲ್ಲಿ ಶಿಥಿಲಾ ವಸ್ಥೆಯಲ್ಲಿದ್ದ ಕಟ್ಟಡವೊಂದನ್ನು ಆಶ್ರಮಕ್ಕೆ ಹೊಂದಿಕೊಳ್ಳುವ ರೀತಿ ನವೀಕರಣ ಗೊಳಿಸಿದ್ದಾರೆ.

ಆಶ್ರಮಕ್ಕೆ ಬಾಡಿಗೆ ಮೊತ್ತ

ಕುಮುದಾ ಜೆ.ಕುಡ್ವ ಪಾಣೆ ಮಂಗಳೂರಿನ ಕೇಂದ್ರ ಭಾಗದಲ್ಲಿ ವಾಣಿಜ್ಯ ಸಂಕೀರ್ಣವೊಂದನ್ನು ಹೊಂದಿದ್ದು, ಅದರ ಬಾಡಿಗೆ ಮೊತ್ತದಿಂದಲೇ ಆಶ್ರಮ ನಡೆಸುವುದಾಗಿ ತಿಳಿಸಿದ್ದಾರೆ. ಕುಮುದಾ ಅವರ ಇಬ್ಬರು ಮಕ್ಕಳು ಹೊರಗಿದ್ದು, ಪ್ರಸ್ತುತ ಅವರು ಒಬ್ಬರೇ ವಾಸಿಸುತ್ತಿದ್ದಾರೆ. ಆಶ್ರಮ ಆರಂಭವಾದ ಬಳಿಕ ಅವರು ಅಲ್ಲೇ ಉಳಿದುಕೊಳ್ಳುವ ಹಾಗೆ ಪ್ರತ್ಯೇಕ ಕೊಠಡಿ ಯೊಂದನ್ನು ನಿರ್ಮಿಸಿದ್ದಾರೆ.

Advertisement

ಜಮೀನಿನಲ್ಲಿ ಒಂದಷ್ಟು ತೆಂಗಿನ ಮರಗಳಿದ್ದು, ಅದರ ಆದಾಯವನ್ನೂ ಅಶ್ರ ಮಕ್ಕೆ ಬಳಕೆ ಮಾಡುತ್ತೇವೆ. ಉಳಿದಂತೆ ಆಶ್ರಮ ವಾಸಿಗಳಿಗೆ ಪ್ರಾರಂಭದಲ್ಲಿ ಅಡುಗೆಗೆ ವ್ಯವಸ್ಥೆ ಮಾಡಿ ಮುಂದೆ ಅವರೇ ಅಡುಗೆ ತಯಾರಿ ಮಾಡುವ ಆಲೋಚನೆಯನ್ನೂ ಹೊಂದಿದ್ದಾರೆ. ಹೆಣ್ಣು ಮಕ್ಕಳಿಂತ ಹಿರಿಯ ಮಹಿಳೆಯರಿಗೂ ಆಶ್ರಮದಲ್ಲಿ ಆಶ್ರಯ ನೀಡುವ ಆಲೋಚನೆ ಹೊಂದಿದ್ದು, ಆರೋಗ್ಯವಂತರಾಗಿರುವರಿಗೆ ಮಾತ್ರ ಅವಕಾಶ ಎನ್ನುತ್ತಾರೆ ಕುಮುದಾ.

ನಾಯಿ ಸಾಕುವ ಆಸಕ್ತಿ

ಪ್ರಾಣಿ ಪ್ರೇಮಿಯಾಗಿರುವ ಕುಮುದಾ ಹಿಂದೆ ಹತ್ತಾರು ನಾಯಿಗಳನ್ನು ಸಾಕುತ್ತಿದ್ದು, ಅದಕ್ಕೆ ಬೇಕಾದ ಆರೈಕೆಯನ್ನೂ ಸ್ವತಃ ಅವರೇ ಮಾಡುತ್ತಿದ್ದರು. ಆದರೆ ಪ್ರಸ್ತುತ ವಯಸ್ಸಾದ ಕಾರಣದಿಂದ ನಾಯಿಗಳನ್ನು ಸಾಕುವುದನ್ನು ಬಿಟ್ಟು ಬಿಟ್ಟಿದ್ದಾರೆ. ಆದರೆ ಮುಂದೆ ನಾಯಿಗಳನ್ನೂ ಸಾಕುವ ಯೋಜನೆಯೊಂದಿಗೆ ಅದಕ್ಕಾಗಿ ಪ್ರತ್ಯೇಕ ಗೂಡಿನ ವ್ಯವಸ್ಥೆಗಳನ್ನು ಮಾಡಿದ್ದಾರೆ.

10 ವರ್ಷಗಳ ಯೋಜನೆ

ಆಶ್ರಮ ಸ್ಥಾಪನೆಯ ಉದ್ದೇಶದಿಂದ 10 ವರ್ಷಗಳ ಹಿಂದೆಯೇ ಜಗದೀಶ್‌ ಕುಡ್ವಾ, ಕುಮುದಾ ಹೆಸರಿನಲ್ಲಿ ಜೆ.ಕೆ. ಸೇವಾ ಟ್ರಸ್ಟ್‌ ಸ್ಥಾಪಿಸಿದ್ದು, ಮುಂದೆ ಜೆ.ಕೆ.ಮಹಿಳಾ ಸೇವಾಶ್ರಮವನ್ನು ಆರಂಭಿಸಲಿದ್ದೇವೆ. ಅದಕ್ಕಾಗಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ. ಆಶ್ರಮವಾಸಿಗಳ ಆರೋಗ್ಯದ ದೃಷ್ಟಿಯಿಂದ ವೈದ್ಯರ ಜತೆಯೂ ಮಾತುಕತೆ ನಡೆಸಿದ್ದು, ಅವರು ಆಶ್ರಮಕ್ಕೆ ಬಂದು ಸೇವೆ ನೀಡುವ ಭರವಸೆ ನೀಡಿದ್ದಾರೆ. -ಕುಮುದಾ ಜೆ.ಕುಡ್ವ

Advertisement

Udayavani is now on Telegram. Click here to join our channel and stay updated with the latest news.

Next