Advertisement

ಮಳೆ ಆತಂಕದಲ್ಲೇ ಭತ್ತದ ಕಟಾವಿಗೆ ಸಿದ್ಧತೆ 

11:12 AM Oct 09, 2017 | Team Udayavani |

ಬಜಪೆ: ಮಳೆಯ ಆತಂಕದ ಕಾರ್ಮೋಡ ಕವಿದಿರುವಂತೆಯೇ ಜಿಲ್ಲೆಯ ಹಲವೆಡೆ ಈಗ ಮುಂಗಾರು ಬೆಳೆಯ ಕಟಾವಿಗೆ ಸಿದ್ಧತೆ ನಡೆಯುತ್ತಿದೆ. ಕೆಲವೆಡೆ ಕಟಾವು ಶುರುವಾಗಿದೆ. ಗುಡುಗಿನ ಆರ್ಭಟ ರೈತರ ಎದೆಯಲ್ಲಿ ನಡುಕ ಹುಟ್ಟಿಸುತ್ತಿದೆ. ಬೇಸಾಯವೇ ಬೇಡ ಎನ್ನುವ ಸ್ಥಿತಿಯಲ್ಲಿರುವ ರೈತ ಸಮುದಾಯಕ್ಕೆ ಈ ಮಳೆ ಮತ್ತಷ್ಟು ಕಾಡುತ್ತಿದೆ.

Advertisement

ಈಗ ಸುರಿಯುತ್ತಿರುವ ಮಳೆ ಬೇಸಗೆಯಲ್ಲಿ ನೀರಿನ ಕೊರತೆಯ ಚಿಂತೆ ನಿವಾರಿಸಿದರೂ, ಭತ್ತದ ಕಟಾವಿಗೆ ಆತಂಕ ತಂದಿದೆ. ಆರಂಭದಲ್ಲಿ ಭತ್ತದ ಬೇಸಾಯಕ್ಕೆ ತಕ್ಕಂತೆ ಬಂದ ಮಳೆ, ಕಟಾವಿನ ಹೊತ್ತಲ್ಲೂ ಅನಿರೀಕ್ಷಿತವಾಗಿ ಸುರಿಯುತ್ತಿದೆ. ರೈತರು ಭತ್ತ ಕಟಾವನ್ನು ಆರಂಭಿಸಲು ಮನೆಯ ವಠಾರದಲ್ಲಿ ಸೆಗಣಿ ಸಾರಿಸಿ, ತಯಾರಾಗಿದ್ದಾರೆ. ಪೈರು ಕೊಯ್ಯಲು ಬಂದ ಕೃಷಿ ಕಾರ್ಮಿಕ ಮಹಿಳೆಯರು ಮಳೆ ಲಕ್ಷಣ ಗಮನಿಸಿ, ಮರಳುತ್ತಿದ್ದಾರೆ. ಈಗ ಕಟಾವಿಗೆ ಆಳುಗಳನ್ನು ಕರೆತರಲು, ಸಂಜೆ ಮನೆಗೆ ಬಿಡಲು ವಾಹನದ ವ್ಯವಸ್ಥೆ ಮಾಡಬೇಕು. ಮಳೆ ಬಂದು ಕಟಾವು ನಿಲ್ಲಿಸಿದರೂ ಕಾರ್ಮಿಕರಿಗೆ ಇಡೀ ದಿನದ ಕೂಲಿ ಕೊಡಬೇಕಾಗುತ್ತದೆ.

ಮೊಳಕೆ ಬರುತ್ತವೆ 
ಈ ಬಾರಿ 2.5 ಎಕರೆ ಭತ್ತದ ಕೃಷಿ ಮಾಡಿದ್ದೇನೆ. ಕಟಾವಿಗೆ ಬಂದ ಮಹಿಳೆಯರು ಮಳೆ ಕಾರಣ ವಾಪಸ್‌ ಹೋಗಿದ್ದಾರೆ. ಮಳೆ ನಿಂತ ಮೇಲೆ ಕಟಾವು ಮಾಡಬೇಕಷ್ಟೇ. 10 ದಿನದೊಳಗೆ ಕಟಾವು ಮಾಡದಿದ್ದರೆ ಗದ್ದೆಯಲ್ಲಿಟ್ಟ ಭತ್ತ ಮೊಳಕೆ ಬರುತ್ತದೆ. ಪಾರಿವಾಳಗಳೂ ತಿನ್ನುತ್ತವೆ. ಈ ಬಾರಿ ಬಿಳಿ ಕಜೆ ಹಾಗೂ ಮೀಟರ್‌ ಭತ್ತದ ಬೀಜ ಬಿತ್ತನೆ ಮಾಡಿದ್ದೇನೆ. ಸರಕಾರ ಭತ್ತದ ಕಟಾವಿಗೆ ಸಹಾಯಧನ ನೀಡಿದರೆ ರೈತರು ಕೃಷಿಯಲ್ಲಿ ಆಸಕ್ತಿ ಹೆಚ್ಚಿಸಿಕೊಂಡಾರು. ಭತ್ತ ಬೇಸಾಯದಿಂದ ಅಂತರ್ಜಲ ವೃದ್ಧಿಯಾಗುತ್ತದೆ, ಉದ್ಯೋಗ ಸೃಷ್ಟಿಯೂ ಆಗುತ್ತದೆ.

ಬಿತ್ತನೆ ಪ್ರಮಾಣ ಕ್ಷೀಣ 
ಗುರುಪುರ ಹೋಬಳಿಯಲ್ಲಿ ಕಳೆದ ಬಾರಿ 1980 ಎಕರೆಯಲ್ಲಿ ಭತ್ತದ ಬೇಸಾಯ ಮಾಡಲಾಗಿತ್ತು. ಈ ಮುಂಗಾರು ಹಂಗಾಮಿನಲ್ಲಿ ಅದು 1,400 ಎಕರೆಗೆ ಇಳಿದಿದೆ. ಈ ಪೈಕಿ 150 ಎಕರೆಯಲ್ಲಿ ಮಾತ್ರ ಯಾಂತ್ರೀಕೃತವಾಗಿ ಭತ್ತದ ಕೃಷಿ ಮಾಡಲಾಗಿದೆ. ಮುಂಗಾರು ಬೆಳೆಯಲ್ಲಿ ಭದ್ರ (ಎಂಒ4), ಕಜೆ, ಜಯ, ಕೇರಳದ ತಳಿ ‘ಮೀಟರ್‌’ ಬಿತ್ತನೆ ಮಾಡಿದ್ದಾರೆ.ಅ. 10ರಿಂದ ಕೆಲವೆಡೆ ಕಟಾವು ಶುರುವಾಗುತ್ತದೆ. ಮಳೆ ಬಂದರೆ ಬತ್ತಕ್ಕೆ ಹಾನಿಯಾಗುತ್ತದೆ ಎಂದು ಗುರುಪುರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವಿ.ಎಸ್‌. ಕುಲಕರ್ಣಿ ಹೇಳಿದ್ದಾರೆ.

ಯಂತ್ರ ಕಟಾವು ಸೂಕ್ತವಲ್ಲ
ಊಟ, ತಿಂಡಿ, ವಾಹನ ಬಾಡಿಗೆ ಭರಿಸುವ ಜತೆಗೆ ನಿತ್ಯ 300 ರೂ. ಕೂಲಿ ನೀಡಲಾಗುತ್ತದೆ. ಮೊದಲೆಲ್ಲ ಅಕ್ಕಿ
ಒಯ್ಯುತ್ತಿದ್ದರು. ಈಗ ಹಣವನ್ನೇ ನೀಡಬೇಕು ಯಂತ್ರದಿಂದ ಕಟಾವು ಮಾಡಿದರೆ ಬೈಹುಲ್ಲು ಹಾಳಾಗುತ್ತದೆ. ಜಾನುವಾರುಗಳಿದ್ದಲ್ಲಿ ಯಂತ್ರದಿಂದ ಕಟಾವು ಕಾರ್ಯಮಾಡಿಸುವುದು ಸೂಕ್ತವಲ್ಲ.
 – ದೋಗು ಪೂಜಾರಿ,
   ಕೃಷಿಕರು

Advertisement
Advertisement

Udayavani is now on Telegram. Click here to join our channel and stay updated with the latest news.

Next