ಸುರಪುರ: ಶ್ರೀಶೈಲ ಪೀಠಕ್ಕೂ ಸುರಪುರಕ್ಕೂ ಅವಿನಾಭಾವ ಸಂಬಂಧವಿದೆ. ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸುರಪುರ ಅರಸರ ಜೊತೆ ಕೈಜೋಡಿಸಿದ್ದ ಕರಿಬೆಂಟನಾಳದ ಶಾಖಾ ಮಠದ ಗಂಗಾಧರ ಶಿವಾಚಾರ್ಯರು ಜೇಲುಪಾಲಾಗಿದ್ದರು. ಇತಿಹಾಸದಲ್ಲಿ ಇದರ ಉಲ್ಲೇಖವಿದೆ ಎಂದು ಶ್ರೀಶೈಲ ಜಗದ್ಗುರು ಡಾ| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜನ ಜಾಗೃತಿ ಪಾದಯಾತ್ರೆ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಪೂರ್ವಭಾವಿ ಸಭೆ ಸಾನ್ನಿಧ್ಯ ವಹಿಸಿ ಅವರು ಸಂದೇಶ ನೀಡಿದರು.
ಪಾದಯಾತ್ರೆಯಲ್ಲಿ ದೊಡ್ಡ ಶಕ್ತಿ ಅಡಗಿದೆ. ಪಾದಯಾತ್ರೆಯಿಂದ ಪ್ರಕೃತಿಯ ದರ್ಶನವಾಗುತ್ತದೆ. ಪಾದಯಾತ್ರೆ ಮೂಲಕ ಪ್ರಕೃತಿ ಕಡೆಗೆ ಕರೆದೊಯ್ದು ಆರೋಗ್ಯ ಕೊಡಬೇಕು. ಇದರ ಜತೆಗೆ ದ್ವಾದಶ ಪೀಠಾರೋಹಣ ಅಂಗವಾಗಿ ಪಾದಯಾತ್ರೆಯ ಮಾರ್ಗದ ರಸ್ತೆ ಬದಿ ವೃಕ್ಷಗಳನ್ನು ನೆಡುವುದು, ಧರ್ಮ ಸಭೆ ಮೂಲಕ ದುಶ್ಚಟ ಭಿಕ್ಷೆ, ಲಿಂಗದೀಕ್ಷೆ ನೀಡುವುದು, ಒಗ್ಗಟ್ಟಿನ ಮಂತ್ರ ಬೋಧಿಸುವುದು ಶ್ರೀಮಠ ಹಮ್ಮಿಕೊಂಡಿರುವ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳ ಯೋಜನೆಯಾಗಿವೆ. ಆತ್ಮ ಕಲ್ಯಾಣದ ಜತೆಗೆ ಸಮಾಜ ಕಲ್ಯಾಣ ಮಾಡುವುದು ಕೂಡ ಮಠಾಧೀಶರ ಪ್ರಮುಖ ಕರ್ತವ್ಯ ಎಂದರು.
ತಾಲೂಕು ವೀರಶೈವ ಲಿಂಗಾಯತ ಸಮಿತಿ ಅಧ್ಯಕ್ಷ ಡಾ| ಸುರೇಶ ಸಜ್ಜನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀಶೈಲ ಜಗದ್ಗುರುಗಳ ಜನಜಾಗೃತಿ ಪಾದಯಾತ್ರೆ, ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಸರ್ವ ರೀತಿಯಿಂದಲೂ ಸಹಕರಿಸುವುದಾಗಿ ತಿಳಿಸಿದರು. ಶ್ರೀಗಿರಿ ಮಠದ ಡಾ| ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿದರು.
ಜೈನಾಪುರ, ಗುಂಬಾಳಪುರ, ಕುಂಬಾರಪೇಟೆ, ಕೆಂಭಾವಿಶ್ರೀಗಳು ಮತ್ತು ಸಮಾಜದ ಅನೇಕ ಮುಖಂಡರಾದ ಸೂಗುರೇಶ್ವರ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶ ಅಂಗಡಿ ನಿರೂಪಿಸಿ, ವಂದಿಸಿದರು.