ಗಜೇಂದ್ರಗಡ: ಕೋಟೆ ನಾಡಿನಲ್ಲಿ ಎರಡನೇ ಬಾರಿಗೆ ಸಾಂಸ್ಕೃತಿಕ ವೈಭವ ಸಾರುವ ಉದ್ದೇಶದಿಂದ ಆಯೋಜಿಸಿರುವ ರಾಜ್ಯಮಟ್ಟದ ಯುವಜನ ಮೇಳಕ್ಕೆ ಭಾವೈಕ್ಯ ನಗರಿ ಗಜೇಂದ್ರಗಡ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ, ರಾಜ್ಯ ಯುವಜನ ಒಕ್ಕೂಟ ಆಶ್ರಯದಲ್ಲಿ 2019-20ನೇ ಸಾಲಿನ ರಾಜ್ಯಮಟ್ಟದಯುವಜನ ಮೇಳವನ್ನು ಫೆ. 14ರಿಂದ 16ರ ವರೆಗೆ ಗಜೇಂದ್ರಗಡದ ಎಪಿಎಂಸಿ ಎದುರಿನ ಬಯಲು ಜಾಗೆಯಲ್ಲಿ ಆಯೋಜಿಸಲಾಗಿದ್ದು, ಈಗಾಗಲೇ ಸಮಾರಂಭದ ಎಲ್ಲ ಸಿದ್ಧತೆಗಳು ಭರದಿಂದ ಸಾಗಿದೆ.
ಗಜೇಂದ್ರಗಡ ಐತಿಹಾಸಿಕವಾಗಿ ತನ್ನದೇ ಆದ ಹಿನ್ನೆಲೆ ಹೊಂದಿದೆ. ಮರಾಠ ಸಾಮಂತರು ಆಳ್ವಿಕೆಗೆ ಒಳಪಟ್ಟಿರುವ ಈ ಪ್ರದೇಶದಲ್ಲಿ ಜಾತಿ, ಮತ, ಭೇದ ಭಾವವಿಲ್ಲದೇ 18 ಮಠಗಳು, 18 ಮಸೀದಿಗಳು, 18 ಬಾವಿಗಳಿರುವುದು ವಿಶೇಷತೆಗೆ ಸಾಕ್ಷಿಯಾಗಿದೆ. ಈ ಹಿಂದೆ ಮೊದಲ ಬಾರಿಗೆ ಆಯ್ಕೆಯಾಗಿದ್ದ ಶಾಸಕ ಕಳಕಪ್ಪ ಬಂಡಿ ಅಧ್ಯಕ್ಷತೆಯಲ್ಲಿ ಡಿ. 20, 2008ರಲ್ಲಿ ಪ್ರಥಮ ಬಾರಿಗೆ ಗಜೇಂದ್ರಗಡದಲ್ಲಿ ರಾಜ್ಯಮಟ್ಟದ ಯುವಜನ ಮೇಳ ನಡೆಸಲಾಗಿತ್ತು. ಇದೀಗ ಎರಡನೇ ಬಾರಿಗೆ ನಡೆಸಲು ಸಿದ್ಧತೆ ನಡೆದಿದೆ.
ಸ್ಪರ್ಧಾಳುಗಳ ವಿವರ: ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಯುವಕ ಹಾಗೂ ಯುವತಿಯರಿಗೆ ಪ್ರತ್ಯೇಕ ಸ್ಪರ್ಧೆ ಏರ್ಪಡಿಸಲಾಗಿದೆ. ಭಾವಗೀತೆ ವೈಯಕ್ತಿಕ, ಲಾವಣಿ ವೈಯಕ್ತಿಕ, ರಂಗಗೀತೆ ವೈಯಕ್ತಿಕ, ಏಕಪಾತ್ರಾಭಿನಯ ವೈಯಕ್ತಿಕ, ಗೀಗಿಪದ 5 ಜನ, ಜಾನಪದ ಗೀತೆ 6 ಜನ, ಜಾನಪದ ನೃತ್ಯ 12 ಜನ, ಕೋಲಾಟ 12 ಜನ, ಭಜನೆ ಸ್ಪರ್ಧೆಯಲ್ಲಿ 8 ಜನ ಭಾಗವಹಿಸಬಹುದಾಗಿದೆ.
ಯುವಕರಿಗಾಗಿ ವೀರಗಾಸೆ 12 ಜನ, ಡೊಳ್ಳು ಕುಣಿತ 12 ಜನ, ದೊಡ್ಡಾಟ 15 ಜನ, ಸಣ್ಣಾಟ 12 ಜನ, ಯಕ್ಷಗಾನ 15 ಜನ, ಚರ್ಮವಾದ್ಯ ಮೇಳ 6 ಜನ ಹಾಗೂ ಯುವತಿಯರಿಗಾಗಿ ರಾಗಿ ಬೀಸುವ ಪದ ಇಬ್ಬರು, ಸೋಬಾನೆ ಪದ ನಾಲ್ವರು ಭಾಗವಹಿಸಬಹುದು. ಬೆಳಗಾವಿ, ಮೈಸೂರ, ಕಲಬುರಗಿ, ಬೆಂಗಳೂರ ವಿಭಾಗಗಳಿಂದ ಸುಮಾರ 784 ಸ್ಪರ್ಧಾಳುಗಳು, ಪ್ರತಿ ವಿಭಾಗದಿಂದ 2 ಜನ ವ್ಯವಸ್ಥಾಪಕರು ಪಾಲ್ಗೊಳ್ಳಲಿದ್ದಾರೆ.
ಸುಮಾರು 4 ಸಾವಿರ ಮಂದಿ ಏಕಕಾಲದಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಆಕರ್ಷಕ ವೇದಿಕೆ ನಿರ್ಮಿಸಲಾಗುತ್ತಿದ್ದು, ಸ್ಪರ್ಧಿಗಳು, ತೀರ್ಪುಗಾರರು, ಅಧಿಕಾರಿಗಳು, ಸ್ವಯಂ ಸೇವಕರು, ಪ್ರೇಕ್ಷಕರು ಸಹಿತ ಸಾವಿರಾರು ಜನ ಭಾಗವಹಿಸುವ ನಿರೀಕ್ಷೆ ಹೊಂದಿದ್ದಾರೆ. ರಾಜ್ಯಮಟ್ಟದ ಯುವಜನ ಮೇಳ ಇದಾಗಿರುವ ಕಾರಣ ಸಾಕಷ್ಟು ವಿಶೇಷತೆಗಳು ಇಲ್ಲಿರಲಿವೆ.