Advertisement

ಕೋವಿಡ್ ಆತಂಕ ಮಧ್ಯೆ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ

07:35 AM Jun 22, 2020 | Suhan S |

ದೇವದುರ್ಗ: ಕೋವಿಡ್ ಮಹಾಮಾರಿ ಮಧ್ಯೆಯೂ ರಾಜ್ಯ ಸರಕಾರ ಅಳೆದೂ ತೂಗಿ ಜೂ.25ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ತೀರ್ಮಾನಿಸಿದೆ. ತಾಲೂಕು ಆಡಳಿತ ಮತ್ತು ಶಿಕ್ಷಣ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪರೀಕ್ಷೆಗಾಗಿ ಎಲ್ಲ ಸಿದ್ಧತೆ ಪೂರ್ಣಗೊಳಿಸಿದೆ.

Advertisement

ತಾಲೂಕಿನಲ್ಲಿ 1,964 ಬಾಲಕರು, 2,710 ಬಾಲಕಿಯರು ಸೇರಿ ಒಟ್ಟು 3,674 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಇದರ ಜತೆ ದೂರದಉಡುಪಿ, ತುಮಕೂರು, ಧಾರವಾಡ, ಬೆಂಗಳೂರು ಸೇರಿ ಇತರೆಡೆ ಶಿಕ್ಷಣ ಪಡೆಯುತ್ತಿರುವ ತಾಲೂಕಿನ ಗ್ರಾಮೀಣ ಭಾಗದ 157 ವಿದ್ಯಾರ್ಥಿಗಳಿಗೆ ಸ್ವಗ್ರಾಮದಲ್ಲೇ ಪರೀಕ್ಷೆ ಬರೆಯಲು ಅನುಕೂಲ ಕಲ್ಪಿಸಲಾಗಿದೆ.

ಎಂಟು ಪರೀಕ್ಷಾ ಕೇಂದ್ರ: ದೇವದುರ್ಗದಲ್ಲಿ 2, ಜಾಲಹಳ್ಳಿ-2 ಅರಕೇರಾ-2, ಗಬ್ಬೂರು-1, ಮಸರಕಲ್‌-1 ಕೇಂದ್ರ ಸೇರಿ ತಾಲೂಕಿನಲ್ಲಿ ಒಟ್ಟು 8 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಇದಲ್ಲದೇ ಜಾಲಹಳ್ಳಿ ಜೆಜೆ ಪ್ರೌಢಶಾಲೆ, ಪಟ್ಟಣದ ಬಸವ ಶಾಲೆ, ಅರಕೇರಾದ ಆದರ್ಶ ವಿದ್ಯಾಲಯ, ಮಸರಕಲ್‌ನ ಎಂಎಚ್‌ಪಿಎಸ್‌ ಸೇರಿ 4 ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಕಾಯ್ದಿರಿಸಲಾಗಿದೆ.

ಕಟ್ಟುನಿಟ್ಟಿನ ಕ್ರಮ: ಪರೀಕ್ಷಾ ಕೇಂದ್ರದಲ್ಲಿ ನಕಲು ತಡೆಗೆ ಸಿಸಿ ಕ್ಯಾಮೆರಾ, ಕೇಂದ್ರದ ಸುತ್ತಲೂ 200 ಮೀಟರ್‌ 144 ಸೆಕ್ಷನ್‌ ಜಾರಿ ಮಾಡಲಾಗಿದೆ. ಪೊಲೀಸರನ್ನು ಬಂದೋಬಸ್ತ್ಗೆ ನಿಯೋಜಿಸ ಲಾಗಿದೆ. 12 ಜನ ಮೊಬೈಲ್‌ ಸ್ಕಾÌಡ್‌, ಸಿಆರ್‌ ಪಿಗಳನ್ನು ನಿಯೋಜನೆ ಮಾಡಲಾಗಿದೆ. ಅಧಿಕಾರಿಗಳು ಸೇರಿದಂತೆ ಕೇಂದ್ರಕ್ಕೆ ತಕ್ಕಂತೆ ಅಗತ್ಯ ಮೇಲ್ವಿಚಾರಕರು ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ವಸತಿ ನಿಲಯ ಆರಂಭ: ಕೋವಿಡ್ ಮಹಾಮಾರಿ ಹಿನ್ನೆಲೆಯಲ್ಲಿ ವಸತಿ ನಿಲಯಗಳಿಗೆ ರಜೆ ಘೋಷಿಸಲಾಗಿದೆ. ವಸತಿ ನಿಲಯದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಆಗಮಿಸಲಿದ್ದು, ಎರಡು ದಿನ ಮುಂಚಿತವಾಗಿಯೇ ವಸತಿ ನಿಲಯಗಳನ್ನು ಆರಂಭಿಸಲಾಗುತ್ತದೆ. ಕಿತ್ತೂರು ರಾಣಿ ಚನ್ನಮ್ಮ, ಏಕಲವ್ಯ ಸೇರಿ ಇತರೆ ವಸತಿ ನಿಲಯಗಳನ್ನು ಕ್ವಾರಂಟೈನ್‌ ಕೇಂದ್ರವಾಗಿ ಬಳಸಲಾಗುತ್ತಿದೆ. ಹೀಗಾಗಿ ಇಲ್ಲಿನ ವಿದ್ಯಾರ್ಥಿಗಳಿಗೆ ಬೇರೆಕಡೆ ವಸತಿ ನಿಲಯಗಳ ವ್ಯವಸ್ಥೆ ಮಾಡಲಾಗಿದೆ.

Advertisement

ಬಸ್‌ ವ್ಯವಸ್ಥೆ: ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಿಗೆ ಸಾರಿಗೆ ಇಲಾಖೆಯಿಂದ ಬಸ್‌ ವ್ಯವಸ್ಥೆ ಮಾಡಲಾಗಿದೆ. 66 ಮಾರ್ಗಗಳನ್ನು ಗುರುತಿಸಲಾಗಿದೆ.

ವಿದ್ಯಾರ್ಥಿಗಳ ತಪಾಸಣೆ: ಕೋವಿಡ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ವಿದ್ಯಾರ್ಥಿಗಳ ಥರ್ಮಲ್‌ ಸ್ಕ್ರೀನಿಂಗ್‌ ಮಾಡಲಾಗುತ್ತದೆ. ಇವರಲ್ಲಿ ಜ್ವರದ ಲಕ್ಷಣ ಕಂಡುಬಂದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುತ್ತದೆ. ಇನ್ನು ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಸ್‌ ಮಾಡಲಾಗುತ್ತದೆ. ಒಟ್ಟಾರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಅಗತ್ಯ ಮುಂಜಾಗ್ರತೆಯೊಂದಿಗೆ ಶಾಂತಿ ಮತ್ತು ಸುವ್ಯವಸ್ಥಿತವಾಗಿ ನಡೆಸಲು ಕ್ರಮ ವಹಿಸಲಾಗಿದೆ ಎಂದು ನೋಡಲ್‌ ಅಧಿಕಾರಿ ಸುರೇಶ ಪಾಟೀಲ ತಿಳಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಲಾಗಿದೆ. ವಿದ್ಯಾರ್ಥಿಗಳ ಥರ್ಮಲ್‌ ಸ್ಕ್ರೀನಿಂಗ್‌ ಮಾಡುವ ಜತೆಗೆ ಸ್ಯಾನಿಟೈಸರ್‌, ಮಾಸ್ಕ್ ಕಡ್ಡಾಯವಾಗಿ ಬಳಿಸಲಾಗುತ್ತದೆ. -ಆರ್‌.ಇಂದಿರಾ, ಕ್ಷೇತ್ರ ಶಿಕ್ಷಣಾಧಿಕಾರಿ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬಸ್‌ ವ್ಯವಸ್ಥೆ ಮಾಡಲಾಗುತ್ತಿದೆ. 66 ಮಾರ್ಗಗಳನ್ನು ಗುರುತಿಸಲಾಗಿದೆ.  –ಹಸನ್‌ ಅಲಿ, ಸಾರಿಗೆ ವ್ಯವಸ್ಥಾಪಕ

 

ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next