Advertisement

ಹಾನಗಲ್ಲ ಉಪಚುನಾವಣೆಗೆ ಸಕಲ ಸಿದ್ಧತೆ

02:26 PM Oct 01, 2021 | Team Udayavani |

ಹಾವೇರಿ: ಹಾನಗಲ್ಲ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಭಾರತ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದು, ಜಿಲ್ಲಾಡಳಿತ ಚುನಾವಣೆಗೆ ಎಲ್ಲ ಸಿದ್ಧತೆಗಳನ್ನು ಕೈಗೊಂಡಿದೆ. ಅ.1ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ ಎಂದು ಜಿಲ್ಲಾ ಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಭಾರತ ಚುನಾವಣಾ ಆಯೋಗ ಸೆ. 28ರಂದು ಅಧಿಸೂಚನೆ ಹೊರಡಿಸಿದ್ದು, ಅಂದಿನಿಂದ ನ.5ರವರೆಗೆ ಹಾನಗಲ್ಲ ವಿಧಾನಸಭಾ ಕ್ಷೇತ್ರ ಒಳಗೊಂಡಂತೆ ಜಿಲ್ಲಾದ್ಯಂತ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದರು.

ಹಾನಗಲ್ಲ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಯಾಗಿ ಸವಣೂರು ಉಪ ವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ಸಹಾಯಕ ಚುನಾವಣಾ ಅಧಿಕಾರಿಯಾಗಿ ಹಾನಗಲ್ಲ ತಹಶೀಲ್ದಾರ್‌ ಪಿ.ಎಸ್‌.ಯರಿಸ್ವಾಮಿ ಕಾರ್ಯ ನಿರ್ವಹಿಸಲಿದ್ದಾರೆ. ಹಾನಗಲ್ಲ ತಹಶೀಲ್ದಾರ್‌ ಕಚೇರಿಯಲ್ಲಿ ನಾಮಪತ್ರ ಸ್ವೀಕರಿಸಲಾಗುವುದು ಎಂದರು.

ಅ.1ರಂದು ಅ ಧಿಸೂಚನೆ ಪ್ರಕಟಿಸಲಾಗುವುದು. ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಅ.8ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಅ.11ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಅ.13 ನಾಮಪತ್ರ ವಾಪಸ್‌ ಪಡೆಯಲು ಕೊನೆಯ ದಿನವಾಗಿದ್ದು, ಅ.30ರಂದು ಮತದಾನ ನಡೆಯಲಿದೆ. ನವೆಂಬರ್‌ 2ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ನವೆಂಬರ್‌ 5ರಂದು ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

2.42 ಲಕ್ಷ ಮತದಾರರು: ಹಾನಗಲ್ಲ ವಿಧಾನಸಭಾ ಕ್ಷೇತ್ರದಲ್ಲಿ 2021ರ ಜ.18ಕ್ಕೆ ಅನ್ವಯವಾಗುವಂತೆ 1,05,405 ಪುರುಷರು, 98,798 ಮಹಿಳೆಯರು, ಮೂರು ಜನ ಇತರೆ ಹಾಗೂ 83 ಸೇವಾ ಮತದಾರರು ಸೇರಿದಂತೆ 2,42,089 ಮತದಾರರು ಒಳಗೊಂಡಿದ್ದಾರೆ. ಸೆ.28ರೊಳಗೆ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಅರ್ಜಿ ಸಲ್ಲಿಸಿದವರನ್ನು ಪರಿಶೀಲಿಸಿ ಸೇರ್ಪಡೆಗೊಳಿಸಲಾಗುವುದು. ಆದರೆ ಮತದಾರರ ಪಟ್ಟಿಯಿಂದ ಯಾರನ್ನೂ ತೆಗೆದು ಹಾಕಲ್ಲ ಎಂದರು.

Advertisement

263 ಮತಗಟ್ಟೆಗಳು: ಹಾನಗಲ್ಲ ವಿಧಾನಸಭಾ ಕ್ಷೇತ್ರದಲ್ಲಿ 239 ಮೂಲ ಮತಗಟ್ಟೆ ಹಾಗೂ 24 ಹೆಚ್ಚುವರಿ ಮತಗಟ್ಟೆ ಸೇರಿದಂತೆ 263 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಪ್ರತಿ ಮತಗಟ್ಟೆಗೆ ತಲಾ ನಾಲ್ಕು ಜನರಂತೆ 1052 ಸಿಬ್ಬಂದಿ ನಿಯೋಜಿಸಿ ಸೂಕ್ತ ತರಬೇತಿ ನೀಡಲಾಗುವುದು. ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ಸಿಬ್ಬಂದಿ ಕಡ್ಡಾಯವಾಗಿ ಎರಡು ಡೋಸ್‌ ಕೋವಿಡ್‌ ಲಸಿಕೆ ಪಡೆದ ಕುರಿತು ಪರಿಶೀಲಿಸಿ ನಿಯೋಜಿಸಲಾಗುವುದು ಎಂದರು.

ತಲಾ 604 ಬ್ಯಾಲೆಟ್‌ ಯುನಿಟ್‌, ವಿವಿ ಪ್ಯಾಟ್‌, ಕಂಟ್ರೋಲ್‌ ಯುನಿಟ್‌ಗಳನ್ನು ಸಿದ್ಧ ಮಾಡಿದ್ದು, ರಾಜಕೀಯ ಪಕ್ಷಗಳ ಮುಖಂಡರ ನೇತೃತ್ವದಲ್ಲಿ ರ್‍ಯಾಂಡ್‌ಮೈಸ್‌ ಮಾಡಿ ಹಾನಗಲ್ಲ ಕ್ಷೇತ್ರಕ್ಕೆ ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. ಸುಗಮ ಚುನಾವಣೆ ಹಾಗೂ ಮಾದರಿ ನೀತಿ ಸಂಹಿತೆ ಪಾಲನೆಗೆ 25 ಸೆಕ್ಟರ್‌ ಅ ಧಿಕಾರಿಗಳ ತಂಡ ರಚಿಸಲಾಗಿದೆ. ಜಿಲ್ಲಾದ್ಯಂತ 16 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗುವುದು. ಹಾನಗಲ್ಲ ವಿಧಾನಸಭಾ ಕ್ಷೇತ್ರಕ್ಕೆ ಹೊಂದಿಕೊಂಡಂತೆ ನಾಲ್ಕು ಹಾಗೂ ಅಂತರ ಜಿಲ್ಲಾ ಗಡಿ ಭಾಗದಲ್ಲಿ ಏಳು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿದ್ದು, ದಿನದ 24 ತಾಸು ಮೂರು ತಂಡಗಳು ಕಾರ್ಯ ನಿರ್ವಹಿಸಲಿವೆ ಎಂದರು.

ಅಭ್ಯರ್ಥಿಯ ವೆಚ್ಚದ ಮಿತಿ: ಅಭ್ಯರ್ಥಿಯ ಚುನಾವಣಾ ವೆಚ್ಚವನ್ನು 30.80 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ನಾಮಪತ್ರ ಸಲ್ಲಿಸಲು ಬರುವ ಅಭ್ಯರ್ಥಿಗಳು ಮೆರವಣಿಗೆ ನಡೆಸುವುದನ್ನು ನಿಷೇಧಿಸಲಾಗಿದೆ. ಅಭ್ಯರ್ಥಿ ಜತೆಗೆ ಮೂರು ಜನರಿಗೆ ಮಾತ್ರ ನಾಮಪತ್ರ ಸಲ್ಲಿಕೆ ಕೊಠಡಿಗೆ ಅವಕಾಶವಿದೆ. ನಾಮಪತ್ರ ಸಲ್ಲಿಕೆ ಕೇಂದ್ರದ 100 ಮೀಟರ್‌ ಒಳಗೆ ಮೂರು ವಾಹನಗಳಿಗೆ ಮಾತ್ರ ಅವಕಾಶವಿದೆ. ಚುನಾವಣಾ ಕ್ಯಾಂಪೇನ್‌ ಮಾಡಲು ಕೋವಿಡ್‌ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು. ಮಾರ್ಗಸೂಚಿ ಉಲ್ಲಂಘಿಸಿದರೆ ಅನುಮತಿ ಹಿಂಪಡೆಯಲಾಗುವುದು ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಪ್ರತಿ ಮತಗಟ್ಟೆಗೆ ಒಬ್ಬ ಮುಖ್ಯ ಪೇದೆ ಹಾಗೂ ಒಬ್ಬ ಪೇದೆ, ಸೂಕ್ಷ್ಮ ಮತಗಟ್ಟೆಗೆ ಒಬ್ಬ ಹೆಚ್ಚುವರಿ ಪೇದೆ ಹಾಗೂ ದುರ್ಬಲ ಮತದಾರರು ಇರುವ ಮತಗಟ್ಟೆಗಳಲ್ಲಿ ಒಬ್ಬ ಎಸ್‌ಐ ಜತೆಗೆ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗುವುದು. ಚುನಾವಣಾ ನಿಗಾಕ್ಕೆ ಡಿವೈಎಸ್‌ಪಿಗಳು, ಸಿಪಿಐಗಳು, ಎರಡು ಕೆಎಸ್‌ ಆರ್‌ಪಿ ತುಕಡಿ, ಪ್ಯಾರಾ ಮಿಲಿಟರಿ ಪಡೆ, ಚೆಕ್‌ಪೋಸ್ಟ್‌ ಸೇರಿದಂತೆ ಸೆಕ್ಟರ್‌ ತಂಡ, ವಿಡಿಯೋ ತಂಡಗಳಿಗೆ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗುವುದು ಎಂದರು. ಜಿಪಂ ಸಿಇಒ ಮಹಮ್ಮದ ರೋಷನ್‌, ಅಪರ ಜಿಲ್ಲಾಧಿಕಾರಿ ಡಾ|ಎನ್‌.ತಿಪ್ಪೇಸ್ವಾಮಿ, ಚುನಾವಣಾ ತಹಶೀಲ್ದಾರ್‌ ಎ.ಬಿ.ಪಾಟೀಲ ಸುದ್ದಿಗೋಷ್ಠಿಯಲ್ಲಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next