Advertisement

ತ್ಯಾಜ್ಯದಿಂದ ಬಯೋಗ್ಯಾಸ್‌ ಉತ್ಪಾದನೆಗೆ ಸಿದ್ಧತೆ

04:47 PM Aug 22, 2018 | |

ಹುಬ್ಬಳ್ಳಿ: ಘನ ತ್ಯಾಜ್ಯ ನಿರ್ವಹಣೆ ಮತ್ತಷ್ಟು ಸರಳೀಕರಣಗೊಳಿಸಲು ಮಹಾನಗರ ಪಾಲಿಕೆ ಮತ್ತೊಂದು ಹೆಜ್ಜೆ ಇಟ್ಟಿದೆ. ಹೋಟೆಲ್‌, ಮಾರುಕಟ್ಟೆ ಹಾಗೂ ಕಲ್ಯಾಣ ಮಂಟಪದಲ್ಲಿನ ಹಸಿ ತ್ಯಾಜ್ಯ ಭಾರ ತಗ್ಗಿಸುವ ನಿಟ್ಟಿನಲ್ಲಿ ಹಸಿ ಕಸದಿಂದ ಅಡುಗೆ ಅನಿಲ ಪಡೆಯುವ ಕಾರ್ಯಕ್ಕೆ ಸಿದ್ಧತೆ ನಡೆಸಿದೆ.

Advertisement

ಪಾಲಿಕೆಗೆ ಘನ ತ್ಯಾಜ್ಯ ನಿರ್ವಹಣೆಯೇ ದೊಡ್ಡ ಸಮಸ್ಯೆ. ಇದು ಸಮರ್ಪಕವಾಗಿ ನಿರ್ವಹಣೆಯಾದರೆ ಮಾತ್ರ ಕಸ ಮುಕ್ತ ನಗರವನ್ನಾಗಿ ಮಾಡಲು ಸಾಧ್ಯ ಎಂದು ಅರಿತಿರುವ ಮಹಾನಗರ ಪಾಲಿಕೆ ಈ ಕ್ರಮಕ್ಕೆ ಮುಂದಾಗಿದೆ. ಹೋಟೆಲ್‌ ಹಾಗೂ ಮಾರುಕಟ್ಟೆಗಳಿಂದ ಸಂಗ್ರಹವಾಗುವ ಹಸಿ ತ್ಯಾಜ್ಯವನ್ನು ವಿಲೇವಾರಿ ಘಟಕದಲ್ಲಿ ಸುರಿಯುವ ಬದಲು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಂದು ಹೋಟೆಲ್‌, ಮಾರುಕಟ್ಟೆ ಪ್ರದೇಶ ಹಾಗೂ ಹಾಸ್ಟೆಲ್‌ಗ‌ಳಲ್ಲಿ ಜೈವಿಕ ಅನಿಲ ಘಟಕ ಆರಂಭಿಸುವ ಕುರಿತು ಯೋಜನೆ ರೂಪಿಸಿದೆ.

ಕಡಿಮೆ ವೆಚ್ಚ, ಕಡಿಮೆ ಸ್ಥಳ: ಹೋಟೆಲ್‌ಗ‌ಳಿಗೆ ಅಗತ್ಯವಿರುವ ಬಯೋಗ್ಯಾಸ್‌ ಘಟಕಗಳನ್ನು ಸುಮಾರು 1.5 ಲಕ್ಷ ರೂ. ವೆಚ್ಚದಲ್ಲಿ ಸ್ಥಾಪಿಸಬಹುದಾಗಿದೆ. ಇದಕ್ಕಾಗಿ ದೊಡ್ಡ ಗಾತ್ರದ ಜಾಗದ ಅಗತ್ಯವೂ ಇಲ್ಲ. 10ಗಿ10 ಅಡಿ ಅಳತೆಯಲ್ಲಿ ಈ ಘಟಕ ಆರಂಭಿಸಬಹುದಾಗಿದ್ದು, ಒಂದಿಷ್ಟು ಸುರಕ್ಷತೆಯಿದ್ದರೆ ಸಾಕು. ಇದರಿಂದ ಉತ್ಪತ್ತಿಯಾಗುವ ಬಯೋಗ್ಯಾಸ್‌ನ್ನು ಅಡುಗೆ ಮಾಡಲು ಕೂಡ ಬಳಕೆ ಮಾಡಬಹುದಾಗಿದೆ. ಬಯೋಗ್ಯಾಸ್‌ ಆರಂಭಿಸಲು ಎಲ್ಲಾ ಹೋಟೆಲ್‌ ಗಳಿಗೂ ಸಾಧ್ಯವಾಗದಿದ್ದರೂ, ಪ್ರತಿಷ್ಠಿತ ಹಾಗೂ ದೊಡ್ಡ ಮಟ್ಟದ ಹೋಟೆಲ್‌ಗ‌ಳಿಗೆ ಕಷ್ಟವೇನಲ್ಲ. ಪ್ರತಿನಿತ್ಯ ಅವಳಿ ನಗರದಲ್ಲಿ ಹೋಟೆಲ್‌ ಗಳಿಂದ ಸುಮಾರು 10 ಟನ್‌ ಹಸಿ ತ್ಯಾಜ್ಯ ಸಂಗ್ರಹವಾಗುತ್ತಿದೆ. ಬಯೋಗ್ಯಾಸ್‌ ಘಟಕ ಹೊಂದುವುದರಿಂದ ಪಾಲಿಕೆಗೆ ತ್ಯಾಜ್ಯ ನಿರ್ವಹಣೆ ಭಾರ ಕಡಿಮೆಯಾಗಲಿದೆ.

ಮಾರುಕಟ್ಟೆ ತ್ಯಾಜ್ಯ: ಅವಳಿ ನಗರದ ತರಕಾರಿ ಮಾರುಕಟ್ಟೆಗಳಿಂದ ಸುಮಾರು 8-10 ಟನ್‌ ತರಕಾರಿ ತ್ಯಾಜ್ಯ ನಿತ್ಯ ಉತ್ಪನ್ನವಾಗುತ್ತದೆ. ಈ ತ್ಯಾಜ್ಯವನ್ನು ಕೂಡ ಬಯೋಗ್ಯಾಸ್‌ ಘಟಕಕ್ಕೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದಕ್ಕೆ ಅಗತ್ಯವಿರುವ ಘಟಕ ಆರಂಭಿಸುವ ಯೋಚನೆ ಇದ್ದರೂ ಸುರಕ್ಷತೆ ದೃಷ್ಟಿಯಿಂದ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎನ್ನುವ ಲೆಕ್ಕಾಚಾರ ಅಧಿಕಾರಿಗಳಲ್ಲಿದೆ. ಸುರಕ್ಷಿತ ಸ್ಥಳದಲ್ಲಿ ಘಟಕ ಆರಂಭಿಸಿ ಮಾರುಕಟ್ಟೆ ತ್ಯಾಜ್ಯ ಬಳಸಿ ಉತ್ಪತ್ತಿಯಾಗುವ ಅಡುಗೆ ಅನಿಲವನ್ನು ಹೋಟೆಲ್‌ಗ‌ಳಿಗೆ ಪೂರೈಕೆ ಮಾಡುವ ಆಲೋಚನೆ ಅಧಿಕಾರಿಗಳಲ್ಲಿದೆ.

ಪ್ರಾತ್ಯಕ್ಷಿಕೆಗೆ ಘಟಕ ಆರಂಭ: ಈ ಯೋಜನೆಯನ್ನು ಪರಿಚಯಿಸಿ ಉತ್ತೇಜಿಸುವ ಕಾರಣಕ್ಕೆ ಪಾಲಿಕೆ ಸ್ವಂತ ಖರ್ಚಿನಲ್ಲಿ ಒಂದು ಘಟಕವನ್ನು ಚಿಟಗುಪ್ಪಿ ಉದ್ಯಾನದಲ್ಲಿ ಆರಂಭಿಸಲಿದೆ. ಈ ಕುರಿತು ಖಾಸಗಿ ಕಂಪನಿಗೂ ನಿರ್ದೇಶನ ನೀಡಿದ್ದು, ಶೀಘ್ರದಲ್ಲಿ ಘಟಕ ಆರಂಭವಾಗಲಿದೆ. ಇದರಿಂದ ಉತ್ಪನ್ನವಾಗುವ ಬಯೋಗ್ಯಾಸ್‌ನ್ನು ಅಕ್ಕಪಕ್ಕದ ಹೋಟೆಲ್‌ಗೆ ಪೂರೈಸುವ ಮೂಲಕ ಈ ಯೋಜನೆ ಕುರಿತು ಹೋಟೆಲ್‌ ಮಾಲೀಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶವಿದೆ.

Advertisement

ಮಹಾನಗರದ ತ್ಯಾಜ್ಯ ನಿರ್ವಹಣೆಗೆ ಇಂತಹ ಯೋಜನೆಗಳು ಅಗತ್ಯವಾಗಿದ್ದು, ಸದ್ಯಕ್ಕೆ ಹೋಟೆಲ್‌ಗ‌ಳನ್ನು ಕೇಂದ್ರೀಕರಿಸಿರುವ ಪಾಲಿಕೆ ಮುಂದಿನ ದಿನಗಳಲ್ಲಿ ಕಲ್ಯಾಣ ಮಂಟಪ ಹಾಗೂ ಹಾಸ್ಟೆಲ್‌ಗ‌ಳಲ್ಲೂ ಇಂತಹ ಬಯೋಗ್ಯಾಸ್‌ ಘಟಕ ಹೊಂದುವ ಬಗ್ಗೆ ಚಿಂತನೆ ಹೊಂದಿದೆ.

ಹಸಿ ಕಸದ ನಿರ್ವಹಣೆ ದೊಡ್ಡ ಸಮಸ್ಯೆ. ಪ್ರಮುಖವಾಗಿ ಹೋಟೆಲ್‌, ಕಲ್ಯಾಣ ಮಂಟಪ, ಹಾಸ್ಟೆಲ್‌ಗ‌ಳಲ್ಲಿ ಬಯೋಗ್ಯಾಸ್‌ ಘಟಕಗಳನ್ನು ಹೊಂದುವುದರಿಂದ ಅಡುಗೆ ಅನಿಲ ಪಡೆಯುಬಹುದಾಗಿದ್ದು, ಇದರಿಂದ ಪಾಲಿಕೆ ಮೇಲೂ ಸಾಕಷ್ಟು ಭಾರ ಕಡಿಮೆಯಾಗಲಿದೆ. ಆರಂಭದಲ್ಲಿ ಒಂದು ಪ್ರಾತ್ಯಕ್ಷಿಕೆ ಘಟಕವನ್ನು ಆರಂಭಿಸಿ ಹೋಟೆಲ್‌ ಮಾಲೀಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಪಾಲಿಕೆಯಿಂದ ನಡೆಯಲಿದೆ.
 ಶಕೀಲ್‌ ಅಹ್ಮದ್‌, ಪಾಲಿಕೆ ಆಯುಕ್ತ

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next