Advertisement

ವಿಷ್ಣುವರ್ಧನ್‌ ನಾಟಕೋತ್ಸವಕ್ಕೆ ಸಿದ್ಧತೆ

11:49 AM Aug 20, 2019 | Team Udayavani |

ಪ್ರತಿವರ್ಷ ಸೆಪ್ಟೆಂಬರ್‌ ತಿಂಗಳು ಹತ್ತಿರ ಬರುತ್ತಿದ್ದಂತೆ ನಟ, ಸಾಹಸ ಸಿಂಹ ವಿಷ್ಣುವರ್ಧನ್‌ ಅಭಿಮಾನಿಗಳ ಅಭಿಮಾನ, ಸಂತೋಷ ಎರಡೂ ಇಮ್ಮಡಿಯಾಗುತ್ತದೆ. ಅದಕ್ಕೆ ಕಾರಣ ಸೆ. 18ಕ್ಕೆ ವಿಷ್ಣುವರ್ಧನ್‌ ಜನ್ಮದಿನ. ಹೌದು, ವಿಷ್ಣುವರ್ಧನ್‌ ಕನ್ನಡ ಚಿತ್ರರಂಗವನ್ನು ಅಗಲಿ ದಶಕವಾಗುತ್ತಾ ಬಂದರೂ, ಅಭಿಮಾನಿಗಳ ಮನದಲ್ಲಿ ಅವರ ನೆನಪು, ಚಿತ್ರಗಳು ಇಂದಿಗೂ ಹಸಿರಾಗಿಯೇ ಉಳಿದಿದೆ.

Advertisement

ಪ್ರತಿವರ್ಷ ಸೆ. 18ರಂದು ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸುತ್ತಾ ಬಂದಿರುವ ಅಭಿಮಾನಿಗಳು, ವಿಷ್ಣುವರ್ಧನ್‌ ಅವರನ್ನು ನೆನಪುಗಳಲ್ಲಿ ಜೀವಂತವಾಗಿರಿಸುತ್ತಿದ್ದಾರೆ. ಇನ್ನು ಈ ವರ್ಷ ಕೂಡ ಸೆ. 18 ಹತ್ತಿರ ಬರುತ್ತಿದ್ದಂತೆ, ವಿಷ್ಣುವರ್ಧನ್‌ ಜನ್ಮದಿನಕ್ಕೆ ಅಭಿಮಾನಿಗಳು ನಿಧಾನವಾಗಿ ತಯಾರಿ ಶುರು ಮಾಡಿಕೊಳ್ಳುತ್ತಿದ್ದಾರೆ.

ಪ್ರತಿವರ್ಷ ವಿಭಿನ್ನವಾಗಿ ಮತ್ತು ವಿಶೇಷವಾಗಿ “ಡಾ. ವಿಷ್ಣು ಸೇನಾ ಸಮಿತಿ’ಯ ನೇತೃತ್ವದಲ್ಲಿ ವಿಷ್ಣುವರ್ಧನ್‌ ಜನ್ಮದಿನವನ್ನು ಆಚರಿಸುತ್ತ ಬಂದಿರುವ ವಿಷ್ಣು ಅಭಿಮಾನಿಗಳು, ಈ ವರ್ಷ ಕೂಡ ಸೆ. 18 ರಂದು ವಿಷ್ಣುದಾದ ಜನ್ಮದಿನದ ಅಂಗವಾಗಿ “ಡಾ. ವಿಷ್ಣುವರ್ಧನ್‌ ನಾಟಕೋತ್ಸವ’ ಆಯೋಜಿಸಿದ್ದಾರೆ. ಸೆ. 18 ರಂದು ಆರಂಭವಾಗಲಿರುವ ಈ ನಾಟಕೋತ್ಸವ ಸೆ. 20ರ ವರೆಗೆ ಮೂರು ದಿನಗಳಕಾಲ ನಡೆಯಲಿದ್ದು, ದಿನ ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ವಿವಿಧ ನಾಟಕಗಳು ಪ್ರದರ್ಶನವಾಗಲಿವೆ.

ಇನ್ನು “ಡಾ. ವಿಷ್ಣುವರ್ಧನ್‌ ನಾಟಕೋತ್ಸವ’ದಲ್ಲಿ ಮೈಸೂರು ಕರ್ನಾಟಕ, ಕರಾವಳಿ ಕರ್ನಾಟಕ, ಉತ್ತರ ಕರ್ನಾಟಕ, ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಿಂದ ತಲಾ ಒಂದೊಂದು ರಂಗಭೂಮಿ ತಂಡಗಳು ಭಾಗವಹಿಸಲಿದ್ದು, ನಾಟಕವನ್ನು ಪ್ರದರ್ಶಿಸಲಿವೆ. ಈ ಮೂಲಕ ಇಡೀ ಕರ್ನಾಟಕವನ್ನು ಪ್ರತಿನಿಧಿಸುವ ನಾಟಕೋತ್ಸವ ನಡೆಸಲು ಅಭಿಮಾನಿಗಳು ತಯಾರಾಗಿದ್ದಾರೆ.

ಇದಲ್ಲದೆ “ಡಾ. ವಿಷ್ಣುವರ್ಧನ್‌ ನಾಟಕೋತ್ಸವ’ದ ಜೊತೆಗೆ ಪ್ರತಿದಿನ ವಿಷ್ಣುವರ್ಧನ್‌ ಗೀತೆಗಳ ಸಂಗೀತ ಸಂಜೆ, ಡಾ. ವಿಷ್ಣುವರ್ಧನ್‌ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ, ಕನ್ನಡ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ, ವಿಷ್ಣುವರ್ಧನ್‌ ಛಾಯಾಚಿತ್ರ ಪ್ರದರ್ಶನ ಸೇರಿದಂತೆ ಇನ್ನೂ ಹಲವು ಕಾರ್ಯಕ್ರಮಗಳು ನಡೆಯಲಿದೆ.

Advertisement

ಶುಭ ಕೋರಿದ ಸುದೀಪ್‌: ಮತ್ತೊಂದೆಡೆ “ಡಾ. ವಿಷ್ಣುವರ್ಧನ್‌ ನಾಟಕೋತ್ಸವ’ಕ್ಕೆ ಅಭಿಮಾನಿಗಳು ತಯಾರಿ ಆರಂಭಿಸಿರುವಂತೆಯೇ, ನಟ ಸುದೀಪ್‌ ಕೂಡ ಕಾರ್ಯಕ್ರಮಕ್ಕೆ ಶುಭ ಕೋರಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಸುದೀಪ್‌ “ಯಜಮಾನ್ರಿಗೊಂದು ರಂಗನಮನ.

ಡಾ. ವಿಷ್ಣು ಅವರ ಹೆಸರನ್ನು ಕನ್ನಡಿಗರ ಮನದಾಳದಲ್ಲಿ ಹಚ್ಚ ಹಸಿರಾಗಿರಿಸಲು ಅವರ ಅಭಿಮಾನಿಗಳಿಂದ ಡಾ. ವಿಷ್ಣುವರ್ಧನ ನಾಟಕೋತ್ಸವ ಎಂಬ ಅರ್ಥಪೂರ್ಣ ಕಾರ್ಯಕ್ರಮ ಸೆಪ್ಟೆಂಬರ್‌ 18 ರಿಂದ ಮೂರು ದಿನಗಳ ಕಾಲ ನಡೆಯಲಿದೆ. ಈ ರಂಗೋತ್ಸವ ಯಶಸ್ವಿಯಾಗಲಿ. ಯಜಮಾನರ ಹೆಸರು ಅಜರಾಮರವಾಗಲಿ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next