Advertisement

ಹೊಟೇಲ್‌ ತ್ಯಾಜ್ಯ ನದಿಗೆ ಬಿಡಲು ಸಿದ್ಧತೆ: ಕಾಮಗಾರಿಗೆ ತಡೆ

10:08 PM Dec 19, 2019 | Sriram |

ಉಪ್ಪಿನಂಗಡಿ: ಇಲ್ಲಿನ ದೇವಸ್ಥಾನದ ಬಳಿಯ ಹೊಟೇಲ್‌ ಒಂದರಿಂದ ತ್ಯಾಜ್ಯವನ್ನು ನದಿಗೆ ಹಾಯಿಸುವ ಅಕ್ರಮ ವ್ಯವಸ್ಥೆಗೆ ಮುಂದಾಗಿದ್ದು, ನದಿಯಲ್ಲಿ ಇಂಗು ಗುಂಡಿ ತೆಗೆಯಲಾರಂಭಿಸಿದ್ದರು. ಸಾರ್ವಜನಿಕರ ದೂರಿನ ಮೇರೆಗೆ ಗ್ರಾಮ ಪಂಚಾಯತ್‌ ಹೊಟೇಲ್‌ ಮಾಲಕರಿಗೆ ಇಂಗು ಗುಂಡಿ ಮುಚ್ಚುವಂತೆ ಸೂಚಿಸಿದ್ದು, ಅದರಂತೆ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.

Advertisement

ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಎದುರುಗಡೆ ಇರುವ ಹೊಟೇಲ್‌ನವರು ನದಿಯಲ್ಲಿ ಇಂಗು ಗುಂಡಿ ನಿರ್ಮಿಸಿ ಹೊಟೇಲ್‌ನಿಂದ ಹೊರ ಹೋಗುವ ತ್ಯಾಜ್ಯ, ಮಲಿನ ನೀರನ್ನು ಪೈಪ್‌ ಮೂಲಕ ಇಂಗು ಗುಂಡಿಗೆ ಹಾಯಿಸಲು ಮುಂದಾಗಿದ್ದರು. ಹೀಗಾದಲ್ಲಿ ನದಿ ನೀರು ಮಲಿನವಾಗುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು. ಈ ಬಗ್ಗೆ ಗ್ರಾಮಸ್ಥರು ಗ್ರಾಮ ಪಂಚಾಯತ್‌ ಹಾಗೂ ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಗಾರ್ಡನ್‌ಗೂ ಹಾನಿ?
ಹೊಟೇಲ್‌ ಮಾಲಕರು ಇಂಗು ಗುಂಡಿ ತೆಗೆದ ಬಳಿಕ ಅದರ ಮೇಲಿನ ಮುಚ್ಚಳವನ್ನು ಕಾಂಕ್ರೀಟ್‌ ಸ್ಲಾéಬ್‌ ಮೂಲಕ ಮುಚ್ಚುವ ವ್ಯವಸ್ಥೆಗೆ ಮುಂದಾಗಿದ್ದರು. ದೇವಸ್ಥಾನದ ಗಾರ್ಡನ್‌ ಅನ್ನು ಕೆಡವಿ ಅದರ ಮೇಲೆ ಸ್ಲಾéಬ್‌ ಮಾಡಿದ್ದರು. ಹೀಗಾಗಿ ಗಾರ್ಡನ್‌ ಕೂಡಾ ಹಾನಿಯಾಗಿದೆ ಎನ್ನುವ ದೂರು ಕೂಡ ವ್ಯಕ್ತವಾಗಿದೆ.

ಕಾಮಗಾರಿ ಸ್ಥಗಿತ
ನದಿಯಲ್ಲಿ ಇಂಗು ಗುಂಡಿ ತೆಗೆಯುವ ಬಗ್ಗೆ ಬಂದ ದೂರಿನಂತೆ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ನದಿಯಲ್ಲಿ ಇಂಗು ಗುಂಡಿ ನಿರ್ಮಿಸದಂತೆ ಸೂಚನೆ ನೀಡಲಾಗಿದ್ದು, ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಹೊಟೇಲ್‌ ಬಳಿಯೇ ಇಂಗು ಗುಂಡಿ ನಿರ್ಮಿಸುವಂತೆ ಸೂಚನೆ ನೀಡಲಾಗಿದೆ ಎಂದು ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಕೆ. ಮಾಧವ ತಿಳಿಸಿದ್ದಾರೆ.

 ನದಿಯ ಪಾವಿತ್ರ್ಯತೆಗೆ ಧಕ್ಕೆ
ಇಂಗು ಗುಂಡಿ ಅವರವರ ನಿವೇಶನದಲ್ಲಿ ಮಾಡುವಂತೆ ಸೂಚನೆಯನ್ನು ಪದೇ ಪದೇ ನೀಡುತ್ತಲೇ ಬಂದಿದ್ದೇವೆ. ಆದರೆ ಕೆಲವೊಂದು ಮಂದಿ ನಿಯಮ ಮೀರಿ ವರ್ತಿಸುತ್ತಿದ್ದಾರೆ. ಪದೇ ಪದೇ ವಾಣಿಜ್ಯ, ವಸತಿ ಸೇರಿದಂತೆ ಸಭಾಭವನ ಉದ್ಯಮಿಗಳು ಇಂಗು ಗುಂಡಿ ನಿರ್ಮಿಸಲು ಕೊನೆಯ ಗಳಿಗೆಯಲ್ಲಿ ನದಿಗಳನ್ನು ಅತಿಕ್ರಮಿಸುತ್ತಿದ್ದಾರೆ. ನದಿಯ ಪಾವಿತ್ರ್ಯತೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಅಂತಹ ಪ್ರಕರಣಗಳು ಪಂಚಾಯತ್‌ನ ಗಮನಕ್ಕೆ ಬಂದಲ್ಲಿ ವ್ಯಾಪಾರ ಪರವಾನಿಗೆ ಸಹಿತ ಇತರ ದಾಖಲಾತಿಯನ್ನು ನೀಡುವಲ್ಲಿ ತಡೆಹಿಡಿಯಲಾಗುವುದು.
– ಅಬ್ದುಲ್‌ ರಹಿಮಾನ್‌ ಕೆರೆಮೂಲೆ,
ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷರು

Advertisement
Advertisement

Udayavani is now on Telegram. Click here to join our channel and stay updated with the latest news.

Next